ಬ್ರಹ್ಮಾವರ ರೌಡಿಶೀಟರ್ ಕೊಲೆ ; ಸೋದರರಿಬ್ಬರ ಬಂಧನ, ಹಣಕಾಸು ವಿಚಾರದಲ್ಲಿ ವಾಗ್ವಾದ ಏರ್ಪಟ್ಟು ಸ್ಟೀಲ್ ರಾಡ್ ನಿಂದ ಹೊಡೆದು ಹತ್ಯೆ

28-10-26 04:57 pm       HK News Staffer   ಕ್ರೈಂ

ಬ್ರಹ್ಮಾವರದ ರೌಡಿಶೀಟರ್ ಸುಜಿತ್ ಪಿಂಟೊ (43) ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಸೋದರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಣಕಾಸಿನ ವಿಚಾರದ ಗಲಾಟೆಯಲ್ಲಿ ಸಹೋದರರಿಬ್ಬರು ಸೇರಿ ಸ್ಟೀಲ್ ರಾಡ್ ನಿಂದ ತಲೆಗೆ ಹೊಡೆದು ಕೊಲೆ ಮಾಡಿರುವುದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.

ಉಡುಪಿ, ಅ.27: ಬ್ರಹ್ಮಾವರದ ರೌಡಿಶೀಟರ್ ಸುಜಿತ್ ಪಿಂಟೊ (43) ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಸೋದರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಣಕಾಸಿನ ವಿಚಾರದ ಗಲಾಟೆಯಲ್ಲಿ ಸಹೋದರರಿಬ್ಬರು ಸೇರಿ ಸ್ಟೀಲ್ ರಾಡ್ ನಿಂದ ತಲೆಗೆ ಹೊಡೆದು ಕೊಲೆ ಮಾಡಿರುವುದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.

ಬೈಕಾಡಿ ಗ್ರಾಮದ ಪಡುಬೈಕಾಡಿ ನಿವಾಸಿಗಳಾದ ಪ್ರದೀಪ್ ಪೂಜಾರಿ ಹಾಗೂ ಪ್ರಮೋದ್ ಪೂಜಾರಿ ಎಂಬ ಇಬ್ಬರು ಸೋದರರನ್ನು ಬ್ರಹ್ಮಾವರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿನ್ನೆ ಅ.27ರ ರಾತ್ರಿ 7:30 ರಿಂದ 8:30ರ ವೇಳೆಗೆ ಬೈಕಾಡಿ ಗ್ರಾಮದ ಭದ್ರಗಿರಿ ಸರ್ಕಲ್ ಬಳಿ ಘಟನೆ ನಡೆದಿದೆ. ಆರೋಪಿಗಳಾದ ಪ್ರದೀಪ್ ಪೂಜಾರಿ ಹಾಗೂ ಪ್ರಮೋದ್ ಪೂಜಾರಿ ಅವರು ಬೈಕಾಡಿ ನಿವಾಸಿ ಜೀವನ್ ಪೂಜಾರಿ ಹಾಗೂ ಸಂತೆಕಟ್ಟೆ ನಿವಾಸಿ ಸುಜಿತ್ ಪಿಂಟೋನನ್ನು ಕರೆಸಿಕೊಂಡಿದ್ದರು. ಈ ವೇಳೆ ವೈಯಕ್ತಿಕ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಇದೇ ವೇಳೆ, ಪ್ರದೀಪ್ ಪೂಜಾರಿ ಸುಜಿತ್ ಪಿಂಟೋನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದು ಇದೇ ವೇಳೆ ಪ್ರಮೋದ್ ಪೂಜಾರಿ ತನ್ನ ಪ್ಯಾಂಟ್‌ ಹಿಂಬದಿಯಲ್ಲಿ ಸಿಕ್ಕಿಸಿಕೊಂಡಿದ್ದ ಸ್ಟೀಲ್ ಪೈಪ್‌ ತಗೆದು ಸುಜಿತ್ ಪಿಂಟೊ ತಲೆಗೆ ಹೊಡೆದು ಭೀಕರವಾಗಿ ಹಲ್ಲೆ ನಡೆಸಿದ್ದಾನೆ. 

ಜಗಳ ತಪ್ಪಿಸಲು ಬಂದ ಜೀವನ್ ಪೂಜಾರಿ ಮೇಲೆಯೂ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ತಲೆ ಹಾಗೂ ಮುಖಕ್ಕೆ ತೀವ್ರ ಸ್ವರೂಪದ ಗಂಭೀರ ಗಾಯವಾಗಿದ್ದ ಸುಜಿತ್ ಪಿಂಟೊ ರಕ್ತದ ಮಡುವಿನಲ್ಲಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯ ಪ್ರತ್ಯಕ್ಷ ಸಾಕ್ಷಿಯಾದ ಭದ್ರಗಿರಿ ಬೈಕಾಡಿ ನಿವಾಸಿ ಜೀವನ್ ಪೂಜಾರಿ (31) ನೀಡಿದ ದೂರಿನ ಮೇರೆಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 202/2026, ಭಾರತೀಯ ನ್ಯಾಯ ಸಂಹಿತೆ (BNS 2023) ಕಲಂ 352, 351(1), 115(2), 118(1), 103 ಜೊತೆಗೆ 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಆರೋಪಿಗಳಾದ ಪ್ರದೀಪ್ ಹಾಗೂ ಪ್ರಮೋದ್ ಪೂಜಾರಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ. ಹಣಕಾಸು ಹಾಗೂ ವೈಯಕ್ತಿಕ ದ್ವೇಷದ ಕಾರಣದ ಸಿಟ್ಟಿನಲ್ಲಿ ಈ ಕೃತ್ಯ ಎಸಗಿದ್ದಾರೆ. ಆದರೆ ಕೊಲೆಯಾದ ಸುಜಿತ್ ಪಿಂಟೊ ಮಲ್ಪೆ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದು, ಉಡುಪಿ ನಗರ, ಮಲ್ಪೆ, ಹಿರಿಯಡ್ಕ ಹಾಗೂ ಮಣಿಪಾಲ ಪೊಲೀಸ್ ಠಾಣೆಗಳಲ್ಲಿ ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.