ಸಹಕಾರಿ ಬ್ಯಾಂಕ್ ನಿರ್ದೇಶಕ ಸ್ಥಾನ 10 ವರ್ಷಕ್ಕೆ ಮಿತಿ ; 37 ವರ್ಷಗಳ ನಿರ್ದೇಶಕ ಹುದ್ದೆ ಕಳಕೊಂಡ ಮಹಾರಾಷ್ಟ್ರದ ಸಹಕಾರಿ ಸಚಿವ ! ಹೈಕೋರ್ಟ್ ಮೆಟ್ಟಿಲೇರಿದರೂ ಸಿಗದ ಮನ್ನಣೆ

19-10-26 07:10 pm       HK News Staffer   ಕರಾವಳಿ

ಮಹತ್ವದ ಬೆಳವಣಿಗೆಯಲ್ಲಿ ಮಹಾರಾಷ್ಟ್ರದ ಸಹಕಾರ ಸಚಿವ ಬಾಬಾಸಾಹೇಬ್ ಪಾಟೀಲ್ ಅವರಿಗೆ ಬಾಂಬೆ ಹೈಕೋರ್ಟ್‌ ಔರಂಗಾಬಾದ್ ಪೀಠವು 10 ವರ್ಷಗಳ ಬಳಿಕ ನಿರ್ದೇಶಕ ಹುದ್ದೆ ಬಿಟ್ಟುಕೊಡಬೇಕೆಂಬ ನಿಯಮದಲ್ಲಿ ರಿಲೀಫ್ ನೀಡಲು ನಿರಾಕರಿಸಿದೆ.

ಮುಂಬೈ, ಅ.19: ಮಹತ್ವದ ಬೆಳವಣಿಗೆಯಲ್ಲಿ ಮಹಾರಾಷ್ಟ್ರದ ಸಹಕಾರ ಸಚಿವ ಬಾಬಾಸಾಹೇಬ್ ಪಾಟೀಲ್ ಅವರಿಗೆ ಬಾಂಬೆ ಹೈಕೋರ್ಟ್‌ ಔರಂಗಾಬಾದ್ ಪೀಠವು 10 ವರ್ಷಗಳ ಬಳಿಕ ನಿರ್ದೇಶಕ ಹುದ್ದೆ ಬಿಟ್ಟುಕೊಡಬೇಕೆಂಬ ನಿಯಮದಲ್ಲಿ ರಿಲೀಫ್ ನೀಡಲು ನಿರಾಕರಿಸಿದೆ. 

ಸಹಕಾರಿ ಬ್ಯಾಂಕಿನಲ್ಲಿ ಸತತ 37 ವರ್ಷಗಳಿಂದ ನಿರ್ದೇಶಕರಾಗಿದ್ದ ಪಾಟೀಲ್ ಅವರನ್ನು ಆರ್‌ಬಿಐ ನಿರ್ದೇಶಕ ಸ್ಥಾನದಿಂದ ತೆಗೆದುಹಾಕಿರುವ ಆದೇಶವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಆರ್‌ಬಿಐ ಜಾರಿಗೊಳಿಸಿರುವ ನಿರ್ದೇಶಕತ್ವದ 10 ವರ್ಷಗಳ ಗರಿಷ್ಠ ಮಿತಿಯ ನಿರ್ಬಂಧ ಅನುಷ್ಠಾನ ವಿಚಾರದಲ್ಲಿ ದೇಶದ ಹಲವಡೆ ಕೋರ್ಟ್ ಮೆಟ್ಟಿಲೇರಿರುವ ಬೆಳವಣಿಗೆ ಹಿನ್ನೆಲೆಯಲ್ಲಿ ಈ ತೀರ್ಪು ಮಹತ್ವ ಪಡೆದಿದೆ. 

ದೀರ್ಘ ಕಾಲದಿಂದ ನಿರ್ದೇಶಕ ಸ್ಥಾನದಲ್ಲಿರುವವರ ಅಧಿಕಾರಾವಧಿ, ಬ್ಯಾಂಕ್ ಆಡಳಿತ ಮಂಡಳಿಗಳ ಪುನರ್‌ರಚನೆ ಹಾಗೂ ಆಡಳಿತದಲ್ಲಿ ಹೊಸಬರಿಗೆ ಅವಕಾಶ ಕಲ್ಪಿಸುವ ವಿಚಾರಗಳು ಸಹಕಾರ ಬ್ಯಾಂಕಿಂಗ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ. 

ಆರ್‌ಬಿಐ ಆದೇಶ ಪ್ರಶ್ನಿಸಿ ಅರ್ಜಿ; 

ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949ರ ಸೆಕ್ಷನ್ 10ಎ(2ಎ)(i) ಅಡಿಯಲ್ಲಿ ಆರ್‌ಬಿಐ 2026ರ ಸೆಪ್ಟೆಂಬರ್ 18ರಂದು ಹೊರಡಿಸಿದ್ದ ಆದೇಶ ಪ್ರಕಾರ, ಪಾಟೀಲ್ ಅವರನ್ನು ನಿರ್ದೇಶಕ ಸ್ಥಾನದಿಂದ ತೆರವು ಮಾಡಲಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ತಿದ್ದುಪಡಿ ಮಾಡಲಾದ ನಿರ್ದೇಶಕತ್ವದ ಅವಧಿ ನಿರ್ಬಂಧವನ್ನು ಆರ್‌ಬಿಐ ಹಿಂದಿನ ಅವಧಿಗೂ ಅನ್ವಯಿಸುವಂತೆ ತಪ್ಪಾಗಿ ಜಾರಿಗೊಳಿಸಿದೆ ಎಂದು ಪಾಟೀಲ್ ವಾದಿಸಿದ್ದರು. 

 

ಇದಕ್ಕೆ ಪ್ರತಿಯಾಗಿ ಆರ್‌ಬಿಐ, ಕಾಯ್ದೆಯಲ್ಲಿರುವ ‘ನಿರಂತರವಾಗಿ ಅಧಿಕಾರದಲ್ಲಿರುವುದು’ ಎಂಬ ಪದಪ್ರಯೋಗದ ಆಧಾರದ ಮೇಲೆ ಈ ನಿಯಮ ಅನ್ವಯಿಸುತ್ತದೆ ಎಂದು ವಾದಿಸಿತು. ತಿದ್ದುಪಡಿ ನಿಯಮವು ಹಿಂದಿನ ಅವಧಿಯನ್ನು ಪರಿಗಣಿಸುವುದಕ್ಕಿಂತ, ಪ್ರಸ್ತುತ ಮುಂದುವರಿಯುತ್ತಿರುವ ನಿರ್ದೇಶಕತ್ವದ ಅವಧಿಗೆ ಅನ್ವಯಿಸುತ್ತದೆ ಎಂದು ಆರ್‌ಬಿಐ ಹೇಳಿತ್ತು. 

 

ನ್ಯಾಯಮೂರ್ತಿಗಳಾದ ನಿತಿನ್ ಬಿ. ಸೂರ್ಯವಂಶಿ ಮತ್ತು ಅಬಾಸಾಹೇಬ್ ಡಿ. ಶಿಂಧೆ ಅವರನ್ನೊಳಗೊಂಡ ವಿಭಾಗೀಯ ಪೀಠವು, ಪಾಟೀಲ್ ಅವರು 37 ವರ್ಷಗಳ ಕಾಲ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಆರ್‌ಬಿಐ ವಾದದಲ್ಲಿ ಮೇಲ್ನೋಟಕ್ಕೆ ನ್ಯಾಯಸಮ್ಮತ ಅಂಶಗಳಿವೆ ಎಂದು ಅಭಿಪ್ರಾಯಪಟ್ಟಿತು.