ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22 ವರ್ಷದ ಟ್ರೈನಿ ಪೈಲಟ್ ಅಭಿಷೇಕ್ ಪೂಜಾರಿ ದುರ್ಮರಣ

28-08-26 04:17 pm       HK News Staffer   ಕ್ರೈಂ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಖಾಸಗಿ ತರಬೇತಿ ವೇಳೆ ವಿಮಾನ ಪತನಗೊಂಡು ಉಡುಪಿ ಮೂಲದ 22 ವರ್ಷದ ಟ್ರೈನಿ ಪೈಲಟ್ ಅಭಿಷೇಕ್ ಪೂಜಾರಿ ಕೊನೆಯುಸಿರೆಳೆದಿದ್ದಾರೆ.

ಉಡುಪಿ, ಆ.28: ಉತ್ತರ ಪ್ರದೇಶದ ಕಾನ್ಪುರದಲ್ಲಿ ಖಾಸಗಿ ತರಬೇತಿ ವೇಳೆ ವಿಮಾನ ಪತನಗೊಂಡು ಉಡುಪಿ ಮೂಲದ 22 ವರ್ಷದ ಟ್ರೈನಿ ಪೈಲಟ್ ಅಭಿಷೇಕ್ ಪೂಜಾರಿ  ಕೊನೆಯುಸಿರೆಳೆದಿದ್ದಾರೆ.

ಮೃತ ಅಭಿಷೇಕ್ ಪೂಜಾರಿ ಮುಂಬೈನಲ್ಲಿ ವಾಸವಾಗಿದ್ದು, ಮೂಲತಃ ಉಡುಪಿ ಜಿಲ್ಲೆಯ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಕಣಜಾರು ಗ್ರಾಮದ ಕಡೇಬೆರ್ಕೆ ನಿವಾಸಿಗಳಾದ ಪ್ರಭಾಕರ ಪೂಜಾರಿ ಹಾಗೂ ಶಶಿಕಲಾ ಪೂಜಾರಿ ದಂಪತಿಯ ಪುತ್ರ.

ಎರಡೂವರೆ ವರ್ಷದಿಂದ ಪೈಲಟ್ ತರಬೇತಿ;

ಅಭಿಷೇಕ್ ಪೂಜಾರಿ ಅವರು ಕಳೆದ ಸುಮಾರು ಎರಡೂವರೆ ವರ್ಷಗಳಿಂದ ಉತ್ತರ ಪ್ರದೇಶದ ಕಾನ್ಪುರದಲ್ಲಿ ಖಾಸಗಿ ಟ್ರೈನಿ ಪೈಲಟ್ ಆಗಿ ತರಬೇತಿ ಪಡೆಯುತ್ತಿದ್ದರು. ವಿಮಾನ ಹಾರಾಟದ ತರಬೇತಿ ಪಡೆಯುತ್ತಿದ್ದ ವೇಳೆ ನಡೆದ ಅಪಘಾತ ಅವರ ಬದುಕನ್ನೇ ದುರಂತವಾಗಿ ಅಂತ್ಯಗೊಳಿಸಿದೆ.

ಅಭಿಷೇಕ್ ಅವರು ಆಗಾಗ್ಗೆ ತಮ್ಮ ಕುಟುಂಬದೊಂದಿಗೆ ಕಣಜಾರು ಗ್ರಾಮದ ಕಡೇಬೆರ್ಕೆಯಲ್ಲಿರುವ ತಮ್ಮ ತಾಯಿಯ ಸಹೋದರ ಜೀವನ್ ಕುಮಾರ್ ಅವರ ಮನೆಗೆ ಬಂದು ಹೋಗುತ್ತಿದ್ದರು ಎಂದು ತಿಳಿದುಬಂದಿದೆ.

ಕುಟುಂಬಸ್ಥರು ಕಾನ್ಪುರಕ್ಕೆ;

ವಿಮಾನ ಪತನದ ಸುದ್ದಿ ತಿಳಿಯುತ್ತಿದ್ದಂತೆಯೇ ಅಭಿಷೇಕ್ ಅವರ ಕುಟುಂಬಸ್ಥರು ಮುಂದಿನ ಕಾನೂನು ಪ್ರಕ್ರಿಯೆಗಳಿಗಾಗಿ ಕಾನ್ಪುರಕ್ಕೆ ತೆರಳಿದ್ದಾರೆ. ಮೃತದೇಹ ಹಸ್ತಾಂತರ ಸೇರಿದಂತೆ ಅಗತ್ಯ ಕಾನೂನು ಕ್ರಮಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪೈಲಟ್ ಆಗುವ ಕನಸು ಹೊತ್ತು ತರಬೇತಿ ಪಡೆಯುತ್ತಿದ್ದ ಉಡುಪಿ ಮೂಲದ ಯುವಕನ ದುರಂತ ಸಾವು ಕುಟುಂಬಸ್ಥರು ಹಾಗೂ ಆತ್ಮೀಯರಲ್ಲಿ ತೀವ್ರ ಆಘಾತ ಮೂಡಿಸಿದೆ.