ಎಷ್ಟು ಮರ್ಡರ್ ಆಗಿದೆ, ಎಷ್ಟು ಮಂದಿಗೆ ಗುಂಡು ಹೊಡೆದಿದ್ದೀರಿ..? ಕಮಿಷನರ್ ಸುಧೀರ್ ರೆಡ್ಡಿ ಮುಂದೆ ಖದರ್ ತೋರಿಸಲು ಹೋಗಿ ಸಚಿವ ಖಾದರ್ ನಗೆಪಾಟಲು, ಜಾಲತಾಣದಲ್ಲಿ ಹಿಗ್ಗಾಮುಗ್ಗಾ ತರಾಟೆ

06-07-26 10:00 pm       HK News Desk   ಕರಾವಳಿ

ಮೂರು ವರ್ಷ ವಿಧಾನಸಭೆ ಸ್ಪೀಕರ್ ಆಗಿದ್ದ ಮಂಗಳೂರಿನ ಶಾಸಕ ಯು.ಟಿ.ಖಾದರ್ ಈಗ ಸಿಎಂ ಡಿಕೆಶಿ ಸಂಪುಟದಲ್ಲಿ ಆರೋಗ್ಯ ಸಚಿವರಾಗಿದ್ದಾರೆ. ಅಷ್ಟೇ ಅಲ್ಲ, ಮಳೆಗಾಲದ ನೆಪದಲ್ಲಿ ಪ್ರಾಕೃತಿಕ ವಿಕೋಪದ ಉದ್ದೇಶಕ್ಕೆ ನಾಲ್ಕು ಜಿಲ್ಲೆಯ ಉಸ್ತುವಾರಿಯನ್ನೂ ಪಡೆದಿದ್ದಾರೆ.

ಮಂಗಳೂರು, ಜುಲೈ 6: ಮೂರು ವರ್ಷ ವಿಧಾನಸಭೆ ಸ್ಪೀಕರ್ ಆಗಿದ್ದ ಮಂಗಳೂರಿನ ಶಾಸಕ ಯು.ಟಿ.ಖಾದರ್ ಈಗ ಸಿಎಂ ಡಿಕೆಶಿ ಸಂಪುಟದಲ್ಲಿ ಆರೋಗ್ಯ ಸಚಿವರಾಗಿದ್ದಾರೆ. ಅಷ್ಟೇ ಅಲ್ಲ, ಮಳೆಗಾಲದ ನೆಪದಲ್ಲಿ ಪ್ರಾಕೃತಿಕ ವಿಕೋಪದ ಉದ್ದೇಶಕ್ಕೆ ನಾಲ್ಕು ಜಿಲ್ಲೆಯ ಉಸ್ತುವಾರಿಯನ್ನೂ ಪಡೆದಿದ್ದಾರೆ. ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ವಿಪತ್ತು ನಿರ್ವಹಣಾ ಸಭೆಯಲ್ಲಿ ಸಚಿವ ಖಾದರ್, ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಜೊತೆಗೆ ಆಡಿರುವ ಮಾತು ಈಗ ತೀವ್ರ ಚರ್ಚೆ ಮತ್ತು ಟೀಕೆಗೆ ಗುರಿಯಾಗಿದೆ.

ಎಷ್ಟು ಮರ್ಡರ್ ಆಗಿದೆ, ಎಷ್ಟು ಗಡೀಪಾರು ಮಾಡಿದ್ದೀರಿ, ಎಷ್ಟು ಮಂದಿಗೆ ಕಾಲಿಗೆ ಗುಂಡು ಹೊಡೆದಿದ್ದೀರಿ ಎನ್ನುವ ಕ್ಷುಲ್ಲಕ ಪ್ರಶ್ನೆಗಳನ್ನೆತ್ತಿ ಖಾದರ್ ಸಾಹೇಬರು ಸ್ವಯಂ ಆಗಿಯೇ ನಗೆಪಾಟಲಿಗೀಡಾಗಿದ್ದಾರೆ. ಇಷ್ಟಕ್ಕೂ ಮಂಗಳೂರಿಗೆ ಕಮಿಷನರ್ ಸುಧೀರ್ ರೆಡ್ಡಿ ಬಂದ ಕಳೆದೊಂದು ವರ್ಷದಲ್ಲಿ ಶಾಂತಿ ನೆಲೆಸಿದೆ. ಕೋಮು ದ್ವೇಷದ ಪೋಸ್ಟ್ ಗಳು, ದ್ವೇಷದ ಭಾಷಣಗಳಿಗೆ ಕಡಿವಾಣ ಬಿದ್ದಿದೆ. ದೋ ನಂಬರ್ ಬಿಸ್ನೆಸ್ ಗಳಂಥ ಅಕ್ರಮ ಚಟುವಟಿಕೆಗಳಿಗೂ ಸಾಕಷ್ಟು ನಿಯಂತ್ರಣ ಹೇರಲಾಗಿದೆ. ಆದರೆ ಖಾದರ್ ಸಾಹೇಬರು ಮಾತ್ರ ಇದ್ಯಾವುದೂ ತನ್ನ ಗಣನೆಯಲ್ಲಿ ಇಲ್ಲ ಎನ್ನುವಂತೆ ಸಭೆಯಲ್ಲಿ ವರ್ತಿಸಿದ್ದಾರೆ.

ಸಭೆಯಲ್ಲಿ ಎಷ್ಟು ದರೋಡೆ ಆಗಿದೆ, ಎಷ್ಟು ಮರ್ಡರ್ ಆಗಿದೆ, ಎಷ್ಟು ಮಂದಿಗೆ ಕಾಲಿಗೆ ಗುಂಡು ಹೊಡೆದಿದ್ದೀರಿ ಎನ್ನುವಂಥ ಪ್ರಶ್ನೆಗಳನ್ನು ಬಹಿರಂಗವಾಗಿಯೇ ಪೊಲೀಸ್ ಅಧಿಕಾರಿಗೆ ಕೇಳಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ಸಭೆಯಲ್ಲಿ ಇವರಾಡಿರುವ ಮಾತುಗಳ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ಸ್ಪೀಕರ್ ಬಳಿಕ ಸಚಿವರಾಗಿರುವ ಖಾದರ್ ನಡವಳಿಕೆಗೆ ಜನರು ಜಾಲತಾಣದಲ್ಲಿ ಉಗಿಯುತ್ತಿದ್ದಾರೆ. ಹಿಂದೆ ಸಂದೀಪ್ ಪಾಟೀಲ್ ಇದ್ದಾಗ ರೌಡಿಗಳಿಗೆ ಕಾಲಿಗೆ ಗುಂಡು ಹೊಡೆಯುತ್ತಿದ್ದರು. ಅದರಿಂದಾಗಿ ಸಾಕಷ್ಟು ಮಂದಿಯ ತಂದೆ, ತಾಯಿಗಳು ನನ್ನಲ್ಲಿಗೆ ಬಂದಿದ್ದರು. ಕೆಲವರ ಪತ್ನಿಯರು, ಮದುವೆ ಆಗಲಿಕ್ಕಿದ್ದವರು ಕೂಡ ನನ್ನ ಮುಂದೆ ಬಂದು ಅಂಗಲಾಚಿದ್ದರು. ಆ ರೀತಿ ಜನರಲ್ಲಿ ಭಯವನ್ನು ಮೂಡಿಸಬೇಕು ಎಂಬ ಮಾತುಗಳನ್ನು ಖಾದರ್ ಆಡಿದ್ದಲ್ಲದೆ, ಸಭೆಯ ಮೂಲಕ ಸೂಚನೆಗಳನ್ನು ನೀಡಿದ್ದಾರೆ.

ದರೋಡೆ, ಮರ್ಡರ್ ಆಗೋದನ್ನು ತಪ್ಪಿಸಲು ಕಾಲಿಗೆ ಗುಂಡು ಹಾರಿಸೋದೇ ಆಗಿದ್ದರೆ ಎಲ್ಲದಕ್ಕೂ ಗುಂಡು ಹಾರಿಸಿಯೇ ಗಲ್ಫ್ ರೀತಿಯ ಕಾನೂನು ತರಬಹುದಲ್ಲವೇ ಖಾದರ್ ಸಾಹೇಬ್ರೆ ಎಂದು ಜಾಲತಾಣದಲ್ಲಿ ಪ್ರಗತಿಪರರು ತರಾಟೆಗೆತ್ತಿಕೊಂಡಿದ್ದಾರೆ. ಭಾರತೀಯ ಕಾನೂನಿನಡಿ ಇವಕ್ಕೆಲ್ಲ ಅವಕಾಶ ಇದೆಯೇ, ಇಲ್ಲವೇ ಎನ್ನುವ ಕನಿಷ್ಠ ಜ್ಞಾನ ಇಲ್ಲದೆ ಆಡಿರುವ ಮಾತುಗಳಂತೂ ಅಲ್ಲ. ಹಾಗಾದ್ರೆ ಅಧಿಕೃತ ಸಭೆಯಲ್ಲಿ ಮೀಡಿಯಾ ಕ್ಯಾಮರಾಗಳ ಮುಂದೆ ಪ್ರಚಾರಕ್ಕಾಗಿ ಇಂಥ ಮಾತುಗಳನ್ನು ಆಡಿದ್ದೀರಾ ಎಂಬ ಪ್ರಶ್ನೆಗಳನ್ನು ಜನರು ಕೇಳುತ್ತಿದ್ದಾರೆ. ಕಳೆದ ಬಾರಿ ಅನುಪಮ್ ಅಗರ್ವಾಲ್ ಕಮಿಷನರ್ ಆಗಿದ್ದಾಗ ಬೆನ್ನು ಬೆನ್ನಿಗೆ ಕೋಮು ದ್ವೇಷದ ಕೊಲೆಗಳಾಗಿದ್ದವು. ಜಾಲತಾಣದಲ್ಲಿ ದ್ವೇಷದ ಪೋಸ್ಟ್ ಗಳು ಕಾಣಿಸಿಕೊಂಡು ಸಮಾಜದ ಶಾಂತಿಯೇ ಕದಡಿ ಹೋಗಿತ್ತು. ಅಗರ್ವಾಲ್ ಅವರನ್ನು ಸ್ಪೀಕರ್ ಆಪ್ತರೇ ಮಂಗಳೂರಿಗೆ ತರಿಸಿಕೊಂಡಿದ್ದರು, ಇಲ್ಲಿಯೇ ಉಳಿಸಿಕೊಂಡಿದ್ದರು ಅನ್ನುವ ಆಪಾದನೆಗಳಿದ್ದವು.

ಕೋಮು ದ್ವೇಷದ ವಾತಾವರಣ ತೀರಾ ಅತಿಯಾಯ್ತು ಅನ್ನುವಾಗ ಕಟ್ಟರ್ ಮತ್ತು ದಕ್ಷ ಅಧಿಕಾರಿಯೊಬ್ಬರನ್ನು ಮಂಗಳೂರಿಗೆ ಹಾಕಬೇಕು ಅನ್ನುವುದನ್ನು ಬಿಕೆ ಹರಿಪ್ರಸಾದ್ ರಂಥ ಹಿರಿಯರು ಆಗಿನ ಸಿಎಂ ಸಿದ್ದರಾಮಯ್ಯ ಅವರಲ್ಲಿ ಕೇಳಿಕೊಂಡಿದ್ದರಿಂದ ಸುಧೀರ್ ರೆಡ್ಡಿ ನೇಮಕ ಆಗಿತ್ತು. ಈ ಹಿಂದೆ ಮಂಗಳೂರು ಎಸ್ಪಿ ಆಗಿದ್ದ ರೆಡ್ಡಿ ಬಂದರೂ ಇಲ್ಲಿನ ರಾಜಕಾರಣಿಗಳು ಹೆಚ್ಚು ಕಾಲ ಉಳಿಸಿಕೊಳ್ಳಲಿಕ್ಕಿಲ್ಲ ಅನ್ನುವ ಮಾತೂ ಕೇಳಿಬಂದಿತ್ತು. ಆದರೆ ಈ ಅಪವಾದವನ್ನು ಸ್ವಲ್ಪ ಮಟ್ಟಿಗೆ ರಾಜಕಾರಣಿಗಳೇ ನೀಗಿಸಿಕೊಂಡಿದ್ದಾರೆ. 

ಸುಧೀರ್ ರೆಡ್ಡಿ ಬಂದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಸ್ಥಿತಿಯೇ ಬದಲಾಗಿತ್ತು. ಪೊಲೀಸ್ ಠಾಣೆಗಳ ಕಾರ್ಯ ವೈಖರಿಯೂ ಸಾಕಷ್ಟು ಬದಲಾಗಿದೆ. ಯಾರ ಕಾಲಿಗೂ ಗುಂಡು ಹಾರಿಸದೆಯೇ ರೌಡಿಗಳಲ್ಲಿ ಭಯ ಮೂಡಿಸಿದ್ದಾರೆ. ಹತ್ತಾರು ವರ್ಷಗಳಿಂದ ತಲೆಮರೆಸಿಕೊಂಡಿದ್ದ, ಸೈಬರ್ ಅಪರಾಧ ಎಸಗಿ ವಿದೇಶಗಳಲ್ಲಿ ಅವಿತುಕೊಂಡಿದ್ದವರನ್ನು ಸದ್ದಿಲ್ಲದೆ ಎತ್ತಾಕ್ಕೊಂಡು ಬರುವಂತೆ ಮಾಡಿದ್ದಾರೆ. ಗಾಂಜಾ, ಡ್ರಗ್ಸ್ ದಂಧೆಯಲ್ಲಿದ್ದ ನೂರಕ್ಕೂ ಹೆಚ್ಚು ಮಂದಿಯನ್ನು ಜೈಲಿಗೆ ತಳ್ಳಿದ್ದಾರೆ. ಇವೆಲ್ಲ ಕಾರಣದಿಂದ ರಾಜಕಾರಣಿಗಳ ಬಾಲಂಗೋಚಿಗಳ ಕಾರುಬಾರಿಗೆ ಸ್ವಲ್ಪ ಬ್ರೇಕ್ ಬಿದ್ದಿರಬಹುದು. ದೋ ನಂಬರ್ ವ್ಯವಹಾರದಲ್ಲಿ ಬರುತ್ತಿದ್ದ ಮಾಮೂಲಿಗಳಿಗೆ ಸ್ಟಾಪ್ ಬಿದ್ದಿರಬಹುದು. ಹಾಗಂತ, ಖಾದರ್ ಸಚಿವರಾಗಿ ಅಧಿಕಾರ ಬಂತು ಅನ್ನೋ ದರ್ಪದಲ್ಲಿ ರೇಷನ್ ಅಂಗಡಿಯಲ್ಲಿ ಅಕ್ಕಿ, ಬೇಳೆ ಮೂಟೆಗಳ ಲೆಕ್ಕ ಕೇಳೋ ರೀತಿ ಕಮಿಷನರ್ ಅವರಲ್ಲಿ ಮರ್ಡರ್ ಲೆಕ್ಕ ಕೇಳಿ ತಮ್ಮದೇ ಘನತೆಯನ್ನು ಕುಂದಿಸಿಕೊಂಡಿದ್ದಾರೆ ಎನ್ನುವ ಮಾತನ್ನು ಜನಸಾಮಾನ್ಯರು ಆಡುವಂತಾಗಿದೆ.

Karnataka Health Minister and Mangaluru MLA U.T. Khader has come under criticism on social media following his remarks to Mangaluru Police Commissioner Sudheer Kumar Reddy during a district disaster management review meeting held at the Deputy Commissioner's office.