ಬ್ರೇಕಿಂಗ್ ನ್ಯೂಸ್
13-06-26 01:07 pm ರಮೇಶ್ ಕುಮಾರ್ ನಾಯ್ಕ್, ಹಿರಿಯ ಪತ್ರಕರ್ತರು ಅಂಕಣಗಳು
ಇತ್ತೀಚೆಗೆ "ಮ್ಯಾಂಗೊ ಪಚ್ಚ" ಸೆಲೆಬ್ರಿಟಿ ಶೋ ಪತ್ರಿಕಾಗೋಷ್ಠಿಯಲ್ಲಿ ಒಂದು ಪ್ರಸಂಗ ನಡೆಯಿತು. ಈ ಚಿತ್ರದ ಹೀರೊ, ಸುದೀಪ್ ಅಕ್ಕನ ಮಗ ಸಂಚಿತ್‌ಗೆ ಪತ್ರಕರ್ತರೊಬ್ಬರ ಪ್ರಶ್ನೆ: ನೆಪೋಟಿಸಂ ಬಗ್ಗೆ ಈಗ ಭಾರಿ ಚರ್ಚೆಯಾಗುತ್ತಿದೆ. ಈ ಚಿತ್ರದ ಹೀರೊ ಸುದೀಪ್ ಅಕ್ಕನ ಮಗ. ಸುದೀಪ್ ಮಗಳೂ ಸಿಂಗರ್. ಎಲ್ಲ ಅವಕಾಶ ಸೆಲೆಬ್ರಿಟಿ ಕುಟುಂಬದವರಿಗೇ ಸಿಗ್ತಿದೆ, ಫಿಲ್ಮ್ ಇಂಡಸ್ಟ್ರೀಲಿ ಬರೀ ನೆಪೋಟಿಸಂ ಇತ್ಯಾದಿ.
ಇದಕ್ಕೆ ಸಂಚಿತ್ ಶಾಂತವಾಗಿ ಮತ್ತು ಪ್ರೌಢವಾಗಿ ಉತ್ತರಿಸುತ್ತಾರೆ: ಈ ನೆಪೋಟಿಸಂ ಆರೋಪದಿಂದ ನಾನು ಎಸ್ಕೇಪ್ ಆಗೋಕೆ ಆಗಲ್ಲ. ಆದರೆ ಕಷ್ಟಪಟ್ಟು ಈ ಚಿತ್ರದಲ್ಲಿ ನಟಿಸಿದ್ದೀನಿ. ಜನ ನನ್ನ ನಟನೆಯನ್ನು ಇಷ್ಟಪಟ್ಟು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ.

ಸಂಚಿತ್ ಮಾತು ನಿಲ್ಲಿಸುವ ಮೊದಲೇ ಅಲ್ಲಿ ಮತ್ತೊಂದು ಗಡಸು ದನಿ ಕೇಳಿ ಬರುತ್ತದೆ: ಈ ಪ್ರಶ್ನೆ ಎಲ್ಲರಿಗೂ ಕೇಳ್ತೀರಾ? ಆಕ್ಚುಲಿ ಇದು ದೊಡ್ಮನೆಯಿಂದಲೇ ಶುರು ಆಯ್ತಲ್ಲ? ಶಿವರಾಜ್ ಕುಮಾರ್ ಅವರಿಗೆ ನೀವು ಈ ಪ್ರಶ್ನೆ ಕೇಳಿಲ್ಲ. ನೀವು ಅಂಬಾನಿಗೆ ಈ ಪ್ರಶ್ನೆ ಕೇಳಬೇಕು. ಇದೇನಿದು ನಿಮ್ಮ ಆಸ್ತಿಯೆಲ್ಲ ನಿಮ್ಮ ಮಕ್ಕಳಿಗೇ ಹೋಗ್ತಿದೆಯಲ್ಲ ಅಂತ! ನಮ್ಮಲ್ಲಿ ರಾಜ್‌ಕುಮಾರ್ ಟೈಮಿಂದಾನೂ ಇದೆ. ಕುಟುಂಬದವರಿಗೆ ಆ ಯೋಗ್ಯತೆ, ಅರ್ಹತೆ, ಕಲೆ ಒಲಿದು, ಕನ್ನಡದ ಜನ ಅವರನ್ನ ಇಷ್ಟಪಟ್ಟರೆ ಇದು ಯಾರಪ್ಪನ ಜಾಗ ಬೇಕಾದರೂ ಆಗಬಹುದು. ಇವತ್ತಿಗೆ ಶಿವರಾಜ್‌ಕುಮಾರ್ ಅವರು ಒಬ್ಬ ಮೇರು ನಟ. ಅಪ್ಪು ಅವರದು ಅದ್ಭುತವಾದ ಪ್ರತಿಭೆ. ಇವರಿಗೆ ಲಕ್ಷಾಂತರ ಫ್ಯಾನ್ಸ್ ಇದ್ದಾರೆ. ಹಾಗಾಗಿ ಇಲ್ಲಿ ನೆಪೋಟಿಸಂ ಅಂತ ಬರಕೂಡದು...

ಹೀಗೆ ಹೇಳಿದ್ದು ನಟ ಸುದೀಪ್. ಅವರು ನೆಪೋಟಿಸಂ ಬಗ್ಗೆ ಹಂಡ್ರೆಡ್ ಪರ್ಸೆಂಟ್ ಸರಿಯಾಗಿಯೇ ಹೇಳಿದ್ದಾರೆ. ಅವರು ಹೇಳಿದಂತೆ ಕಲೆಯ ವಿಚಾರಕ್ಕೆ ಬಂದರೆ ನೆಪೋಟಿಸಂ ಎಂಬ ಆರೋಪವೇ ಅಪ್ರಸ್ತುತ. ಆದರೆ ಸುದೀಪ್ ಈ ಮಾತು ಹೇಳುವಾಗ ಅವರ ಮಾತಿನಲ್ಲಿ ಎಂದಿನಂತೆ ದುರಂಹಕಾರ ರಣಕೇಕೆ ಹಾಕುತ್ತಿತ್ತು. ರಾಜ್ ಕುಮಾರ್ ಟೈಮಿಂದಾನೂ ಇದು ಇದೆ ಎನ್ನುವ ಮೂಲಕ ಅವರು ರಾಜ್ ಕುಮಾರ್‌ರಂಥ ರಾಜ್ ಕುಮಾರ್‌ರನ್ನು ಬಿಗ್ ಬಾಸ್ ಸ್ಪರ್ಧಿಯ ಲೆವೆಲ್‌ಗೆ ಇಳಿಸಿಬಿಟ್ಟರು! ರಾಜ್ ಕುಮಾರ್ ಅವರ ಕಾಲದಿಂದಲೂ ಅಥವಾ ಅಣ್ಣಾವ್ರ ಕಾಲದಿಂದಲೂ...ಎಂದು ಸುದೀಪ್ ಹೇಳಿದಿದ್ದರೆ ಆ ಮಾತಿಗೊಂದು ಘನತೆ ಇರುತ್ತಿತ್ತು. ಚಿತ್ರರಂಗದಲ್ಲಿ ಸ್ವಜನಪಕ್ಷಪಾತದ ಬಗ್ಗೆ ಸುದೀಪ್ ಹೇಳಿದ್ದರಲ್ಲಿ ಲಾಜಿಕ್ ಇದೆ. ಆದರೆ ಅದನ್ನು ಅವರು ಹೇಳಿದ ರೀತಿ ಸರಿ ಇಲ್ಲ. ಶುಚಿರುಚಿಯಾದ ಮೃಷ್ಟಾನ್ನ ಭೋಜನ ಸಿದ್ಧಪಡಿಸಿ, ಅದನ್ನು ಪ್ಲೇಟ್‌ನಲ್ಲಿ ಬಡಿಸುವ ಬದಲು ಗೆರಟೆಯಲ್ಲಿ ಹಾಕಿ ಕೊಟ್ಟರೆ ಹೇಗಿರುತ್ತದೆ ಹೇಳಿ!

ಸುದೀಪ್ ದರ್ಪ ಇಲ್ಲಿಗೇ ಮುಗಿಯುವುದಿಲ್ಲ. ಮರುದಿನ ಶಿವರಾಜ್ ಕುಮಾರ್ ʼಮ್ಯಾಂಗೊ ಪಚ್ಚʼ ಚಿತ್ರ ವೀಕ್ಷಿಸಲು ಬಂದಾಗ ಮತ್ತೊಬ್ಬ ಪತ್ರಕರ್ತ ಇದೇ ವಿಷಯ ಪ್ರಸ್ತಾಪಿಸಿದಾಗ, ಆ ಪತ್ರಕರ್ತನನ್ನು ಬಾ ಇಲ್ಲಿ ಎಂದು ವೇದಿಕೆಗೆ ಎಳೆದೊಯ್ದು, ನಾನು ನಿನ್ನೆ ಹೇಳಿದ್ದನ್ನ ಪೂರ್ತಿ ಹೇಳು ಎಂದು ದಬಾಯಿಸಿ, ಆ ಪತ್ರಕರ್ತನ ಬಾಯಿಯಿಂದಲೇ ಎಲ್ಲವನ್ನೂ ಹೇಳಿಸಿ, "ನಡಿ ಈಗʼ ಎಂದು ಅಲ್ಲಿಂದ ದಬ್ಬಿದ್ದು ಆಘಾತಕಾರಿ.
ಪ್ರೆಸ್ ಮೀಟ್‌ನಲ್ಲಿ ಈ ಸುದೀಪ್ ಅವರ ದೌಲತ್‌ಬಾಜಿ ಹೊಸದೇನಲ್ಲ. ಈ ಹಿಂದೆ ಬಿಗ್ ಬಾಸ್ ಕುರಿತಂತೆ ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದಾಗ ಸಿಡಿದೆದ್ದು, ಸೀದಾ ಆ ಪತ್ರಕರ್ತ ಕುಳಿತ ಸ್ಥಳಕ್ಕೇ ಹೋಗಿ ದಬಾಯಿಸಿ ತತ್ತರಿಸುವಂತೆ ಮಾಡಿದ್ದರು. ಇನ್ನೊಮ್ಮೆ ಸೆಲೆಬ್ರಿಟಿ ಕ್ರಿಕೆಟ್ ಕುರಿತ ಪತ್ರಿಕಾಗೋಷ್ಠಿಯಲ್ಲಿ ಚಲನಚಿತ್ರ ರಾಜ್ಯ ಪ್ರಶಸ್ತಿ ನಿರಾಕರಿಸಿದ ಕುರಿತ ಪ್ರಶ್ನೆ ಕೇಳಿದ್ದಕ್ಕೆ, ಈ ಪ್ರಶ್ನೆ ಇಲ್ಲಿ ಯಾಕೆ ಕೇಳ್ತೀಯಾ? ಅಧಿಕ ಪ್ರಸಂಗ ಯಾಕೆ ಎಂದು ಹೂಂಕರಿಸಿದ್ದರು.

ಆಶ್ಚರ್ಯವೆಂದರೆ, ಸ್ಟಾರ್ ಎನಿಸಿಕೊಂಡವರ ಇಂಥ ಉದ್ಧಟನದ ವರ್ತನೆಯನ್ನು ಪತ್ರಿಕಾಗೋಷ್ಠಿಯಲ್ಲಿ ಯಾವೊಬ್ಬ ಪತ್ರಕರ್ತ ಮಹಾಶಯನೂ ಪ್ರಶ್ನಿಸದಿರುವುದು! ಹಿಂದೆ ಗಂಗಾಧರ ಮೊದಲಿಯಾರ್, ಗಣೇಶ ಕಾಸರಗೋಡು, ಜಿ ಎಸ್ ಕುಮಾರ್, ಜೋಗಿ, ಉದಯ ಮರಕಿಣಿ, ಮುರಳೀಧರ್ ಖಜಾನೆ, ಪರಮೇಶ್ವರ್ ಗುಂಡ್ಕಲ್, ಮಹೇಶ್ ದೇವಶೆಟ್ಟಿ ಮುಂತಾದ ಸಿನೆಮಾ ಪತ್ರಕರ್ತರೆಲ್ಲ ಇರುತ್ತಿದ್ದ ಪತ್ರಿಕಾಗೋಷ್ಠಿಗಳಲ್ಲಿ ಸ್ಟಾರ್‌ಗಳ ಇಂಥ ಅಟಾಟೋಪಗಳಿಗೆಲ್ಲ ಜಾಗವೇ ಇರಲಿಲ್ಲ. ಆದರೆ ಈಗ ಸಿನೆಮಾ ವರದಿಗಾರಿಕೆಯ ಚಿತ್ರಣವೇ ಬದಲಾಗಿದೆ. ಬಹುತೇಕ ಸಿನೆಮಾ ಪತ್ರಕರ್ತರು ಪತ್ರಿಕಾಗೋಷ್ಠಿಗಳಲ್ಲಿ ತಾವು ಪತ್ರಕರ್ತರು ಎನ್ನುವುದನ್ನು ಮರೆತು ಫ್ಯಾನ್ಸ್‌ಗಳಂತೆ ವರ್ತಿಸುತ್ತಿದ್ದಾರೆ. ಹಾಗಾಗಿ ಯಾವುದಾದರೂ ನಟ ಇವರಿಗೆ ಕ್ಯಾಕರಿಸಿ ಉಗಿದರೂ ಏನೂ ಅನಿಸುವುದಿಲ್ಲ. ಅದೊಂದು compliment ಎಂಬಂತೆ ಹಲ್ಲು ಕಿಸಿಯುತ್ತಿರುತ್ತಾರೆ! ಇದು ಯಾವ ಮಟ್ಟಿಗೆ ಹೋಗಿದೆ ಅಂದರೆ, ಇದೇ ಸುದೀಪ್ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರಿಗೆ ಫ್ಲೈಯಿಂಗ್ ಕಿಸ್ ಕೊಡ್ತಾರೆ! ಈ ಹಿಂದೆ ಸುದೀಪ್ ಅವರ ಪತ್ರಿಕಾಗೋಷ್ಠಿಯೊಂದರಲ್ಲಿ ಪ್ರಶ್ನೆ ಕೇಳಲು ಎದ್ದು ನಿಂತ ಅವಿವೇಕಿ ಪತ್ರಕರ್ತನೊಬ್ಬ, ""ಸರ್ ನಿಮ್ಮನ್ನು ಪ್ರತ್ಯಕ್ಷವಾಗಿ ನೋಡಬೇಕು ಎನ್ನುವುದು ನನ್ನ ಬಾಲ್ಯದ ಕನಸಾಗಿತ್ತು. ಅದು ಈ ಕ್ಷಣ ನನಸಾಗಿದೆ. ನಾನಿಂದು ಧನ್ಯನಾದೆ. ಇಂದು ನನ್ನ ಜೀವನದ ಅತ್ಯಂತ ಮಹತ್ವದ ದಿನʼʼ ಎಂದು ಹೇಳಿ ಕುಳಿತುಕೊಂಡಿದ್ದ!
ಇನ್ನು ನೆಪೋಟಿಸಂ ಬಗ್ಗೆ ಹೇಳುವುದಾದರೆ, ಚಿತ್ರೋದ್ಯಮದ ವಿಚಾರದಲ್ಲಿ ಇದು ಅಸಂಗತ. ಸುದೀಪ್ ಅವರು ಯಾವುದೇ ಗಾಡ್ ಫಾದರ್ ಬೆಂಬಲ ಇಲ್ಲದೆ ಕನ್ನಡ ಚಿತ್ರರಂಗದಲ್ಲಿ ಬೆಳೆದು ಇವತ್ತು ಪಾನ್ ಇಂಡಿಯಾ ಸ್ಟಾರ್ ಆಗಿರುವುದು, ನಿರಂತರವಾಗಿ ಬಿಗ್ ಬಾಸ್ ನಿರೂಪಕರಾಗಿ ಮುಂದುವರಿದಿರುವುದು ಅವರ ಪರಿಶ್ರಮ ಮತ್ತು ಅಭಿನಯ ಸಾಮರ್ಥ್ಯದಿಂದ ಮಾತ್ರ. ಅವರ ಮಗಳು ಸಾನ್ವಿ ಚೆಂದಕೆ ಹಾಡುವ ಕ್ರಿಯಾಶೀಲ ಹೆಣ್ಣು ಮಗಳು. ಅವರ ಹಾಡುಗಳನ್ನು ನಾವು ಸುದೀಪ್ ಮಗಳೆಂಬ ಕಾರಣಕ್ಕೆ ಸದಾ ಕೇಳುತ್ತ ಇರಲಾಗದು. ಅವರು ಚೆನ್ನಾಗಿ ಹಾಡಿದರಷ್ಟೇ ಕೇಳೋದು. ಇನ್ನು ಡಾ. ರಾಜ್ ಕುಮಾರ್ ಅವರ ಮಕ್ಕಳು. ಶಿವರಾಜ್ ಕುಮಾರ್ ಅವರಾಗಲಿ, ಪುನೀತ್ ರಾಜ್‌ಕುಮಾರ್ ಅವರಾಗಲೀ ಇವತ್ತು ಕನ್ನಡಿಗರ ಹೃದಯ ಗೆದ್ದಿರುವುದು ಸ್ವಂತ ಅಭಿನಯ ಸಾಮರ್ಥ್ಯದಿಂದ. ಅವರಲ್ಲಿ ಪ್ರತಿಭೆ ಇಲ್ಲದೇ ಇದ್ದಲ್ಲಿ, ಕೇವಲ ರಾಜ್‌ಕುಮಾರ್ ಅವರ ಹೆಸರಿನಲ್ಲಿ ದಶಕಗಳ ಕಾಲ ಚಿತ್ರರಂಗದಲ್ಲಿ ತಾರೆಯಾಗಿ ಮಿನುಗಲು ಸಾಧ್ಯವಾಗುತ್ತಿರಲಿಲ್ಲ. ನೆಪೋಟಿಸಂ ವರ್ಕ್‌ಔಟ್ ಆಗುವುದೇ ಆದಲ್ಲಿ ಇವತ್ತು ಹಿರಿಯ ನಟರ ಮಕ್ಕಳೆಲ್ಲ ಸ್ಟಾರ್ ಆಗಿರುತ್ತಿದ್ದರು. ಅಪ್ಪನ ಹೆಸರನ್ನು ಹಣೆಗೆ ಅಂಟಿಸಿಕೊಂಡು ತೆರೆಯ ಮೇಲೆ ಬಂದರೂ, ಒಂದೋ ಎರಡೋ ಸಿನೆಮಾಗಳಿಗೇ ಮರೆಯಾಗುತ್ತಿರಲಿಲ್ಲ. ಈಗ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಕೂಡ ಅಷ್ಟೇ. ಅವರಲ್ಲಿ ಹಾರ್ಡ್ ವರ್ಕ್ ಮತ್ತು ಅಭಿನಯ ಪ್ರಾವೀಣ್ಯ ಇರುವುದರಿಂದಲೇ "ಮ್ಯಾಂಗೋ ಪಚ್ಚʼ ಎಂಬ ಮೊದಲ ಸಿನೆಮಾದಲ್ಲೇ ಸೈ ಎನಿಸಿಕೊಂಡಿದ್ದಾರೆ. ಅಪಾರ ಭರವಸೆ ಮೂಡಿಸಿದ್ದಾರೆ. ಮುಂದೆ ಒಳ್ಳೊಳ್ಳೆ ಸಿನೆಮಾಗಳನ್ನು ಕೊಟ್ಟರೆ ಮಾತ್ರ ಸಂಚಿತ್ ಸಿನಿ ಫೀಲ್ಡ್‌ನಲ್ಲಿ ಉಳಿಯುತ್ತಾರೆ. ಅವರು ಸುದೀಪ್ ಅಕ್ಕನ ಮಗ ಎಂಬ ಕಾರಣಕ್ಕೆ ಯಾರೂ ಅವರನ್ನು ಪಲ್ಲಕ್ಕಿ ಮೇಲೆ ಕೂರಿಸಿ ಸದಾ ಎತ್ತಿ ಆಡಿಸುತ್ತ ಇರುವುದಿಲ್ಲ!


ರಾಜ್ ಕುಮಾರ್ ಮಕ್ಳು, ರಾಜ್ ಕುಮಾರ್ ಮಕ್ಳು ಎಂದು ಅವರತ್ತ ಬೆರಳು ತೋರಿಸಿದ್ದು ಕಂಡಾಗ ನನಗೆ ಅನಿಸಿದ್ದು: ತಮ್ಮ ಕುತ್ತಿಗೆಗೆ ತಾವೇ ಥರಾವರಿ ಬಿರುದು ಬಾವಲಿಗಳನ್ನು ನೇತು ಹಾಕಿಕೊಂಡು ಮೆರೆಯುತ್ತಿರುವ ಕೆಲವು ಸೂಪರ್ ಸ್ಟಾರ್‌ಗಳು ಡಾ ರಾಜ್ ಕುಮಾರ್ ಮತ್ತು ಅವರ ಮಕ್ಕಳಿಂದ ಕಲಿಯಬೇಕಾದ ಪಾಠ ತುಂಬಾ ಇದೆ. ಡಾ. ರಾಜ್ ಕುಮಾರ್ ಎನ್ನುವುದು ಈಗ ಕೇವಲ ಹೆಸರಲ್ಲ. ಅದು ಕರುನಾಡಿನ ಅಸ್ಮಿತೆ. ಅವರನ್ನು ನಾಡಿನ ಜನ "ದೇವತಾ ಮನುಷ್ಯʼ ಎಂದು ಕರೆಯುವುದು ನಟನೆಯ ಕಾರಣಕ್ಕೆ ಮಾತ್ರವಲ್ಲ; ಅವರಲ್ಲಿದ್ದ ವಿನಮ್ರತೆ, ಸ್ಥಿತಪ್ರಜ್ಞತೆ, ಸರಳ ಸಜ್ಜನಿಕೆ ಮತ್ತು ನಡವಳಿಕೆಗಳ ಕಾರಣದಿಂದ. ತಮಗಿಂತ ತೀರ ಚಿಕ್ಕವರನ್ನೂ ಅವರು ಬಹುವಚನದಿಂದಲೇ ಕರೆಯುತ್ತಿದ್ದರು. ಅಷ್ಟೇ ಏಕೆ? ತಮ್ಮನ್ನು ಅಪಹರಿಸಿ 108 ದಿನ ಕಾಡಿನಲ್ಲಿಟ್ಟ ದುಷ್ಟ, ನರ ಹಂತಕನನ್ನೇ ಅವರು ಬಿಡುಗಡೆಯಾದಾಗ ನಡೆದ ಪತ್ರಿಕಾಗೋಷ್ಠಿಯಲ್ಲಿ "ವೀರಪ್ಪನ್ ಅವರುʼ ಎಂದೇ ಬಹುವಚನದಿಂದ ಸಂಬೋಧಿಸಿದ್ದರು!
ಕನ್ನಡದ ನಂಬರ್ ಒನ್ ಸ್ಟಾರ್ ಆಗಿದ್ದಾಗಲೂ ಪುನೀತ್ ರಾಜ್‌ಕುಮಾರ್ ಅವರು ಪತ್ರಿಕಾಗೋಷ್ಠಿಗಳಲ್ಲಿ ಒಮ್ಮೆಯೂ ಹದ್ದುಮೀರಿ ವರ್ತಿಸಿದ್ದಿಲ್ಲ. ಕಿರಿಯ ಪತ್ರಕರ್ತರನ್ನೂ ಗೌರವದಿಂದಲೇ ಮಾತನಾಡಿಸುತ್ತಿದ್ದರು. ಎಲ್ಲ ಪ್ರಶ್ನೆಗಳಿಗೂ ನಗುಮೊಗದಿಂದಲೇ ಉತ್ತರಿಸುತ್ತಿದ್ದರು. ವಿವಾದಾತ್ಮಕ ಪ್ರಶ್ನೆಗಳು ತೂರಿ ಬಂದಾಗಲೂ ತಾಳ್ಮೆಯಿಂದ ಇರುತ್ತಿದ್ದರು. ಶಿವರಾಜ್ ಕುಮಾರ್ ಅವರೂ ಅಷ್ಟೇ. ತಮಗೆ ಇಷ್ಟವಾಗದ ಪ್ರಶ್ನೆ ಎದುರಾದರೆ, ಅದನ್ನು ಎಲ್ಲಿಗೋ ತಿರುಗಿಸಿ, ಸುತ್ತುಬಳಸಿ, ಪ್ರಶ್ನೆ ಕೇಳಿದವರನ್ನೇ ಕಕ್ಕಾಬಿಕ್ಕಿ ಮಾಡಿ ಎಸ್ಕೇಪ್ ಆಗದೇ ನೇರಾನೇರ ಉತ್ತರಿಸುವವರು.
ರಾಜ್ ಕುಮಾರ್ ಅವರ ಮಕ್ಕಳು ಈಗಿನ ಸ್ಟಾರ್ ನಟರಿಗೆ ಯಾಕೆ ಮಾದರಿಯಾಗಬೇಕು ಎಂಬ ಬಗ್ಗೆ ಇದೊಂದು ಲೇಟೆಸ್ಟ್ ಉದಾಹರಣೆ ಸಾಕು. ಮಡೆನೂರ್ ಮನು ಎಂಬ ಆತುರಗೇಡಿ ನಟ, ಶಿವರಾಜ್‌ಕುಮಾರ್ ಬೇಗ ಸತ್ತರೆ ಹೊಸಬರಿಗೆ ಅವಕಾಶ ಸಿಗುತ್ತೆ ಎಂಬರ್ಥದಲ್ಲಿ ಮಾತನಾಡಿದ್ದರು. ಆ ವಿಡಿಯೊ ವೈರಲ್ ಆಗಿತ್ತು. ಕೆಲ ದಿನಗಳ ಬಳಿಕ ಇದೇ ಮಡೆನೂರು ಮನು ಶೂಟಿಂಗ್ ಸ್ಥಳದಲ್ಲಿ ಕಾದು ಕುಳಿತು, ಶಿವರಾಜ್ ಕುಮಾರ್ ಕಾರಿನಿಂದ ಇಳಿಯುತ್ತಲೇ ಕಾಲಿಗೆ ಬಿದ್ದು ಕ್ಷಮೆ ಕೇಳಲು ಮುಂದಾದರು. ಆಗ ಶಿವರಾಜ್ ಕುಮಾರ್ ಇದೇನು ದೊಡ್ಡ ಪ್ರಮಾದವೇ ಅಲ್ಲ ಎಂಬಂತೆ ನಗುನಗುತ್ತ ಪ್ರತಿಕ್ರಿಯಿಸಿದರು. ""ನೀವು ನನಗೆ ಹೊಗಳಿದರೂ, ಉಗುಳಿದರೂ, ಸಾಯಲಿ ಎಂದರೂ ನನಗೇನೂ ಬೇಜಾರಿಲ್ಲ. ನೀವು ಇನ್ನಷ್ಟು ಒಳ್ಳೆಯ ಸಿನೆಮಾಗಳನ್ನು ಮಾಡಿ, ನಿಮಗೆ ಒಳ್ಳೆಯದಾಗಲಿʼʼ ಎಂದು ಹರಸಿ ಮುನ್ನಡೆದರು!
ಕೊನೆಯ ಮಾತು: ಡಾ ರಾಜ್ ಕುಮಾರ್ ಅವರು ಎಷ್ಟೇ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿದ್ದರೂ ಅವರು ಜನಮಾನಸದಲ್ಲಿ "ಮಹಾನ್ ನಟʼ ಅಷ್ಟೇ ಆಗುಳಿಯುತ್ತಿದ್ದರು. ಆದರೆ ತಮ್ಮ ಮೇರು ವ್ಯಕ್ತಿತ್ವದಿಂದಾಗಿ ನಮ್ಮ ನಾಡಿನ "ವರ ನಟʼ ಆದರು. ಡಾ. ರಾಜ್ ಕುಮಾರ್ ಅವರಿಗೆ ಅಭಿಮಾನಿಗಳೇ ಬಾಡಿ ಗಾರ್ಡ್ ಆಗಿದ್ದರು. ಆದರೆ ಈಗಿನ ಕೆಲವು ಸೂಪರ್ ಸ್ಟಾರ್‌ಗಳಿಗೆ ಅಭಿಮಾನಿಗಳಿಂದ ಅಂತರ ಕಾಪಾಡಿಕೊಳ್ಳಲು ವಿದೇಶಿ ಬಾಡಿ ಗಾರ್ಡ್‌ಗಳು ಬೇಕು!
ರಮೇಶ್ ಕುಮಾರ್ ನಾಯ್ಕ್, ಹಿರಿಯ ಪತ್ರಕರ್ತರು
At a recent press conference for the upcoming film Mango Pachcha, an interesting discussion emerged around the issue of nepotism in the film industry. A journalist pointed out that the film's lead actor, Sanchith, is the nephew of Kannada star Kichcha Sudeep, and also mentioned that Sudeep's daughter has entered the entertainment field as a singer. The journalist questioned whether opportunities in the industry are increasingly being concentrated within celebrity families, fueling the ongoing debate about nepotism.
12-06-26 12:02 pm
HK News Staffer
ಪದತ್ಯಾಗದ ತರಾತುರಿಯಲ್ಲೇ ಸಿದ್ದರಾಮಯ್ಯ ಕುರುಬ ಸಮುದಾ...
11-06-26 08:31 pm
ಹಳಸಿತೇ ಜಮೀರ್ - ಸಿದ್ದು ಸ್ನೇಹ ಸಂಬಂಧ? ನಿಮ್ಮ ಆಪ್ತ...
11-06-26 07:36 pm
ಮಗು ಕರುಣಿಸಿದ ಪ್ರಕರಣ; ಕೊನೆಗೂ ರಾಜಿ ಸಂಧಾನಕ್ಕಿಳಿದ...
11-06-26 01:53 pm
ಬಿಟ್ಕಾಯಿನ್ ಹಗರಣ ; ಹ್ಯಾರಿಸ್ ನಲಪಾಡ್ ಹೆಸ್ರು ಚಾರ...
10-06-26 10:40 pm
13-06-26 03:01 pm
HK News Staffer
4,399 ದಿನಗಳ ಸುದೀರ್ಘ ಆಡಳಿತ, ಭಾರತದ ಇತಿಹಾಸದಲ್ಲೇ...
10-06-26 06:42 pm
ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ; ಕೂಡಲೇ...
08-06-26 09:11 pm
ದೇಲಂಪಾಡಿ ; ಭಾರೀ ಮಳೆಗೆ ಕಲ್ಲಿನ ತಡೆಗೋಡೆ ಕುಸಿದು ಬ...
06-06-26 10:42 pm
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; ಜಿರಳೆಗಳ ಮುಖವಾಡ ಧ...
06-06-26 05:48 pm
13-06-26 05:28 pm
HK News Staffer
ಮಧ್ಯರಾತ್ರಿ ಎದೆನೋವಿನಿಂದ ಮನೆಯಲ್ಲೇ ಕುಸಿದು ಬಿದ್ದ...
12-06-26 10:48 pm
ಎಂಬಿಎ ಲ್ಯಾಬ್ ಶುಲ್ಕ ಅಕ್ರಮ; ಮಂಗಳೂರು ವಿವಿಯ ಆಡಳಿತ...
12-06-26 08:44 pm
ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ಸಿಎಂ ವಿಜಯ್ ಜೋಸೆ...
12-06-26 04:31 pm
ದ್ರಾವಿಡ ನಾಡಿನ ಸಿಎಂ ಜೋಸೆಫ್ ವಿಜಯ್ ದಿಢೀರ್ ಕೊಲ್ಲೂ...
12-06-26 02:56 pm
13-06-26 09:17 pm
HK News Staffer
ಬೆಂಗಳೂರಿನ ನ್ಯಾಯಮಿತ್ರ ಸಹಕಾರಿ ಬ್ಯಾಂಕ್ ನಲ್ಲಿ ಅನ್...
13-06-26 08:43 pm
ಕಾಲೇಜು ಫೀಸ್ಗೆ ಕೊಟ್ಟ 10 ಸಾವಿರವೇ ಜೀವ ತೆಗೆಯಿತು!...
13-06-26 06:14 pm
ಪತ್ನಿ ಹತ್ಯೆಗೆ ಜೈಲಿನಿಂದಲೇ ಸುಪಾರಿ ; ಬುರ್ಖಾ ಧರಿಸ...
12-06-26 11:58 am
Manoj Kodikere Arrest: ಕೋಕಾ ಕಾಯ್ದೆ- ಕಿಡ್ನಾಪ್...
11-06-26 08:44 pm