Ullal Municipal Commissioner: ಉಳ್ಳಾಲ ನಗರಸಭೆಯಲ್ಲಿ ಪಿಡಿಒ ದರ್ಜೆ ಅಧಿಕಾರಿಯ ಪೌರಾಯುಕ್ತ ಕಾರುಬಾರು! ಸರ್ಕಾರಿ ಆದೇಶ ಇಲ್ಲದೆ ಅಧಿಕಾರ ಚಲಾವಣೆ, ಆಡಳಿತದಲ್ಲೇ ಲೋಪವೆಂದು ಲೋಕಾಯುಕ್ತಕ್ಕೆ ದೂರು 

19-08-25 08:28 pm       Mangalore Correspondent   ಕರಾವಳಿ

ಉಳ್ಳಾಲ ನಗರಸಭೆಯ ಪ್ರಭಾರ ಪೌರಾಯುಕ್ತರನ್ನಾಗಿ ಪಿಡಿಒ ದರ್ಜೆಯ ಅಧಿಕಾರಿಯೋರ್ವರನ್ನು ನೇಮಿಸಿರುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಜರಗದೇ ಇರುವುದು ಆಡಳಿತದಲ್ಲೇ ಲೋಪವಾಗಿರುವುದು ಕಂಡು ಬರುತ್ತದೆ.

ಉಳ್ಳಾಲ, ಆ.19 : ಉಳ್ಳಾಲ ನಗರಸಭೆಯ ಪ್ರಭಾರ ಪೌರಾಯುಕ್ತರನ್ನಾಗಿ ಪಿಡಿಒ ದರ್ಜೆಯ ಅಧಿಕಾರಿಯೋರ್ವರನ್ನು ನೇಮಿಸಿರುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಜರಗದೇ ಇರುವುದು ಆಡಳಿತದಲ್ಲೇ ಲೋಪವಾಗಿರುವುದು ಕಂಡು ಬರುತ್ತದೆ. ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ಉಳ್ಳಾಲದಲ್ಲಿ ಪ್ರಭಾರ ಪೌರಾಯುಕ್ತರಾಗಿ ಕರ್ತವ್ಯದಲ್ಲಿ ಮುಂದುವರಿದಿರುವ ಪಿಡಿಓ ಅಧಿಕಾರಿಯನ್ನ ತಕ್ಷಣವೇ ಅವರ ಮಾತೃ ಇಲಾಖೆಗೆ ಕಳುಹಿಸಬೇಕೆಂದು ವಕೀಲರಾದ ಅಫ್ಜಲ್ ಎಂಬವರು ಕರ್ನಾಟಕ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ. 

ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕರಿಂದ ಉಳ್ಳಾಲ ನಗರಸಭೆಯಲ್ಲಿ ಮಂಗಳವಾರ ನಡೆದ ಲೋಕಾಯುಕ್ತ ಅದಾಲತ್ತಲ್ಲಿ ಅಪ್ಝಲ್ ಅವರು ಉಳ್ಳಾಲ ನಗರಸಭೆಯ ಪ್ರಭಾರ ಪೌರಾಯುಕ್ತ ನವೀನ್ ಹೆಗ್ಡೆ ವಿರುದ್ಧ ದೂರು ಸಲ್ಲಿಸಿದ್ದಾರೆ. ಮೂಡಬಿದಿರೆ ತಾಲೂಕಿನ ಹೊಸಬೆಟ್ಟು ಗ್ರಾಮ ಪಂಚಾಯತ್ ನಲ್ಲಿ ಪಿಡಿಒ ಆಗಿರುವ ನವೀನ್ ಹೆಗ್ಡೆ ಸರಕಾರದ ಯಾವುದೇ ಸುತ್ತೋಲೆ, ಆದೇಶ, ಟಿಪ್ಪಣಿಗಳಿಲ್ಲದೆ ಉಳ್ಳಾಲ ನಗರಸಭೆಯ ಪ್ರಭಾರ ಪೌರಾಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕುರಿತಂತೆ ಕಳೆದ ಆಗಸ್ಟ್  5ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ದೂರು ಅರ್ಜಿಯನ್ನು ಸಲ್ಲಿಸಿದ್ದೆ. ಆದರೆ ಇದುವರೆಗೂ ಆರೋಪಿ ನವೀನ್ ಹೆಗ್ಡೆಯನ್ನ ಮಾತೃ ಇಲಾಖೆಗೆ ಕಳುಹಿಸದೆ ಉಳ್ಳಾಲ ನಗರಸಭೆ ಆಡಳಿತದಲ್ಲೇ ಪ್ರಭಾರ ಪೌರಾಯುಕ್ತರನ್ನಾಗಿಸಿ ಮುಂದುವರಿಸಿರುವುದು ಆಡಳಿತದಲ್ಲಿ ಲೋಪವಾಗಿರುವುದು ಕಂಡುಬರುತ್ತದೆ. ಆದುದರಿಂದ ನ್ಯಾಯಪ್ರತೀಕರಾದ ತಾವುಗಳು ಈ ಪ್ರಕರಣವನ್ನು ಅತೀ ಗಂಭೀರವೆಂದು ಪರಿಗಣಿಸಿ ಆರೋಪಿ ನವೀನ್ ಹೆಗ್ಡೆ ಅವರನ್ನ ತಕ್ಷಣವೇ ಮಾತೃ ಇಲಾಖೆಗೆ ಕಳುಹಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಲೋಕಾಯುಕ್ತಕ್ಕೆ ವಕೀಲರಾದ ಅಫ್ಝಲ್ ಅವರು ಲಿಖಿತ ದೂರು ಸಲ್ಲಿಸಿದ್ದಾರೆ.

ಈ ಹಿಂದೆ ಉಳ್ಳಾಲ ನಗರಸಭೆಯಲ್ಲಿ ಸೋಮೇಶ್ವರ ಪುರಸಭೆಯ ಮುಖ್ಯಾಧಿಕಾರಿ ಮತ್ತಡಿ ಅವರು ಪ್ರಭಾರ ಪೌರಾಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ಜೂನ್ ತಿಂಗಳ ಆರಂಭದಲ್ಲಿ ಮತ್ತಡಿ ಅವರನ್ನ ಪ್ರಭಾರ ಪೌರಾಯುಕ್ತ ಸ್ಥಾನದಿಂದ ವಿಮುಕ್ತಿಗೊಳಿಸಿ ನವೀನ್ ಹೆಗ್ಡೆಯವರನ್ನ ದಿಢೀರನೆ ಪ್ರಭಾರ ಪೌರಾಯುಕ್ತ ಸ್ಥಾನದಲ್ಲಿ ಕುಳ್ಳಿರಿಸಿದ್ದು ಭಾರೀ ಟೀಕೆಗೆ ಕಾರಣವಾಗಿತ್ತು.
ಸರಕಾರದ ಪೌರಾಡಳಿತ ನಿರ್ದೇಶನಾಲಯದ ಸುತ್ತೋಲೆ ಪ್ರಕಾರ ಸ್ಥಳೀಯಾಡಳಿತದ ಪೌರಾಯುಕ್ತರು ವರ್ಗಾವಣೆ ಅಥವಾ ತರಬೇತಿಗೆ ನಿಯೋಜನೆಗೊಂಡಲ್ಲಿ ಪ್ರಭಾರ ಪೌರಾಯುಕ್ತ ಸ್ಥಾನಕ್ಕೆ ಸಹಾಯಕ ಕಾರ್ಯಪಾಲಕ ಅಭಿಯಂತರರು ಅಥವಾ ಸಹಾಯಕ ಅಭಿಯಂತರರನ್ನ ನೇಮಿಸಬೇಕೆಂಬ ಆದೇಶವಿದೆ. ಆದರೆ ಈ ಆದೇಶಗಳನ್ನ ಧಿಕ್ಕರಿಸಿ ಪಿಡಿಒ ದರ್ಜೆಯ ನವೀನ್ ಹೆಗ್ಡೆ ಅವರನ್ನ ಉಳ್ಳಾಲ ನಗರಸಭೆಯ ಪ್ರಭಾರ ಪೌರಾಯುಕ್ತ ಸ್ಥಾನದಲ್ಲಿ ಕುಳ್ಳಿರಿಸಿರೋದು ವ್ಯಾಪಕ ಟೀಕೆಗೆ ಕಾರಣವಾಗಿದೆ.

ನಗರಸಭೆಯಲ್ಲಿ ನಡೆದ ಲೋಕಾಯುಕ್ತ ಅದಾಲತ್ ಗೆ ಜನರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹದಿನೈದರಷ್ಟು ದೂರುಗಳು ಸಲ್ಲಿಕೆಯಾಗಿವೆ. ಕರ್ನಾಟಕ ಲೋಕಾಯುಕ್ತದ ಪ್ರಭಾರ ಪೊಲೀಸ್ ಅಧೀಕ್ಷಕರಾದ ಕುಮಾರಚಂದ್ರ, ಉಳ್ಳಾಲ ತಾಲೂಕು ದಂಡಾಧಿಕಾರಿ ಪ್ರಶಾಂತ್ ಪಾಟೀಲ್, ಮಂಗಳೂರು ಲೋಕಾಯುಕ್ತ ಪೊಲೀಸ್ ಉಪ ಅಧೀಕ್ಷಕಿ ಗಾನ ಪಿ.ಕುಮಾರ್, ಇನ್ಸ್ ಪೆಕ್ಟರ್ ಭಾರತಿ, ಉಳ್ಳಾಲ ನಗರಸಭೆ ಪ್ರಭಾರ ಪೌರಾಯುಕ್ತ ನವೀನ್ ಹೆಗ್ಡೆ ಲೋಕಾಯುಕ್ತ ಅದಾಲತ್ ನಲ್ಲಿ ಉಪಸ್ಥಿತರಿದ್ದರು.

A major administrative lapse has been alleged in Ullal City Municipality after a Panchayat Development Officer (PDO)-rank official was appointed as in-charge Commissioner without any government notification or order.