ಧರ್ಮಸ್ಥಳ ಪ್ರಕರಣ ; ಅಧಿವೇಶನದಲ್ಲಿ ಗೃಹ ಸಚಿವರ ಸ್ಪಷ್ಟ ಉತ್ತರ, ತನಿಖೆ ಇನ್ನೂ ಶುರುವಾಗಿಲ್ಲ, ಎಫ್ಎಸ್ಎಲ್ ವರದಿ ಆಧರಿಸಿ ಎಸ್ಐಟಿ ತನಿಖೆ ಬಗ್ಗೆ ನಿರ್ಧರಿಸುತ್ತದೆ, ಸತ್ಯಕ್ಕಾಗಿ ತಾಳ್ಮೆ ವಹಿಸಿ ! 

18-08-25 10:47 pm       Bangalore Correspondent   ಕರ್ನಾಟಕ

ಧರ್ಮಸ್ಥಳ ಪ್ರಕರಣದಲ್ಲಿ ಇಲ್ಲಿವರೆಗೆ ಆಗಿರುವುದು ಕೇವಲ ಮಣ್ಣು ಅಗೆತ ಮಾತ್ರ. ಎಸ್ಐಟಿ ತನಿಖೆ ಇನ್ನೂ ಆರಂಭವಾಗಿಲ್ಲ. ಅಲ್ಲಿನ ಮಣ್ಣು, ಎಲುಬಿನ ತುಂಡುಗಳ ಬಗ್ಗೆ ಎಫ್​ಎಸ್​ಎಲ್ ವರದಿ ಬಂದ ಬಳಿಕವಷ್ಟೇ ತನಿಖೆ ಆರಂಭವಾಗುತ್ತದೆ. ಯಾವ ರೀತಿ ತನಿಖೆ ಮಾಡಬೇಕು ಎನ್ನುವುದನ್ನು ಎಸ್ಐಟಿ ನಿರ್ಧರಿಸುತ್ತದೆ. ಅದರ ಬಗ್ಗೆ ನಾವು ಏನು ಹೇಳುವುದಕ್ಕೂ ಆಗುವುದಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರು, ಆ.18 : ಧರ್ಮಸ್ಥಳ ಪ್ರಕರಣದಲ್ಲಿ ಇಲ್ಲಿವರೆಗೆ ಆಗಿರುವುದು ಕೇವಲ ಮಣ್ಣು ಅಗೆತ ಮಾತ್ರ. ಎಸ್ಐಟಿ ತನಿಖೆ ಇನ್ನೂ ಆರಂಭವಾಗಿಲ್ಲ. ಅಲ್ಲಿನ ಮಣ್ಣು, ಎಲುಬಿನ ತುಂಡುಗಳ ಬಗ್ಗೆ ಎಫ್​ಎಸ್​ಎಲ್ ವರದಿ ಬಂದ ಬಳಿಕವಷ್ಟೇ ತನಿಖೆ ಆರಂಭವಾಗುತ್ತದೆ. ಯಾವ ರೀತಿ ತನಿಖೆ ಮಾಡಬೇಕು ಎನ್ನುವುದನ್ನು ಎಸ್ಐಟಿ ನಿರ್ಧರಿಸುತ್ತದೆ. ಅದರ ಬಗ್ಗೆ ನಾವು ಏನು ಹೇಳುವುದಕ್ಕೂ ಆಗುವುದಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಸೋಮವಾರ ಸಂಜೆ ಧರ್ಮಸ್ಥಳ ಪ್ರಕರಣ ಸಂಬಂಧ ನಿಯಮ 69 ರಡಿ ನಡೆದ ಚರ್ಚೆಗೆ ಉತ್ತರಿಸಿದ ಅವರು, ಎಸ್ಐಟಿ ತನಿಖೆಯ ಬಗ್ಗೆ ಸುದೀರ್ಘ ಮಾಹಿತಿ ನೀಡಿದ್ದಾರೆ. ಇಡೀ ದೇಶ ಧರ್ಮಸ್ಥಳ ಪ್ರಕರಣವನ್ನು ಗಮನಿಸುತ್ತಿದೆ. ಹಲವಾರು ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಕ್ಷೇತ್ರವಾಗಿದ್ದು ಲಕ್ಷಾಂತರ ಭಕ್ತರಿದ್ದು ಈ ಘಟನೆ ಬಗ್ಗೆ ಕುತೂಹಲದಿಂದ ನೋಡುತ್ತಿದ್ದಾರೆ. ಘಟನೆ ಬಗ್ಗೆ ಸತ್ಯ ಹೊರಬೇಕು ಎನ್ನುವ ಕಾಳಜಿ ಎಲ್ಲರಿಗೂ ಇದೆ. ಇಂತಹ ಕ್ಷೇತ್ರದ ಆವರಣದಲ್ಲಿ ನೂರಾರು ಶವಗಳನ್ನು ಹೂತಿದ್ದಾಗಿ ವ್ಯಕ್ತಿಯೊಬ್ಬ 2023ರ ಮೇ 27ರಂದು ಮೊದಲ ಬಾರಿ ಹೇಳಿಕೆ ನೀಡಿದ್ದ. ಆಗ ನಮ್ಮ ಸರ್ಕಾರ ಇರಲಿಲ್ಲ. 2025ರ ಜುಲೈ 4ರಂದು ಆತನ ದೂರಿನಂತೆ ಧರ್ಮಸ್ಥಳ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ, ದೀರ್ಘ ದೂರು ಪತ್ರವನ್ನು ಉಲ್ಲೇಖಿಸಲಾಗಿದೆ. 

ತನಗೆ ಮತ್ತು ತನ್ನ ಕುಟುಂಬಕ್ಕೆ ರಕ್ಷಣೆ ನೀಡಬೇಕೆಂದು ಕೇಳಿಕೊಂಡಿದ್ದು ಪೊಲೀಸರು ಆತನನ್ನು ಕೋರ್ಟಿಗೆ ಹಾಜರುಪಡಿಸಿ ಸಿಆರ್ ಪಿಸಿ 164 ಅಡಿ ಹೇಳಿಕೆ ದಾಖಲಿಸಿದ್ದಾರೆ. ಅಲ್ಲದೆ, ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶದಂತೆ ಸಾಕ್ಷಿಗಾರನ ರಕ್ಷಣೆಗೂ ಕ್ರಮ ಕೈಗೊಳ್ಳಲಾಗಿದೆ. ಈ ಮಧ್ಯೆ ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷರು ಸಿಎಂಗೆ ಪತ್ರ ಬರೆದು ಧರ್ಮಸ್ಥಳದ ಸಾವಿನ ಪ್ರಕರಣ ಸಂಬಂಧ ಎಸ್ ಐಟಿ ರಚಿಸುವಂತೆ ಕೋರಿದ್ದರು. ಬಳಿಕ ಎಸ್​​ಐಟಿ ತನಿಖೆಗೆ ಆದೇಶ ಮಾಡಲಾಗಿತ್ತು. 

ಎಸ್ಐಟಿಯಿಂದ ದೂರುದಾರನನ್ನು ವಿಚಾರಣೆ ನಡೆಸಿ, ಹೂತು ಹಾಕಿದ್ದೇನೆ ಎಂದಿರುವ ಸುಮಾರು ಜಾಗಗಳಲ್ಲಿ ಮಣ್ಣು ಅಗೆಯಲಾಗಿದೆ. ಎರಡು ಜಾಗಗಳಲ್ಲಿ ಅಸ್ಥಿಪಂಜರ ಸಿಕ್ಕಿದೆ. ಅದನ್ನು ಎಫ್​ಎಸ್​ಎಲ್​ಗೆ ನೀಡಲಾಗಿದೆ. ಇತರ ಜಾಗಗಳಿಂದಲೂ ಮಣ್ಣು, ಇತರ ಅಂಶಗಳನ್ನು ಪರೀಕ್ಷೆಗೆ ನೀಡಲಾಗಿದೆ. ಬಹಳ ಎಸಿಡಿಕ್ ಮಣ್ಣಾಗಿರುವುದರಿಂದ ಎಸ್ ಐಟಿ ಅವರು ಮಣ್ಣಿನ ಮಾದರಿ ಪಡೆದು ಎಫ್​ಎಸ್ಎಲ್​ಗೆ ಕಳುಹಿಸಿದ್ದಾರೆ. ಪತ್ತೆಯಾದ ಅಸ್ಥಿಪಂಜರದ ಅನಾಲಿಸಿಸ್ ಆಗಬೇಕು.‌ ಮಣ್ಣಿನ ಮಾದರಿಯ ಅನಾಲಿಸಿಸ್ ಆಗಬೇಕು. ಅದರ ವರದಿ ಆಧರಿಸಿ ಎಸ್ಐಟಿ ಅಧಿಕಾರಿಗಳು ತನಿಖೆಯ ಬಗ್ಗೆ ನಿರ್ಧರಿಸುತ್ತಾರೆ. 

ಇಲ್ಲಿವರೆಗೂ ಆ ಜಾಗದಲ್ಲಿ ಕೇವಲ ಮಣ್ಣು ಅಗೆತ ಮಾತ್ರ ನಡೆದಿದೆ. ತನಿಖೆ ಇನ್ನೂ ಆರಂಭವಾಗಿಲ್ಲ. ಎಫ್​ಎಸ್​ಎಲ್ ವರದಿ ಬಂದ ಬಳಿಕ ತನಿಖೆ ಆರಂಭವಾಗುತ್ತದೆ. ದೂರುದಾರ ಬುರುಡೆ ತಗೊಂಡು ಬಂದಿದ್ದನ್ನೂ ಎಫ್​ಎಸ್​​ಎಲ್​ಗೆ ಕಳುಹಿಸಲಾಗಿದ್ದು ಅದರಲ್ಲಿ ದೊರೆತ ಮಾಹಿತಿಗಳನ್ನು ಅನುಸರಿಸಿ ತನಿಖೆ ಕೈಗೊಳ್ಳಲಾಗಿದೆ. ಹಲವಾರು ಜಾಗಗಳನ್ನು ಗುರುತಿಸಿದ್ದು ಅಲ್ಲಿ ಇನ್ನು ಅಗೆಯಬೇಕೋ, ಬೇಡವೋ ಅನ್ನುವ ಬಗ್ಗೆ ಎಸ್ಐಟಿ ನಿರ್ಧರಿಸುತ್ತದೆ. ನಾವು ಪೂರ್ಣ ಅಧಿಕಾರ ಕೊಟ್ಟ ಮೇಲೆ ತನಿಖೆಯನ್ನು ಒಂದು ತಿಂಗಳಲ್ಲಿ, ಎರಡು ತಿಂಗಳಲ್ಲಿ ಮುಗಿಸಿ ಅಂತ ಹೇಳಕ್ಕೆ ಆಗುವುದಿಲ್ಲ. ತನಿಖೆ ಯಾವ ರೀತಿ ಇರತ್ತೆ ಎನ್ನುವುದನ್ನು ಅವರೇ ನಿರ್ಣಯ ಮಾಡುತ್ತಾರೆ. 

ಎಸ್ಐಟಿ ತನಿಖೆ ಬಹಳ ಗಂಭೀರವಾಗಿ ಮತ್ತು ಪಾರದರ್ಶಕವಾಗಿ ನಡೆಯುತ್ತಿದೆ. ಇದರ ನಡುವೆ, ಎಸ್ಐಟಿ ತ‌ನಿಖೆ ಬಗ್ಗೆ ಮನಸ್ಸಿಗೆ ತೋಚಿದಂತೆ ಹೇಳಿಕೆ ಕೊಡುವುದು, ಮಾಧ್ಯಮಗಳು ಬೇಕಾದ ರೀತಿ ವರದಿ ಮಾಡಿ ಜನರನ್ನು ಗೊದಲಕ್ಕೀಡು ಮಾಡುವುದು ಸರಿಯಲ್ಲ. ಬಿಜೆಪಿ ಶಾಸಕರು ತನಿಖೆಯ ದೃಷ್ಟಿಯಿಂದ ತಾಳ್ಮೆ ವಹಿಸಬೇಕು. ಆರಂಭದಲ್ಲಿ ಬಿಜೆಪಿಯವರೂ ಎಸ್ಐಟಿ ರಚನೆಯನ್ನು ಸ್ವಾಗತ ಮಾಡಿದ್ದರು. 

ಈ ಹೊತ್ತಿನಲ್ಲಿ ಘಟನೆ ಆಗಿದೆ, ಆಗಿಲ್ಲ ಎಂದು ಯಾರೂ ಹೇಳಲು ಆಗುವುದಿಲ್ಲ. ಆಗಿಲ್ಲ ಅಂತ ತನಿಖೆಯಲ್ಲಿ ಬಂದರೆ ಧರ್ಮಸ್ಥಳದ ಗೌರವ ಇನ್ನಷ್ಟು ಹೆಚ್ಚುವುದಿಲ್ಲವೇ? ಒಂದು ವೇಳೆ ಆಗಿದೆ ಅಂತ ಬಂದರೆ ಅನ್ಯಾಯವಾದವರಿಗೆ ನ್ಯಾಯ ಸಿಕ್ಕಂತೆ ಆಗುತ್ತದೆ. ಇದರಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ. ಇದನ್ನು ಈ ದೇಶದ ಕಾನೂನಿನ ನ್ಯಾಯಕ್ಕೆ ಬಿಡೋಣ, ಸತ್ಯ ಹೊರಬರಲಿ. ಬಳಿಕ ಅದನ್ನು ಧರ್ಮಸ್ಥಳದವರೂ ಒಪ್ಪಬೇಕಾಗುತ್ತದೆ. ಜನರೂ ಒಪ್ಪಬೇಕಾಗುತ್ತದೆ ಎಂದು ಗೃಹ ಸಚಿವ ಪರಮೇಶ್ವರ್ ಗುಲ್ಲೆಬ್ಬಿಸಿದ ಬಿಜೆಪಿ ನಾಯಕರಿಗೆ ಮಾರ್ಮಿಕವಾಗಿ ಉತ್ತರ ನೀಡಿದ್ದಾರೆ.

Karnataka Home Minister Dr. G. Parameshwara clarified in the Legislative Assembly on Monday that the Special Investigation Team (SIT) has not yet begun its formal probe into the Dharmasthala case. He stated that only preliminary soil excavation has taken place so far, and that the actual investigation will commence only after the Forensic Science Laboratory (FSL) submits its reports.