ಸಿದ್ದರಾಮಯ್ಯ ಸ್ಟಿಂಗ್ ; ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದ ದೆಹಲಿ ಮೂಲದ ಯುವಕ ಸೆರೆ, 50 ಸಾವಿರಕ್ಕೆ ಡೀಲ್ ಕೊಟ್ಟವರ ಹಿಂದೆ ಬಿದ್ದ ಪೊಲೀಸರು, ವಿಡಿಯೋ ಮಾಡಿದವರ ಬಗ್ಗೆ ಮೌನ !

24-10-26 10:21 pm       HK News Desk   ಕ್ರೈಂ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಂಬಂಧಿಸಿದ ಸ್ಟಿಂಗ್ ವಿಡಿಯೋ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ವಿಡಿಯೋವನ್ನು ಮೊದಲಿಗೆ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾನೆ ಎನ್ನಲಾದ ದೆಹಲಿ ಮೂಲದ ರಿತೇಶ್ ಪಾಂಡೆ ಎಂಬಾತನನ್ನು ಬಂಧಿಸಿದ್ದಾರೆ.

ಬೆಂಗಳೂರು, ಅ.24 : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಂಬಂಧಿಸಿದ ಸ್ಟಿಂಗ್ ವಿಡಿಯೋ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ವಿಡಿಯೋವನ್ನು ಮೊದಲಿಗೆ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾನೆ ಎನ್ನಲಾದ ದೆಹಲಿ ಮೂಲದ ರಿತೇಶ್ ಪಾಂಡೆ ಎಂಬಾತನನ್ನು ಬಂಧಿಸಿದ್ದಾರೆ. 

ವಿಡಿಯೊ ಅಪ್‌ಲೋಡ್ ಮಾಡುವುದಕ್ಕಾಗಿಯೇ ರಿತೇಶ್ ಪಾಂಡೆ ದೆಹಲಿಯ ಕರೋಲ್ ಬಾಗ್ ಮಾರುಕಟ್ಟೆಯಿಂದ ₹15 ಸಾವಿರ ನೀಡಿ ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿಸಿದ್ದ. ಸಿಮ್ ಕಾರ್ಡ್ ಬಳಸದೆ ವೈ-ಫೈ ಸಂಪರ್ಕದ ಮೂಲಕ ವಿಡಿಯೋ ಅಪ್ಲೋಟ್ ಮಾಡಲಾಗಿತ್ತು. ಆರೋಪಿ ಮೊಬೈಲ್ ಖರೀದಿಸಿದ ಅಂಗಡಿಯ ಬಿಲ್ ಹಾಗೂ ಅಲ್ಲಿನ ಸಿಸಿಟಿವಿ ದೃಶ್ಯಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.

ಆರೋಪಿಗೆ ಅದಕ್ಕೂ ಮೊದಲೇ ತಲುಪಿಸಲಾಗಿದ್ದ ಪೆನ್‌ಡ್ರೈವ್ ಅನ್ನು ಮೊಬೈಲ್‌ಗೆ ಜೋಡಿಸಿ ಡೌನ್‌ಲೋಡ್ ಮಾಡಿಕೊಂಡಿದ್ದ ಎಂದೂ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ. ಬಳಿಕ ‘ಕರ್ನಾಟಕ ಹನಿಟ್ರ್ಯಾಪ್’ ಹೆಸರಿನ ಯೂಟ್ಯೂಬ್ ಖಾತೆ ತೆರೆದು ಅದರ ಮೂಲಕ ಸ್ಟಿಂಗ್ ವಿಡಿಯೋವನ್ನು ಅಪ್‌ಲೋಡ್ ಮಾಡಿರುವುದು ಸಾಕ್ಷ್ಯಾಧಾರಗಳಿಂದ ದೃಢಪಟ್ಟಿದೆ. ವಿಡಿಯೊ ಅಪ್‌ಲೋಡ್ ಮಾಡಲು ಆರೋಪಿಗೆ ₹50 ಸಾವಿರ ನೀಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದ್ದು, ಪೆನ್‌ಡ್ರೈವ್ ನೀಡಿದವರು ಹಾಗೂ ಹಣ ವರ್ಗಾವಣೆ ಮಾಡಿದವರ ಕುರಿತು ತನಿಖೆ ನಡೆಸಲಾಗಿದೆ. 

ಸ್ಟಿಂಗ್ ವಿಡಿಯೊದಲ್ಲಿ ಕಾಣಿಸಿಕೊಂಡ ಮಹಿಳೆಯನ್ನು ಈಗಾಗಲೇ ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿ ಆಕೆಯ ಹೇಳಿಕೆಯನ್ನು ದಾಖಲಿಸಿದ್ದಾರೆ. ವಿಡಿಯೊ ರೆಕಾರ್ಡ್ ಮಾಡಿದವರು ಯಾರು ಮತ್ತು ಈ ಕಾರ್ಯಾಚರಣೆಯ ಹಿಂದಿನ ಹಣಕಾಸಿನ ವ್ಯವಹಾರಗಳೇನು ಎಂಬ ಬಗ್ಗೆ ಆಕೆಯಿಂದ ಮಾಹಿತಿ ಕಲೆಹಾಕಲಾಗಿದೆ. ಮತ್ತೊಂದೆಡೆ, ಬಂಧಿತ ರಿತೇಶ್ ಪಾಂಡೆಯನ್ನು 66ನೇ ಸಿಸಿಎಚ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಷರತ್ತುಬದ್ಧ ಜಾಮೀನು ಮಂಜೂರಾಗಿದೆ. ತನಿಖೆಗೆ ಸಹಕರಿಸಬೇಕು ಮತ್ತು ವಿಚಾರಣೆಗೆ ತಪ್ಪದೇ ಹಾಜರಾಗಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ. ಸದ್ಯ ತಾಂತ್ರಿಕ ಕೊಂಡಿಯೊಂದು ಬಲೆಗೆ ಬಿದ್ದಿದ್ದರೂ, ಸ್ಟಿಂಗ್ ಮಾಡಿರುವ ಅಸಲಿ ಕಿಂಗ್‌ಪಿನ್‌ಗಳ ಬಂಧನ ಇನ್ನಷ್ಟೇ ಆಗಬೇಕಾಗಿದೆ.