ಕ್ಯೂನಲ್ಲಿ ಬನ್ನಿ ಎಂದಿದ್ದಕ್ಕೆ  ಮತದಾರನಿಗೆ ಶಾಸಕ ಕಪಾಳಮೋಕ್ಷ ; ವಿಐಪಿ ಸಂಸ್ಕೃತಿ ಪ್ರದರ್ಶಿಸಲು ಹೊರಟ ಶಾಸಕನಿಗೂ ಬಿತ್ತು ಬಿಸಿ ಬಿಸಿ ಕಜ್ಜಾಯ  

14-05-24 02:17 pm       HK News Desk   ದೇಶ - ವಿದೇಶ

ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ ಮತ್ತು ಲೋಕಸಭಾ ಚುನಾವಣೆಯ 4ನೇ ಹಂತದ ಮತದಾನ ಚಾಲ್ತಿಯಲ್ಲಿರುವಂತೆಯೇ ಅತ್ತ ಆಂಧ್ರ ಪ್ರದೇಶದಲ್ಲಿ ಮತದಾರನೋರ್ವ ಸರತಿ ಸಾಲಲ್ಲಿ ನಿಲ್ಲದ ಶಾಸಕನಿಗೇ ಕಪಾಳಮೋಕ್ಷ ಮಾಡಿರುವ ಘಟನೆ ವರದಿಯಾಗಿದೆ.

ಹೈದರಾಬಾದ್, ಮೇ 14: ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ ಮತ್ತು ಲೋಕಸಭಾ ಚುನಾವಣೆಯ 4ನೇ ಹಂತದ ಮತದಾನ ಚಾಲ್ತಿಯಲ್ಲಿರುವಂತೆಯೇ ಅತ್ತ ಆಂಧ್ರ ಪ್ರದೇಶದಲ್ಲಿ ಮತದಾರನೋರ್ವ ಸರತಿ ಸಾಲಲ್ಲಿ ನಿಲ್ಲದ ಶಾಸಕನಿಗೇ ಕಪಾಳಮೋಕ್ಷ ಮಾಡಿರುವ ಘಟನೆ ವರದಿಯಾಗಿದೆ.

ಮತಗಟ್ಟೆಯಲ್ಲಿಯೂ ವಿಐಪಿ ಸಂಸ್ಕೃತಿ ಪ್ರದರ್ಶಿಸಲು ಹೊರಟ ಶಾಸಕ, ಮತದಾರನ ಜತೆ ಕಿತ್ತಾಡಿದ ಘಟನೆ ಆಂಧ್ರ ಪ್ರದೇಶದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.

ಗುಂಟೂರು ಜಿಲ್ಲೆಯ ಮತಗಟ್ಟೆಯೊಂದರಲ್ಲಿ ಸರದಿ ಸಾಲು ತಪ್ಪಿಸಿಕೊಂಡು ಬಂದ ಶಾಸಕನ ವರ್ತನೆಗೆ ಮತದಾರರೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಕುಪಿತಗೊಂಡ ಶಾಸಕ, ಆ ಮತದಾರನ ಕೆನ್ನೆಗೆ ಬಾರಿಸಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ತೆನಾಲಿ ಕ್ಷೇತ್ರದ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಶಾಸಕ ಎ ಶಿವಕುಮಾರ್ ಹಾಗೂ ಅವರ ಬೆಂಬಲಿಗರು ಮತಗಟ್ಟೆಯಲ್ಲಿಯ ದುಂಡಾವರ್ತನೆ ತೋರಿದ್ದಾರೆ. ಮತದಾರನ ಬಳಿ ತೆರಳಿದ ಶಿವಕುಮಾರ್, ಅವರ ಮುಖದ ಮೇಲೆ ಹೊಡೆದಿದ್ದಾರೆ. ಕೂಡಲೇ ಆ ಮತದಾರ ಶಾಸಕರಿಗೆ ತಿರುಗಿ ಕಪಾಳಮೋಕ್ಷ ಮಾಡಿದ್ದಾರೆ. ಈ ವೇಳೆ ಶಾಸಕರ ಜತೆಗಿದ್ದ ಬೆಂಬಲಿಗರು ಮತದಾರನ ಮೇಲೆ ಮುಗಿಬಿದ್ದು ಹಿಗ್ಗಾಮುಗ್ಗಾ ಥಳಿಸಿ ಅಮಾನುಷವಾಗಿ ವರ್ತಿಸಿದ್ದಾರೆ. ಸರದಿ ಸಾಲಿನಲ್ಲಿ ನಿಂತಿದ್ದ ಇತರೆ ಮತದಾರರು ವ್ಯಕ್ತಿ ಮೇಲಿನ ಹಲ್ಲೆಯನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆದರೆ ಎಂಎಲ್‌ಎ ಬೆಂಬಲಿಗರು ದಾಳಿ ಮುಂದುವರಿಸಿದ್ದಾರೆ.

ವೈರಲ್ ಆಗಿರುವ 10 ಸೆಕೆಂಡುಗಳ ವಿಡಿಯೋದಲ್ಲಿ ಮತದಾರನನ್ನು ರಕ್ಷಿಸಲು ಯಾವುದೇ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶ ಮಾಡುವುದು ಕಾಣಿಸಿಲ್ಲ.

ಕೈಕೈ ಮಿಲಾಯಿಸುವ ಘಟನೆಗೆ ನಿಜವಾದ ಕಾರಣ ಏನು ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ಮತದಾರನ ಮೇಲೆ ಕೈ ಮಾಡಿದ ಶಾಸಕನ ದುರ್ವರ್ತನೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಹಾಲಿ ಅಭ್ಯರ್ಥಿಯೂ ಆಗಿರುವ ಅನ್ನಬಾತುನಿ ಶಿವಕುಮಾರ್, ಮತದಾರರ ಸರತಿ ಸಾಲಿನಲ್ಲಿ ನಿಲ್ಲದೆ, ನೇರವಾಗಿ ಮತಗಟ್ಟೆ ಒಳಗೆ ಹೋಗಿ ಮತಚಲಾಯಿಸಲು ಪ್ರಯತ್ನಿಸಿದ್ದರು. ಇದನ್ನು ಆ ಮತದಾರ ಪ್ರಶ್ನಿಸಿದ್ದರು ಎನ್ನಲಾಗಿದೆ.

ಆಂಧ್ರ ಪ್ರದೇಶದಲ್ಲಿ ಲೋಕಸಭೆ ಚುನಾವಣೆ ಜತೆಗೆ ವಿಧಾನಸಭೆಗೂ ಚುನಾವಣೆ ನಡೆಯುತ್ತಿದೆ. 25 ಸಂಸತ್ ಹಾಗೂ 175 ವಿಧಾನಸಭೆ ಕ್ಷೇತ್ರಗಳಲ್ಲಿ ಮತದಾನ ಜರುಗುತ್ತಿದೆ. ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಪಕ್ಷವು ಮರು ಆಯ್ಕೆಗೆ ಬಯಸಿದ್ದರೆ, ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವ ಎನ್ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಮತ್ತು ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷದ ಮೈತ್ರಿಕೂಟ ಪ್ರಬಲ ಪೈಪೋಟಿ ನಿರೀಕ್ಷೆಯಲ್ಲಿದೆ. ಕಾಂಗ್ರೆಸ್ ಕೂಡ ತನ್ನ ಅಸ್ತಿತ್ವ ಮರಳಿ ಕಂಡುಕೊಳ್ಳುವ ಉತ್ಸಾಹದಲ್ಲಿದೆ.

Violent clashes marred the simultaneous assembly and Lok Sabha polls held in Andhra Pradesh on Monday, with an MLA slapping a voter, stone pelting between party workers, and a TDP MLA's three cars destroyed at a polling station, among other incidents.