ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾಡಿನೊಂದಿಗೆ ರೀಲ್ಸ್ ಮಾಡಿದ್ದ ಆರೋಪಿ ಬಂಧನ

25-08-26 10:39 pm       HK News Staffer   ಕ್ರೈಂ

ಟಿಪ್ಪು ಸುಲ್ತಾನ್ ಕಟೌಟ್‌ಗೆ ಪಾಕಿಸ್ತಾನ್ ಪರ ಹಾಡು ಹಾಕಿ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದ ಪ್ರಕರಣದಲ್ಲಿ ಚಿಕ್ಕಮಗಳೂರು ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಿಕ್ಕಮಗಳೂರು, ಆ.25: ಟಿಪ್ಪು ಸುಲ್ತಾನ್ ಕಟೌಟ್‌ಗೆ ಪಾಕಿಸ್ತಾನ್ ಪರ ಹಾಡು ಹಾಕಿ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದ ಪ್ರಕರಣದಲ್ಲಿ ಚಿಕ್ಕಮಗಳೂರು ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಿಕ್ಕಮಗಳೂರಿನ ಟಿಪ್ಪು ನಗರದ ನಿವಾಸಿ, 23 ವರ್ಷದ ಅಫ್ರಿದ್ ಬಂಧಿತ ಆರೋಪಿ. ಈತನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿ ಅಫ್ರಿದ್ ಖಾಸಗಿ ಕಾರು ಶೋರೂಮ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ತಿಳಿಸಿದ್ದಾರೆ.

‘ಚಿಕ್ಕಮಗಳೂರು ಪವರ್ ಟಿಪ್ಪು ಬಾಯ್ಸ್’ ಎಂಬ ಇನ್‌ಸ್ಟಾಗ್ರಾಮ್ ಖಾತೆಯನ್ನು ನಿರ್ವಹಿಸುತ್ತಿದ್ದ ಈತ ಅದೇ ಖಾತೆಯ ಮೂಲಕ ವಿವಾದಾತ್ಮಕ ವಿಡಿಯೋ ಹಂಚಿಕೊಂಡಿದ್ದ. ಈದ್‌ ಮಿಲಾದ್‌ ಹಿನ್ನೆಲೆಯಲ್ಲಿ ನಗರದಲ್ಲಿ ಯುವಕರು 40 ಅಡಿ ಎತ್ತರದ ಟಿಪ್ಪು ಸುಲ್ತಾನ್‌ ಕಟೌಟ್‌ ಹಾಕಿದ್ದರು. ಇದನ್ನು ವಿಡಿಯೋ ಮಾಡಿ, ಅದಕ್ಕೆ ಪಾಕ್‌ ಸೇನೆಯ ಪರವಾದ ಹಾಡು ಹಾಕಿ ಸಾಮಾಜಿಕ ಜಾಲತಾಣದಲ್ಲಿ‌ ಆಫ್ರಿದ್ ವೈರಲ್‌ ಮಾಡಿದ್ದ.

ಕಳೆದ ಹಲವು ವರ್ಷಗಳಿಂದ ಹೇಗೆ ನಡೆಯುತ್ತಿತ್ತೋ ಅದಷ್ಟೇ ಮುಂದುವರಿಸಲು ಅನುಮತಿ ನೀಡಲಾಗಿತ್ತು. ಯಾವುದೇ ಹೊಸ ಕಟೌಟ್ ಗಳಿಗೆ ಅನುಮತಿ ನೀಡಲಾಗುವುದಿಲ್ಲ ಎಂದು ಸಂಘಟಕರಿಗೆ ಸೂಚನೆ ನೀಡಲಾಗಿತ್ತು. ಆದರೆ ಸಂಜೆ 5.30ರ ಸುಮಾರಿಗೆ ಯಾರೋ ಒಬ್ಬರು ಕಟೌಟ್ ಇರಿಸಿ ವೀಡಿಯೊ ಮಾಡಿದ್ದು ಅದರ ಜೊತೆಗೆ "ಪಾಕಿಸ್ತಾನ" ಮತ್ತು "ಮುಜಾಹಿದ್" ಪದಗಳನ್ನು ಹೊಂದಿರುವ ಹಾಡನ್ನು ಸೇರಿಸಿ ವೈರಲ್ ಮಾಡಿದ್ದಾರೆ. ಆರೋಪಿ ತನ್ನ ವಾಟ್ಸಾಪ್ ಸ್ಟೇಟಸ್ ನಲ್ಲಿಯೂ ಹಂಚಿಕೊಂಡಿದ್ದು ಕೆಲವು ಇನ್‌ಸ್ಟಾಗ್ರಾಮ್ ಖಾತೆಗಳು ಮತ್ತು ಇತರ ವ್ಯಕ್ತಿಗಳಿಗೆ ನೇರ ಸಂದೇಶಗಳನ್ನು ಕಳುಹಿಸಿದ್ದಾನೆ ಮತ್ತು ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ರೀಲ್ ಅಪ್‌ಲೋಡ್ ಮಾಡಿದ್ದಾನೆ ಎಂದು ದಯಾಮ ಹೇಳಿದರು.