ಎಂಆರ್ ಪಿಎಲ್ ಘಟಕದಲ್ಲಿ ಸ್ಫೋಟ ಘಟನೆ ; ತೀವ್ರ ಗಾಯಗೊಂಡಿದ್ದ ಮತ್ತೊಬ್ಬ ಯುವಕ ಚಿಕಿತ್ಸೆ ಫಲಿಸದೆ ಸಾವು

17-10-26 11:09 am       HK News Staffer   ಕ್ರೈಂ

ಜೋಕಟ್ಟೆ ಬಳಿಯ ಎಂಆರ್ ಪಿಎಲ್ ಮೂರನೇ ಹಂತದ ಘಟಕದಲ್ಲಿ ಇತ್ತೀಚೆಗೆ ನಡೆದ ಸ್ಫೋಟ ಘಟನೆಯಲ್ಲಿ ತೀವ್ರ ಸುಟ್ಟ ಗಾಯಗೊಂಡಿದ್ದ ಸುರತ್ಕಲ್ ಮೇಲ್ಸೇತುವೆ ಬಳಿಯ ನಿವಾಸಿ ರಾಜೇಶ್ ಬ್ಯಾಪ್ಟಿಸ್ಟ್ (38) ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮಂಗಳೂರು, ಅ.17: ಜೋಕಟ್ಟೆ ಬಳಿಯ ಎಂಆರ್ ಪಿಎಲ್ ಮೂರನೇ ಹಂತದ ಘಟಕದಲ್ಲಿ ಇತ್ತೀಚೆಗೆ ನಡೆದ ಸ್ಫೋಟ ಘಟನೆಯಲ್ಲಿ ತೀವ್ರ ಸುಟ್ಟ ಗಾಯಗೊಂಡಿದ್ದ ಸುರತ್ಕಲ್ ಮೇಲ್ಸೇತುವೆ ಬಳಿಯ ನಿವಾಸಿ ರಾಜೇಶ್ ಬ್ಯಾಪ್ಟಿಸ್ಟ್ (38) ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 

ರಾಜೇಶ್ ಅವಿವಾಹಿತರಾಗಿದ್ದು ತಂದೆ, ತಾಯಿ ತೀರಿಕೊಂಡಿದ್ದಾರೆ. ಸೋದರನಿದ್ದು ಇತರ ಕುಟುಂಬ ಸದಸ್ಯರು ಮಂಗಳೂರಿನ ಅವರನ್ನು ಆಸ್ಪತ್ರೆಯಲ್ಲಿ ನೋಡಿಕೊಂಡಿದ್ದರು. ವಾರದ ಹಿಂದೆ ಸ್ವಲ್ಪ ಚೇತರಿಕೆ ಕಂಡಿದ್ದಾರೆಂದು ಮಾಹಿತಿಗಳಿದ್ದವು. ಮುಖ ಮತ್ತು ಎದೆಯ ಭಾಗದಲ್ಲಿ ಹೆಚ್ಚು ಸುಟ್ಟ ಗಾಯಗಳಿದ್ದರಿಂದ ಸುಸ್ಥಿತಿಗೆ ಮರಳದೆ ಅಂಗಾಂಗ ವೈಫಲ್ಯದಿಂದಾಗಿ ಮೃತಪಟ್ಟಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ. 

ಎಂಆರ್ ಪಿಎಲ್ ಮೂರನೇ ಹಂತದ ವಿಸ್ತರಣಾ ಘಟಕದಲ್ಲಿ ಸೆ.30ರಂದು ಮಧ್ಯಾಹ್ನ ಹಠಾತ್ ಸ್ಫೋಟ ಘಟನೆ ನಡೆದಿತ್ತು. ‌ಸ್ಫೋಟದಲ್ಲಿ ಮುಲ್ಕಿ ಹಳೆಯಂಗಡಿ ನಿವಾಸಿಯಾಗಿದ್ದ ನೌಕರ ಮನೀಶ್ ಕರ್ಕಡ (23) ಎಂಬ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದರು. ರಾಜೇಶ್ ಅವರಿಗೆ 35 ಶೇಕಡಾ ಸುಟ್ಟ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಿದ್ದಾಗಿ ಪೊಲೀಸರು ತಿಳಿಸಿದ್ದರು. ಇತರೇ ಎಂಟು ಮಂದಿಗೆ ಸಣ್ಣ ಪುಟ್ಟ ಸುಟ್ಟ ಗಾಯಗಳಾಗಿದ್ದವು. ಒಮ್ಮಿಂದೊಮ್ಮೆಲೇ ಸ್ಫೋಟಗೊಂಡು ಭಾರೀ ಹೊಗೆ ಆವರಿಸಿದ್ದರಿಂದ ಮತ್ತು ಭಾರೀ ಸ್ಫೋಟದ ಸದ್ದು ಸುತ್ತಲಿನ ಮಂಗಳೂರು, ಬಜ್ಪೆ ಸೇರಿ ಆಸುಪಾಸಿನಲ್ಲಿ ಕೇಳಿದ್ದರಿಂದ ಜನರಲ್ಲಿ ಆತಂಕ ಉಂಟಾಗಿತ್ತು. 

ಮೃತ ಮನೀಶ್ ಕರ್ಕಡ ಕುಟುಂಬಕ್ಕೆ ಎಂಆರ್ ಪಿಎಲ್ ಸಂಸ್ಥೆಯಿಂದ ಒಂದು ಕೋಟಿ ಪರಿಹಾರ ನೀಡಲಾಗಿತ್ತು. ರಾಜೇಶ್ ಕುಟುಂಬಕ್ಕೂ ಅಷ್ಟೇ ಮೊತ್ತದ ಪರಿಹಾರ ಸಿಗುವ ಸಾಧ್ಯತೆ ಇದೆ.