ಬ್ರೇಕಿಂಗ್ ನ್ಯೂಸ್

Forensic Expert Dr Mahabala Shetty, Dharmasthala case: ಧರ್ಮಸ್ಥಳ ಸ್ನಾನಘಟ್ಟ ಬಳಿ 20ಕ್ಕೂ ಹೆಚ್ಚು ಕೊಳೆತ ಶವಗಳನ್ನು ಪೋಸ್ಟ್ ಮಾರ್ಟಂ ಮಾಡಿದ್ದೆ, ಅವನ್ನು ಅಲ್ಲಿಯೇ ಹೂಳಲಾಗಿತ್ತು ; ಪ್ರಕರಣಕ್ಕೆ ಸ್ಫೋಟಕ ತಿರುವು ಕೊಟ್ಟ ಫಾರೆನ್ಸಿಕ್ ತಜ್ಞ ಡಾ.ಮಹಾಬಲ ಶೆಟ್ಟಿ    |    ಕನಸು ಕಮರಿಸಿದ ಅಪಘಾತ ; ವೈದ್ಯರ ಎಡವಟ್ಟು, ಸಕಾಲದಲ್ಲಿ ಚಿಕಿತ್ಸೆ ಸಿಗದೆ ಕೈಕಾಲಿನ ಶಕ್ತಿಯೇ ಊನ, ಕಂಗೆಟ್ಟ ವಿಶ್ವಕರ್ಮ ಕುಟುಂಬಕ್ಕೆ ಕ್ರಿಶ್ಚಿಯನ್ ಗೆಳೆಯರ ಆಸರೆ ! ಅರ್ಧಕ್ಕೆ ಉಳಿದುಬಿಟ್ಟ ಮನೆಗೆ ದಿಕ್ಕಿಲ್ಲದ ಸ್ಥಿತಿ, ಬೆಳಕು ಹರಿಸೀತೆ ಸಹೃದಯರ ಹಾರೈಕೆ ?!    |    Kannada Producer Ganesh, Film Dharmasthala File, Movie: 'ಧರ್ಮಸ್ಥಳ ಫೈಲ್ಸ್' ಸಿನಿಮಾ ಘೋಷಿಸಿದ ಕನ್ನಡದ ನಿರ್ಮಾಪಕ ಎ. ಗಣೇಶ್ ; ಸಮಸ್ಯೆ ಆದ್ರೆ ಚಿತ್ರತಂಡವೇ ಹೊಣೆ ಎಂಬ ಕಂಡೀಷನ್! ಕತೆ ಇನ್ನಷ್ಟೇ ಬರೆಸಬೇಕೆಂದ ಚಿತ್ರತಂಡ     |   

ಬೆಂಗಳೂರು ಗಲಭೆ ಹಿನ್ನೆಲೆ ; ಮಂಗಳೂರಿನಲ್ಲಿ ಆರ್ ಎಎಫ್ ಪಡೆ ನಿಯೋಜನೆ - ಧಾರ್ಮಿಕ ನಿಂದನೆ ಪೋಸ್ಟ್ ಬಗ್ಗೆ ನಿಗಾ 

13-08-20 04:25 pm       Mangalore Reporter   ಕರಾವಳಿ

ದ್ವೇಷದ ಕಿಡಿ ಕರಾವಳಿಯಲ್ಲೂ ಧಗಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ. ಸಾಮಾಜಿಕ ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಹೆಚ್ಚುವರಿ ಪೊಲೀಸ್ ಪಡೆಯನ್ನು ಮಂಗಳೂರಿಗೆ ಕರೆಸಿಕೊಳ್ಳಲಾಗಿದೆ.

ಮಂಗಳೂರು, ಆಗಸ್ಟ್ 13: ಬೆಂಗಳೂರಿನಲ್ಲಿ ಧಾರ್ಮಿಕ ನಿಂದನೆ ವಿಚಾರ ಹಿಂಸೆಯ ಕಿಡಿ ಎಬ್ಬಿಸಿದ ಬೆನ್ನಲ್ಲೇ ಕೋಮು ದಳ್ಳುರಿಯಲ್ಲಿ ಕುಖ್ಯಾತಿ ಗಳಿಸಿರುವ ಮಂಗಳೂರಿನಲ್ಲಿ ಪೊಲೀಸರು ಹೈ ಎಲರ್ಟ್ ಆಗಿದ್ದಾರೆ. ದ್ವೇಷದ ಕಿಡಿ ಕರಾವಳಿಯಲ್ಲೂ ಧಗಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ. 

ಈ ನಡುವೆ, ಸಾಮಾಜಿಕ ಜಾಲತಾಣಗಳಲ್ಲಿ ಹಳೆಯ ಪೋಸ್ಟ್ ಗಳನ್ನು ಹರಿಯ ಬಿಡಲಾಗುತ್ತಿದ್ದು ಹಿಂದು ದೇವ ನಿಂದೆಯ ಬಗ್ಗೆ ಯಾಕೆ ಕ್ರಮ ಕೈಗೊಂಡಿಲ್ಲ ಎನ್ನುವ ನೆಲೆಯಲ್ಲಿ ಪ್ರಶ್ನಿಸಿ ಪೋಸ್ಟ್ ಮಾಡಲಾಗುತ್ತಿದೆ‌. ನಾಲ್ಕು ವರ್ಷಗಳ ಹಿಂದೆ ಬಶೀರ್ ಅಡ್ಯಾರ್ ಎನ್ನುವ ಹೆಸರಿನ ನಕಲಿ ಖಾತೆಯಲ್ಲಿ ಲಕ್ಷ್ಮೀ ದೇವಿಯನ್ನು ವಿಕೃತವಾಗಿ ಚಿತ್ರಿಸಿ ಹಾಕಿದ್ದ ಪೋಸ್ಟ್ ಈಗ ವೈರಲ್ ಆಗುತ್ತಿದ್ದು ಹಿಂದು ಸಂಘಟನೆಗಳ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ಸೈಬರ್ ಪೊಲೀಸರು ಅಲರ್ಟ್ ಆಗಿದ್ದು ಇಂಥ ಪೋಸ್ಟ್ ಗಳನ್ನು ಹರಿಯಬಿಟ್ಟು ಕಮೆಂಟ್ಸ್ ಗಳನ್ನು ಮಾಡಿದರೆ ಕ್ರಮ ಕೈಗೊಳ್ಳುವ ಸೂಚನೆ ನೀಡಲಾಗಿದೆ. 

ಮಂಗಳೂರು ನಗರದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು ಈ ವಿಚಾರದಲ್ಲಿ ಸೈಬರ್ ಕ್ರೈಮ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ಹಾಗೂ ಇತರೆ ಯಾವುದೇ ಮತದ ಧಾರ್ಮಿಕ ವಿಚಾರಗಳಿಗೆ ಸಂಬಂಧ ಪಟ್ಟಂತೆ, ಯಾವುದೇ ವ್ಯಕ್ತಿಗಳು ಧಾರ್ಮಿಕ ಅವಹೇಳನ ಮಾಡುವ ವಿಚಾರಗಳನ್ನು ಸೃಷ್ಟಿಸುವುದಾಗಲಿ , ಹಂಚಿಕೊಳ್ಳುವುದಾಗಲಿ ಮತ್ತು ಅಭಿಪ್ರಾಯ ವ್ಯಕ್ತಪಡಿಸುವುದಾಗಲಿ ಅಥವಾ ಟೀಕೆ ಮಾಡವುದಾಗಲಿ ಕಂಡು ಬಂದರೆ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ಪ್ರಕಟಣೆ ಹೊರಡಿಸಿದ್ದಾರೆ. 

ಇದೇ ವೇಳೆ, ಸಾಮಾಜಿಕ ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಹೆಚ್ಚುವರಿ ಪೊಲೀಸ್ ಪಡೆಯನ್ನು ಮಂಗಳೂರಿಗೆ ಕರೆಸಿಕೊಳ್ಳಲಾಗಿದೆ. ಎರಡು ತುಕಡಿ ರ್ಯಾಪಿಡ್ ಆ್ಯಕ್ಷನ್ ಫೋರ್ಸ್ ಆಗಮಿಸಿದ್ದು ಮಂಗಳೂರಿನ ಬಂದರು ಪ್ರದೇಶದಲ್ಲಿ ಆರ್ ಎಎಫ್ ಮತ್ತು ಕೆಎಸ್ ಆರ್ ಪಿ ಪೊಲೀಸರು ಪಥ ಸಂಚಲನ ನಡೆಸಿದ್ದು ತಮ್ಮ ಇರವನ್ನು ತೋರಿಸಿದ್ದಾರೆ. 

ಕಳೆದ ಡಿಸೆಂಬರ್ ತಿಂಗಳಲ್ಲಿ ಮಂಗಳೂರಿನ ಬಂದರು ಪ್ರದೇಶದಲ್ಲಿ ಸಿಎಎ ವಿಚಾರದಲ್ಲಿ ಹೊತ್ತಿಕೊಂಡ ಪ್ರತಿಭಟನೆ ಬಳಿಕ ಹಿಂಸೆಗೆ ತಿರುಗಿ ಗೋಲಿಬಾರ್ ಗೆ ಕಾರಣವಾಗಿತ್ತು. ಅದೇ ರೀತಿಯ ಕೃತ್ಯ ಈಗ ಬೆಂಗಳೂರಿನಲ್ಲಿ ಮರುಕಳಿಸಿದ್ದು ಎರಡು ಘಟನೆಗಳ ನಡುವಿನ ಹೋಲಿಕೆಯನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಎರಡೂ ಘಟನೆಗಳಲ್ಲಿ ಎಸ್ಡಿಪಿಐ ಮತ್ತು ಪಿಎಫ್ಐ ಕಾರ್ಯಕರ್ತರ ಪಾತ್ರದ ಬಗ್ಗೆ ಆರೋಪ ಕೇಳಿಬಂದಿರುವ ಹಿನ್ನೆಲೆ ಈ ಎರಡೂ ಸಂಘಟನೆಗಳು ಪ್ರಬಲವಾಗಿರುವ ಮಂಗಳೂರಿನಲ್ಲಿ ಭದ್ರತೆ ಹೆಚ್ಚಿಸಲಾಗಿದೆ.