ಸೌದಿ ಅರೇಬಿಯಾದಲ್ಲಿ ಕುತ್ತಾರಿನ ಯುವಕ ದಿಢೀರ್ ಸಾವು ; ಹೃದಯಾಘಾತದಿಂದ ಸಾವನ್ನಪ್ಪಿದ ಶಂಕೆ, ಐದು ತಿಂಗಳ ಹಿಂದಷ್ಟೆ ವಿದೇಶಕ್ಕೆ ತೆರಳಿದ್ದ ಯುವಕ

08-09-26 09:19 pm       HK News Staffer   ಕ್ರೈಂ

ಐದು ತಿಂಗಳ ಹಿಂದಷ್ಟೆ ಸೌದಿ ಅರೇಬಿಯಾಕ್ಕೆ ಕೆಲಸಕ್ಕೆ ತೆರಳಿದ್ದ ಕುತ್ತಾರು ನಿವಾಸಿ ಅವಿವಾಹಿತ ಯುವಕನೋರ್ವ ಮಂಗಳವಾರ ಬೆಳಗ್ಗೆ ಸೌದಿ ಅರೇಬಿಯಾದಲ್ಲಿ ತಾನು ತಂಗಿದ್ದ ಕೋಣೆಯಲ್ಲಿ ದಿಢೀರನೆ ಸಾವನ್ನಪ್ಪಿದ್ದು, ಹೃದಯಾಘಾತದಿಂದ ಸಾವನ್ನಪ್ಪಿರೋದಾಗಿ ಹೇಳಲಾಗಿದೆ.

ಉಳ್ಳಾಲ, ಸೆ.08: ಐದು ತಿಂಗಳ ಹಿಂದಷ್ಟೆ ಸೌದಿ ಅರೇಬಿಯಾಕ್ಕೆ ಕೆಲಸಕ್ಕೆ ತೆರಳಿದ್ದ ಕುತ್ತಾರು ನಿವಾಸಿ ಅವಿವಾಹಿತ ಯುವಕನೋರ್ವ ಮಂಗಳವಾರ ಬೆಳಗ್ಗೆ ಸೌದಿ ಅರೇಬಿಯಾದಲ್ಲಿ ತಾನು ತಂಗಿದ್ದ ಕೋಣೆಯಲ್ಲಿ ದಿಢೀರನೆ ಸಾವನ್ನಪ್ಪಿದ್ದು,  ಹೃದಯಾಘಾತದಿಂದ ಸಾವನ್ನಪ್ಪಿರೋದಾಗಿ ಹೇಳಲಾಗಿದೆ.

ಕುತ್ತಾರುವಿನ ಕೊರಗಜ್ಜನ ಆದಿ ಕ್ಷೇತ್ರದ ಬಳಿಯ ನಿವಾಸಿ ಶರತ್ ಕುಮಾರ್ (35) ಮೃತಪಟ್ಟ ಯುವಕ. ಐದು ತಿಂಗಳ ಹಿಂದಷ್ಟೆ ಸೌದಿ ಅರೇಬಿಯಾಕ್ಕೆ ತೆರಳಿದ್ದ ಶರತ್ ಅವರು ಕನ್ಸ್ಟ್ರಕ್ಷನ್ ಕಂಪನಿಯೊಂದರಲ್ಲಿ ಸುಪರ್ ವೈಸರ್ ಕೆಲಸ ನಿರ್ವಹಿಸುತ್ತಿದ್ದರೆನ್ನಲಾಗಿದೆ. ತಮಿಳುನಾಡು ಮೂಲದ ಸಹೋದ್ಯೋಗಿ ಮಿತ್ರನ ಜೊತೆಯಲ್ಲಿ ತಾನು ಕೆಲಸ ನಿರ್ವಹಿಸುತ್ತಿದ್ದ ಕಂಪನಿಯ ರೂಮಲ್ಲಿ ಉಳಿದುಕೊಂಡಿದ್ದರು. ಸೋಮವಾರ ರಾತ್ರಿ 11 ಗಂಟೆಗೆ ಸಹೋದ್ಯೋಗಿ‌ಯು ರೂಮ್‌ ಒಳಗೆ ಬಂದಾಗ ಶರತ್ ಮಲಗಿದ್ದರಂತೆ. 

ಮಂಗಳವಾರ ಬೆಳಗ್ಗೆ ಶರತ್ ಅವರು ಬೇಗನೆ‌ ಕೆಲಸಕ್ಕೆ ತೆರಳಲು ಅಲಾರಮ್ ಇಟ್ಟಿದ್ದು, ಬೆಳಗ್ಗೆ ಅಲಾರಮ್‌ ಸದ್ದು ಬಾರಿಸಿದರೂ ಶರತ್ ಎದ್ದೇಳದೆ ಇದ್ದಾಗ ರೂಮ್ ಸಹವರ್ತಿ ಪರಿಶೀಲಿಸಿದ್ದು ಈ ವೇಳೆ ಶರತ್ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ ಶರತ್ ಹೃದಯಾಘಾತದಿಂದ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ. 

ಶರತ್ ಅವರು ಸೋಮವಾರ ತಡ ರಾತ್ರಿವರೆಗೂ ಅಣ್ಣನ ಜೊತೆ ಪೋನಲ್ಲಿ ಸಂಭಾಷಣೆ ನಡೆಸಿದ್ದರಂತೆ. ಶರತ್ ಅವರ ಅಕಾಲಿಕ ಸಾವಿನ ಸುದ್ದಿಯಿಂದ ಕುಟುಂಬ, ಬಂಧು, ಮಿತ್ರರು ಶೋಕತಪ್ತರಾಗಿದ್ದಾರೆ. ಮೃತದೇಹವನ್ನ ತಾಯ್ನಾಡಿಗೆ ತರುವ ಪ್ರಕ್ರಿಯೆ ನಡೆಸಲಾಗುತ್ತಿದೆ. ಶರತ್ ಅವರು ತಾಯಿ ಹಾಗೂ ಏಕೈಕ ಅಣ್ಣನನ್ನು ಅಗಲಿದ್ದಾರೆ.