ಕೇರಳ ಮಾಜಿ ಮುಖ್ಯಮಂತ್ರಿ, ಶತಾಯುಷಿ, ಸಿಪಿಎಂ ಸ್ಥಾಪಕ ವಿ.ಎಸ್ ಅಚ್ಯುತಾನಂದನ್ ಇನ್ನು ನೆನಪು ಮಾತ್ರ.. 

21-07-25 11:23 pm       HK News Desk   ದೇಶ - ವಿದೇಶ

ಕೇರಳ ಮಾಜಿ ಮುಖ್ಯಮಂತ್ರಿ, ಶತಾಯುಷಿ ಮತ್ತು ಕಮ್ಯುನಿಸ್ಟ್ ಪಕ್ಷದ ಖ್ಯಾತ ನಾಯಕ ವಿ.ಎಸ್. ಅಚ್ಯುತಾನಂದನ್(101) ಸೋಮವಾರ ನಿಧನರಾಗಿದ್ದಾರೆ. ಕಳೆದ ಜೂನ್ 23 ರಂದು ಬೆಳಗ್ಗೆ ಹೃದಯಾಘಾತಕ್ಕೀಡಾಗಿದ್ದ 101 ವರ್ಷದ ಅಚ್ಯುತಾನಂದನ್ ಅವರನ್ನು ತಿರುವನಂತಪುರದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ತಿರುವನಂತಪುರಂ, ಜುಲೈ 21 : ಕೇರಳ ಮಾಜಿ ಮುಖ್ಯಮಂತ್ರಿ, ಶತಾಯುಷಿ ಮತ್ತು ಕಮ್ಯುನಿಸ್ಟ್ ಪಕ್ಷದ ಖ್ಯಾತ ನಾಯಕ ವಿ.ಎಸ್. ಅಚ್ಯುತಾನಂದನ್(101) ಸೋಮವಾರ ನಿಧನರಾಗಿದ್ದಾರೆ. ಕಳೆದ ಜೂನ್ 23 ರಂದು ಬೆಳಗ್ಗೆ ಹೃದಯಾಘಾತಕ್ಕೀಡಾಗಿದ್ದ 101 ವರ್ಷದ ಅಚ್ಯುತಾನಂದನ್ ಅವರನ್ನು ತಿರುವನಂತಪುರದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

2019 ರಲ್ಲಿ ಪಾರ್ಶ್ವವಾಯುವಿಗೆ ಒಳಗಾದ ನಂತರ ಹಾಸಿಗೆ ಹಿಡಿದಿದ್ದ ಅಚ್ಯುತಾನಂದನ್ ಅವರಿಗೆ ಇತ್ತೀಚಿಗೆ ಹೃದಯಾಘಾತ ಸಂಭವಿಸಿ ಉಸಿರಾಟದ ತೊಂದರೆ ಉಂಟಾಗಿತ್ತು. ಹೀಗಾಗಿ ಅವರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು.

ಭಾರತದ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ) ಸ್ಥಾಪಕರಲ್ಲಿ ಓರ್ವರಾದ ವಿ.ಎಸ್. ಅಚ್ಯುತಾನಂದನ್ ಕಳೆದ ಅಕ್ಟೋಬರ್‌ನಲ್ಲಿ 101 ವರ್ಷಕ್ಕೆ ಕಾಲಿಟ್ಟಿದ್ದರು. 1964 ರಲ್ಲಿ ನಡೆದ ಐತಿಹಾಸಿಕ ಸಿಪಿಐ ರಾಷ್ಟ್ರೀಯ ಮಂಡಳಿ ಸಭೆಯಿಂದ ಹೊರನಡೆದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಸ್ಥಾಪಿಸಿದ್ದರು. ಅಚ್ಯುತಾನಂದನ್ ಕೇರಳ ರಾಜಕಾರಣದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ವ್ಯಕ್ತಿ. ಏಳು ಬಾರಿ ಶಾಸಕರಾಗಿದ್ದ ಅವರು, 2006ರಿಂದ 2011ರ ವರೆಗೆ ಕೇರಳ ಮುಖ್ಯಮಂತ್ರಿಯಾಗಿದ್ದರು. ತಮ್ಮ ರಾಜಕೀಯ ಜೀವನದಲ್ಲಿ ಅವರು ಒಟ್ಟು 10 ಚುನಾವಣೆಗಳನ್ನು ಎದುರಿಸಿದ್ದಾರೆ.

ಅಕ್ಟೋಬರ್ 20, 1923 ರಂದು ಶಂಕರನ್ ಮತ್ತು ಅಕ್ಕಮ್ಮ ದಂಪತಿ ಮಗನಾಗಿ ಜನಿಸಿದ ವಿಎಸ್, ನಾಲ್ಕನೇ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡರು. ನಂತರ ಕಷ್ಟಕರ ಬಾಲ್ಯವನ್ನು ಕಳೆದ ವಿಎಸ್, ಟೈಲರಿಂಗ್ ಅಂಗಡಿಯಲ್ಲಿ ತಮ್ಮ ಸಹೋದರನಿಗೆ ಸಹಾಯ ಮಾಡಲು ತೊಡಗಿದ್ದರು. ನಂತರ ತೆಂಗಿನಕಾಯಿ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದ್ದರು. ಅಲ್ಲಿರುವಾಗಲೇ ಪಿ ಕೃಷ್ಣ ಪಿಳ್ಳೈ ಅವರಿಂದ ರಾಜಕೀಯ ಚಳುವಳಿಗೆ ಪಾದಾರ್ಪಣೆ ಮಾಡಿದ್ದರು, 1938 ರಲ್ಲಿ ಕುಟ್ಟನಾಡಿನಲ್ಲಿ ಕೃಷಿ ಕಾರ್ಮಿಕರನ್ನು ಸಂಘಟಿಸುವ ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿದವರು ಆನಂತರ ಹಿಂತಿರುಗಿ ನೋಡಿದ್ದೇ ಇಲ್ಲ.‌ ಸೌಮ್ಯ ಮತ್ತು ಸರಳ ಸ್ವಭಾವ, ಅದೇ ರೀತಿಯ ಎಲ್ಲರೊಂದಿಗಿನ ಒಡನಾಟ ಅವರನ್ನು ಮುಖ್ಯಮಂತ್ರಿ ಪದವಿಗೇರಿಸಿತ್ತು.‌

Former Kerala chief minister and veteran CPM leader V S Achuthanandan passed away at the age of 101, the Communist Party of India (Marxist) said on Monday.