ಐಟಿ ನಗರಿ ಬೆಂಗಳೂರು 'ಸೈಬರ್​ ಕ್ರೈಮ್​' ಕ್ಯಾಪಿಟಲ್ ; ದೇಶದಲ್ಲೇ ಅತಿ ಹೆಚ್ಚು ಸೈಬರ್ ಕೇಸು ದಾಖಲು, ವಿದ್ಯಾವಂತರೇ ಆಗುತ್ತಿದ್ದಾರೆ ಬಕ್ರಾ! ಮೋಸಕ್ಕೆ ಬಲಿಯಾಗದಿರಲು ಈ ಸೂಚನೆ ಪಾಲಿಸಿ.. 

03-10-25 06:08 pm       Bangalore Correspondent   ಕರ್ನಾಟಕ

ಭಾರತದ ಸಿಲಿಕಾನ್ ವ್ಯಾಲಿ, ಐಟಿ ನಗರಿ ಎಂಬ ಹೆಸರು ಗಳಿಸಿರುವ ಬೆಂಗಳೂರು ನಗರದಲ್ಲಿ 2023ರಲ್ಲಿ ದೇಶದಲ್ಲೇ ಅತಿ ಹೆಚ್ಚು ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿರುವ 2023ರ ಸೈಬರ್ ಅಪರಾಧಗಳ ದತ್ತಾಂಶದಲ್ಲಿ ಈ ಮಾಹಿತಿಯಿದ್ದು, ಪಟ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದೆ.

ಬೆಂಗಳೂರು, ಅ.3 : ಭಾರತದ ಸಿಲಿಕಾನ್ ವ್ಯಾಲಿ, ಐಟಿ ನಗರಿ ಎಂಬ ಹೆಸರು ಗಳಿಸಿರುವ ಬೆಂಗಳೂರು ನಗರದಲ್ಲಿ 2023ರಲ್ಲಿ ದೇಶದಲ್ಲೇ ಅತಿ ಹೆಚ್ಚು ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿರುವ 2023ರ ಸೈಬರ್ ಅಪರಾಧಗಳ ದತ್ತಾಂಶದಲ್ಲಿ ಈ ಮಾಹಿತಿಯಿದ್ದು, ಪಟ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದೆ.

ಎನ್‌ಸಿಆರ್‌ಬಿ (ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ) ಬಿಡುಗಡೆಗೊಳಿಸಿರುವ ಅಂಕಿ- ಅಂಶಗಳನ್ವಯ 2023ರಲ್ಲಿ ಬೆಂಗಳೂರಿನಲ್ಲಿ ಒಟ್ಟು 17,631 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ. 2022ರಲ್ಲಿ ದಾಖಲಾದ (9,940) ಪ್ರಕರಣಗಳಿಗೆ ಹೋಲಿಸಿದರೆ 2023ರಲ್ಲಿ 77.37%ರಷ್ಟು ಸೈಬರ್ ಪ್ರಕರಣಗಳು ಏರಿಕೆಯಾಗಿವೆ. ಬೆಂಗಳೂರಿನ ನಂತರದ ಸ್ಥಾನವನ್ನು ಹೈದರಾಬಾದ್, ಮುಂಬೈ, ದೆಹಲಿ ಹಾಗೂ ಲಕ್ನೋ ಪಡೆದಿವೆ.

ಹಾಲಿ 2025ರಲ್ಲಿ ರಾಜ್ಯದಲ್ಲಿ ಮೊದಲಾರ್ಧದಲ್ಲಿ (ಆಗಸ್ಟ್ ಅಂತ್ಯದ ವರೆಗೆ) ಒಟ್ಟು 9,853 ಸೈಬರ್ ಕ್ರೈಮ್ ಪ್ರಕರಣಗಳು ದಾಖಲಾಗಿವೆ. ನಂತರದಲ್ಲಿ ಬೆಂಗಳೂರು ಗ್ರಾಮಾಂತರ, ವಿಜಯನಗರ, ತುಮಕೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿವೆ. 

ದೇಶದ ಮೆಟ್ರೋ ನಗರಗಳಿಗೆ ಹೋಲಿಸಿದರೆ 2023ರಲ್ಲಿ ಹೆಚ್ಚಿನ ಸೈಬರ್ ಅಪರಾಧ ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗಿವೆ. ಅದರಲ್ಲೂ ಐಟಿ ವೃತ್ತಿಪರರು ಅತಿ ಹೆಚ್ಚು ಮೋಸಕ್ಕೆ ಒಳಗಾಗುತ್ತಿದ್ದು, ನಂತರ ಖಾಸಗಿ ಕ್ಷೇತ್ರದ ಉದ್ಯೋಗಿಗಳು ಸೈಬರ್ ದಾಳಿಗೆ ಬಲಿಯಾಗುತ್ತಿದ್ದಾರೆ. ಆದರೆ, ಕೇರಳದ ಕೊಯಿಕ್ಕೋಡ್ ಮತ್ತು ಕೊಚ್ಚಿ ಮತ್ತು ಪಶ್ಚಿಮ ಬಂಗಾಳದ ಕೋಲ್ಕತ್ತಾದಂತಹ ನಗರಗಳಲ್ಲಿ ಕಡಿಮೆ ಸಂಖ್ಯೆಯ ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿವೆ ಎನ್‌ಸಿಆರ್‌ಬಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. 

The NCRB Crime Report: Re-envisioning a Fair and Just Society – Cafe  Dissensus Everyday

ಸೈಬರ್ ಮೋಸಕ್ಕೆ ಒಳಗಾಗದಿರಲು ಇದನ್ನು ಪಾಲಿಸಿ 

  • ಯಾವುದೇ ಅನುಮಾನಾಸ್ಪದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವುದು ಸೂಕ್ತವಲ್ಲ.
  • ಸಾಮಾಜಿಕ ಜಾಲತಾಣ ಸೇರಿದಂತೆ ಇತರ ಖಾತೆಗಳಿಗೆ ಕ್ಲಿಷ್ಟಕರವಾದ ಪಾಸ್‌ವರ್ಡ್, 2-ಫ್ಯಾಕ್ಟರ್ ಅಥೆಂಟಿಕೇಷನ್ ಇರಿಸುವುದು ಉತ್ತಮ.
  • ನಿಗದಿತವಾಗಿ ಸಾಫ್ಟ್‌ವೇರ್ / ಆ್ಯಪ್‌ಗಳನ್ನು ಅಪ್ಡೇಟ್‌ಗೊಳಿಸಿ. 
  • ಬ್ಯಾಂಕ್ ಖಾತೆಯಲ್ಲಿನ ಹಣಕಾಸು ವ್ಯವಹಾರದ ಬಗ್ಗೆ ಪರಾಮರ್ಶಿಸುತ್ತಿರಿ.
  • ಮೊಬೈಲ್ ಹಾಗೂ ಆನ್‌ಲೈನ್‌ ಹಣಕಾಸು ವ್ಯವಹಾರದ ಬಗ್ಗೆ ಎಚ್ಚರವಿರಲಿ.
  • ಸಾರ್ವಜನಿಕ ವೈ-ಫೈ ಬಳಸುವಾಗ ಎಚ್ಚರವಿರಲಿ.
  • ವೈಯಕ್ತಿಕ ಮಾಹಿತಿ, ದಾಖಲೆಗಳನ್ನು ಗೌಪ್ಯವಾಗಿರಿಸಿಕೊಳ್ಳಿ.
  • ಉತ್ತಮ ಆ್ಯಂಟಿ ವೈರಸ್ ಸಾಫ್ಟ್‌ವೇರ್‌ಗಳನ್ನು ಬಳಸಿ, ಹಾಗೂ ನಿಗದಿತವಾಗಿ ಅಪ್ಡೇಟ್ ಮಾಡಿ.
  • ಯಾವುದೇ ವಂಚನೆಗಳಾದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ಅಥವಾ ರಾಷ್ಟ್ರೀಯ ಸೈಬರ್ ಕ್ರೈಂ ಸಹಾಯವಾಣಿ (1930) ಸಂಪರ್ಕಿಸಿ.

'ಗೋಲ್ಡನ್​ ಅವರ್' ಬಗ್ಗೆ ತಿಳಿದಿರಲಿ 

ಸೈಬರ್ ವಂಚಕರು ಡಿಜಿಟಲ್ ಅರೆಸ್ಟ್, ಗಿಫ್ಟ್ ಆಫರ್, ಕ್ರೆಡಿಟ್ ಕಾರ್ಡ್ ಪಾಸ್‌ವರ್ಡ್ ಚೇಂಜ್, ಕೆವೈಸಿ ಅಪ್ಡೇಟ್ ಸೋಗಿನಲ್ಲಿ ಎಸ್ಎಂಎಸ್ ಅಥವಾ ಕರೆಗಳ ಮೂಲಕ ಹಣ ದೋಚುತ್ತಾರೆ. ಅಂತಹ ಸಂದರ್ಭಗಳಲ್ಲಿ ವಂಚನೆಗೊಳಗಾದ ನಂತರದ ಒಂದು ಗಂಟೆಯ ಅವಧಿಯನ್ನು 'ಗೋಲ್ಡನ್​ ಅವರ್' ಎನ್ನಲಾಗುತ್ತದೆ.

ಗೋಲ್ಡನ್​ ಅವರ್​ ಅವಧಿಯಲ್ಲಿ ರಾಷ್ಟ್ರೀಯ ಸೈಬರ್​ ಕ್ರೈಮ್​ ಸಹಾಯವಾಣಿ 1930ಗೆ ಕರೆ ಮಾಡಿ ಮಾಹಿತಿ ನೀಡುವುದರಿಂದ ಕೆಲವೇ ನಿಮಿಷಗಳಲ್ಲಿ ಆ ಮಾಹಿತಿಯನ್ನು ಆಧರಿಸಿ ಹಣ ವರ್ಗಾವಣೆಯಾದ ಖಾತೆ ಅಥವಾ ವ್ಯಾಲೆಟ್‌ ಪತ್ತೆಹಚ್ಚಿ ಅದರಲ್ಲಿರುವ ಹಣವನ್ನು ತಡೆಹಿಡಿಯುವ ಅವಕಾಶ ಹೆಚ್ಚಿರುತ್ತದೆ. ಮತ್ತು ತನಿಖಾ ಸಂಸ್ಥೆಗಳು ತ್ವರಿತವಾಗಿ ವಂಚಕರ ಖಾತೆಯನ್ನು ಪತ್ತೆ ಹಚ್ಚಿ, ಸ್ಥಗಿತಗೊಳಿಸಲು ಸಾಧ್ಯವಾಗುತ್ತದೆ. ಸಾರ್ವಜನಿಕರು ಗೋಲ್ಡನ್​ ಅವರ್​ ಮಹತ್ವ ತಿಳಿದಿರಬೇಕು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

India’s tech hub Bengaluru has earned the dubious distinction of being the nation’s cybercrime capital, with 17,631 cases recorded in 2023, a 77% jump from the previous year, according to NCRB data. The city outpaced Hyderabad, Mumbai, Delhi, and Lucknow, with educated youth and IT professionals emerging as the most common victims.