ಬ್ರೇಕಿಂಗ್ ನ್ಯೂಸ್
01-08-25 09:38 pm Giridhar Shetty, Mangaluru ಕರಾವಳಿ
ಮಂಗಳೂರು, ಆಗಸ್ಟ್ 1: ಬಡ ಕುಟುಂಬದಲ್ಲಿ ತಂದೆಗೆ ಒಬ್ಬನೇ ಮಗನಾಗಿ ಹುಟ್ಟಬಾರದು ಎಂದು ಕೆಲವರು ಹೇಳುವುದುಂಟು. ಯಾಕಂದ್ರೆ, ವಿಧಿ ಕೈಕೊಟ್ಟರೆ, ಅಚಾನಕ್ಕಾಗಿ ತೊಂದರೆಗೀಡಾಗಿ ಸೋತು ಹೋದರೆ ಯಾರೂ ಹತ್ತಿರ ಸುಳಿಯುವುದಿಲ್ಲ. ಅಣ್ಣ ತಮ್ಮಂದಿರು, ಅಕ್ಕ ತಂಗಿಯರಂತೂ ಇರೋದಿಲ್ಲ. ಯಾರೂ ಇಲ್ಲದೆ ಹೋದಾಗ ಸಂಬಂಧಿಕರು, ಗೆಳೆಯರು ಕೂಡ ದೂರ ಸರಿಯುತ್ತಾರೆ. ಇಲ್ಲೊಂದು ಕುಟುಂಬ ಇಂಥದ್ದೇ ದುಸ್ಥಿತಿ ಅನುಭವಿಸುತ್ತಿದ್ದು, ಸಂಬಂಧಿಕರು, ಊರವರೆಲ್ಲ ತಮಗೂ ಅದಕ್ಕೂ ಸಂಬಂಧ ಇಲ್ಲವೆಂದು ಕೈಬಿಟ್ಟಿದ್ದರಿಂದ ಇಡೀ ಕುಟುಂಬ ದಿಕ್ಕೆಟ್ಟು ಹೋಗಿದೆ. ಬಂಟ್ವಾಳ ತಾಲೂಕಿನ ಲೊರೆಟ್ಟೋಪದವಿನ ಕ್ರಿಶ್ಚಿಯನ್ ಗೆಳೆಯರು ಬಡವರಿಗೆ ಸಹಾಯ ಮಾಡೋದು ಮನುಷ್ಯ ಧರ್ಮ ಎನ್ನುವ ನೆಲೆಯಲ್ಲಿ ಹಿಂದು ಕುಟುಂಬಕ್ಕೆ ನೆರವಿನ ಹಸ್ತ ಚಾಚಿದ್ದಾರೆ.
ಬಂಟ್ವಾಳ ತಾಲೂಕಿನ ಲೊರೆಟ್ಟೋಪದವು ಬಳಿಯ ಆಚಾರಿಪಲ್ಕೆ ನಿವಾಸಿ ಕೃಷ್ಣ ಆಚಾರಿ ಎಂಬವರ ಕುಟುಂಬದ ದುರಂತ ಕತೆಯಿದು. 41 ವರ್ಷದ ಕೃಷ್ಣ ಅವರು ಗ್ಲಾಸ್ ಫ್ಯಾಬ್ರಿಕೇಶನ್ ವೃತ್ತಿ ಮಾಡಿಕೊಂಡಿದ್ದವರು. ಕಳೆದ 2024ರ ಆಗಸ್ಟ್ ತಿಂಗಳಲ್ಲಿ ಕೆಲಸದ ನಿಮಿತ್ತ ಬೈಕಿನಲ್ಲಿ ತೆರಳುತ್ತಿದ್ದಾಗ ಕೊಣಾಜೆ ಬಳಿಯಲ್ಲಿ ಎದುರಿನಿಂದ ಬರುತ್ತಿದ್ದ ಬೈಕ್ ಅತಿ ವೇಗವಾಗಿ ಬಂದು ಡಿಕ್ಕಿಯಾಗಿತ್ತು. ಇದರಿಂದ ತನ್ನ ಬೈಕ್ ಸಹಿತ ಕೃಷ್ಣ ಅವರು ರಸ್ತೆಯಲ್ಲಿ ಎಳ್ಕೊಂಡು ಹೋಗಿ ಬಿದ್ದು ಸೊಂಟ, ಬೆನ್ನು, ಕೈಕಾಲಿಗೆ ತೀವ್ರ ಗಾಯಗೊಂಡಿದ್ದರು. ದೇರಳಕಟ್ಟೆ ಯೇನಪೋಯ ಆಸ್ಪತ್ರೆಯಲ್ಲಿ ಎರಡು ದಿನ ಇರಿಸಿ, ಮೊಣ ಕಾಲಿಗೆ ಆಪರೇಶನ್ ಮಾಡುವುದಕ್ಕೆ 5 ಲಕ್ಷ ಆಗುತ್ತೆ ಎಂದಿದ್ದಕ್ಕೆ ಇವರಲ್ಲಿ ಹಣ ಇಲ್ಲವೆಂದು ಆನಂತರ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಂಗಳೂರು ವೆನ್ಲಾಕ್ ಜಿಲ್ಲಾಸ್ಪತ್ರೆಗೆ ಹಾಕಿದ್ದರೂ, ಅಲ್ಲಿ ಸರಿಯಾದ ಚಿಕಿತ್ಸೆ ಸಿಗಲಿಲ್ಲ. ಸಂಬಂಧಿಕರಾಗಲೀ, ಆಸುಪಾಸಿನವರಾಗಲೀ ಹತ್ತಿರ ಬರಲಿಲ್ಲ. ಸ್ಥಳೀಯ ರಾಜಕೀಯ ಮುಖಂಡರಿಗೆ ಹೇಳಿದರೂ, ಸರಿಯಾದ ಸ್ಪಂದನೆ ಮಾಡದ್ದರಿಂದ ಕೃಷ್ಣ ಅವರ ಕುಟುಂಬಕ್ಕೆ ಶೋಚನೀಯ ಸ್ಥಿತಿಯಾಗಿತ್ತು. ಎದ್ದು ಕೂರಲಾಗದೆ, ಬೆಡ್ಡಿನಲ್ಲಿ ಮಲಗಿಕೊಂಡೇ ಇದ್ದ ಅವರನ್ನು ಏಳು ತಿಂಗಳ ಕಾಲ ಆಸ್ಪತ್ರೆಯಲ್ಲಿ ಇರಿಸಿದ್ದರು. ಕೊನೆಗೆ ಶಸ್ತ್ರಚಿಕಿತ್ಸೆ ನೆಪದಲ್ಲಿ ಕಾಲಿಗೆ ರಾಡ್ ಹಾಕಿ ಮನೆಗೆ ಕಳಿಸಿದ್ದರು. ಸಕಾಲದಲ್ಲಿ ಶಸ್ತ್ರಚಿಕಿತ್ಸೆ ಆಗದಿರುವುದು, ವೆನ್ಲಾಕ್ ವೈದ್ಯರು ನಿರ್ಲಕ್ಷ್ಯ ಮಾಡಿದ್ದು ಕೃಷ್ಣ ಅವರ ಸ್ಥಿತಿಯನ್ನು ಬಿಗಡಾಯಿಸಿದೆ. ಆನಂತರ, ಮನೆಗೆ ಬಂದು ಔಷಧಿ ಕುಡಿಯುತ್ತಿದ್ದರೂ ಕೃಷ್ಣ ಅವರಿಗೆ ಈಗಲೂ ಎದ್ದು ಕೂರಲಾಗುತ್ತಿಲ್ಲ. ನೆಲದಲ್ಲೇ ಹರಿದಾಡಿಕೊಂಡು ಹೋಗಬೇಕಾದ ಸ್ಥಿತಿ. ಈಗ ವಾರಕ್ಕೊಮ್ಮೆ ಫಿಸಿಯೋಥೆರಪಿಗೆ ಬರಲು ಹೇಳುತ್ತಿದ್ದಾರೆ, ಆದರೆ ಬಂಟ್ವಾಳದಿಂದ ಮಂಗಳೂರಿಗೆ ಆಟೋ ಅಥವಾ ಕಾರು ಮಾಡಿಕೊಂಡು ಬರಲು ದುಡ್ಡಿಲ್ಲ. ಪತ್ನಿ ವಸಂತಿ ಬೀಡಿ ಕಟ್ಟುತ್ತಿದ್ದಾರೆ. ಇಬ್ಬರು ಮಕ್ಕಳಿದ್ದು ಒಬ್ಬ ಏಳನೇ ತರಗತಿ, ಇನ್ನೊಬ್ಬ ಎರಡನೇ ತರಗತಿ ಓದುತ್ತಿದ್ದಾರೆ. ಇವರ ದೈನೇಸಿ ಸ್ಥಿತಿ ಕಂಡು ಅಪಘಾತದ ತನಿಖೆಗೆ ಬಂದಿದ್ದ ಕೋಣಾಜೆ ಠಾಣೆಯ ಎಸ್ಐ ಒಬ್ಬರು ಮಕ್ಕಳ ಶಾಲೆಯ ಖರ್ಚನ್ನು ಭರಿಸಿದ್ದಾರಂತೆ. ಅಪಘಾತದ ಬಗ್ಗೆ ಕೇಸು ಆಗಿದ್ದರೂ, ಬೈಕ್ ಇನ್ಶೂರೆನ್ಸ್ ಒಂದು ವಾರದ ಮೊದಲು ಮುಗಿದಿದ್ದರಿಂದ ಅದೂ ಉಪಯೋಗಕ್ಕೆ ಬಂದಿಲ್ಲ.
ಕೃಷ್ಣ ಅವರ ಕುಟುಂಬ ಊಟಕ್ಕೂ ಪರದಾಡಬೇಕಾದ ಸ್ಥಿತಿಯಲ್ಲಿದೆ. ಇದನ್ನರಿತ ಹಳೆಯ ಗೆಳೆಯ ಲೊರೆಟ್ಟೋಪದವಿನ ಪೌಲ್ ಡಿಸೋಜ ಎಂಬವರು ಕಳೆದ ಕೆಲವು ತಿಂಗಳಿನಿಂದ ಈ ಕುಟುಂಬಕ್ಕೆ ಆಸರೆಯಾಗಿ ನಿಂತಿದ್ದಾರೆ. ಲೊರೆಟ್ಟೋಪದವು ಚರ್ಚ್ ನವರಿಗೆ ಹೇಳಿ ಸ್ವಲ್ಪ ಧನ ಸಹಾಯವನ್ನೂ ಮಾಡಿಸಿದ್ದಾರೆ. ಅಲ್ಲದೆ, ಪ್ರತಿ ತಿಂಗಳು ಮನೆಗೆ ಬೇಕಾದ ದಿನಸಿ ವಸ್ತುಗಳನ್ನು ಬಿಸಿ ರೋಡ್ ಬೈಪಾಸ್ ಬಳಿಯ ಕ್ರಿಸ್ಟಲ್ ಫ್ಲೈವುಡ್ ಸಂಸ್ಥೆಯ ಮಾಲಕ ಪ್ರಕಾಶ್ ವಾಝ್ ನೀಡುತ್ತಿದ್ದಾರೆ. ಕೃಷ್ಣ ಅವರು ಹಿಂದೆ ಗ್ಲಾಸ್ ಫ್ಯಾಬ್ರಿಕೇಶನ್ ವರ್ಕ್ ಮಾಡುತ್ತಿದ್ದಾಗ ಕ್ರಿಸ್ಟಲ್ ಸಂಸ್ಥೆಗೂ ಫ್ಲೈವುಡ್, ಗ್ಲಾಸ್ ವರ್ಕ್ ಮಾಡಿಕೊಡುತ್ತಿದ್ದರು. ಕೃಷ್ಣ ಆಚಾರಿಯವರು ತನಗೆ ಯಾರೂ ದಿಕ್ಕಿಲ್ಲ, ಸಂಬಂಧಿಕರು ಯಾರೂ ಸಹಾಯಕ್ಕೆ ಬರುತ್ತಿಲ್ಲ ಎಂದು ಅಲವತ್ತುಕೊಂಡಿದ್ದರಿಂದ ಪ್ರಕಾಶ್ ವಾಝ್ ದಿನಕ್ಕೆಷ್ಟು ಬೇಕಾಗುತ್ತೋ ಅಕ್ಕಿ ದಿನಸಿ ಸಾಮಗ್ರಿಗಳನ್ನು ಗೊತ್ತುಪಡಿಸಿದ ಅಂಗಡಿಯಿಂದ ತೆಗೆದುಕೊಂಡು ಹೋಗಲು ಸೂಚಿಸಿದ್ದು, ಪ್ರತಿ ತಿಂಗಳು ಅಲ್ಲಿನ ಬಿಲ್ಲನ್ನು ಪಾವತಿ ಮಾಡುತ್ತಿದ್ದಾರೆ.
ಕೃಷ್ಣ ಅವರ ಮನೆಯ ಸ್ಥಿತಿ ನೋಡಿದರೆ ಕನಿಕರ ಬರುತ್ತದೆ. ಎಷ್ಟು ಕಷ್ಟವಾದರೂ ಸ್ವಂತ ಮನೆ ಕಟ್ಟಿಸಬೇಕು ಹಂಬಲದಿಂದ ಎಂಟು ವರ್ಷಗಳ ಹಿಂದೆ ಕುಮ್ಕಿ ಜಾಗದಲ್ಲಿ ಮನೆಯ ನಿರ್ಮಾಣಕ್ಕೆ ತೊಡಗಿದ್ದರು. ಆದರೆ ಬೆನ್ನು ಬೆನ್ನಿಗೆ ಎದುರಾದ ಕಷ್ಟಗಳಿಂದಾಗಿ ಮನೆಯ ಕೆಲಸ ಪೂರ್ತಿಗೊಂಡಿಲ್ಲ. ಐದು ವರ್ಷಗಳಿಂದ ಗೋಡೆಯಷ್ಟೇ ಕಟ್ಟಿ ಬಿಟ್ಟಿದ್ದ ಮನೆಗೆ ಮೇಲ್ಭಾಗಕ್ಕೆ ಶೀಟ್ ಹಾಕಿ, ಇನ್ನು ಬಾಡಿಗೆ ಮನೆ ವಾಸ ಸಾಕು ಎಂದು ಅದರಲ್ಲೇ ಪತ್ನಿ ಮಕ್ಕಳೊಂದಿಗೆ ನೆಲೆಸಿದ್ದರು. ನಿಧಾನಕ್ಕೆ ಮನೆಯ ಕೆಲಸ ಪೂರ್ತಿಗೊಳಿಸಬೇಕೆಂದು ದುಡಿಯುತ್ತಿದ್ದಾಗಲೇ ವರ್ಷದ ಹಿಂದೆ ಅಪಘಾತಕ್ಕೀಡಾಗಿ ಮೂಲೆ ಸೇರಿದ್ದರು. ಈಗ ಜೋರು ಮಳೆಗೆ ಮನೆ ಸೋರುತ್ತದೆ. ಕಿಟಕಿಯಿಲ್ಲದೆ ಗಾಳಿಗೆ ಮಳೆ ನೀರು ಒಳಗೆ ಹರಿಯುತ್ತದೆ.
ಈ ಬಗ್ಗೆ ವಿಷಯ ತಿಳಿದ ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ಮೋಹನದಾಸ್ ಮರಕಡ, ವಿಶ್ವಕರ್ಮ ಸಮಾಜದ ಬಂಧುಗಳಲ್ಲಿ ಸಹಾಯ ಕೇಳಿದ್ದಾರೆ. ಕೆಲವರು ಮನೆ ಕಟ್ಟಲು ಸಹಾಯ ನೀಡೋಣ ಎಂದಿದ್ದಾರಂತೆ. ಆದರೆ ಬಡತನ, ಅಪಘಾತಕ್ಕೀಡಾಗಿ ಕೈಕಾಲು ಸ್ವಾಧೀನ ಕಳಕೊಂಡು ಮೂಲೆ ಸೇರಿದ ಕೃಷ್ಣ ಆಚಾರ್ಯ ಅವರ ಬಳಿಗೆ ಯಾರೂ ಬರುತ್ತಿಲ್ಲ. ವೈದ್ಯರ ಎಡವಟ್ಟಿನಿಂದಾಗಿ ಸಕಾಲದಲ್ಲಿ ಚಿಕಿತ್ಸೆ ಸಿಗದೆ ಪಡಬಾರದ ಕಷ್ಟ ಅನುಭವಿಸುತ್ತಿದ್ದಾರೆ. ವೆನ್ಲಾಕ್ ವೈದ್ಯರು ಕಾಲಿಗೆ ಹಾಕಿರುವ ರಾಡ್ ತೆಗೆಯಬೇಕು, ಅದಕ್ಕಾಗಿ ಮತ್ತೆ ಶಸ್ತ್ರಚಿಕಿತ್ಸೆ ನಡೆಸಬೇಕು ಎಂದಿದ್ದಾರಂತೆ. ಅದರ ನಂತರವಾದರೂ ಮತ್ತೆ ಎದ್ದು ನಡೆಯಬಹುದೇ ಎನ್ನುವುಕ್ಕೆ ಖಾತರಿ ಇಲ್ಲ. ಇದರ ಜೊತೆಗೆ, ಮತ್ತೆ ಆಸ್ಪತ್ರೆ ಸೇರಬೇಕಿದ್ದರೆ ಹಣದ ಅಗತ್ಯವಿದೆ.
ರಾಜಕೀಯ ನಾಯಕರು ಮನಸ್ಸು ಮಾಡಿದರೆ ಸಿಎಂ ಪರಿಹಾರ ನಿಧಿಯಿಂದ ಬಡ ಕುಟುಂಬಕ್ಕೆ ನೆರವು ಕೊಡಿಸಬಹುದಿತ್ತು. ಸದ್ಯಕ್ಕೆ ಯಾರೂ ದಿಕ್ಕಿಲ್ಲದೆ ಸಂಕಷ್ಟದಲ್ಲಿದ್ದ ಬಡ ಕುಟುಂಬಕ್ಕೆ ಕ್ರಿಶ್ಚಿಯನ್ ಗೆಳೆಯರು ನೆರವಿಗೆ ನಿಂತಿದ್ದಾರೆ. ಆಗಿಂದಾಗ್ಗೆ ಕೋಮು ದ್ವೇಷ ಕದಡುವ ಊರಿನಲ್ಲಿ ಮನುಷ್ಯ ಧರ್ಮ ದೊಡ್ಡದು ಎಂದು ಸಂದೇಶ ಸಾರುವ ಕೆಲಸ ಮಾಡಿದ್ದಾರೆ. ಯಾರದ್ದೂ ನೆರವು ಸಿಗದೆ ಸೋತು ಹೋಗಿರುವ ಈ ಕುಟುಂಬಕ್ಕೆ ಸಹೃದಯರು ಒಂಚೂರು ಸಹಾಯ ಮಾಡಿದರೆ ನೆಲದತ್ತ ಬಗ್ಗಿರುವ ಕೃಷ್ಣ ಅವರ ಕುಟುಂಬ ಸ್ವಲ್ಪ ಎದ್ದು ಕುಳಿತುಕೊಳ್ಳಬಹುದು.
ಕೃಷ್ಣ ಆಚಾರ್ಯ ಅವರ ಬ್ಯಾಂಕ್ ಖಾತೆ ಹೀಗಿದೆ ;
KRISHNA,
Account number: 520101256823698
Union Bank, Bantwala Branch,
IFSC code: UBIN0902047
ಮಾಹಿತಿಗೆ: 9901319694, 9482159848
A heartbreaking story has emerged from Achari Palkhe near Lorettopadavu in Bantwal taluk, where a once self-reliant man is now confined to the floor, paralyzed and struggling to survive—abandoned by relatives, failed by doctors, and ignored by society. What stands out is the selfless support extended by Christian friends, who have become the only ray of hope for this struggling Hindu family.
01-08-25 11:34 pm
Mangaluru Correspondent
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
ಧರ್ಮ 'ಸ್ಥಳ' ಕೇಸ್ ; ಪಾಯಿಂಟ್ ನಂ.1ರಲ್ಲಿ ಸಿಕ್ಕ...
01-08-25 01:31 pm
01-08-25 10:48 pm
HK News Desk
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
01-08-25 10:02 pm
Mangalore Correspondent
Mangalore News; ಕನಸು ಕಮರಿಸಿದ ಅಪಘಾತ ; ವೈದ್ಯರ ಎ...
01-08-25 09:38 pm
Mangalore Ammonia Leak, Baikampady: ಬೈಕಂಪಾಡಿ...
01-08-25 11:45 am
ಬಂಟ್ವಾಳ ಪಿಎಸ್ಐ ಕೀರಪ್ಪ ಕಾಂಬಳೆ ಆತ್ಮಹತ್ಯೆ ಪ್ರಕರಣ...
31-07-25 11:16 pm
MCC Bank to Inaugurate 20th Branch in Byndoor...
31-07-25 10:14 pm
01-08-25 05:05 pm
Mangalore Correspondent
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm
Tumakuru Crime, Principal Arrest: ತುಮಕೂರು ; ಹ...
01-08-25 02:31 pm
Mangalore Crime, Police: ಅಪ್ರಾಪ್ತ ಬಾಲಕಿಯನ್ನು...
31-07-25 06:04 pm
Bangalore Cyber Fraud: ಉದ್ಯೋಗಿಯನ್ನ ನಂಬಿ ಲ್ಯಾಪ...
30-07-25 10:42 pm