ಪುತ್ತೂರು ಜನಸೇವಾ ಕೇಂದ್ರ ಗಲಾಟೆ ಪ್ರಕರಣ: ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಬೆದರಿಕೆ ಆರೋಪದ 10 ಮಂದಿಗೆ ನಿರೀಕ್ಷಣಾ ಜಾಮೀನು

08-09-26 02:26 pm       HK News Staffer   ಕ್ರೈಂ

ನಗರದ ದರ್ಬೆಯ ಜನಸೇವಾ ಕೇಂದ್ರವೊಂದರಲ್ಲಿ ಕೆಲ ದಿನಗಳ ಹಿಂದೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಕೆಯೊಡ್ಡಿದ ಆರೋಪ ಎದುರಿಸುತ್ತಿದ್ದ 10 ಮಂದಿಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಪುತ್ತೂರು , ಸೆ 07: ನಗರದ ದರ್ಬೆಯ ಜನಸೇವಾ ಕೇಂದ್ರವೊಂದರಲ್ಲಿ ಕೆಲ ದಿನಗಳ ಹಿಂದೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಕೆಯೊಡ್ಡಿದ ಆರೋಪ ಎದುರಿಸುತ್ತಿದ್ದ 10 ಮಂದಿಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಜನಸೇವಾ ಕೇಂದ್ರದಲ್ಲಿ ಲ್ಯಾಮಿನೇಶನ್ ಮಾಡಲೆಂದು ನೀಡಲಾಗಿದ್ದ ದಾಖಲೆ ಪತ್ರವೊಂದಕ್ಕೆ ಹಾನಿಯಾಗಿರುವ ವಿಚಾರದಲ್ಲಿ ಗ್ರಾಹಕರು ಹಾಗೂ ಅಂಗಡಿ ಮಾಲೀಕರ ನಡುವೆ ಮಾತಿನ ಚಕಮಕಿ ನಡೆದಿತ್ತು. ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಗಲಾಟೆ ನಡೆದಿತ್ತು.

ಈ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಕೆಯೊಡ್ಡಿದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದರು.

10 ಮಂದಿ ಆರೋಪಿಗಳಿಂದ ನಿರೀಕ್ಷಣಾ ಜಾಮೀನು ಅರ್ಜಿ

ಪ್ರಕರಣದಲ್ಲಿ ಆರೋಪಿಗಳಾಗಿರುವ ಅಬ್ದುಲ್ ನಿಯಾಝ್ ಪೆರ್ನೆ (26), ಮುಹಮ್ಮದ್ ನೌಶಾದ್ ತಾರಿಗುಡ್ಡೆ (32), ಆದಂ ಕೋಲ್ಪೆ (45), ಮುಹಮ್ಮದ್ ಸುಹೈಲ್ ಬಿ. ಭಕ್ತಕೋಡಿ (28), ಅಬ್ದುಲ್ ಖಾದರ್ ಜಾಬಿರ್ ಬನ್ನೂರು (30), ಅಬ್ದುಲ್ ಕರೀಂ ಒಳಮೊಗ್ರು ಕುಂಬ್ರ (39), ಯಾಕೂಬ್ ಅಂಗಡಿಮಜಲು (47), ಇಮ್ರಾನ್ ಅಹ್ಮದ್ ಅಲಂಗುರಡ್ಕ (40), ಮುಹಮ್ಮದ್ ರಿಫಾಝ್ ಕೂರ್ನಡ್ಕ (22) ಹಾಗೂ ಮುಹಮ್ಮದ್ ಇರ್ಷಾದ್ ಜೆ. ಜಾರತ್ತಾರ್ (40) ಅವರು ನಿರೀಕ್ಷಣಾ ಜಾಮೀನು ಕೋರಿ ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯಕ್ ಅವರು 10 ಮಂದಿ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿದ್ದಾರೆ. ಆರೋಪಿಗಳ ಪರ ವಕೀಲ ಅಬ್ದುಲ್ ರಹಿಮಾನ್ ಹಿರೇಬಂಡಾಡಿ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ಪ್ರಕರಣದ ಮುಂದಿನ ತನಿಖೆ ಹಾಗೂ ಕಾನೂನು ಪ್ರಕ್ರಿಯೆಗಳು ಮುಂದುವರಿಯಲಿವೆ.