ಧರ್ಮಸ್ಥಳ ; 13ನೇ ಪಾಯಿಂಟ್ ಬಗ್ಗೆ ಕುತೂಹಲ, ಅಸ್ಥಿ ಪತ್ತೆಗೆ ಜಿಪಿಆರ್ ಸಾಧನ ಬಳಕೆ ಬಗ್ಗೆ ಚಿಂತನೆ, ಶೋಧ ಕಾರ್ಯ ಮುಂದಕ್ಕೆ ಹಾಕಿದ ಎಸ್ಐಟಿ ಅಧಿಕಾರಿಗಳು

07-08-25 10:29 pm       Mangalore Correspondent   ಕರಾವಳಿ

ಧರ್ಮಸ್ಥಳದಲ್ಲಿ ಹೆಣಗಳನ್ನು ಹೂತಿರುವ ಆರೋಪದ ಪ್ರಕರಣದಲ್ಲಿ ಎಸ್ಐಟಿ ಅಧಿಕಾರಿಗಳು ಈವರೆಗೂ 12 ಪ್ಲಸ್ ಮತ್ತೊಂದು ಒಟ್ಟು 13 ಕಡೆಗಳಲ್ಲಿ ಅಗೆದಿದ್ದು ಇನ್ನೊಂದು ಪಾಯಿಂಟ್ ಅಷ್ಟೇ ಬಾಕಿ ಉಳಿದಿದೆ. ನೇತ್ರಾವತಿ ಸ್ನಾನಘಟ್ಟದ ಬಳಿಯ ಅಣೆಕಟ್ಟಿನ ಸಮೀಪದಲ್ಲೇ ಈ ಪಾಯಿಂಟ್ ಇದ್ದು 13 ಎಂದು ಗುರುತು ಹಾಕಿ ಅಲ್ಲಿ ಪೊಲೀಸರನ್ನು ಕಾವಲು ಹಾಕಲಾಗಿದೆ.

ಮಂಗಳೂರು, ಆ.7 : ಧರ್ಮಸ್ಥಳದಲ್ಲಿ ಹೆಣಗಳನ್ನು ಹೂತಿರುವ ಆರೋಪದ ಪ್ರಕರಣದಲ್ಲಿ ಎಸ್ಐಟಿ ಅಧಿಕಾರಿಗಳು ಈವರೆಗೂ 12 ಪ್ಲಸ್ ಮತ್ತೊಂದು ಒಟ್ಟು 13 ಕಡೆಗಳಲ್ಲಿ ಅಗೆದಿದ್ದು ಇನ್ನೊಂದು ಪಾಯಿಂಟ್ ಅಷ್ಟೇ ಬಾಕಿ ಉಳಿದಿದೆ. ನೇತ್ರಾವತಿ ಸ್ನಾನಘಟ್ಟದ ಬಳಿಯ ಅಣೆಕಟ್ಟಿನ ಸಮೀಪದಲ್ಲೇ ಈ ಪಾಯಿಂಟ್ ಇದ್ದು 13 ಎಂದು ಗುರುತು ಹಾಕಿ ಅಲ್ಲಿ ಪೊಲೀಸರನ್ನು ಕಾವಲು ಹಾಕಲಾಗಿದೆ. ಇಂದು ಅಗೆಯಲಾಗುತ್ತೆ ಎಂದು ಹೇಳಲಾಗಿದ್ದರೂ ಎಸ್ಐಟಿ ಅಧಿಕಾರಿಗಳು ಕೊನೆಯ ಪಾಯಿಂಟ್ ಅಗೆಯುವುದನ್ನು ಮುಂದಕ್ಕೆ ಹಾಕಿದ್ದು ಕುತೂಹಲ ಮೂಡಿಸಿದ್ದಾರೆ.

ಈ ನಡುವೆ, 13ನೇ ಪಾಯಿಂಟ್ ನಲ್ಲಿ ಅಸ್ಥಿಪಂಜರ ಶೋಧಕ್ಕೆ ಜಿಪಿಆರ್ ಸಾಧನ ಬಳಸುತ್ತಾರೆ ಎನ್ನುವ ವದಂತಿ ಸೃಷ್ಟಿಯಾಗಿದೆ. ಎಲ್ಲೆಂದರಲ್ಲಿ ಶೋಧ ನಡೆಸುವ ಬದಲು ನೆಲದಾಳದಲ್ಲಿ ಶವದ ಸಾಕ್ಷ್ಯ ಇದೆಯೇ ಎಂದು ತಿಳಿದುಕೊಳ್ಳುವ ಜಿಪಿಆರ್ ಸಾಧನ ಬಳಸಿಕೊಳ್ಳಬಹುದಲ್ಲವೇ ಎಂದು ದೂರುದಾರನ ವಕೀಲರು ಆಗ್ರಹ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬೆಳ್ತಂಗಡಿಗೆ ಆಗಮಿಸಿರುವ ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಮತ್ತು ಹಿರಿಯ ಅಧಿಕಾರಿಗಳು ತನಿಖೆಗೆ ಜಿಪಿಆರ್ ಸಾಧನ ಬಳಸುವ ಬಗ್ಗೆ ಚರ್ಚೆ ನಡೆಸಿದ್ದಾರೆ.

ಆದರೆ ಜಿಪಿಆರ್ ಸಾಧನ ಅತಿ ಬೆಲೆಯುಳ್ಳದ್ದಾಗಿದ್ದು ಸದ್ಯಕ್ಕೆ ರಾಜ್ಯ ಸರಕಾರದ ಬಳಿಯಿಲ್ಲ. ಅದನ್ನು ಬಳಸಬೇಕೆಂದಿದ್ದರೆ ಖಾಸಗಿ ಕಂಪನಿಗಳಿಂದ ಬಾಡಿಗೆ ಪಡೆಯಬೇಕಷ್ಟೆ. ಆದರೂ ಈ ಸಾಧನದಿಂದ ನಿಖರವಾಗಿ ಭೂಮಿ ಅಡಿಯಲ್ಲಿರುವ ಶವಗಳನ್ನು ಅಥವಾ ಅಸ್ಥಿಪಂಜರವನ್ನು ಪತ್ತೆ ಮಾಡಲು ಸಾಧ್ಯ ಎಂಬುದಕ್ಕೆ ಖಚಿತತೆಯಿಲ್ಲ. ಸಾಮಾನ್ಯವಾಗಿ ಭೂಕುಸಿತದಂತಹ ದುರಂತ ಉಂಟಾದ ಸಂದರ್ಭದಲ್ಲಿ ಶವಗಳನ್ನು ಪತ್ತೆ ಮಾಡಲು, ನೆಲದಡಿಯಲ್ಲಿ ಹುದುಗಿರುವ ಮನೆಗಳನ್ನು ಗುರುತಿಸಲು ಈ ಸಾಧನ ಬಳಸಲಾಗುತ್ತದೆ. ಜೀಯೊಲಾಜಿಕಲ್ ಸರ್ವೆ ತಂಡದವರು ಉತ್ಖನನ ನಡೆಸಬೇಕಾದ ಭೂಮಿಯ ಆಳದಲ್ಲಿ ಏನಿದೆ, ಮಣ್ಣಿನ ಪದರಗಳು ಹೇಗಿವೆ ಎಂದು ತಿಳಿಯಲು ಸಾಧನ ಬಳಸುತ್ತಾರೆ. ಆದರೆ ಮಡ್ಡಿಯಂತಹ ಕೆಸರು ತುಂಬಿದ ಜಾಗದಲ್ಲಿ ಈ ಸಾಧನ ಹೆಚ್ಚು ವರ್ಕ್ ಆಗೋದಿಲ್ಲ ಎನ್ನಲಾಗುತ್ತದೆ.

ಸದ್ಯಕ್ಕೆ ಧರ್ಮಸ್ಥಳ ಬಳಿಯ 13ನೇ ಪಾಯಿಂಟ್ ಎಂದು ಗುರುತಿಸಿರುವ ಜಾಗದ ಸುತ್ತಮುತ್ತ ಹಲವಾರು ಶವಗಳನ್ನು ಹೂತಿದ್ದೇನೆ ಎಂದು ದೂರುದಾರ ಹೇಳಿರುವುದರಿಂದ ನಿಖರವಾಗಿ ಒಂದೇ ಸ್ಥಳದಲ್ಲಿ ಅಗೆಯುವುದಕ್ಕಾಗದು. ಇದಲ್ಲದೆ, ಈ ಜಾಗದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ನದಿಯಿಂದ ಭಾರೀ ಮಣ್ಣು ಬಂದು ಬಿದ್ದಿದ್ದು ಎತ್ತರದ ದಿಬ್ಬದ ರೀತಿ ಇದೆ. ಇಂತಹ ಜಾಗದಲ್ಲಿ ನಿಶ್ಚಿತವಾಗಿ ಅಗೆಯುವುದು ಕಷ್ಟಕರ ಎಂಬ ನೆಲೆಯಲ್ಲಿ ಜಿಪಿಆರ್ ಸಾಧನ ಬಳಸಿದರೆ ಉತ್ತಮವೇ ಎಂದು ಎಸ್ಐಟಿ ಅಧಿಕಾರಿಗಳು ತಜ್ಞರ ಬಳಿ ಮಾಹಿತಿ ಕೇಳಿದ್ದಾರೆ. ತಜ್ಞರು ಯಾವ ರೀತಿಯ ಉತ್ತರ ನೀಡಿದ್ದಾರೆ ಎನ್ನುವುದು ತಿಳಿದುಬಂದಿಲ್ಲ.

ಇದೇ ವೇಳೆ, 13ನೇ ಸ್ಥಳದಲ್ಲಿ ಈ ಹಿಂದಿನಂತೆ ಪ್ಲಾಸ್ಟಿಕ್ ಪರದೆಯಿಂದ ಮುಚ್ಚಲು ಶಾಮಿಯಾನದ ಕಂಬಗಳನ್ನು ತಂದು ಹಾಕಲಾಗಿದೆ. ರಸ್ತೆಯಿಂದ ಕಾಣುವ ರೀತಿಯಲ್ಲೇ ಈ ಪಾಯಿಂಟ್ ಇದ್ದು, ಜನಸಾಮಾನ್ಯರು ಈ ಪಾಯಿಂಟ್ ಬಗ್ಗೆ ಕುತೂಹಲದಿಂದಿದ್ದಾರೆ. ಹೀಗಾಗಿ ಸದ್ಯಕ್ಕೆ 13ನೇ ಪಾಯಿಂಟ್ ಬಗ್ಗೆ ಸ್ಥಳೀಯ ಜನರ ಗಮನ ನೆಟ್ಟಿದೆ. ಈಗಾಗಲೇ 13 ಕಡೆಗಳಲ್ಲಿ ಅಗೆಯಲಾಗಿದ್ದು, ಎರಡು ಕಡೆ ಶವದ ಅಸ್ಥಿಪಂಜರ ಸಿಕ್ಕಿತ್ತು. ಇದರ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರತ್ಯೇಕ ಯುಡಿಆರ್ ಪ್ರಕರಣ ದಾಖಲಿಸಿದ್ದು, ಇದರ ತನಿಖೆಯನ್ನು ಎಸ್ಐಟಿ ತಂಡಕ್ಕೆ ವಹಿಸಲಾಗಿದೆ.

In the high-profile investigation into the alleged burial of human remains in Dharmasthala, SIT officers have so far excavated 12 locations along with one additional site, totaling 13 identified points. Only one point—labeled the "13th point"—remains unexcavated. This spot is located near a barrage adjacent to the Netravathi river's public bathing ghat and has been cordoned off under police watch.