ಯುಪಿಐ ಮೇಲಿನ ತೆರಿಗೆ ಪ್ರಸ್ತಾಪಕ್ಕೆ ಅಣ್ಣಾಮಲೈ ವಿರೋಧ ; ಶೇ.4 ಗ್ರಾಹಕರಿಂದ ಶೇ.67 ರಷ್ಟು ಆರ್ಥಿಕ ವ್ಯವಹಾರಕ್ಕೆ ತೊಂದರೆ, ಇಂತಹ ನಿರ್ಧಾರಗಳಿಗೆ ಇನ್ನಷ್ಟು ಸಮಯ ಬೇಕು..!

24-10-26 10:59 pm       HK News Staffer   ಕರಾವಳಿ

ಯುಪಿಐ ಟ್ರಾನ್ಸಾಕ್ಷನ್ ಮೇಲೆ ತೆರಿಗೆ ವಿಧಿಸುವ ಪ್ರಸ್ತಾಪಕ್ಕೆ ತಮಿಳುನಾಡಿನ 'ವಿ ದ ಲೀಡರ್ಸ್' ಮೂವ್ಮೆಂಟ್ ಮುಖ್ಯಸ್ಥ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ವಿರೋಧ ವ್ಯಕ್ತಪಡಿಸಿದ್ದಾರೆ.

ಉಡುಪಿ, ಅ.24: ಯುಪಿಐ ಟ್ರಾನ್ಸಾಕ್ಷನ್ ಮೇಲೆ ತೆರಿಗೆ ವಿಧಿಸುವ ಪ್ರಸ್ತಾಪಕ್ಕೆ ತಮಿಳುನಾಡಿನ 'ವಿ ದ ಲೀಡರ್ಸ್' ಮೂವ್ಮೆಂಟ್ ಮುಖ್ಯಸ್ಥ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ವಿರೋಧ ವ್ಯಕ್ತಪಡಿಸಿದ್ದಾರೆ. 

ಓರ್ವ ಗ್ರಾಹಕನಾಗಿ, ಒಬ್ಬ ನಾಗರಿಕನಾಗಿ ನನ್ನ ಅಭಿಪ್ರಾಯ ಹೇಳಬಯಸುತ್ತೇನೆ. ಆಗಸ್ಟ್ 2026ರ ವರೆಗೆ, ಯುಪಿಐ ಮೂಲಕ ದೇಶದಲ್ಲಿ 30 ಲಕ್ಷ ಕೋಟಿ ರೂಪಾಯಿ ವ್ಯವಹಾರ ನಡೆದಿದೆ. ಪ್ರಪಂಚದಲ್ಲಿ ನಮ್ಮ ದೇಶ ಅತಿ ದೊಡ್ಡ ಯುಪಿಐ ವ್ಯವಹಾರ ದಾಖಲಿಸಿದೆ. ಯುಪಿಐ ಬಳಕೆ ಬಗ್ಗೆ ಹಿಂದಿನ ಆರ್ಥಿಕ ಸಚಿವರು ಸಂಶಯ ವ್ಯಕ್ತಪಡಿಸಿದ್ದರು. ಆದರೆ ಭಾರತೀಯರು ಸಕಾರಾತ್ಮಕವಾಗಿ ಸ್ಪಂದಿಸಿ, ಅತಿ ಹೆಚ್ಚು ಯುಪಿಐ ಬಳಕೆ ದಾಖಲಿಸಿದ್ದಾರೆ. ಯುಪಿಐ ಮೂಲಕ ಆರ್ಥಿಕ ಚಟುವಟಿಕೆ ಸಂಪೂರ್ಣ ಉಚಿತವಾದ ಕಾರಣ ಇಷ್ಟು ವೇಗವಾಗಿ ಅದು ಬೆಳೆದಿದೆ. 

ಆದರೆ ಈಗ ತೆರಿಗೆ ವಿಧಿಸುವ ಬಗ್ಗೆ ಮಾತನಾಡಲಾಗುತ್ತದೆ. ಕೇವಲ ಶೇ.4 ರಷ್ಟು ಬಳಕೆದಾರರಿಗೆ ಇದರಿಂದ ಸಮಸ್ಯೆಯಾಗುತ್ತೆ ಎಂದು ಹೇಳಲಾಗುತ್ತದೆ. ಈ ಶೇ.4 ಗ್ರಾಹಕರಿಂದ, ಶೇ.67 ರಷ್ಟು ಆರ್ಥಿಕ ವ್ಯವಹಾರಕ್ಕೆ ತೊಂದರೆಯಾಗಲಿದೆ. ಇದು ಅತಿ ದೊಡ್ಡ ಮೊತ್ತವಾಗಿದ್ದು ನಮ್ಮ ದೇಶದಲ್ಲಿ ಈ ರೀತಿಯ ನಿರ್ಧಾರಗಳಿಗೆ ಮತ್ತಷ್ಟು ಸಮಯ ಬೇಕು. ಜನರು ಪೂರ್ತಿಯಾಗಿ ಯುಪಿಐ ಬಳಕೆಗೆ ಬರಬೇಕು. 

ಈ ರೀತಿಯ ತೆರಿಗೆ ವಿಧಿಸುವ ಮೂಲಕ 15000 ಕೋಟಿ ಸಂಗ್ರಹದ ಉದ್ದೇಶ ಹೊಂದಲಾಗಿದೆ. ಇದರಿಂದ ಸರ್ಕಾರಕ್ಕೆ ಯಾವುದೇ ಆದಾಯ ಇಲ್ಲ ಎಂದು ಆರ್ಥಿಕ ಸಚಿವರು ಹೇಳಿದ್ದಾರೆ. ಯುಪಿಐ ವ್ಯವಹಾರ ನಡೆಸಲು ಸರಕಾರದ ಖಜಾನೆಯಿಂದ ಹಣ ಹೋಗುತ್ತೆ ಎಂದು ಸರಕಾರ ಹೇಳುತ್ತದೆ. ಆದರೆ ಸರಕಾರ ದೇಶದ ಆರ್ಥಿಕತೆಯನ್ನು ಉತ್ತಮಗೊಳಿಸಲು ಇದು ಹೂಡಿಕೆ ಎಂದು ಭಾವಿಸಲು ಸಾಧ್ಯವಿಲ್ಲವೇ? 50 ಲಕ್ಷ ಕೋಟಿಯ ನಮ್ಮ ದೇಶದ ಬಜೆಟ್ ನಲ್ಲಿ ಕೇವಲ 15 ಸಾವಿರ ಕೋಟಿ ಯುಪಿಐ ವ್ಯವಹಾರಕ್ಕೆ ಸರಕಾರ ವಿನಿಯೋಗಿಸಲು ಸಾಧ್ಯವಿಲ್ಲವೇ? ವ್ಯಾಪಾರಿಗಳು ಮತ್ತು ಗ್ರಾಹಕರ ಪ್ರಯತ್ನದಿಂದ ಯುಪಿಐ ತೆರಿಗೆ ರದ್ದಾದರೆ ಉತ್ತಮ. ಇದು ಈ ರೀತಿ ತೆರಿಗೆ ಹೇರಲು ಸಕಾಲವಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಅಣ್ಣಾಮಲೈ ಹೇಳಿದರು. 

ಈ ಬಗ್ಗೆ ಸರಕಾರ ಪ್ರತಿಯೊಬ್ಬರ ಅಭಿಪ್ರಾಯ ಕೇಳುತ್ತದೆ. ದೀಪಾವಳಿ ನಂತರ ಗುಡ್ ನ್ಯೂಸ್ ಸಿಗಲಿ ಎಂದು ಆಶಿಸುತ್ತೇನೆ. ಭಾರತ ದೇಶ ಶೇಕಡ 100 ಯುಪಿಐ ಬಳಕೆದಾರರ ರಾಷ್ಟ್ರವಾಗಲಿ. ತನ್ನ ನಿರ್ಧಾರವನ್ನು ಸರಕಾರ ಮರು ಪರಿಶೀಲಿಸಬೇಕು. ಐದು, ಹತ್ತು ವರ್ಷಗಳ ನಂತರ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ನಾನು ಕೇಳುವ ಪ್ರಶ್ನೆಯನ್ನು ಜನರು ಕೇಳುವಂತಾಗಲಿ ಎಂದೂ ಹೇಳಿದರು.