ಮಂಗಳೂರಿನಲ್ಲಿ ಜಾಂಡೀಸ್ ಆತಂಕ ; ಎರಡು ವಾರಗಳಲ್ಲಿ 19 ಹೊಸ ಪ್ರಕರಣ, ಆರೋಗ್ಯ ಇಲಾಖೆ ಎಚ್ಚರಿಕೆ

10-07-26 05:25 pm       HK News Staffer   ಕರಾವಳಿ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎರಡು ಪ್ರಮುಖ ವಾರ್ಡ್‌ಗಳಲ್ಲಿ ಅರಿಶಿನ ಕಾಮಾಲೆ (ಜಾಂಡೀಸ್) ಅಥವಾ ಹೆಪಟೈಟಿಸ್ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಜೂನ್ 23ರಿಂದ ಜುಲೈ 9ರವರೆಗೆ ಕೇವಲ ಎರಡು ವಾರಗಳ ಅವಧಿಯಲ್ಲಿ 19 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲಾ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ತೀವ್ರಗೊಳಿಸಿದೆ.

ಮಂಗಳೂರು, , ಜುಲೈ 10: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎರಡು ಪ್ರಮುಖ ವಾರ್ಡ್‌ಗಳಲ್ಲಿ ಅರಿಶಿನ ಕಾಮಾಲೆ (ಜಾಂಡೀಸ್) ಅಥವಾ ಹೆಪಟೈಟಿಸ್ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಜೂನ್ 23ರಿಂದ ಜುಲೈ 9ರವರೆಗೆ ಕೇವಲ ಎರಡು ವಾರಗಳ ಅವಧಿಯಲ್ಲಿ 19 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲಾ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ತೀವ್ರಗೊಳಿಸಿದೆ.

ಮಂಗಳೂರಿನ ಡೋಂಗರಕೇರಿ, ಅಳಕೆ ಹಾಗೂ ಕುದ್ರೋಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಂಕು ಪ್ರಕರಣಗಳು ಹೆಚ್ಚಾಗಿ ಕಂಡುಬಂದಿವೆ. ಸೋಂಕು ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಮನೆ ಮನೆ ಸಮೀಕ್ಷೆ, ನೀರಿನ ಪರೀಕ್ಷೆ ಹಾಗೂ ಜಾಗೃತಿ ಕಾರ್ಯಾಚರಣೆಗಳನ್ನು ಆರಂಭಿಸಿದೆ.

ಆದರೆ, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಆರೋಗ್ಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪತ್ತೆಯಾಗಿರುವ ಪ್ರಕರಣಗಳು ಒಂದೇ ಮೂಲದಿಂದ ಹರಡಿರುವ ಕ್ಲಸ್ಟರ್ ಸೋಂಕು ಅಲ್ಲ. ನಗರದ ವಿವಿಧ ಭಾಗಗಳಲ್ಲಿ ಪ್ರತ್ಯೇಕವಾಗಿ ಪ್ರಕರಣಗಳು ವರದಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಪಟೈಟಿಸ್‌ ‘ಎ’ ವೈರಸ್‌ನ ಇನ್‌ಕ್ಯುಬೇಷನ್ ಅವಧಿ 30ರಿಂದ 45 ದಿನಗಳವರೆಗೆ ಇರುವುದರಿಂದ ಸೋಂಕು ಯಾವ ಸ್ಥಳದಿಂದ ಹರಡಿದೆ ಎಂಬುದನ್ನು ನಿಖರವಾಗಿ ಪತ್ತೆಹಚ್ಚುವುದು ಕಷ್ಟವಾಗಿದೆ. ಜನರು ವಿವಿಧ ಪ್ರದೇಶಗಳಿಗೆ ಸಂಚರಿಸುವ ವೇಳೆ ಕಲುಷಿತ ನೀರು ಅಥವಾ ಆಹಾರ ಸೇವಿಸಿರುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ವಿವರಿಸಿದೆ.

ಜಿಲ್ಲೆಯಲ್ಲಿ ಈ ವರ್ಷದ ಜೂನ್ ಅಂತ್ಯದವರೆಗೆ ಹೆಪಟೈಟಿಸ್‌ (ಎ ಮತ್ತು ಇ) ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಒಟ್ಟು 35 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಜೂನ್ 23ರಿಂದ ಜುಲೈ 9ರ ನಡುವೆ ಮಂಗಳೂರು ನಗರದ ಎರಡು ವಾರ್ಡ್‌ಗಳಲ್ಲೇ 19 ಪ್ರಕರಣಗಳು ಪತ್ತೆಯಾಗಿವೆ.

ಸೋಂಕು ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ಈಗಾಗಲೇ ಜಿಲ್ಲೆಯಾದ್ಯಂತ 800ಕ್ಕೂ ಹೆಚ್ಚು ಕಡೆಗಳಲ್ಲಿ ಸಮೀಕ್ಷೆ ನಡೆಸಿದೆ. 40 ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 27 ಮಾದರಿಗಳ ವರದಿ ಲಭ್ಯವಾಗಿದೆ. ಒಂದು ಕಡೆ ಕುಡಿಯುವ ನೀರು ಇ-ಕೋಲಿ ಬ್ಯಾಕ್ಟೀರಿಯಾದಿಂದ ಕಲುಷಿತವಾಗಿರುವುದು ಪತ್ತೆಯಾಗಿದೆ.

ಡೋಂಗರಕೇರಿ, ಅಳಕೆ ಹಾಗೂ ಕುದ್ರೋಳಿ ಭಾಗಗಳಲ್ಲಿ ಬಾವಿ ನೀರು ಮತ್ತು ಕುಡಿಯುವ ನೀರಿನ ಮೂಲಗಳಿಗೆ ಕ್ಲೋರಿನೇಷನ್ ಮಾಡಲಾಗುತ್ತಿದೆ. ಆರೋಗ್ಯ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಸಾರ್ವಜನಿಕರಲ್ಲಿ ಸ್ವಚ್ಛತೆ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

ಹೆಪಟೈಟಿಸ್‌ನಲ್ಲಿ ಎ, ಬಿ, ಸಿ, ಡಿ ಹಾಗೂ ಇ ಎಂಬ ಐದು ವಿಧಗಳಿವೆ. ಹೆಪಟೈಟಿಸ್‌ ‘ಎ’ ಮತ್ತು ‘ಇ’ ಮುಖ್ಯವಾಗಿ ಕಲುಷಿತ ನೀರು ಹಾಗೂ ಆಹಾರದ ಮೂಲಕ ಹರಡುತ್ತವೆ. ಸಾಮಾನ್ಯವಾಗಿ ಇವು ಕೆಲ ವಾರಗಳಲ್ಲಿ ಗುಣಮುಖವಾಗುತ್ತವೆ. ಆದರೆ ಗರ್ಭಿಣಿಯರಲ್ಲಿ ಹೆಪಟೈಟಿಸ್‌ ‘ಇ’ ಗಂಭೀರ ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ.

ಹೆಪಟೈಟಿಸ್‌ ‘ಬಿ’, ‘ಸಿ’ ಹಾಗೂ ‘ಡಿ’ ಸೋಂಕುಗಳು ರಕ್ತ, ಅಸುರಕ್ಷಿತ ಲೈಂಗಿಕ ಸಂಪರ್ಕ, ಸೋಂಕಿತ ಸೂಜಿ ಹಾಗೂ ವೈದ್ಯಕೀಯ ಉಪಕರಣಗಳ ಮೂಲಕ ಹರಡುತ್ತವೆ. ಹೆಪಟೈಟಿಸ್‌ ‘ಬಿ’ ತೀವ್ರ ಸ್ವರೂಪ ಪಡೆದರೆ ಲಿವರ್ ಕ್ಯಾನ್ಸರ್‌ಗೆ ಕಾರಣವಾಗುವ ಸಾಧ್ಯತೆಯೂ ಇದೆ.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಹೆಚ್.ಆರ್. ತಿಮ್ಮಯ್ಯ ಅವರು, ಹೆಪಟೈಟಿಸ್‌ ‘ಬಿ’ ವಿರುದ್ಧ ಪರಿಣಾಮಕಾರಿ ಲಸಿಕೆ ಲಭ್ಯವಿದ್ದು, ಮಕ್ಕಳಿಗೆ ನಿಗದಿತ ಅವಧಿಯಲ್ಲಿ ಲಸಿಕೆ ಕೊಡಿಸುವಂತೆ ಮನವಿ ಮಾಡಿದ್ದಾರೆ. ಹುಟ್ಟಿದ ತಕ್ಷಣ, 6ನೇ ವಾರ, 10ನೇ ವಾರ ಹಾಗೂ 14ನೇ ವಾರದಲ್ಲಿ ಒಟ್ಟು ನಾಲ್ಕು ಡೋಸ್ ಲಸಿಕೆ ನೀಡುವುದು ಅಗತ್ಯ ಎಂದು ತಿಳಿಸಿದ್ದಾರೆ.

ಸಾರ್ವಜನಿಕರು ಕುದಿಸಿ ಆರಿಸಿದ ನೀರನ್ನೇ ಕುಡಿಯಬೇಕು. ಹೊರಗಡೆ ಸಿಗುವ ಬೇಯಿಸದ ಆಹಾರ ಪದಾರ್ಥಗಳು, ಜ್ಯೂಸ್, ಮಜ್ಜಿಗೆ, ಪಾನಕ ಹಾಗೂ ಕೋಸಂಬರಿಗಳನ್ನು ಸೇವಿಸುವುದನ್ನು ತಪ್ಪಿಸಬೇಕು. ಶೌಚಾಲಯ ಬಳಕೆ ಬಳಿಕ ಮತ್ತು ಆಹಾರ ಸೇವಿಸುವ ಮುನ್ನ ಸಾಬೂನಿನಿಂದ ಕೈ ತೊಳೆಯುವುದು ಕಡ್ಡಾಯವಾಗಿದೆ.

ಜ್ವರ, ಆಯಾಸ, ವಾಕರಿಕೆ, ಹೊಟ್ಟೆನೋವು ಹಾಗೂ ಮೂತ್ರ ಗಾಢ ಹಳದಿ ಬಣ್ಣಕ್ಕೆ ತಿರುಗುವಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ. ಸ್ವಯಂ ಔಷಧಿ ಅಥವಾ ನಾಟಿ ಚಿಕಿತ್ಸೆ ಮಾಡಿಕೊಳ್ಳದಂತೆ ಎಚ್ಚರಿಕೆ ನೀಡಲಾಗಿದೆ.

ಸಾರ್ವಜನಿಕರಿಗೆ ಮಾಹಿತಿ ಅಥವಾ ನೆರವು ಅಗತ್ಯವಿದ್ದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಗಳ ಸಹಾಯವಾಣಿ ಸಂಖ್ಯೆ 9449843050ಕ್ಕೆ ಕರೆ ಮಾಡಬಹುದು ಅಥವಾ ವಾಟ್ಸ್ಆ್ಯಪ್ ಮೂಲಕ ಮಾಹಿತಿ ಕಳುಹಿಸಬಹುದು ಎಂದು ಇಲಾಖೆ ತಿಳಿಸಿದೆ.