ದೇಶದಲ್ಲಿ ಆಡಳಿತ ಬದಲಿಸುವುದಕ್ಕೇ ನಮ್ಮ ಹೋರಾಟ ; ರಂಗಾ ಬಿಲ್ಲಾ ಸರ್ಕಾರವನ್ನು ಇಳಿಸುತ್ತೇವೆ, ಮಂಗಳೂರಿನಲ್ಲಿ ಪ್ರಕಾಶ್ ರಾಜ್ ನೇತೃತ್ವದಲ್ಲಿ ಜನತಾ ನಡಿಗೆ

31-10-26 09:40 pm       Mangaluru Staffer   ಕರಾವಳಿ

ಮತದಾನದ ಹಕ್ಕು ಕಸಿಯುವ ಎಸ್ಐಆರ್ ವಿರುದ್ಧ ಮಾತ್ರ ನಮ್ಮ ಹೋರಾಟ ಅಲ್ಲ. ಬಿಜೆಪಿ ಸರಕಾರ ಇಳಿಸಲೆಂದೇ ನಮ್ಮ ಹೋರಾಟ ಎಂದು ಬಹುಭಾಷಾ ನಟ, ಹೋರಾಟಗಾರ ಪ್ರಕಾಶ್ ರಾಜ್ ಪುನರುಚ್ಚರಿಸಿದ್ದಾರೆ.

ಮಂಗಳೂರು, ಅ.31: ಮತದಾನದ ಹಕ್ಕು ಕಸಿಯುವ ಎಸ್ಐಆರ್ ವಿರುದ್ಧ ಮಾತ್ರ ನಮ್ಮ ಹೋರಾಟ ಅಲ್ಲ. ಬಿಜೆಪಿ ಸರಕಾರ ಇಳಿಸಲೆಂದೇ ನಮ್ಮ ಹೋರಾಟ ಎಂದು ಬಹುಭಾಷಾ ನಟ, ಹೋರಾಟಗಾರ ಪ್ರಕಾಶ್ ರಾಜ್ ಪುನರುಚ್ಚರಿಸಿದ್ದಾರೆ. 

ಮಂಗಳೂರಿನಲ್ಲಿ ಜನತಾ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಕಾಶ್ ರಾಜ್ ಮಾತನಾಡಿದರು. ನಗರದ ಅಂಬೇಡ್ಕರ್ ವೃತ್ತದಿಂದ ಕ್ಲಾಕ್ ಟವರ್ ವರೆಗೆ ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ನಡೆದ ಜನತಾ ನಡಿಗೆ ಕಾರ್ಯಕ್ರಮದಲ್ಲಿ ಪ್ರಕಾಶ್ ರಾಜ್ ಪ್ರಮುಖ ಭಾಷಣ ಮಾಡಿದರು. ಈ ಹೋರಾಟ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಹಾಗೂ ಆರೆಸ್ಸೆಸ್ ಪ್ರೇರಿತ ಸರಕಾರದ ವಿರುದ್ಧ ಹೋರಾಟ. ಎಸ್ಐಆರ್  ವಿರುದ್ಧ, ಗ್ಯಾನೇಶ್ ಕುಮಾರ್ ಪದಚ್ಯುತಿಗೆ ಒತ್ತಾಯಿಸಿ ಹೋರಾಟ. ಮೋದಿಯವರು ನಮ್ಮ ಸರಕಾರ ಉರುಳಿಸಲು ಬಂದಿರುವುದು ಎಂದು ನಮ್ಮ ಹೋರಾಟದ ಬಗ್ಗೆ ಹೇಳಿದ್ದಾರೆ. ಹೌದು ನಾವು ನಿಮ್ಮ ಸರಕಾರ ಉರುಳಿಸಲೇ ಬಂದಿರುವುದು ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ. 

ನಾವು ನೇಪಾಳ, ಬಾಂಗ್ಲಾದೇಶ ರೀತಿ ಹಿಂಸೆ ಮಾಡುವುದರಿಂದ ಅಲ್ಲ. ನಾವು ಪ್ರೀತಿಯಿಂದ, ಅಂಬೇಡ್ಕರ್ ಅವರು ಸಂವಿಧಾನದಲ್ಲಿ ನೀಡಿರುವ ಮತದಾನದ ಹಕ್ಕಿನಿಂದ ಸರಕಾರ ಬದಲಿಸಲಿದ್ದೇವೆ. ಈ ರಂಗಾ ಬಿಲ್ಲಾ ಬಿಜೆಪಿ ಸರಕಾರವನ್ನು ಬುಡ ಸಮೇತ ಇಳಿಸಲಿದ್ದೇವೆ ಎನ್ನುವ ಮೂಲಕ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ರಂಗಾ ಬಿಲ್ಲಾ ಎಂದು ಹೋಲಿಸಿದರು. 

ಎಸ್ಐಆರ್ ಮೂಲಕ ಬರೀ ಮತ ಕಳ್ಳತನ ನಡೆಯುತ್ತಿರುವುದಲ್ಲ.‌ ಇತ್ತೀಚಿನ ಚುನಾವಣೆಗಳಲ್ಲಿ ಹೆಚ್ಚಿಸಿರುವ ಮತಗಳನ್ನು ಅಳಿಸಿ ಹಾಕಲು ಎಸ್ ಐ ಆರ್ ತಂದಿರುವುದು. ಅದರ ವಿರುದ್ಧ ಈ ನಮ್ಮ ಹೋರಾಟ. ಈ ಹೋರಾಟ ಗೆಲ್ಲುವುದು ಪ್ರಜೆಗಳಿಂದ ಮಾತ್ರ ಸಾಧ್ಯ. ಇದು ರಾಜಕೀಯ ಪಕ್ಷಗಳಿಂದ ಸಾಧ್ಯವಿಲ್ಲ. ಎಲ್ಲ ರಾಜಕೀಯ ಪಕ್ಷಗಳಿಗೆ ನಾವು  ಓಟಿನ ಮಿಶನ್ ಮಾತ್ರ. 

ಕರಾವಳಿಯ ಜನರನ್ನು ಹುಂಬರನ್ನಾಗಿಸಿ, ಮಂಗಗಳಾಗಿಸಿ ಮೆದುಳಿಗೆ ಸೆಗಣಿ ತುಂಬುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಆರೋಗ್ಯ, ಆರ್ಥಿಕ ಸ್ಥಿತಿ, ಯುವಕರ ಉದ್ಯೋಗ ಸ್ಥಿತಿ ಏನಾಗಿದೆ ಎನ್ನುವುದನ್ನು ನಾವು ಯೋಚನೆ ಮಾಡಬೇಕಿದೆ. ಈಗ, ಆರಂಭವಾಗಿರುವ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲದು ಎಂದು ಪ್ರಕಾಶ್ ರಾಜ್ ಹೇಳಿದರು. ಜಾಥಾದಲ್ಲಿ ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷಗಳ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ‌