ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್.ಡಿ.ಎ ಕೂಟದಿಂದ ಅಚ್ಚರಿ ಅಭ್ಯರ್ಥಿ ; ತಮಿಳುನಾಡು ಮೂಲದ ಸಿ.ಪಿ ರಾಧಾಕೃಷ್ಣನ್ ಹೆಸರು ಘೋಷಣೆ, ಅಸೆಂಬ್ಲಿ ಚುನಾವಣೆಗೆ ಕಣ್ಣಿಟ್ಟ ಬಿಜೆಪಿ ಒಕ್ಕೂಟ 

17-08-25 09:09 pm       HK News Desk   ದೇಶ - ವಿದೇಶ

ಉಪ ರಾಷ್ಟ್ರಪತಿ ಚುನಾವಣೆಗೆ ಎನ್.ಡಿ.ಎ ಮೈತ್ರಿಕೂಟ ತನ್ನ ಅಭ್ಯರ್ಥಿಯನ್ನು ಘೋಷಿಸಿದ್ದು ಹಾಲಿ ಮಹಾರಾಷ್ಟ್ರ ರಾಜ್ಯಪಾಲ, ತಮಿಳುನಾಡು ಮೂಲದ ಸಿ.ಪಿ ರಾಧಾಕೃಷ್ಣನ್ ಅವರನ್ನು ಅಭ್ಯರ್ಥಿಯಾಗಿ ಆರಿಸಲಾಗಿದೆ. 

ನವದೆಹಲಿ, ಆ.17 : ಉಪ ರಾಷ್ಟ್ರಪತಿ ಚುನಾವಣೆಗೆ ಎನ್.ಡಿ.ಎ ಮೈತ್ರಿಕೂಟ ತನ್ನ ಅಭ್ಯರ್ಥಿಯನ್ನು ಘೋಷಿಸಿದ್ದು ಹಾಲಿ ಮಹಾರಾಷ್ಟ್ರ ರಾಜ್ಯಪಾಲ, ತಮಿಳುನಾಡು ಮೂಲದ ಸಿ.ಪಿ ರಾಧಾಕೃಷ್ಣನ್ ಅವರನ್ನು ಅಭ್ಯರ್ಥಿಯಾಗಿ ಆರಿಸಲಾಗಿದೆ. 

ಸೆ.9ರಂದು ಉಪ ರಾಷ್ಟ್ರಪತಿ ಹುದ್ದೆಗೆ ಚುನಾವಣೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಅಭ್ಯರ್ಥಿ ಆಯ್ಕೆ ಸಲುವಾಗಿ ಬಿಜೆಪಿ ಸಂಸದೀಯ ಸಮಿತಿಯ ಸಭೆ ನಡೆಸಲಾಯಿತು. ಸಭೆಯಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ರಾಧಾಕೃಷ್ಣನ್ ಹೆಸರು ಫೈನಲ್ ಮಾಡಲಾಗಿದೆ. ತಮಿಳುನಾಡು ಮೂಲದ ಅಭ್ಯರ್ಥಿ ಘೋಷಣೆ ಮೂಲಕ ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆ ನಿಟ್ಟಿನಲ್ಲಿ ಎನ್.ಡಿ.ಎ ಮಾಸ್ಟರ್ ಸ್ಟ್ರೋಕ್ ನೀಡಿದೆ. 

ಸಿ.ಪಿ ರಾಧಾಕೃಷ್ಣನ್ ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷರಾಗಿದ್ದು, ಕೊಯಂಬತ್ತೂರು ಕ್ಷೇತ್ರದಿಂದ ಎರಡು ಬಾರಿ  ಸಂಸದರೂ ಆಗಿದ್ದರು. 2003ರಿಂದ 2006ರ ಅವಧಿಯಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿದ್ದ ರಾಧಾಕೃಷ್ಣನ್ 1998 ಮತ್ತು 1999ರಲ್ಲಿ ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಸಂಸದರಾಗಿದ್ದರು. ಆರೆಸ್ಸೆಸ್ ಹಿನ್ನೆಲೆಯಿದ್ದು, ಭಾರತೀಯ ಜನಸಂಘದಿಂದ ರಾಜಕೀಯ ಜೀವನ ಆರಂಭಿಸಿದ್ದ ರಾಧಾಕೃಷ್ಣನ್, ವಾಜಪೇಯಿ ಅವರ ಒಡನಾಡಿಯಾಗಿದ್ದರು. 2024ರ ಜುಲೈ 31ರಿಂದ ಮಹಾರಾಷ್ಟ್ರ ರಾಜ್ಯಪಾಲರಾಗಿ ನೇಮಕಗೊಂಡಿದ್ದರು. ಅದಕ್ಕೂ ಹಿಂದೆ ಜಾರ್ಖಂಡ್ ರಾಜ್ಯಪಾಲರಾಗಿದ್ದರು. ಕೆಲಕಾಲ ತೆಲಂಗಾಣ ರಾಜ್ಯಪಾಲ ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಕೂಡ ಹೆಚ್ಚುವರಿ ಜವಾಬ್ದಾರಿ ಹೊಂದಿದ್ದರು. 

ಉಪ ರಾಷ್ಟ್ರಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಆಗಸ್ಟ್ 21 ಕೊನೆಯ ದಿನವಾಗಿದೆ. ಇಂಡಿಯಾ ಒಕ್ಕೂಟದಿಂದ ಅಭ್ಯರ್ಥಿ ಘೋಷಿಸುವ ವಿಚಾರ ಇನ್ನೂ ಚರ್ಚೆಗೆ ಬಂದಿಲ್ಲ.

In a surprise move, the NDA alliance has announced Maharashtra Governor and Tamil Nadu native C.P. Radhakrishnan as its official candidate for the upcoming Vice Presidential election scheduled for September 9.