ಬ್ರೇಕಿಂಗ್ ನ್ಯೂಸ್

Forensic Expert Dr Mahabala Shetty, Dharmasthala case: ಧರ್ಮಸ್ಥಳ ಸ್ನಾನಘಟ್ಟ ಬಳಿ 20ಕ್ಕೂ ಹೆಚ್ಚು ಕೊಳೆತ ಶವಗಳನ್ನು ಪೋಸ್ಟ್ ಮಾರ್ಟಂ ಮಾಡಿದ್ದೆ, ಅವನ್ನು ಅಲ್ಲಿಯೇ ಹೂಳಲಾಗಿತ್ತು ; ಪ್ರಕರಣಕ್ಕೆ ಸ್ಫೋಟಕ ತಿರುವು ಕೊಟ್ಟ ಫಾರೆನ್ಸಿಕ್ ತಜ್ಞ ಡಾ.ಮಹಾಬಲ ಶೆಟ್ಟಿ    |    ಕನಸು ಕಮರಿಸಿದ ಅಪಘಾತ ; ವೈದ್ಯರ ಎಡವಟ್ಟು, ಸಕಾಲದಲ್ಲಿ ಚಿಕಿತ್ಸೆ ಸಿಗದೆ ಕೈಕಾಲಿನ ಶಕ್ತಿಯೇ ಊನ, ಕಂಗೆಟ್ಟ ವಿಶ್ವಕರ್ಮ ಕುಟುಂಬಕ್ಕೆ ಕ್ರಿಶ್ಚಿಯನ್ ಗೆಳೆಯರ ಆಸರೆ ! ಅರ್ಧಕ್ಕೆ ಉಳಿದುಬಿಟ್ಟ ಮನೆಗೆ ದಿಕ್ಕಿಲ್ಲದ ಸ್ಥಿತಿ, ಬೆಳಕು ಹರಿಸೀತೆ ಸಹೃದಯರ ಹಾರೈಕೆ ?!    |    Kannada Producer Ganesh, Film Dharmasthala File, Movie: 'ಧರ್ಮಸ್ಥಳ ಫೈಲ್ಸ್' ಸಿನಿಮಾ ಘೋಷಿಸಿದ ಕನ್ನಡದ ನಿರ್ಮಾಪಕ ಎ. ಗಣೇಶ್ ; ಸಮಸ್ಯೆ ಆದ್ರೆ ಚಿತ್ರತಂಡವೇ ಹೊಣೆ ಎಂಬ ಕಂಡೀಷನ್! ಕತೆ ಇನ್ನಷ್ಟೇ ಬರೆಸಬೇಕೆಂದ ಚಿತ್ರತಂಡ     |   

ಹುಸಿ ಕರೆ ಆರೋಪಿಗೆ ಆದಿತ್ಯನೇ ರೋಲ್ ಮಾಡೆಲ್ ! ಪ್ರಚಾರದ ಹುಚ್ಚಿಗೆ ಬಿದ್ದ ವಸಂತನಿಗೆ ಜೈಲು ಕಂಬಿಯೇ ಗತಿ !!  

21-08-20 02:05 pm       Mangalore Reporter   ಕರಾವಳಿ

ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟು ದೇಶ - ವಿದೇಶದಲ್ಲಿ ಪ್ರಚಾರ ಗಿಟ್ಟಿಸಿಕೊಂಡಿದ್ದ ಆದಿತ್ಯ ರಾವ್ ಈತನಿಗೂ ರೋಲ್ ಮಾಡೆಲ್ ಆಗಿದ್ನಂತೆ.

ಮಂಗಳೂರು, ಆಗಸ್ಟ್ 21: ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟು ದೇಶ - ವಿದೇಶದಲ್ಲಿ ಪ್ರಚಾರ ಗಿಟ್ಟಿಸಿಕೊಂಡಿದ್ದ ಆದಿತ್ಯ ರಾವ್ ಈತನಿಗೂ ರೋಲ್ ಮಾಡೆಲ್ ಆಗಿದ್ನಂತೆ. ಅದೇ ಕಾರಣಕ್ಕೆ ಆತ ಮಂಗಳೂರು ಏರ್ಪೋರ್ಟಿಗೆ ಬಾಂಬ್ ಇಟ್ಟಿರುವುದಾಗಿ ಹೇಳಿ ಈಗ ಜೈಲು ಕಂಬಿ ಎಣಿಸಿದ್ದಾನೆ. ಹೌದು.. ಎರಡು ದಿನಗಳ ಹಿಂದೆ ಏರ್ಪೋರ್ಟಿಗೆ ಬಾಂಬ್ ಕರೆ ಮಾಡಿ ಸಿಕ್ಕಿಬಿದ್ದ ಕಾರ್ಕಳದ ವಸಂತ ಶೇರಿಗಾರ್ ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ, ಪೊಲೀಸರಿಗೇ ಅಚ್ಚರಿಯಾಗಿತ್ತು. 

ಆರೋಪಿ ಬಗ್ಗೆ ಮಾಹಿತಿ ನೀಡಲು ಸುದ್ದಿಗೋಷ್ಟಿ ಕರೆದ ಮಂಗಳೂರು ಪೊಲೀಸ್ ಕಮಿಷನರ್ ವಿಕಾಶ್ ಕುಮಾರ್, ವಸಂತ ಶೇರಿಗಾರನ ಬಗ್ಗೆ ಅಚ್ಚರಿಯ ಮಾಹಿತಿ ಬಿಚ್ಚಿಟ್ಟಿದ್ದಾರೆ. ಬೆದರಿಕೆ ಕರೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ ಸಿಸಿಬಿ ಪೊಲೀಸರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿವಾಸಿ ವಸಂತ್ ಶೇರಿಗಾರ (33)  ಎಂಬವನನ್ನು ಬಂಧಿಸಿದ್ದು ಆದಿತ್ಯ ರಾವ್ ರೀತಿಯಲ್ಲಿ ಪ್ರಚಾರ ಗಿಟ್ಟಿಸುವುದಕ್ಕಾಗಿ ಬಾಂಬ್ ಇಟ್ಟಿದ್ದಾಗಿ ಹುಸಿ ಕರೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ. 

ಆಗಸ್ಟ್ 19ರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ವಿಮಾನ ನಿಲ್ದಾಣದ ಮಾಜಿ‌ ನಿರ್ದೇಶಕ ವಾಸುದೇವ ರಾವ್ ಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ, ಬಜ್ಪೆ ಏರ್ಪೋರ್ಟ್ ಗೆ ಬಾಂಬ್ ಇಟ್ಟಿದ್ದಾಗಿ ಹೇಳಿದ್ದ‌. ಅವರು ಕೂಡಲೇ ಮಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು‌. ಇದರಿಂದ ಗಾಬರಿಗೊಂಡ ಅಧಿಕಾರಿಗಳು ಮಂಗಳೂರು ಪೊಲೀಸರಿಗೆ ತಿಳಿಸಿದ್ದು ತಪಾಸಣೆ ಏರ್ಪಡಿಸಿದ್ದರು. ಇದೇ ವೇಳೆ, ಆರೋಪಿಯ ನಂಬರ್ ಟ್ರೇಸ್ ಮಾಡಿದ್ದು ಕಾರ್ಕಳದ ವಸಂತಕೃಷ್ಣ ಶೇರಿಗಾರ್ ಎಂದು ತೋರಿಸಿತ್ತು. ವಿಮಾನ ನಿಲ್ದಾಣ ಆಸುಪಾಸಿನಲ್ಲಿ ತಪಾಸಣೆ ನಡೆಸಿದಾಗ ಬಾಂಬ್ ಕರೆ ಹುಸಿಯೆಂದು ತಿಳಿದುಬಂದಿತ್ತು. ಅಲ್ಲದೆ, ಮಂಗಳೂರು ಪೊಲೀಸರು ನೇರವಾಗಿ ಕಾರ್ಕಳಕ್ಕೆ ತೆರಳಿ, ಸದ್ದಿಲ್ಲದ ಹಾಗೆ ಆರೋಪಿಯನ್ನು ಎತ್ತಾಕ್ಕೊಂಡು ಬಂದಿದ್ದಾರೆ. ವಿಚಾರಣೆ ನಡೆಸಿದಾಗ ಬಾಂಬ್ ಕರೆಯ ನಿಜ ವಿಚಾರ ಬಯಲಾಗಿದೆ. 

ಎಂಟನೇ ತರಗತಿ ಓದಿದ್ದ ವಸಂತ, ಬೆಂಗಳೂರಿನಲ್ಲಿ ಹೊಟೇಲಿನಲ್ಲಿ ಕೆಲಸಕ್ಕಿದ್ದ. ಲಾಕ್ ಡೌನ್ ಬಳಿಕ ಊರಿಗೆ ಬಂದಿದ್ದು ಮೊಬೈಲ್ ನಲ್ಲಿ ಹೆಚ್ಚು ಆಕ್ಟೀವ್ ಆಗಿದ್ದ. ಮನೆಯಲ್ಲಿ ಗದ್ದೆ ಕೆಲಸವನ್ನೂ ಮಾಡ್ತಿದ್ದ. ಇದೇ ವೇಳೆ ಗೂಗಲ್ನಲ್ಲಿ ಮಂಗಳೂರು ಏರ್ ಪೋರ್ಟ್ ಬಗ್ಗೆ ಸರ್ಚ್ ಮಾಡಿದಾಗ, ಮಾಜಿ ನಿರ್ದೇಶಕ ವಾಸುದೇವ ರಾವ್ ನಂಬರ್ ಸಿಕ್ಕಿತ್ತು. ಫೋನ್ ಕರೆ ಮಾಡಿ, ಈಗ ಪೊಲೀಸರ ಅತಿಥಿಯಾಗಿದ್ದಾನೆ. 

ಕಳೆದ ಜನವರಿ ತಿಂಗಳಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಚ್ಚಾ ಬಾಂಬ್ ಇರಿಸಿ ಬಂಧಿತನಾಗಿದ್ದ ಆದಿತ್ಯ ರಾವ್ ಒಂದೇ ದಿನ ರಾತ್ರಿ ಬೆಳಗಾಗುವುದರಲ್ಲಿ ದೇಶ - ವಿದೇಶದಲ್ಲಿ ಪ್ರಚಾರ ಪಡೆದಿದ್ದ. ಅದೇ ಪ್ರಕರಣದ ಬೆನ್ನು ಹತ್ತಿದ ವಸಂತ, ಆದಿತ್ಯನ ರೀತಿಯಲ್ಲಿ ದೇಶಾದ್ಯಂತ ಪ್ರಚಾರ ಗಿಟ್ಟಿಸಬೇಕೆಂದು ಈ ಕೆಲಸ ಮಾಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. 

ಆರೋಪಿ ವಸಂತ್ ವಿರುದ್ಧ ಗಂಭೀರ ಕಾಯ್ದೆಗಳಡಿ ಪ್ರಕರಣ ದಾಖಲಿಸಿದ್ದೇವೆ. ಆತನ ಮಾನಸಿಕ ಆರೋಗ್ಯದ ಬಗ್ಗೆ  ಮೆಡಿಕಲ್ ರಿಪೋರ್ಟ್ ಬರಬೇಕು. ಇದೊಂದು ಗಂಭೀರ ಪ್ರಕರಣವಾಗಿದ್ದು, ಹೆಚ್ಚಿನ ತನಿಖೆ ನಡೆಸುವುದಾಗಿ ಪೊಲೀಸ್ ಕಮಿಷನರ್ ವಿಕಾಶ್ ಕುಮಾರ್ ತಿಳಿಸಿದ್ದಾರೆ.