Gurudas Shenoy: ಕೋಟದಲ್ಲಿ ಭೀಕರ ಅಪಘಾತ ; ಸೈಕಲ್ ನಲ್ಲಿ ರಸ್ತೆ ದಾಟುತ್ತಿದ್ದ ಹಿರಿಯ ಆರ್‌ಎಸ್‌ಎಸ್ ಕಾರ್ಯಕರ್ತ ದುರ್ಮರಣ

26-10-26 12:49 pm       HK News Staffer   ಕ್ರೈಂ

ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಕೋಟ ಅಮೃತೇಶ್ವರಿ ಸರ್ಕಲ್‌ನಲ್ಲಿ ಕಾರು ಡಿಕ್ಕಿಯಾಗಿ ಸೈಕಲ್ ಸವಾರ, ಹಿರಿಯ ಆರ್‌ಎಸ್‌ಎಸ್ ಕಾರ್ಯಕರ್ತ ಹಾಗೂ ಕಾರ್ಪೊರೇಷನ್ ಬ್ಯಾಂಕ್‌ ನಿವೃತ್ತ ಉದ್ಯೋಗಿ ಗುರುದಾಸ್ ಶೆಣೈ (65) ಮೃತಪಟ್ಟಿದ್ದಾರೆ. ಸೋಮವಾರ ಬೆಳಗಿನ ಜಾವ ಹೂವು ಸಂಗ್ರಹಿಸಿ ಸೈಕಲ್ ನಲ್ಲಿ ದೇವಸ್ಥಾನಕ್ಕೆ ತೆರಳುವ ನಿತ್ಯದ ಕೆಲಸದಲ್ಲಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಕುಂದಾಪುರ, ಅ.26 : ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಕೋಟ ಅಮೃತೇಶ್ವರಿ ಸರ್ಕಲ್‌ನಲ್ಲಿ ಕಾರು ಡಿಕ್ಕಿಯಾಗಿ ಸೈಕಲ್ ಸವಾರ, ಹಿರಿಯ ಆರ್‌ಎಸ್‌ಎಸ್ ಕಾರ್ಯಕರ್ತ ಹಾಗೂ ಕಾರ್ಪೊರೇಷನ್ ಬ್ಯಾಂಕ್‌ ನಿವೃತ್ತ ಉದ್ಯೋಗಿ ಗುರುದಾಸ್ ಶೆಣೈ (65) ಮೃತಪಟ್ಟಿದ್ದಾರೆ. ಸೋಮವಾರ ಬೆಳಗಿನ ಜಾವ ಹೂವು ಸಂಗ್ರಹಿಸಿ ಸೈಕಲ್ ನಲ್ಲಿ ದೇವಸ್ಥಾನಕ್ಕೆ ತೆರಳುವ ನಿತ್ಯದ ಕೆಲಸದಲ್ಲಿದ್ದಾಗ ಈ ದುರ್ಘಟನೆ ಸಂಭವಿಸಿದೆ. 

ಗುರುದಾಸ್ ಶೆಣೈ ಪ್ರತಿದಿನ ಮುಂಜಾನೆ ಸ್ಥಳೀಯ ಪರಿಸರದಲ್ಲಿ ಹೂವು ಸಂಗ್ರಹಿಸಿ ದೇವಸ್ಥಾನಕ್ಕೆ ನೀಡುತ್ತಿದ್ದರು. ಸೋಮವಾರವೂ ಹೂವು ಸಂಗ್ರಹಿಸಿಕೊಂಡು ಸೈಕಲ್‌ನಲ್ಲಿ ರಸ್ತೆ ದಾಟುತ್ತಿದ್ದಾಗ, ಉಡುಪಿಯಿಂದ ಕುಂದಾಪುರದ ಕಡೆಗೆ ಸಂಚರಿಸುತ್ತಿದ್ದ ಕಾರು ಸೈಕಲ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ಅಪಘಾತದಲ್ಲಿ ಕಾರು ಚಾಲಕ, ಬೀಜಾಡಿ ನಿವಾಸಿ ಪ್ರದೀಪ್ ಕಾಂಚನ್ ಅವರಿಗೂ ಗಂಭೀರ ಗಾಯಗಳಾಗಿವೆ. ಅವರನ್ನು ತಕ್ಷಣ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗುರುದಾಸ್ ಶೆಣೈ ಅವರು ಕಾರ್ಪೊರೇಷನ್ ಬ್ಯಾಂಕ್‌ನಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಆರ್‌ಎಸ್‌ಎಸ್‌ನ ಸಕ್ರಿಯ ಕಾರ್ಯಕರ್ತರಾಗಿದ್ದ ಅವರು ಯುವ ಸ್ವಯಂಸೇವಕರಿಗೆ ಶಾಖೆಗಳನ್ನು ನಡೆಸುತ್ತಿದ್ದರು. ಭಾನುವಾರ ಕೋಟದಲ್ಲಿ ನಡೆದ ವಿಜಯದಶಮಿ ಪಥಸಂಚಲನದಲ್ಲಿಯೂ ಉತ್ಸಾಹದಿಂದ ಭಾಗವಹಿಸಿದ್ದರು.

ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೋಟ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.