Samson Coutinho, Mangalore, Fiona Sweedal Murder: ಮೊಬೈಲ್‌ಗಾಗಿ ತಂಗಿಯನ್ನೇ ಸುತ್ತಿಗೆಯಿಂದ ಹೊಡೆದು ಹತ್ಯೆ ; ಸ್ಯಾಮ್ಸನ್ ಕುಟಿನ್ಹಾಗೆ 4 ವರ್ಷ ಜೈಲು ಶಿಕ್ಷೆ

26-08-26 09:36 pm       HK News Staffer   ಕ್ರೈಂ

ಮೊಬೈಲ್ ಫೋನ್‌ ನೀಡುವ ವಿಚಾರದಲ್ಲಿ ಉಂಟಾದ ಜಗಳ ವಿಕೋಪಕ್ಕೆ ತಿರುಗಿ ತಂಗಿಯನ್ನು ಸುತ್ತಿಗೆಯಿಂದ ಹೊಡೆದು ಹತ್ಯೆಗೈದ ಪ್ರಕರಣದಲ್ಲಿ ಅಪರಾಧಿ ಸಹೋದರನಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಕಂಬಳಪದವು ನಿವಾಸಿ ಸ್ಯಾಮ್ಸನ್ ಫ್ರಾನ್ಸಿಸ್ ಕುಟಿನ್ಹಾ ಶಿಕ್ಷೆಗೊಳಗಾದ ಆರೋಪಿಯಾಗಿದ್ದು, ವಿವಿಧ ಕಲಂಗಳಡಿ ಒಟ್ಟು 7 ವರ್ಷಗಳ ಜೈಲು ಶಿಕ್ಷೆ ಹಾಗೂ ₹11 ಸಾವಿರ ದಂಡ ವಿಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸರು ತಿಳಿಸಿದ್ದಾರೆ.

ಮಂಗಳೂರು , ಆ.26: ಮೊಬೈಲ್ ಫೋನ್‌ ನೀಡುವ ವಿಚಾರದಲ್ಲಿ ಉಂಟಾದ ಜಗಳ ವಿಕೋಪಕ್ಕೆ ತಿರುಗಿ ತಂಗಿಯನ್ನು ಸುತ್ತಿಗೆಯಿಂದ ಹೊಡೆದು ಹತ್ಯೆಗೈದ ಪ್ರಕರಣದಲ್ಲಿ ಅಪರಾಧಿ ಸಹೋದರನಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಕಂಬಳಪದವು ನಿವಾಸಿ ಸ್ಯಾಮ್ಸನ್ ಫ್ರಾನ್ಸಿಸ್ ಕುಟಿನ್ಹಾ ಶಿಕ್ಷೆಗೊಳಗಾದ ಆರೋಪಿಯಾಗಿದ್ದು, ವಿವಿಧ ಕಲಂಗಳಡಿ ಒಟ್ಟು 7 ವರ್ಷಗಳ ಜೈಲು ಶಿಕ್ಷೆ ಹಾಗೂ ₹11 ಸಾವಿರ ದಂಡ ವಿಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸರು ತಿಳಿಸಿದ್ದಾರೆ.

2019ರ ಅಕ್ಟೋಬರ್ 8ರಂದು ಮಧ್ಯಾಹ್ನ ಕಂಬಳಪದವಿನ ಮನೆಯಲ್ಲಿದ್ದ ಸ್ಯಾಮ್ಸನ್, ತನ್ನ ತಂಗಿ ಫಿಯೋನಾ ಸ್ವೀಡಲ್ ಕುಟಿನ್ಹಾ ಅವರಲ್ಲಿದ್ದ ಮೊಬೈಲ್ ಫೋನ್‌ ಬಳಸಲು ನೀಡುವಂತೆ ಕೇಳಿದ್ದ. ಈ ವಿಚಾರದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೋಪಗೊಂಡ ಸ್ಯಾಮ್ಸನ್ ಸುತ್ತಿಗೆಯಿಂದ ಫಿಯೋನಾ ಅವರ ತಲೆಗೆ ಬಲವಾಗಿ ಹೊಡೆದಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಅವರು ಮೃತಪಟ್ಟ ಬಳಿಕ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ಮನೆಯ ಹಿಂಭಾಗದ ಪೊದೆಯಲ್ಲಿ ಬಚ್ಚಿಟ್ಟಿದ್ದ ಎಂದು ಪ್ರಕರಣದ ತನಿಖೆಯಲ್ಲಿ ತಿಳಿದುಬಂದಿತ್ತು.

ಹತ್ಯೆಗೂ ಮುನ್ನ ಸ್ಯಾಮ್ಸನ್ ಕಾಲೇಜಿನಲ್ಲಿ ಶಿಸ್ತು ಉಲ್ಲಂಘನೆಗೆ ಸಂಬಂಧಿಸಿದ ಕಾರಣಕ್ಕೆ ಕಾಲೇಜಿನಿಂದ ಹೊರಹಾಕಲ್ಪಟ್ಟಿದ್ದ. ಬಳಿಕ ಬಹುತೇಕ ಸಮಯ ಮನೆಯಲ್ಲೇ ಇರುತ್ತಿದ್ದ ಆತ ಗಾಂಜಾ ಸೇವಿಸುತ್ತಿದ್ದ ಹಾಗೂ ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ ಎಂದು ತನಿಖೆಯಲ್ಲಿ ತಿಳಿದುಬಂದಿತ್ತು. ಮೊಬೈಲ್ ಫೋನ್ ಅತಿಯಾಗಿ ಬಳಸುತ್ತಿದ್ದ ಹಿನ್ನೆಲೆಯಲ್ಲಿ ಘಟನೆಯ ಎರಡು ದಿನಗಳ ಹಿಂದಷ್ಟೇ ತಂದೆ ಸ್ಯಾಮ್ಸನ್‌ನ ಮೊಬೈಲ್ ಕಸಿದುಕೊಂಡಿದ್ದರು. ಆದರೆ ಫಿಯೋನಾಗೆ ಮೊಬೈಲ್ ಬಳಸಲು ಅವಕಾಶವಿತ್ತು. ಇದೇ ವಿಚಾರ ಸ್ಯಾಮ್ಸನ್‌ನ ಅಸಮಾಧಾನಕ್ಕೆ ಕಾರಣವಾಗಿತ್ತು, ಗಾಂಜಾ ಸೇವನೆಯ ಪ್ರಭಾವದಲ್ಲಿದ್ದಾಗಲೇ ಆತ ತಂಗಿಯನ್ನು ಹತ್ಯೆ ಮಾಡಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದರು.

ಮಗಳು ಕಾಣೆಯಾಗಿರುವುದಾಗಿ ತಂದೆ ಫ್ರಾನ್ಸಿಸ್ ಕುಟಿನ್ಹಾ ದೂರು ನೀಡಿದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಆಗಿನ ದಕ್ಷಿಣ ವಿಭಾಗದ ಎಸಿಪಿ ಟಿ. ಕೋದಂಡ ರಾಮ್ ನೇತೃತ್ವದ ತನಿಖೆಯಲ್ಲಿ ಆರೋಪಿಯ ವಿರುದ್ಧ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ 2020ರ ಜನವರಿ 10ರಂದು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಆಗಸ್ಟ್ 24ರಂದು ತೀರ್ಪು ಪ್ರಕಟಿಸಿದೆ. ಐಪಿಸಿ ಕಲಂ 304(II) ಅಡಿ 4 ವರ್ಷಗಳ ಜೈಲು ಶಿಕ್ಷೆ ಹಾಗೂ ₹10 ಸಾವಿರ ದಂಡ, ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿ ಶಿಕ್ಷೆ ವಿಧಿಸಲಾಗಿದೆ. ಇನ್ನು ಸಾಕ್ಷ್ಯ ನಾಶಕ್ಕೆ ಸಂಬಂಧಿಸಿದ ಐಪಿಸಿ ಕಲಂ 201ರಡಿ 1 ವರ್ಷ ಜೈಲು ಹಾಗೂ ₹1 ಸಾವಿರ ದಂಡ ವಿಧಿಸಲಾಗಿದೆ.

ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ ನಾಯಕ್ ವಾದ ಮಂಡಿಸಿದ್ದರು. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ ನಾಯಕ್ ವಾದ ಮಂಡಿಸಿದ್ದರು.