ಡಿಸಿಎಂ ಡಿಕೆಶಿ ಬೆಂಬಲಿಗರ ಹತ್ತಾರು ಕೇಸು ಸೇರಿದಂತೆ ಕಾಂಗ್ರೆಸ್ ಮುಖಂಡರು, ಶಾಸಕರ ಮೇಲಿನ 62 ಪ್ರಕರಣ ವಾಪಸ್ ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಣಯ 

05-09-25 05:40 pm       Bangalore Correspondent   ಕರ್ನಾಟಕ

ಡಿಸಿಎಂ ಡಿಕೆ ಶಿವಕುಮಾರ್‌ ಅವರ ಬೆಂಬಲಿಗರ ವಿರುದ್ಧದ ಪ್ರಕರಣಗಳು ಸೇರಿ ರಾಜ್ಯದ ನಾನಾ ಭಾಗಗಳಲ್ಲಿ ಕಾಂಗ್ರೆಸ್ ಮುಖಂಡರು, ಶಾಸಕರ ವಿರುದ್ಧ ದಾಖಲಾದ ಒಟ್ಟು 62 ಪ್ರಕರಣಗಳನ್ನ ಹಿಂಪಡೆಯುವ ನಿರ್ಣಯವನ್ನು ರಾಜ್ಯ ಸಚಿವ ಸಂಪುಟ ಸಭೆ ಕೈಗೊಂಡಿದೆ. 

ಬೆಂಗಳೂರು, ಸೆ.5 : ಡಿಸಿಎಂ ಡಿಕೆ ಶಿವಕುಮಾರ್‌ ಅವರ ಬೆಂಬಲಿಗರ ವಿರುದ್ಧದ ಪ್ರಕರಣಗಳು ಸೇರಿ ರಾಜ್ಯದ ನಾನಾ ಭಾಗಗಳಲ್ಲಿ ಕಾಂಗ್ರೆಸ್ ಮುಖಂಡರು, ಶಾಸಕರ ವಿರುದ್ಧ ದಾಖಲಾದ ಒಟ್ಟು 62 ಪ್ರಕರಣಗಳನ್ನ ಹಿಂಪಡೆಯುವ ನಿರ್ಣಯವನ್ನು ರಾಜ್ಯ ಸಚಿವ ಸಂಪುಟ ಸಭೆ ಕೈಗೊಂಡಿದೆ. 

ಜಾರಿ ನಿರ್ದೇಶನಾಲಯದ ಅಧಿಕಾರಿಗಳು 2019ರಲ್ಲಿ ಡಿಕೆ ಶಿವಕುಮಾರ್‌ ಅವರನ್ನು ಬಂಧಿಸಿದ ಸಂದರ್ಭದಲ್ಲಿ ದಾಂಧಲೆ ನಡೆಸಿದ ಬೆಂಬಲಿಗರ ವಿರುದ್ಧ ಸಾತನೂರು, ಕೋಡಿಹಳ್ಳಿ ಸೇರಿ ರಾಮನಗರ ಜಿಲ್ಲೆಯ ನಾನಾ ಪೊಲೀಸ್‌ ಠಾಣೆಗಳಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಾಗಿತ್ತು. ಇದು ಸೇರಿದಂತೆ ರೈತ ಮುಖಂಡರು, ನಾನಾ ಸಂಘಟನೆಗಳ ಮುಖಂಡರ ವಿರುದ್ಧದ ಮೊಕದ್ದಮೆಗಳನ್ನು ಕೈಬಿಡುವ ನಿರ್ಣಯವನ್ನು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಕ್ಯಾಬಿನೆಟ್‌ ಸಭೆ ತೆಗೆದುಕೊಂಡಿದೆ.‌ ಡಿಕೆ ಶಿವಕುಮಾರ್ ಬೆಂಬಲಿಗರ ವಿರುದ್ಧದ ಹತ್ತಾರು ಪ್ರಕರಣಗಳು ಸೇರಿದಂತೆ ಕಾಂಗ್ರೆಸ್ ಶಾಸಕರು ಹಾಗೂ ಮುಖಂಡರ ವಿರುದ್ಧ ನಾನಾ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿದ್ದ ಕ್ರಿಮಿನಲ್‌ ಮೊಕದ್ದಮೆಗಳೇ ಇದರಲ್ಲಿ ಹೆಚ್ಚಿವೆ. 

ಜವಳಿ, ಎಪಿಎಂಸಿ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ್‌ ವಿರುದ್ಧ ವಿಜಯಪುರ ಜಿಲ್ಲೆ ಕೊಲ್ಹಾರ ಪೊಲೀಸ್‌ ಠಾಣೆಯಲ್ಲಿ 2021ರಲ್ಲಿ ದಾಖಲಾಗಿದ್ದ ಪ್ರಕರಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್‌ ಪಾಟೀಲ್‌ ವಿರುದ್ಧ ರಾಯಚೂರಿನ ಬಳಗಾನೂರು ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ, ಕೃಷ್ಣರಾಜನಗರ ಕ್ಷೇತ್ರದ ಶಾಸಕ ರವಿಶಂಕರ್‌ ವಿರುದ್ಧ ಕೆ.ಆರ್‌.ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ, ಹೊನ್ನಾಳಿ ಕ್ಷೇತ್ರದ ಶಾಸಕ ಡಿ.ಜಿ.ಶಾಂತನಗೌಡ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್‌ ಕುಮಾರ್‌ ಸೊರಕೆ ವಿರುದ್ಧ ಸುರತ್ಕಲ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂಪಡೆಯಲಾಗಿದೆ. 

ಎಚ್‌.ಡಿ.ಕೋಟೆ ಶಾಸಕ ಅನಿಲ್‌ ಚಿಕ್ಕಮಾದು ವಿರುದ್ಧದ ಪ್ರಕರಣ, ಕೊಪ್ಪಳದ ಶಾಸಕ ರಾಘವೇಂದ್ರ ಹಿಟ್ನಾಳ್‌ ವಿರುದ್ಧ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಹಾಗೂ ಮಾಜಿ ಸಚಿವ ಎಚ್‌.ವೈ.ಮೇಟಿ ವಿರುದ್ಧ ಬಾದಾಮಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳು, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಮನೋರಾಜ್‌ ರಾಜೀವ್‌, ಔರಾದ್‌ ತಾಲೂಕು ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪ್ರವೀಣ್‌ ಕುಮಾರ್‌, ಬೆಂಗಳೂರು ದಕ್ಷಿಣ ಡಿಸಿಸಿ ಅಧ್ಯಕ್ಷ ಜಿ.ಕೃಷ್ಣಪ್ಪ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳನ್ನು ವಾಪಸ್‌ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. 

ರಾಜ್ಯ ರೈತ ಸಂಘದ ಬಡಗಲಪುರ ನಾಗೇಂದ್ರ ವಿರುದ್ಧ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ, ರೈತ ಸಂಘದ ಗುಂಡ್ಲುಪೇಟೆಯ ಮುಖಂಡ ಟಿ.ಎಸ್‌.ಶಾಂತಮಲ್ಲಪ್ಪ, ಮೈಸೂರಿನ ದಲಿತ ಸಂಘರ್ಷ ಸಮಿತಿಯ ಆಲಗೂಡು ಶಿವಕುಮಾರ್‌, ಕರ್ನಾಟಕ ಮೀಸಲು ಸಂರಕ್ಷಣಾ ಒಕ್ಕೂಟದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸೇರಿದಂತೆ ಕೆಲವು ಜನಪರ ಹೋರಾಟಗಾರರ ವಿರುದ್ಧದ ಕೇಸ್‌ಗಳನ್ನು ಕೈಬಿಡುವ ತೀರ್ಮಾನವನ್ನು ಸಂಪುಟ ಕೈಗೊಂಡಿದೆ.

In a major decision, the Karnataka State Cabinet has approved the withdrawal of 62 criminal cases filed against various Congress leaders, MLAs, and pro-DK Shivakumar supporters across the state. The decision was taken during the Cabinet meeting chaired by Chief Minister Siddaramaiah.