ಬ್ರೇಕಿಂಗ್ ನ್ಯೂಸ್
21-09-20 02:26 pm Mangalore Correspondent ಕರಾವಳಿ
ಮಂಗಳೂರು, ಸೆಪ್ಟಂಬರ್ 21: ಅದು ಈಗಲೋ ಆಗಲೋ ಬೀಳುತ್ತೋ ಅನ್ನುವ ಸ್ಥಿತಿಯಲ್ಲಿರುವ ಮುರುಕಲು ಮನೆ. ಹಂಚು ಹೊದಿಸಿದ್ದರೂ, ಒಳಭಾಗ ಪೂರ್ತಿ ಮಳೆಯಿಂದ ನೀರು ಸೋರುತ್ತಿದ್ದು, ಗೋಡೆ ಬಿರುಕು ಬಿಟ್ಟಿದೆ. ಅಲ್ಲಲ್ಲಿ ಮಳೆ ನೀರು ಬಿದ್ದು, ಮನೆಯೊಳಗಿನ ಬಟ್ಟೆಬರೆಗಳು ಒದ್ದೆಯಾಗಿವೆ. ಕೋಣೆಯ ಮೂಲೆ, ಮೂಲೆಯಲ್ಲಿ ಬಟ್ಟೆಗಳನ್ನು ರಾಶಿ ಹಾಕಲಾಗಿದೆ. ಇದು ಸ್ಯಾಂಡಲ್ ವುಡ್ ಡ್ರಗ್ ನಂಟಿನಲ್ಲಿ ಮಂಗಳೂರಿನಲ್ಲಿ ಬಂಧಿತನಾಗಿರುವ ಡ್ಯಾನ್ಸರ್ ಕಂ ಕೊರಿಯೋಗ್ರಾಫರ್ ಕಿಶೋರ್ ಅಮನ್ ಶೆಟ್ಟಿಯ ಮನೆ.
ಕಳೆದ ಎರಡು ದಿನಗಳಿಂದ ಮಾಧ್ಯಮ ವಲಯದಲ್ಲಿ ಹೈಪ್ ಕ್ರಿಯೇಟ್ ಮಾಡಿರುವ, ಟಿವಿ ಮಾಧ್ಯಮಗಳಲ್ಲಿ ಮಂಗಳೂರಿನ ಮನೆಯಲ್ಲಿ ಡ್ರಗ್ ಪಾರ್ಟಿ ಮಾಡುತ್ತಿದ್ದ ಎಂದು ಹೇಳಲಾಗುತ್ತಿರುವ ಕಿಶೋರ್ ಶೆಟ್ಟಿ ಮನೆ ಹೇಗಿದೆ, ಆ ಮನೆಯಲ್ಲಿ ನಿಜಕ್ಕೂ ಚಿತ್ರರಂಗದ ನಟ-ನಟಿಯರು ಬಂದು ಪಾರ್ಟಿ ಮಾಡಿದ್ದಾರೆಯೇ ಎಂದು ರಿಯಾಲಿಟಿ ಚೆಕ್ ನಡೆಸಿದಾಗ, ಅಲ್ಲಿ ಕಾಣಸಿಕ್ಕಿದ್ದು ಅಚ್ಚರಿ ಮಾತ್ರ..!
ಬೆಂಗಳೂರಿನಲ್ಲಿ ಪಾರ್ಟಿ ಮಾಡುತ್ತಿದ್ದ ಎನ್ನಲಾಗುತ್ತಿರುವ ವೈಭವ್ ಜೈನ್, ವೀರೇನ್ ಖನ್ನಾ ಎಲ್ಲಾ ಐಷಾರಾಮಿ ಜೀವನ ನಡೆಸುತ್ತಿದ್ದವರು. ಬೆಂಗಳೂರು, ದೆಹಲಿ, ಮುಂಬೈ ಲಿಂಕ್ ಹೊಂದಿದ್ದ ಡ್ರಗ್ ವಹಿವಾಟುದಾರರು. ಅದೇ ಸಾಲಿನಲ್ಲಿ ಗುರುತಿಸಲ್ಪಟ್ಟಿರುವ ಮಂಗಳೂರಿನ ಕಿಶೋರ್ ಶೆಟ್ಟಿಯ ಬಗೆಗೂ ಹೈಪ್ ಕ್ರಿಯೇಟ್ ಆಗುತ್ತಿದೆ. ಮಂಗಳೂರಿನಲ್ಲಿ ಡ್ರಗ್ ಪಾರ್ಟಿ ಮಾಡುತ್ತಿದ್ದ, ಕೊಕೇನ್ ಸೇವಿಸುತ್ತಿದ್ದ, ಎಂಡಿಎಂಎ ಮಾತ್ರೆಗಳನ್ನು ನಟ-ನಟಿಯರಿಗೆ ಪೂರೈಸುತ್ತಿದ್ದ ಎಂದು ಹೇಳಲಾಗುತ್ತಿರುವ ಈತನ ಮನೆಯನ್ನು ನೋಡಿದರೆ ತೀರಾ ಬಡ ಕುಟುಂಬ ಎನ್ನುವ ಚಿತ್ರಣ ಸಿಗುತ್ತಿದೆ.
ಮಂಗಳೂರು ಹೊರವಲಯದ ಸುರತ್ಕಲ್ ಬಳಿಯ ಹೊನ್ನಕಟ್ಟೆಯಲ್ಲಿ ರಸ್ತೆ ಬದಿಯಲ್ಲೇ ಇರುವ ಈ ಮನೆಯಲ್ಲಿ ಇರುವುದು ವೃದ್ಧ ತಾಯಿ ರತ್ನಾವತಿ ಮತ್ತು ಇಬ್ಬರು ಮಕ್ಕಳು ಮಾತ್ರ. ಅಂತರ್ಜಾತಿ ವಿವಾಹವಾಗಿದ್ದ ತಂದೆ ಪುತ್ತೂರು ಮೂಲದ ಬಾಲಕೃಷ್ಣ ಶೆಟ್ಟಿ ಮಕ್ಕಳು ಸಣ್ಣದಿರುವಾಗಲೇ ಅಗಲಿದ್ದರಂತೆ. ಮಕ್ಕಳಲ್ಲಿ ದೊಡ್ಡವನೇ ಕಿಶೋರ್. ಸಣ್ಣವನು ಪ್ರವೀಣ್. ಕಿಶೋರ್ ಎಸ್ಸೆಸ್ಸೆಲ್ಸಿ ಮುಗಿಸಿ ಶಾಲೆ ಬಿಟ್ಟ ಬಳಿಕ ಅದ್ಹೇಗೋ ಡ್ಯಾನ್ಸ್ ಕ್ಲಾಸಿಗೆ ಸೇರಿದ್ದ. ಒಳ್ಳೆ ಡ್ಯಾನ್ಸರ್ ಆಗಿದ್ದ ಕಿಶೋರ್, 2012ರಲ್ಲಿ ಬಂದಿದ್ದ ಹಿಂದಿ ಝೀ ಟಿವಿಯ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡಿದ್ದು ಹೆಸರು ತಂದಿತ್ತು. ಇದೇ ಪರಿಚಯದಲ್ಲಿ ತಮಿಳು ನಟ ಪ್ರಭುದೇವ ನಿರ್ದೇಶಿಸಿದ್ದ ಎಬಿಸಿಡಿ ಫಿಲಂನಲ್ಲಿ ಸಣ್ಣ ಪಾತ್ರ ದೊರೆತಿತ್ತು. ಝೀಟಿವಿ ಕನ್ನಡ ವಾಹಿನಿಯ ರಿಯಾಲಿಟಿ ಶೋನಲ್ಲಿ ರನ್ನರ್ ಅಪ್ ಆಗಿದ್ದ. ಅನಂತರ ಕೆಲವು ವಾಹಿನಿಗಳಲ್ಲಿ ಕೊರಿಯೋಗ್ರಾಫರ್ ಆಗಿ ಕೆಲಸ ಮಾಡಿದ್ದ ಎನ್ನಲಾಗುತ್ತಿದೆ. ಅದರ ಬಗ್ಗೆ ಮನೆಯವರಿಗೆ ಗೊತ್ತಿಲ್ಲ.
ಮನೆಯಲ್ಲಿ ತಾಯಿ ಹೇಳುವ ಪ್ರಕಾರ, ಕಿಶೋರ್ ಕಳೆದ ಮಾರ್ಚ್ ನಲ್ಲಿ ಲಾಕ್ಡೌನ್ ಸಂದರ್ಭದಲ್ಲಿ ಮನೆಗೆ ಬಂದ ಬಳಿಕ ಮರಳಿ ಹೋಗಿಲ್ಲ. ಮನೆಯಲ್ಲೇ ಇದ್ದ. ಕ್ರಿಕೆಟ್ ಆಡೋಕೆ ಎಂದು ಹೋಗುತ್ತಿದ್ದ ಅಷ್ಟೇ. ಉಳಿದ ಸಮಯದಲ್ಲಿ ಮನೆಯಲ್ಲೇ ಇರುತ್ತಿದ್ದ. ಲಾಕ್ಡೌನ್ ಬಳಿಕ ಕೈಯಲ್ಲಿ ಕಾಸಿಲ್ಲದೆ ತಮ್ಮನಲ್ಲಿ ಹಣ ಕೇಳುತ್ತಿದ್ದ. ಡ್ರಗ್ ಸೇವನೆ ಮಾಡುತ್ತಿದ್ದ ವಿಚಾರ ಗೊತ್ತೇ ಇಲ್ಲ ಎನ್ನುತ್ತಿದ್ದಾರೆ. ತಮ್ಮ ಪ್ರವೀಣನೂ ಅದೇ ಧಾಟಿಯಲ್ಲಿ ಹೇಳುತ್ತಾನೆ, ಕಿಶೋರ್ ಅಂಥ ವ್ಯಕ್ತಿಯಲ್ಲ. ರಿಯಾಲಿಟಿ ಶೋನಲ್ಲಿ ಸಿಕ್ಕಿದ್ದ ಹಣವನ್ನು ಈ ಮನೆಯ ರಿಪೇರಿಗೆಂದು ಹಾಕಿದ್ದಾನೆ. ಬೇರೇನೂ ದುಶ್ಚಟಗಳು ಆತನಿಗೆ ಇರಲಿಲ್ಲ. ಮೂರು ದಿನಗಳ ಹಿಂದೆ ಪೊಲೀಸರು ಕೊಂಡೊಯ್ದಿದ್ದು ಕೂಡ ಟಿವಿ ನೋಡಿಯೇ ಗೊತ್ತಾಗಿದ್ದು. ಟಿವಿಯಲ್ಲಿ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದ ಎಂದು ತೋರಿಸುತ್ತಿದ್ದಾರೆ. ಈ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದ ರೀತಿ ಅನಿಸುತ್ತಿದೆಯೇ ಎಂದು ಕೇಳುತ್ತಾನೆ.
ಮನೆಯ ಒಳಭಾಗದಲ್ಲಿ ಅಡುಗೆ ಕೋಣೆಯನ್ನು ನೋಡಿದರೆ, ಇದೇ ಮನೆಯಲ್ಲಿ ಡ್ರಗ್ ಪಾರ್ಟಿ ಮಾಡುತ್ತಿದ್ದನಾ ಅನ್ನೋ ಸಹಜ ಪ್ರಶ್ನೆ ಏಳುತ್ತದೆ. ಇನ್ನು ಆತನಿಗೆ ಬಂದ ಪ್ರಶಸ್ತಿಗಳನ್ನು ಇಟ್ಟುಕೊಳ್ಳುವುದಕ್ಕೂ ಮನೆಯಲ್ಲಿ ವ್ಯವಸ್ಥೆ ಇಲ್ಲ. ಗೋಡೆಯಲ್ಲಿ ನೇತು ಹಾಕಿರುವ ಝೀ ಕನ್ನಡ ವಾಹಿನಿಯ ರನ್ನರ್ ಅಪ್ ಟ್ರೋಫಿಯೇ ಅಲ್ಲಿನ ಸ್ಥಿತಿಯನ್ನು ಕಣ್ಣಿಗೆ ಕಟ್ಟುತ್ತದೆ. ಮನೆಯ ಕೋಣೆಯಲ್ಲಿ ಹಾಸಿಗೆ, ಬಟ್ಟೆಬರೆಗಳು ಸೋರುತ್ತಿರುವ ಮಳೆನೀರಿನಿಂದ ಒದ್ದೆಯಾಗಿವೆ. ಕಿಶೋರನ ಬಟ್ಟೆಗಳೆಲ್ಲ ನೆಲದಲ್ಲಿ ರಾಶಿ ಬಿದ್ದಿವೆ. ಮನೆಯ ಚಾವಡಿಯಲ್ಲಿ ಹಳೇ ಟಿವಿ, ಕುಳಿತುಕೊಳ್ಳಲು ಹಳೇಯ ಮರದ ಬೆಂಚ್ ಮಾತ್ರ ಇದ್ದು ಮಾಧ್ಯಮ ವಲಯದಲ್ಲಿ ಹೈಪ್ ಕ್ರಿಯೇಟ್ ಆಗಿರುವ ವ್ಯಕ್ತಿಯ ಮನೆ ಇದೇನಾ ಎಂದರೆ ಅಚ್ಚರಿಯಾಗುತ್ತದೆ.
ಯಾರದ್ದೋ ಖೆಡ್ಡಾಕ್ಕೆ ಬಿದ್ದುಬಿಟ್ಟನೇ ಕಿಶೋರ ?
ಕಿಶೋರ್ ಶೆಟ್ಟಿ ಡ್ರಗ್ ಮಾರಿ ಹಣ ಮಾಡಿದ್ದರೆ, ತಾಯಿ ಮತ್ತು ತಮ್ಮನಿಗೆ ಗೊತ್ತಿಲ್ಲದಂತೆ ಮಂಗಳೂರಿನಲ್ಲಿ ಆತ ಬೇರೆ ಮನೆ ಮಾಡಿದ್ದಾನೋ ಗೊತ್ತಿಲ್ಲ. ಆದರೆ ಕಿಶೋರನ ಯಾವೊಂದು ವಿಚಾರವೂ ವೃದ್ಧ ತಾಯಿ ರತ್ನಾವತಿಗೆ ಗೊತ್ತಿಲ್ಲ. ತಮ್ಮ ಪ್ರವೀಣ ಪೈಂಟಿಂಗ್ ವೃತ್ತಿಯಲ್ಲಿದ್ದು, ಕಷ್ಟದಲ್ಲಿ ಜೀವನ ಮಾಡುತ್ತಿರುವಂತೆ ಅಲ್ಲಿನ ಮನೆ ನೋಡಿದರೆ ತಿಳಿದುಬರುತ್ತದೆ. ಅಲ್ಲದೆ, ಕಿಶೋರ್ ಶೆಟ್ಟಿ ಕಳೆದ ಒಂದು ವರ್ಷದಲ್ಲಿ ಸರಿಯಾದ ಕೆಲಸ ಇಲ್ಲದೆ ಅಲೆದಾಡಿದ್ದಾನೆ. ಲಾಕ್ಡೌನ್ ಬಳಿಕವಂತೂ ಕೈಲಿ ಕಾಸಿಲ್ಲದೆ ಕಷ್ಟಪಟ್ಟಿದ್ದಾನೆ ಎನ್ನುವುದನ್ನು ಅಲ್ಲಿನ ಸ್ಥಳೀಯರು ಹೇಳುತ್ತಾರೆ. ಆದರೆ, ಪೊಲೀಸರು ಸಾಕಷ್ಟು ಸಾಕ್ಷ್ಯ ಇಲ್ಲದೆ ಅರೆಸ್ಟ್ ಮಾಡಲ್ಲ. ಮೇಲಾಗಿ ಹಳೇ ಗಿರಾಕಿ ಎನ್ನುತ್ತಾರೆ. ಹಳೇ ಗಿರಾಕಿ ಇದ್ದಿರಬಹುದು. ಡ್ರಗ್ ಪೆಡ್ಲರ್ ಆಗಿದ್ದರೆ ಆತನಲ್ಲಿ ಹಣ ಹರಿದಾಡಬೇಕಿತ್ತು. ಕನಿಷ್ಠ ಓಡಾಡೋಕೆ ವಾಹನವಾದ್ರೂ ಇರಬೇಕಿತ್ತು. ಅದ್ಯಾವುದೂ ಇಲ್ಲ ಎಂದರೆ ಯಾರದ್ದೋ ಖೆಡ್ಡಾಕ್ಕೆ ಕಿಶೋರ್ ಬಿದ್ದಿದ್ದಾನೆಯೇ ಅನ್ನುವ ಗುಮಾನಿ ಏಳುತ್ತದೆ. ಅಷ್ಟೇ ಅಲ್ಲ, ಕಿಶೋರ್ ಸಣ್ಣ ಕ್ರಿಮಿ ಅಷ್ಟೇ. ಡ್ರಗ್ ವಹಿವಾಟಿನ ದೊಡ್ಡ ತಿಮಿಂಗಿಲಗಳೆಲ್ಲ ಪೊಲೀಸರ ಕಣ್ಮುಂದೆ ಈಜಿ ದಡ ಸೇರ್ತಾ ಇವೆ, ತಿಮಿಂಗಿಲಗಳ ರಕ್ಷಣೆಗಾಗಿ ಕ್ರಿಮಿಯನ್ನೇ ಪೆಡ್ಲರ್ ಮಾಡುತ್ತಿದ್ದಾರೆ ಎನ್ನುವ ಮಾತೂ ಕೇಳಿಬರುತ್ತಿದೆ.
Join our WhatsApp group for latest news updates
video
22-10-25 08:12 pm
HK News Desk
ರಾಜ್ಯದ ಸಂಪನ್ಮೂಲವನ್ನು ಹೈಕಮಾಂಡ್ ಸಮರ್ಪಣಾಮಸ್ತು ಮಾ...
21-10-25 11:01 pm
Dharmasthala Case, CM Siddaramaiah: ಧರ್ಮಸ್ಥಳ...
21-10-25 09:45 pm
ನೆಲ್ಲಿಕಾರು ; ಟ್ರ್ಯಾಕ್ಟರ್ ಜೊತೆಗೆ ಬಾವಿಗೆ ಬಿದ್ದ...
21-10-25 03:40 pm
DK Shivakumar, R. Manjunath, Chief Minister S...
20-10-25 06:58 pm
22-10-25 05:45 pm
HK News Desk
ಡ್ರೆಸ್ಸಿಂಗ್ ರೂಮಿನಲ್ಲಿ ಇಸ್ಲಾಂ ಪ್ರಚಾರ ಮಾಡಿದ್ದಕ...
21-10-25 03:11 pm
INS Vikrant in Goa, PM Narendra Modi: ಗೋವಾದಲ್...
20-10-25 08:34 pm
300 Naxals, PM Narendra Modi: 75 ಗಂಟೆಯಲ್ಲಿ 30...
18-10-25 07:34 pm
ಗುಜರಾತ್ ನಲ್ಲಿ 25 ಸಚಿವರ ಹೊಸ ಸಂಪುಟ ಅಸ್ತಿತ್ವಕ್ಕೆ...
17-10-25 05:25 pm
22-10-25 09:55 pm
Mangalore Correspondent
ಗಟ್ಟಿಯವರ ಆಯುಷ್ಯ ಗಟ್ಟಿಯಿದೆ! ದೇರಳಕಟ್ಟೆ ವೈದ್ಯರು...
22-10-25 04:30 pm
ಮೋದಿ ಸರ್ಕಾರದ ಜಿಎಸ್ಟಿ ಸುಧಾರಣೆಗಳ ಬಗ್ಗೆ ಸಿದ್ದರಾಮ...
21-10-25 09:49 pm
Ashok Rai Puttur: 10 ಸಾವಿರ ಕುರ್ಚಿ ಹಾಕಿ ಒಂದು ಲ...
21-10-25 07:32 pm
ನಮ್ಮ ಸರ್ಕಾರ ಆರ್ಎಸ್ಎಸ್ ನಿಷೇಧ ಮಾಡಿಲ್ಲ, ಬಿಜೆಪಿ...
21-10-25 03:07 pm
22-10-25 11:51 am
Mangalore Correspondent
Mulki Fraud, Mangalore Police: ಹಣ ಡಬಲ್ ಆಮಿಷದಲ...
21-10-25 10:51 pm
ಅಭಿಷೇಕ್ ಹನಿಟ್ರ್ಯಾಪ್ ಕೇಸ್ ; ನ್ಯಾಯಕ್ಕಾಗಿ ಜಾಲತಾಣ...
21-10-25 08:24 pm
ಮನೆಮಂದಿ ಮಲಗಿದ್ದಾಗಲೇ ಅಪಾರ್ಟ್ಮೆಂಟಿನ ಮೂರು ಮನೆಗಳಿ...
21-10-25 05:12 pm
MSME Fraud, Mangalore Bank, SBI Mallikatte: ಸ...
20-10-25 10:51 pm