ದಕ್ಷಿಣ ಕನ್ನಡದಲ್ಲಿ ದಿಢೀರ್ ಲೋಕಾಯುಕ್ತ ದಾಳಿ: ಬಂಟ್ವಾಳದ ಪುದು, ಮಾಣಿ ಸೇರಿದಂತೆ 7 ಗ್ರಾಮ ಪಂಚಾಯತಿಗಳ ಕಚೇರಿಗಳಲ್ಲಿ ದಾಖಲೆಗಳ ಜಾಲಾಟ

08-09-26 03:50 pm       HK News Staffer   ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಲೋಕಾಯುಕ್ತ ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಜಿಲ್ಲೆಯ ವಿವಿಧ ತಾಲೂಕುಗಳ ಒಟ್ಟು 7 ಗ್ರಾಮ ಪಂಚಾಯತಿ ಕಚೇರಿಗಳ ಮೇಲೆ ಏಕಕಾಲದಲ್ಲಿ ದಿಢೀರ್ ದಾಳಿ ನಡೆಸಿದ್ದಾರೆ.

ಮಂಗಳೂರು, ಸೆ.8: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಲೋಕಾಯುಕ್ತ ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಜಿಲ್ಲೆಯ ವಿವಿಧ ತಾಲೂಕುಗಳ ಒಟ್ಟು 7 ಗ್ರಾಮ ಪಂಚಾಯತಿ ಕಚೇರಿಗಳ ಮೇಲೆ ಏಕಕಾಲದಲ್ಲಿ ದಿಢೀರ್ ದಾಳಿ ನಡೆಸಿದ್ದಾರೆ.

ಸಾರ್ವಜನಿಕರಿಂದ ಭ್ರಷ್ಟಾಚಾರ, ಖಾತಾ ಬದಲಾವಣೆ, ಸರ್ಕಾರಿ ಯೋಜನೆಗಳ ಅನುಷ್ಠಾನ, ಸಾರ್ವಜನಿಕ ಕೆಲಸಗಳಲ್ಲಿನ ಅಕ್ರಮ ಹಾಗೂ ಲಂಚದ ಬೇಡಿಕೆ ಕುರಿತು ಸರಣಿ ದೂರುಗಳು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಈ ಕಾರ್ಯಾಚರಣೆ ಕೈಗೊಂಡಿದ್ದಾರೆ. ಮಂಗಳೂರು ತಾಲೂಕಿನ ಪೆರ್ಮುದೆ ಗ್ರಾಮ ಪಂಚಾಯತಿ, ಬಂಟ್ವಾಳ ತಾಲೂಕಿನ ಪುದು, ಮಾಣಿ, ಗೊಳ್ತಮಜಲು, ಪಾಣೆಮಂಗಳೂರು/ಅಡ್ಯಾರ್, ಕುವೆಟ್ಟು ಹಾಗೂ ಮಡಂತ್ಯಾರ್ ಗ್ರಾಮ ಪಂಚಾಯತಿ ಕಚೇರಿಗಳಲ್ಲಿ ಏಕಕಾಲಕ್ಕೆ ಪರಿಶೀಲನೆ ನಡೆಯುತ್ತಿದೆ.

ಕಾರವಾರ, ಉಡುಪಿ ಹಾಗೂ ಮಂಗಳೂರು ವಿಭಾಗಗಳ ಲೋಕಾಯುಕ್ತ ಅಧಿಕಾರಿಗಳ ನೇತೃತ್ವದಲ್ಲಿ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದ್ದು, ಎಲ್ಲಾ ತಂಡಗಳು ಏಕಕಾಲದಲ್ಲಿ ಪಂಚಾಯತಿ ಕಚೇರಿಗಳಿಗೆ ತೆರಳಿ ದಾಖಲೆಗಳನ್ನು ಪರಿಶೀಲಿಸುತ್ತಿವೆ. ದಾಳಿಯ ವೇಳೆ ಕಚೇರಿಗಳಲ್ಲಿದ್ದ ಪ್ರಮುಖ ಕಡತಗಳು, ಸಾರ್ವಜನಿಕರ ಅರ್ಜಿ ವಿಲೇವಾರಿ ರಿಜಿಸ್ಟರ್‌, ತೆರಿಗೆ ವಸೂಲಾತಿ ದಾಖಲೆಗಳು, ಕಟ್ಟಡ ನಿರ್ಮಾಣ ಪರವಾನಗಿ ಸಂಬಂಧಿತ ಕಡತಗಳು ಹಾಗೂ 15ನೇ ಹಣಕಾಸು ಯೋಜನೆಯ ಅನುದಾನ ಬಳಕೆಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಇದರ ಜೊತೆಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (PDO), ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿಯನ್ನು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ಸಾರ್ವಜನಿಕರಿಂದ ಬಂದಿರುವ ದೂರುಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ವಿವರಣೆ ಪಡೆಯಲಾಗುತ್ತಿದೆ.

ಲೋಕಾಯುಕ್ತ ಪೊಲೀಸರ ಈ ದಿಢೀರ್ ಕಾರ್ಯಾಚರಣೆಯಿಂದ ಗ್ರಾಮೀಣ ಭಾಗದ ಪಂಚಾಯತಿ ಕಚೇರಿಗಳಲ್ಲಿ ಭ್ರಷ್ಟಾಚಾರ ನಡೆಸುತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪರಿಶೀಲನೆ ವೇಳೆ ಯಾವುದೇ ಅಕ್ರಮ ಅಥವಾ ಲೋಪಗಳು ಪತ್ತೆಯಾಗಿವೆಯೇ ಎಂಬುದು ಲೋಕಾಯುಕ್ತ ಅಧಿಕಾರಿಗಳ ಸಂಪೂರ್ಣ ತಪಾಸಣೆಯ ಬಳಿಕ ಸ್ಪಷ್ಟವಾಗಲಿದೆ.