Mysuru Murder, Suicide: ನಾನಿಲ್ಲದೆ ನನ್ನ ಹೆಂಡತಿ-ಮಕ್ಕಳು ಕಷ್ಟಪಡಬಾರದು ; ಪತ್ನಿ-ಇಬ್ಬರು ಪುತ್ರಿಯರನ್ನು ಕೊಂದು ಫೈನಾನ್ಸಿಯರ್ ಆತ್ಮಹತ್ಯೆ, ಒಂದೇ ಮನೆಯಲ್ಲಿ ನಾಲ್ಕು ಶವಗಳು, ಡೆತ್‌ನೋಟ್‌ನಲ್ಲಿ ಬೆಚ್ಚಿಬೀಳಿಸುವ ವಿವರಗಳು !

22-07-26 04:21 pm       HK News Staffer   ಕ್ರೈಂ

ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣದ ನ್ಯೂ ಮಾರುತಿ ಬಡಾವಣೆಯಲ್ಲಿ ಬೆಚ್ಚಿಬೀಳಿಸುವ ದುರಂತವೊಂದು ಸಂಭವಿಸಿದೆ. ಖಾಸಗಿ ಫೈನಾನ್ಸ್ ಹಾಗೂ ಆಸ್ತಿ ವ್ಯವಹಾರ ನಡೆಸುತ್ತಿದ್ದ ಹರೀಶ್ ಅಲಿಯಾಸ್ ಸ್ಯಾಡೂ ಹರೀಶ್ (45) ತನ್ನ ಪತ್ನಿ ನಿಶ್ಚಿತಾ (40), ಪುತ್ರಿಯರಾದ ನೆಕ್ಸಾ (13) ಮತ್ತು ರಕ್ಷಾ (6) ಅವರ ಬಾಯಿ ಹಾಗೂ ಮೂಗಿಗೆ ಪ್ಲಾಸ್ಟರ್ ಸುತ್ತಿ ಉಸಿರುಗಟ್ಟಿಸಿ ಹತ್ಯೆಗೈದು, ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.

ಮೈಸೂರು, ಜು.22: ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣದ ನ್ಯೂ ಮಾರುತಿ ಬಡಾವಣೆಯಲ್ಲಿ ಬೆಚ್ಚಿಬೀಳಿಸುವ ದುರಂತವೊಂದು ಸಂಭವಿಸಿದೆ. ಖಾಸಗಿ ಫೈನಾನ್ಸ್ ಹಾಗೂ ಆಸ್ತಿ ವ್ಯವಹಾರ ನಡೆಸುತ್ತಿದ್ದ ಹರೀಶ್ ಅಲಿಯಾಸ್ ಸ್ಯಾಡೂ ಹರೀಶ್ (45) ತನ್ನ ಪತ್ನಿ ನಿಶ್ಚಿತಾ (40), ಪುತ್ರಿಯರಾದ ನೆಕ್ಸಾ (13) ಮತ್ತು ರಕ್ಷಾ (6) ಅವರ ಬಾಯಿ ಹಾಗೂ ಮೂಗಿಗೆ ಪ್ಲಾಸ್ಟರ್ ಸುತ್ತಿ ಉಸಿರುಗಟ್ಟಿಸಿ ಹತ್ಯೆಗೈದು, ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.

ಪ್ರಾಥಮಿಕ ತನಿಖೆಯಲ್ಲಿ ಹರೀಶ್ ಇಂಗ್ಲಿಷ್‌ನಲ್ಲಿ ಹಲವು ಪುಟಗಳ ಡೆತ್‌ನೋಟ್ ಹಾಗೂ ಪ್ರತ್ಯೇಕ ಪತ್ರಗಳನ್ನು ಬರೆದಿರುವುದು ಬೆಳಕಿಗೆ ಬಂದಿದೆ. ಆಸ್ತಿ, ಸಾಲ, ಬ್ಯಾಂಕ್ ದಾಖಲೆಗಳು, ಲಾಕರ್ ಕೀ, ಕುಟುಂಬದ ಆಸ್ತಿ ಹಂಚಿಕೆ ಸೇರಿದಂತೆ ಹಲವು ವಿಷಯಗಳನ್ನು ಅದರಲ್ಲಿ ಉಲ್ಲೇಖಿಸಿದ್ದಾನೆ. ಜೊತೆಗೆ ತನ್ನ ತಾಯಿಗೆ "I am Sorry Amma, Take Care, My Last Wishes" ಎಂದು ಬರೆದು ಕ್ಷಮೆಯಾಚಿಸಿದ್ದಾನೆ.

ಪ್ರವಾಸದ ನೆಪ, ಬಳಿಕ ನಡೆದ ಭೀಕರ ಕೃತ್ಯ;

ಮೂರು ದಿನಗಳ ಹಿಂದೆ ಪ್ರವಾಸದ ನೆಪವೊಡ್ಡಿ ತನ್ನ ತಾಯಿಯನ್ನು ತವರಿಗೆ ಕಳುಹಿಸಿದ್ದ ಹರೀಶ್, ಮನೆಗೆ ಮರಳಿದ ಬಳಿಕ ಸ್ನೇಹಿತರೊಂದಿಗೆ ಮೊಬೈಲ್‌ನಲ್ಲಿ ಸಹಜವಾಗಿ ಮಾತನಾಡಿದ್ದ ಎನ್ನಲಾಗಿದೆ. ಆದರೆ ಅದೇ ರಾತ್ರಿ ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿ, ಬಳಿಕ ಮನೆಯ ಮೂರನೇ ಮಹಡಿಯಲ್ಲಿ ನೇಣು ಬಿಗಿದುಕೊಂಡಿದ್ದಾನೆ.

ತಾಯಿ ಅನುಮಾನಗೊಂಡಾಗ ಬಯಲಾಯಿತು ದುರಂತ

ಮಂಗಳವಾರ ಬೆಳಗ್ಗೆ ಹಲವು ಬಾರಿ ಕರೆ ಮಾಡಿದರೂ ಪುತ್ರ ಫೋನ್ ಸ್ವೀಕರಿಸದ ಹಿನ್ನೆಲೆಯಲ್ಲಿ ಅನುಮಾನಗೊಂಡ ಹರೀಶ್ ಅವರ ತಾಯಿ, ಸೊಸೆ ನಿಶ್ಚಿತಾ ಅವರ ಸ್ನೇಹಿತೆಗೆ ಮನೆಗೆ ತೆರಳಿ ನೋಡಲು ತಿಳಿಸಿದ್ದಾರೆ. ಮನೆಗೆ ತೆರಳಿದಾಗ ನಾಲ್ವರೂ ಮೃತಪಟ್ಟಿರುವುದು ಕಂಡುಬಂದಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಪೊಲೀಸರ ತನಿಖೆಯಲ್ಲಿ ಮತ್ತೊಂದು ಡೆತ್‌ನೋಟ್ ಕೂಡ ಪತ್ತೆಯಾಗಿದೆ. ಅದರಲ್ಲಿ "ಜೀವನದಲ್ಲಿ ವಿಫಲನಾಗಿದ್ದೇನೆ. ನಾನಿಲ್ಲದೆ ನನ್ನ ಹೆಂಡತಿ-ಮಕ್ಕಳು ಕಷ್ಟಪಡಬಾರದು. ಅದಕ್ಕಾಗಿಯೇ ಅವರನ್ನು ನನ್ನ ಜೊತೆಯಲ್ಲೇ ಕರೆದುಕೊಂಡು ಹೋಗುತ್ತಿದ್ದೇನೆ" ಎಂದು ಹರೀಶ್ ಬರೆದಿರುವುದಾಗಿ ತಿಳಿದುಬಂದಿದೆ.

ಆಸ್ತಿ, ಸಾಲ, ವ್ಯವಹಾರಗಳ ಸಂಪೂರ್ಣ ವಿವರ

ಹರೀಶ್ ಬರೆದಿರುವ ಪತ್ರಗಳಲ್ಲಿ ಮನೆಯನ್ನು ಅಡವಿಟ್ಟು ಪಡೆದಿರುವ ಸಾಲ, ತಾಯಿಗೆ ಬರಬೇಕಾದ ಪಾಲು, ಸಹೋದರಿಗೆ ನೀಡಬೇಕಾದ ಆಸ್ತಿ, ವಿವಿಧ ನಿವೇಶನಗಳ ಹಂಚಿಕೆ, ಗಾಣದ ಎಣ್ಣೆ ತಯಾರಿಕಾ ಘಟಕದ ಮಾಲೀಕತ್ವ ಬದಲಾವಣೆ ಹಾಗೂ ಎಲ್ಲ ದಾಖಲೆಗಳನ್ನು ಲಾಕರ್‌ನಲ್ಲಿ ಇರಿಸಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಅವುಗಳನ್ನು ಪತ್ನಿಯ ತಂದೆ ಕುಳ್ಳೇಗೌಡ ಅವರಿಗೆ ಹಸ್ತಾಂತರಿಸುವಂತೆ ಮನವಿ ಮಾಡಿದ್ದಾನೆ.

ಸಹೋದರಿ ಸಿಂಧು ಹಾಗೂ ಸ್ನೇಹಿತರಾದ ಶಿವು, ಗುರುಪ್ರಸಾದ್, ಕೃಷ್ಣಪೌಲ್ವಿ ಮತ್ತು ಮಣಿ ಅವರಿಗೆ ಪ್ರತ್ಯೇಕ ಪತ್ರಗಳನ್ನು ಬರೆದು ತನ್ನ ಕೊನೆಯ ಇಚ್ಛೆಯಂತೆ ನಡೆದುಕೊಳ್ಳುವಂತೆ ಕೋರಿದ್ದಾನೆ.

ಕುಟುಂಬಕ್ಕೆ ಯಾವುದೇ ಸಮಸ್ಯೆ ಇರಲಿಲ್ಲ: ಕಣ್ಣೀರು ಹಾಕಿದ ಮಾವ;

ಮೃತ ನಿಶ್ಚಿತಾ ಅವರ ತಂದೆ ಕುಳ್ಳೇಗೌಡ ಪ್ರತಿಕ್ರಿಯಿಸಿ, "ಕುಟುಂಬದಲ್ಲಿ ಯಾವುದೇ ದೊಡ್ಡ ಸಮಸ್ಯೆ ಕಾಣಿಸಲಿಲ್ಲ. ಅಳಿಯ ಇಂತಹ ಕೃತ್ಯ ಎಸಗಿರುವುದು ನಂಬಲು ಸಾಧ್ಯವಾಗುತ್ತಿಲ್ಲ" ಎಂದು ಕಣ್ಣೀರಿಟ್ಟಿದ್ದಾರೆ.

ಹಣಕಾಸಿನ ಒತ್ತಡವೇ ಕಾರಣವೇ?

ಫೈನಾನ್ಸ್ ಹಾಗೂ ಆಸ್ತಿ ವ್ಯವಹಾರ ನಡೆಸುತ್ತಿದ್ದ ಹರೀಶ್‌ಗೆ ಹಣಕಾಸಿನ ಒತ್ತಡ ಅಥವಾ ವ್ಯವಹಾರ ಸಂಬಂಧಿತ ಸಮಸ್ಯೆಗಳಿದ್ದವೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಆದರೆ ಇದುವರೆಗೆ ಯಾವುದೇ ಅಧಿಕೃತ ದೃಢೀಕರಣವಾಗಿಲ್ಲ.

ಎಸ್‌ಪಿ ಹೇಳಿದ್ದೇನು?

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ರವಿ ಹಾಗೂ ಇನ್ಸ್‌ಪೆಕ್ಟರ್ ಶಿವಮಾದಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. "ಡೆತ್‌ನೋಟ್ ಸೇರಿದಂತೆ ಎಲ್ಲಾ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಣಕಾಸಿನ ವ್ಯವಹಾರ ಸೇರಿದಂತೆ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಸಾವಿಗೆ ನಿಖರ ಕಾರಣ ತನಿಖೆಯ ಬಳಿಕವೇ ಸ್ಪಷ್ಟವಾಗಲಿದೆ" ಎಂದು ಎಸ್‌ಪಿ ತಿಳಿಸಿದ್ದಾರೆ.

ಹುಣಸೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ಸೇರಿದಂತೆ ಎಲ್ಲಾ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ. ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿರುವ ಅಂಶಗಳು ಹಾಗೂ ಹಣಕಾಸಿನ ವ್ಯವಹಾರಗಳ ಬಗ್ಗೆ ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ.