Mangalore Eye, Project: ಕದ್ರಿಯ ನೂರಾರು ಕೋಟಿ ಜಾಗದಲ್ಲಿ ರಿಯಲ್ ಎಸ್ಟೇಟ್ ಸ್ಟಂಟ್ ; ತ್ರೀ ಸ್ಟಾರ್ ಹೊಟೇಲ್, ವೀಕ್ಷಣಾ ಗ್ಯಾಲರಿ, ಶಾಪಿಂಗ್ ಮಾಲ್ ! ‘ಮಂಗಳೂರು ಐ’ ಹೆಸರಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ !

20-09-26 08:59 pm       HK News Staffer   ಕರಾವಳಿ

ಮಂಗಳೂರಿನಲ್ಲಿ ಮೊದಲ ಬಾರಿಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಜಿಲ್ಲೆಗಳ ಅಭಿವೃದ್ಧಿ ಮತ್ತು ಮಂಗಳೂರು ನಗರವನ್ನು ಕೇಂದ್ರವಾಗಿಸಿ ಪ್ರವಾಸೋದ್ಯಮ ಅಭಿವೃದ್ಧಿ ಚಟುವಟಿಕೆಗೆ ಯೋಜನೆ ಹಾಕಲಾಗಿದೆ.

ಮಂಗಳೂರು, ಸೆ.20: ಮಂಗಳೂರಿನಲ್ಲಿ ಮೊದಲ ಬಾರಿಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಜಿಲ್ಲೆಗಳ ಅಭಿವೃದ್ಧಿ ಮತ್ತು ಮಂಗಳೂರು ನಗರವನ್ನು ಕೇಂದ್ರವಾಗಿಸಿ ಪ್ರವಾಸೋದ್ಯಮ ಅಭಿವೃದ್ಧಿ ಚಟುವಟಿಕೆಗೆ ಯೋಜನೆ ಹಾಕಲಾಗಿದೆ. ಪ್ರಮುಖವಾಗಿ ಮಂಗಳೂರು ನಗರದ ಹೃದಯ ಭಾಗದಲ್ಲಿರುವ ಕದ್ರಿ ಪಾರ್ಕ್ ಬಳಿಯ ತೋಟಗಾರಿಕೆ ಇಲಾಖೆಗೆ ಸೇರಿದ ನೂರಾರು ಕೋಟಿ ಬೆಲೆಯ ನಾಲ್ಕು ಎಕರೆ ಪ್ರದೇಶವನ್ನು ಅಭಿವೃದ್ಧಿ ಪಡಿಸುವುದಕ್ಕಾಗಿ ‘ಮಂಗಳೂರು ಐ’ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಸ್ಟಂಟ್ ಯೋಜನೆ ಹಾಕಲಾಗಿದೆ.

‘ಮಂಗಳೂರು ಐ’ ಹೆಸರಲ್ಲಿ ಈ ಯೋಜನೆ ತರಲಾಗುತ್ತಿದ್ದು, ಇಡೀ ನಗರವನ್ನು ಮತ್ತು ದೂರದಿಂದ ಸಮುದ್ರದ ನೋಟವನ್ನು ಕಣ್ತುಂಬಿಕೊಳ್ಳಲು ಅನುವಾಗುವಂತೆ ವೀಕ್ಷಣಾ ಗ್ಯಾಲರಿ, ಹೊಟೇಲ್ ಇನ್ನಿತರ ಅಭಿವೃದ್ಧಿ ಚಟುವಟಿಕೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಎರಡು ವರ್ಷಗಳ ಹಿಂದೆ ಮುಲ್ಲೈ ಮುಗಿಲನ್ ಜಿಲ್ಲಾಧಿಕಾರಿಯಾಗಿದ್ದಾಗಲೇ ಈ ಯೋಜನೆಗೆ ನೀಲನಕ್ಷೆ ನಡೆದಿತ್ತು. ಆನಂತರ ಸ್ಪೀಕರ್ ಆಗಿದ್ದ ಯು.ಟಿ. ಖಾದರ್ ವಿಶೇಷ ಮುತುವರ್ಜಿಯಿಂದ ಇದರ ಡಿಪಿಆರ್ ರಚಿಸಿ ಜಿಲ್ಲಾಡಳಿತದಿಂದ ರಾಜ್ಯ ಸರ್ಕಾರದ ಮುಂದಿಡಲಾಗಿತ್ತು.

ಇದೀಗ ಯೋಜನೆಗೆ ಅಂಕಿತ ನೀಡಲಾಗಿದ್ದು, ಸರ್ಕಾರ- ಖಾಸಗಿ (ಪಿಪಿಪಿ) ಮಾದರಿಯಲ್ಲಿ ಯೋಜನೆ ಜಾರಿಗೆ ತರುವುದೆಂದು ನಿರ್ಧಾರಕ್ಕೆ ಬರಲಾಗಿದೆ. ಇದಕ್ಕಾಗಿ ಸರ್ಕಾರದಿಂದ 60 ಕೋಟಿ ನೀಡುವುದಾಗಿ ಸಂಪುಟ ಸಭೆಯಲ್ಲಿ ತಿಳಿಸಲಾಗಿದ್ದು, ವೀಕ್ಷಣಾ ಗೋಪುರ, ರೆಸ್ಟೋರೆಂಟ್, ಬೃಹತ್ ಶಾಪಿಂಗ್ ಮಾಲ್ ತರುವ ಯೋಜನೆ ಇದರ ಹಿಂದಿದೆ. ಸಂಪುಟ ಸಭೆಯಲ್ಲಿ ಮಂಡಿಸಿದ ವರದಿಯಲ್ಲಿ 3 ಸ್ಟಾರ್ ಅಥವಾ ಅದಕ್ಕಿಂತ ಮೇಲ್ದರ್ಜೆಯ 35 ಕೊಠಡಿಗಳ ಹೊಟೇಲ್ ನಿರ್ಮಾಣದ ಉದ್ದೇಶ ತೋರಿಸಲಾಗಿದೆ. ಜಾಗವನ್ನು 35 ವರ್ಷಗಳಿಗೆ ಗುತ್ತಿಗೆ ನೀಡುವುದರಿಂದ ಈ ಅವಧಿಯಲ್ಲಿ ಸರ್ಕಾರಕ್ಕೆ 34.21 ಕೋಟಿ ರೂ. ಆದಾಯದ ಬರಬಹುದು. ಇದರಿಂದ ಮಂಗಳೂರಿನ ಜನತೆಗೆ ಉದ್ಯೋಗಾವಕಾಶ ಮತ್ತು ಸಾರಿಗೆ ಇನ್ನಿತರ ಪೂರಕ ಆರ್ಥಿಕತೆಗೆ ಉತ್ತೇಜನ ಸಿಗಲಿದೆ ಎಂದು ಹೇಳಲಾಗಿದೆ.  

ಮಾಹಿತಿ ಪ್ರಕಾರ, ಈ ಯೋಜನೆಯಲ್ಲಿ 200 ಮೀಟರ್ ಎತ್ತರದ ಗಗನಚುಂಬಿ ವಾಣಿಜ್ಯ ಗೋಪುರ ಇರಲಿದೆ. ಗೋಪುರದ ಮೇಲ್ಭಾಗದಲ್ಲಿ ವಿಶೇಷ ಅನುಭವ ನೀಡುವ ರೆಸ್ಟೋರೆಂಟ್ ಬರಲಿದೆ. ಕರಾವಳಿಯ ವೈವಿಧ್ಯ ತಿಳಿಸುವ ವಿಂಟೇಜ್ ಶೈಲಿಯ ವೀಕ್ಷಣಾ ಗ್ಯಾಲರಿಯೂ ಬರಲಿದೆ ಎನ್ನಲಾಗುತ್ತದೆ. ರಿಯಲ್ ಎಸ್ಟೇಟ್ ಸ್ಟಂಟ್ ರೀತಿಯ ಈ ಯೋಜನೆಯಿಂದ ದೇವಸ್ಥಾನ ದರ್ಶನ ಇನ್ನಿತರ ಉದ್ದೇಶಕ್ಕೆ ಕರಾವಳಿಗೆ ಆಗಮಿಸುವ ಪ್ರವಾಸಿಗರನ್ನು ಒಂದೆರಡು ದಿನ ಇಲ್ಲಿ ಹಿಡಿದಿಡುವ ಉಪಾಯ ಇದೆಯಂತೆ.

ಆದರೆ ಕೇರಳ- ಮುಂಬೈ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಇರುವ ನೂರಾರು ಕೋಟಿ ಬೆಲೆಯ ಜಾಗವನ್ನು ಖಾಸಗಿ ಕೈಗೆ ನೀಡಲಾಗುತ್ತಿದ್ದು, ಮಂಗಳೂರಿನ ಕೆಲವು ರಾಜಕಾರಣಿಗಳೇ ಇದರ ಪ್ರಾಯೋಜಕತ್ವ ವಹಿಸಿಕೊಂಡಿದ್ದಾರೆಂಬ ಮಾಹಿತಿ ಇದೆ. ಆಮೂಲಕ ಸರ್ಕಾರಿ ಜಾಗದಲ್ಲಿ ಪಕ್ಕಾ ಕಮರ್ಶಿಯಲ್ ಚಟುವಟಿಕೆಗೆ ತೆರೆದುಕೊಳ್ಳಲು ಸಂಪುಟ ಸಭೆಯಲ್ಲಿ ಅನುಮತಿ ನೀಡಲಾಗಿದೆ.

ಹಾಲಿ ಈ ಜಾಗದಲ್ಲಿ ಮಕ್ಕಳ ತರಬೇತಿಗಾಗಿ ಸ್ಕೇಟಿಂಗ್ ರಿಂಕ್, ಬಿಎಸ್ಎನ್ಎಲ್ ಕಚೇರಿ ಇದೆ. ಇದು ಬಿಟ್ಟರೆ ಇಲ್ಲಿನ ಜಾಗ ಬಹುತೇಕ ಖಾಲಿ ಇದೆ. ಕದ್ರಿ ಪಾರ್ಕ್ ಆಸುಪಾಸಿನಲ್ಲಿ ತೋಟಗಾರಿಕೆ ಇಲಾಖೆಯ ಜಾಗ ಇನ್ನೂ ಇದೆ. ಹಿಂದೊಮ್ಮೆ ಇದೇ ಭಾಗದಲ್ಲಿ ಬಸ್ ನಿಲ್ದಾಣಕ್ಕೂ ಯೋಜನೆ ಹಾಕಲಾಗಿತ್ತು. ಆನಂತರ, ಪಂಪ್ವೆಲ್ ಮತ್ತು ಕೊಟ್ಟಾರದಲ್ಲಿ ಬಸ್ ನಿಲ್ದಾಣದ ಪ್ರಸ್ತಾಪ ಬಂದಿತ್ತು. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಈ ಜಾಗ ಇರುವುದರಿಂದ ಬಸ್ ನಿಲ್ದಾಣ ಕಾರ್ಯಗತ ಕಷ್ಟವೆಂದು ಕೈಬಿಡಲಾಗಿತ್ತು.

The first-ever State Cabinet meeting held in Mangaluru has proposed a series of initiatives aimed at boosting the development of the coastal districts, with a special focus on promoting tourism and infrastructure in Mangaluru city.