ಹಟ್ಟಿಯಲ್ಲಿದ್ದ ಹಸುವನ್ನು ನಡುರಾತ್ರಿ ಎಳೆದೊಯ್ದು ರೈತನ ತೋಟದಲ್ಲೇ ಮಾಂಸಗೈದ ದುಷ್ಕರ್ಮಿಗಳು ; ಬಿಜೆಪಿ ಮುಖಂಡರ ಆಕ್ರೋಶ, ಆರೋಪಿಗಳ ಬಂಧನಕ್ಕೆ 24 ಗಂಟೆ ಗಡುವು 

05-09-25 11:43 am       Mangalore Correspondent   ಕ್ರೈಂ

ಹಟ್ಟಿಯಲ್ಲಿದ್ದ ಹಸುವನ್ನು ರಾತ್ರೋರಾತ್ರಿ ಎಳೆದೊಯ್ದ ದುಷ್ಕರ್ಮಿಗಳ ದನದ ಮಾಲೀಕನ ತೋಟದಲ್ಲೇ ವಧೆ ಮಾಡಿ ಮಾಂಸ ಕೊಂಡೊಯ್ದ ಆಘಾತಕಾರಿ ಘಟನೆ ಉಪ್ಪಿನಂಗಡಿ ಠಾಣೆ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ಪೆರ್ನೆ ಸಮೀಪದ ಕಡಂಬು ಎಂಬಲ್ಲಿ ನಡೆದಿದೆ.

ಪುತ್ತೂರು, ಸೆ.5 : ಹಟ್ಟಿಯಲ್ಲಿದ್ದ ಹಸುವನ್ನು ರಾತ್ರೋರಾತ್ರಿ ಎಳೆದೊಯ್ದ ದುಷ್ಕರ್ಮಿಗಳ ದನದ ಮಾಲೀಕನ ತೋಟದಲ್ಲೇ ವಧೆ ಮಾಡಿ ಮಾಂಸ ಕೊಂಡೊಯ್ದ ಆಘಾತಕಾರಿ ಘಟನೆ ಉಪ್ಪಿನಂಗಡಿ ಠಾಣೆ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ಪೆರ್ನೆ ಸಮೀಪದ ಕಡಂಬು ಎಂಬಲ್ಲಿ ನಡೆದಿದೆ.

ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಕಡಂಬು ಎಂಬಲ್ಲಿನ ದೇಜಪ್ಪ ಮೂಲ್ಯ ಎಂಬವರ ಮನೆಯ ಹಟ್ಟಿಯಿಂದ ಹಸು ಅಪಹರಣ ನಡೆದಿದ್ದು, ಅವರದೇ ಜಾಗದಲ್ಲಿ ವಧೆ ನಡೆಸಿ ಮಾಂಸ ಮಾಡಲಾಗಿದೆ.

ಕೃಷಿಕರಾಗಿರುವ ದೇಜಪ್ಪ ಮೂಲ್ಯರು ಎರಡು ವರ್ಷ ಪ್ರಾಯದ ಗಬ್ಬದ ಹಸು ಸಾಕುತ್ತಿದ್ದು, ಬುಧವಾರ ತಡರಾತ್ರಿ 2.30ರ ಹೊತ್ತಿಗೆ ಬಹಿರ್ದೆಸೆಗೆಂದು ಹೊರ ಬಂದಿದ್ದಾಗ ಹಟ್ಟಿಯಲ್ಲಿ ಹಸು ಇರುವುದನ್ನು ಗಮನಿಸಿದ್ದಾರೆ. ಆದರೆ ಬೆಳಗ್ಗೆ ನೋಡಿದಾಗ ಹಟ್ಟಿಯ ಬಾಗಿಲು ತೆರೆದಿಟ್ಟ ಸ್ಥಿತಿಯಲ್ಲಿದ್ದು, ದನ ಇರಲಿಲ್ಲ. ಮನೆಯವರೆಲ್ಲ ಸೇರಿ ಹುಡುಕಿದಾಗ ಅವರ ಜಮೀನಿನಲ್ಲೇ ದನವನ್ನು ಕೊಂದು ಮಾಂಸ ಮಾಡಿರುವ ಚರ್ಮ, ಎಲುಬಿ‌ನ ಅವಶೇಷಗಳು ಪತ್ತೆಯಾಗಿವೆ. ಹೆದ್ದಾರಿಗೆ ತಾಗಿಕೊಂಡೇ ಎತ್ತರದ ಪ್ರದೇಶದಲ್ಲಿ ದೇಜಪ್ಪ ಮೂಲ್ಯರ ಮನೆ ಹಾಗೂ ದನದ ಕೊಟ್ಟಿಗೆಯಿದೆ.

ಅದರ ವಿರುದ್ಧ ದಿಕ್ಕಿನಲ್ಲಿ ಹೆದ್ದಾರಿಯ ಇನ್ನೊಂದು ಬದಿ ಅವರ ಜಮೀನಿದೆ. ಹಟ್ಟಿಯಿಂದ ಅಪಹರಿಸಿದ ದನವನ್ನು ದುಷ್ಕರ್ಮಿಗಳು ಹೆದ್ದಾರಿ ದಾಟಿಸಿ ಮತ್ತೊಂದು ಬದಿಯಲ್ಲಿರುವ ಅವರ ಜಾಗಕ್ಕೆ ಕೊಂಡೊಯ್ದು ಮಾಂಸ ಮಾಡಿದ್ದಾರೆ. ತಡರಾತ್ರಿ 2.30ರ ನಂತರ ದನವನ್ನು ಹಟ್ಟಿಯಿಂದ ಬಿಡಿಸಿಕೊಂಡು ಹೋಗಿ ಕೊಂದು ಮಾಂಸ ಮಾಡಿ ಕೊಂಡೊಯ್ಯಲಾಗಿದೆ. 

ಸ್ಥಳಕ್ಕೆ ಪುತ್ತೂರು ಉಪ ವಿಭಾಗದ ಡಿವೈಎಸ್ಪಿ ಅರುಣ್ ನಾಗೇಗೌಡ, ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕ ರವಿ ಬಿ.ಎಸ್, ಉಪ್ಪಿನಂಗಡಿ ಠಾಣಾ ಉಪನಿರೀಕ್ಷಕ ಅವಿನಾಶ್ ಗೌಡ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಬಗ್ಗೆ ಮನೆಯವರು ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತ-2023 ಹಾಗೂ ಗೋಹತ್ಯಾ ನಿಷೇಧ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು, ಹಿಂದು ಸಂಘಟನೆ ಕಾರ್ಯಕರ್ತರು ದೇಜಪ್ಪ ಮೂಲ್ಯರ ಮನೆಗೆ ಭೇಟಿ ನೀಡಿದ್ದು ಆರೋಪಿಗಳ ಬಂಧನಕ್ಕೆ 24 ಗಂಟೆಗಳ ಗಡುವು ನೀಡಿದ್ದಾರೆ. ಮಾಜಿ ಶಾಸಕ ಸಂಜೀವ ಮಟಂದೂರು, ಬಿಜೆಪಿ ಮುಖಂಡ ಅರುಣ ಪುತ್ತಿಲ ನೇತೃತ್ವದಲ್ಲಿ ಕಾರ್ಯಕರ್ತರು ಸೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

In a shocking incident, miscreants dragged away a cow from a cowshed in the dead of night and slaughtered it in the very plantation of its owner at Kadambu near Perne in Bantwal taluk, under Uppinangady police limits.