ಮೊಗವೀರಪಟ್ಣ- ಕೋಟೆಪುರ ರಸ್ತೆ ಕಾಂಕ್ರೀಟಿಗೆ ಗಡುವು ; ಸ್ಥಳೀಯರಿಂದ ರಸ್ತೆ ತಡೆದು ಪ್ರತಿಭಟನೆ, ರಸ್ತೆ ಹಾಳುಗೈದು ಕ್ಯಾನ್ಸರ್ ಹರಡುತ್ತಿರುವ ಫಿಶ್ ಮೀಲ್ ಫ್ಯಾಕ್ಟರಿಗಳ ವಿರುದ್ಧ ಆಕ್ರೋಶ

19-09-26 09:54 pm       HK News Staffer   ಕರಾವಳಿ

ಒಂದು ವಾರದಲ್ಲಿ ಮೊಗವೀರಪಟ್ಣ- ಕೋಟೆಪುರ ಸಂಪರ್ಕ ರಸ್ತೆಗೆ ಶಾಶ್ವತ ಕಾಮಗಾರಿ ಮಾಡದಿದ್ದರೆ ರಸ್ತೆಯನ್ನ ಸಂಫೂರ್ಣ ಬಂದ್ ಮಾಡಲಾಗುವುದು. ರಸ್ತೆ ಬಂದ್ ಆದಲ್ಲಿ ಸ್ಥಳೀಯರಿಗೇನೂ ನಷ್ಟವಿಲ್ಲ. ದಿನದ ಇಪ್ಪತ್ತನಾಲ್ಕು ಗಂಟೆ ಈ ರಸ್ತೆಯಲ್ಲಿ ಯಾರು ತಮ್ಮ ವಾಹನಗಳನ್ನ ಓಡಿಸಿ ಸಾವಿರಾರು ಕೋಟಿ ರೂ. ಲಾಭ ಗಳಿಸುತ್ತಾರೋ ಅವರಿಗೆ ಭಾರೀ ನಷ್ಟ ಉಂಟಾಗುವುದೆಂದು ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷರಾದ ಯಶವಂತ ಅಮೀನ್ ಉಳ್ಳಾಲದ ಫಿಶ್ ಮೀಲ್ ಫ್ಯಾಕ್ಟರಿ ಮಾಲಕರನ್ನು ಪರೋಕ್ಷವಾಗಿ ತಿವಿದರು.

ಉಳ್ಳಾಲ, ಸೆ.19 : ಒಂದು ವಾರದಲ್ಲಿ ಮೊಗವೀರಪಟ್ಣ- ಕೋಟೆಪುರ ಸಂಪರ್ಕ ರಸ್ತೆಗೆ ಶಾಶ್ವತ ಕಾಮಗಾರಿ ಮಾಡದಿದ್ದರೆ ರಸ್ತೆಯನ್ನ ಸಂಫೂರ್ಣ ಬಂದ್ ಮಾಡಲಾಗುವುದು. ರಸ್ತೆ ಬಂದ್ ಆದಲ್ಲಿ ಸ್ಥಳೀಯರಿಗೇನೂ ನಷ್ಟವಿಲ್ಲ. ದಿನದ ಇಪ್ಪತ್ತನಾಲ್ಕು ಗಂಟೆ ಈ ರಸ್ತೆಯಲ್ಲಿ ಯಾರು ತಮ್ಮ ವಾಹನಗಳನ್ನ ಓಡಿಸಿ ಸಾವಿರಾರು ಕೋಟಿ ರೂ. ಲಾಭ ಗಳಿಸುತ್ತಾರೋ ಅವರಿಗೆ ಭಾರೀ ನಷ್ಟ ಉಂಟಾಗುವುದೆಂದು ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷರಾದ ಯಶವಂತ ಅಮೀನ್ ಉಳ್ಳಾಲದ ಫಿಶ್ ಮೀಲ್ ಫ್ಯಾಕ್ಟರಿ ಮಾಲಕರನ್ನು ಪರೋಕ್ಷವಾಗಿ ತಿವಿದರು.

ಸಂಪೂರ್ಣವಾಗಿ ಹದಗೆಟ್ಟಿರುವ ಉಳ್ಳಾಲ ಮೊಗವೀರಪಟ್ಣ- ಕೋಟೆಪುರ ಸಂಪರ್ಕದ ಮುಖ್ಯ ರಸ್ತೆಗೆ ಪೂರ್ಣ ಪ್ರಮಾಣದ ಕಾಮಗಾರಿಗೆ ಆಗ್ರಹಿಸಿ ಉಳ್ಳಾಲ ಮೊಗವೀರಪಟ್ಣ - ಕೋಟೆಪುರ ನಾಗರಿಕ ಹೋರಾಟ ಸಮಿತಿ ವತಿಯಿಂದ ಮೊಗವೀರಪಟ್ಣದಲ್ಲಿ ಶನಿವಾರ ಬೆಳಗ್ಗೆ ನಡೆದ ರಸ್ತೆ ತಡೆ ಪ್ರತಿಭಟನೆಯನ್ನುದ್ಧೇಶಿಸಿ ಅವರು ಮಾತನಾಡಿದರು. ರಸ್ತೆ ಕಾಮಗಾರಿಗೆ ಆರು ಕೋಟಿ ರೂ. ಅನುದಾನ ಮಂಜೂರಾಗಿರುವುದು ಕೇವಲ ಕಡತಕ್ಕೆ ಸೀಮಿತವೇ, ಕಾಮಗಾರಿ ನಡೆಯಲಿಕ್ಕಿಲ್ಲವೇ ಎಂದು ಶಾಸಕ ಖಾದರ್ ಅವರನ್ನ‌ ಯಶವಂತ್ ಪ್ರಶ್ನಿಸಿದರು.

ಮಂಗಳೂರು ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷರಾದ ರಾಜೇಶ್ ಪುತ್ರನ್ ಮಾತನಾಡಿ ನಾವು ಅಂದು ಪರಿಸರಕ್ಕೆ ಮಾರಕವಾದ ಫಿಶ್ ಮೀಲ್ ಫ್ಯಾಕ್ಟರಿಗಳನ್ನ ನಿರ್ಮಿಸಲು ಬಿಟ್ಟದ್ದೇ ಪ್ರಮಾದವಾಗಿದೆ. ಅಂದು ನಮ್ಮಲ್ಲಿ ಸರಿಯಾದ ಒಗ್ಗಟ್ಟು ಇಲ್ಲದಿದ್ದ ಕಾರಣ ಇಂದು ಪರಿಣಾಮಗಳನ್ನು ನಾವೇ ಅನುಭವಿಸುವಂತಾಗಿದೆ. ಫ್ಯಾಕ್ಟರಿಗಳು ಕಾರ್ಯಾಚರಿಸುವ ಪ್ರದೇಶದ ನದಿ ತೀರಕ್ಕೆ ಮಣ್ಣು ಹಾಕಿ ಅತಿಕ್ರಮಣ ನಡೆಸಲಾಗುತ್ತಿದೆ. ಆದರೆ ಇಡೀ ಉಳ್ಳಾಲದಲ್ಲಿ ಒಂದು ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ನಮ್ಮ ಶಾಸಕ ಖಾದರ್ ಅವರಿಗೆ ಜಾಗ ಸಿಕ್ಕದೇ ಇರುವುದು ವಿಪರ್ಯಾಸವೆಂದರು. 

ಫ್ಯಾಕ್ಟರಿಗಳ ನೂರಾರು ಘನ ವಾಹನಗಳು ಸಂಚರಿಸುವ ರಸ್ತೆಗೆ ಡಾಮರೀಕರಣ ವ್ಯರ್ಥವಾಗಿದ್ದು, ಇಲ್ಲಿನ ರಸ್ತೆಗೆ ಕಾಂಕ್ರಿಟೀಕರಣವನ್ನೇ ನಡೆಸಬೇಕೆಂದು ರಾಜೇಶ್ ಆಗ್ರಹಿಸಿದರು. ಸಾಮಾಜಿಕ ಹೋರಾಟಗಾರರಾದ ಪ್ರಸನ್ನ ರವಿ ಮಾತನಾಡಿ ಅನಧಿಕೃತ ಫಿಶ್ ಮೀಲ್ ಫ್ಯಾಕ್ಟರಿಗಳಿಂದ ಸ್ಥಳೀಯರಿಗೆ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳು ಕಾಡುತ್ತಿವೆಯೆಂದರೆ ಕ್ಷೇತ್ರದ ಶಾಸಕರು, ಆರೋಗ್ಯ ಸಚಿವರಾದ ಖಾದರ್ ಅವರಿಗೆ ಕೇಳುತ್ತಿಲ್ಲವೇ. ಇಂತಹ ಗಂಭೀರ ಸಮಸ್ಯೆಗಳ ಬಗ್ಗೆ ಮಂಗಳೂರಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಘೇರಾವ್ ಹಾಕಿ ಪ್ರತಿಭಟಿಸಬೇಕಿತ್ತು. ಸಚಿವ ಸಂಪುಟ ಸಭೆಗಾಗಿ ಮಂಗಳೂರು ನಗರದ ಡಿವೈಡರ್ ಗಳಲ್ಲಿ ರಾತೋರಾತ್ರಿ ದೊಡ್ಡ, ದೊಡ್ಡ ಮರಗಳನ್ನ ನೆಟ್ಟು ಮುಖ್ಯಮಂತ್ರಿಗಳನ್ನೇ ಯಾಮಾರಿಸಿರುವ ಖಾದರ್ ಅವರು ಆರೋಗ್ಯ ಸಚಿವರಲ್ಲ, ಕೃಷಿ ಸಚಿವರಾಗಬೇಕಿತ್ತೆಂದು ಅಣಕಿಸಿದರು. 

ಫ್ಯಾಕ್ಟರಿಗಳಿಂದ ಸ್ಥಳೀಯರಿಗೆ ಕ್ಯಾನ್ಸರ್ ಉಡುಗೊರೆ ! 

ಸ್ಥಳೀಯ ನಿವಾಸಿ ಗಣೇಶ್ ಉಳ್ಳಾಲ್ ಮಾತನಾಡಿ ಉಳ್ಳಾಲದಲ್ಲಿ ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ಫಿಶ್ ಮೀಲ್ ಫ್ಯಾಕ್ಟರಿಗಳಿಂದ ಸಿಎಸ್ಆರ್ ಅನುದಾನ ಕೂಡಾ ವಿನಿಯೋಗವಾಗುತ್ತಿಲ್ಲ, ಬದಲಾಗಿ ಪರಿಸರದ ಜನರಿಗೆ ಕ್ಯಾನ್ಸರ್ ಸೇರಿದಂತೆ ಮಾರಣಾಂತಿಕ ಕಾಯಿಲೆಗಳನ್ನು ಉಡುಗೊರೆಯಾಗಿ ಹರಡಲಾಗುತ್ತಿದೆ. ಇಡೀ ಉಳ್ಳಾಲಕ್ಕೆ ಕರೆಂಟ್ ಇಲ್ಲದಿದ್ದರೂ ಇಂತಹ ಫ್ಯಾಕ್ಟರಿಗಳಿಗೆ ಮಾತ್ರ ಮೆಸ್ಕಾಂ ಇಲಾಖೆ ಪ್ರತ್ಯೇಕ ಟ್ರಾನ್ಸ್ ಫಾರ್ಮರ್ ಗಳನ್ನ ಅಳವಡಿಸಿಕೊಟ್ಟು ಇಪ್ಪತ್ತನಾಲ್ಕು ಗಂಟೆ ವಿದ್ಯುತ್ ಪೂರೈಸುತ್ತಿದೆ. ಫಿಶ್ ಮೀಲ್ ಮಾಫಿಯಾಗಳಿಗೆ ಹೆದರಿ ಈಗಾಗಲೇ ಅನೇಕ ಸ್ಥಳೀಯ ನಿವಾಸಿಗಳು ಜಾಗ ಮಾರಿ ಊರೇ ಬಿಟ್ಟು ಹೋಗಿದ್ದಾರೆ. ಇಲ್ಲಿನ ಮಾಲಿನ್ಯದಿಂದಾಗಿ ಯುವತಿಯರಿಗೆ ನೆಂಟಸ್ಥಿಕೆನೂ ಕೂಡಿ ಬರದ ಸ್ಥಿತಿ ಎದುರಾಗಿದೆ. ಪ್ರತಿಭಟನೆಯಲ್ಲಿ ಯಾರೆಲ್ಲಾ ಭಾಗವಹಿಸಿದ್ದಾರೆಂಬುದನ್ನೂ ಕೋಟಿಕುಳ ಮಾಫಿಯಾಗಳು ಗಮನಿಸಿ, ಅವರನ್ನ ದಮನಿಸುವ ಪ್ರಯತ್ನ ನಡೆಸುತ್ತಾರೆಂದು ಆತಂಕ ವ್ಯಕ್ತಪಡಿಸಿದರು.

ಉಳ್ಳಾಲ ಶಾರದೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀಕಾಂತ್ ಅರಸುಹಿತ್ಲು,ಹಿರಿಯರಾದ ಬಾಬು ಬಂಗೇರ,ಹೋರಾಟ ಸಮಿತಿಯ ಪ್ರಮುಖರಾದ ರಂಜಿತಾ ಉಳ್ಳಾಲ,ಮಂಗಳೂರ್ ರಿಯಾಝ್,ಇರ್ಫಾನ್ ಕೋಟೆಪುರ,ಶರ್ಮಿಳಾ ಬಂಗೇರ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.