ಶೀಘ್ರದಲ್ಲೇ ಸ್ಕ್ಯಾನ್ ಜೆಟ್ ವಿಮಾನ ಸೇವೆ ; ವಿಜಯ್ ಮಲ್ಯ ಬಳಿಕ ಮತ್ತೊಬ್ಬ ಕನ್ನಡಿಗನಿಂದ ಹೊಸ ಸಾಹಸ, ಮಂಗಳೂರು ಮೂಲದ ಉದ್ಯಮಿ ವಿಶ್ವಪ್ರಸಾದ್ ಆಳ್ವ ಕನಸು ಸಾಕಾರಕ್ಕೆ ಮುಹೂರ್ತ

31-12-25 11:47 am       Mangalore Correspondent   ಕರಾವಳಿ

ವಿಮಾನಯಾನ ಕ್ಷೇತ್ರದಲ್ಲಿ ಸದ್ಯಕ್ಕೆ ಭಾರತದಲ್ಲಿ ಏರ್ ಇಂಡಿಯಾ, ಸ್ಪೈಸ್ ಜೆಟ್, ಇಂಡಿಗೋ ಸಂಸ್ಥೆಗಳದ್ದೇ ಕಾರುಬಾರು. ಆದರೆ ಇಂಥ ದೊಡ್ಡ ಕಂಪನಿಗಳ ನಡುವೆ ಮಂಗಳೂರು ಮೂಲದ ಉದ್ಯಮಿಯೊಬ್ಬರು ಹೊಸತಾಗಿ ವಿಮಾನ ಯಾನ ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ. ಸ್ಕ್ಯಾನ್ ಜೆಟ್ ಹೆಸರಿನಲ್ಲಿ ಹೊಸದೊಂದು ವಿಮಾನ ಶೀಘ್ರದಲ್ಲೇ ಪ್ರಾದೇಶಿಕವಾಗಿ ಸೇವೆ ಆರಂಭಿಸಲಿದೆ.

ಮಂಗಳೂರು, ಡಿ.31 : ವಿಮಾನಯಾನ ಕ್ಷೇತ್ರದಲ್ಲಿ ಸದ್ಯಕ್ಕೆ ಭಾರತದಲ್ಲಿ ಏರ್ ಇಂಡಿಯಾ, ಸ್ಪೈಸ್ ಜೆಟ್, ಇಂಡಿಗೋ ಸಂಸ್ಥೆಗಳದ್ದೇ ಕಾರುಬಾರು. ಆದರೆ ಇಂಥ ದೊಡ್ಡ ಕಂಪನಿಗಳ ನಡುವೆ ಮಂಗಳೂರು ಮೂಲದ ಉದ್ಯಮಿಯೊಬ್ಬರು ಹೊಸತಾಗಿ ವಿಮಾನ ಯಾನ ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ. ಸ್ಕ್ಯಾನ್ ಜೆಟ್ ಹೆಸರಿನಲ್ಲಿ ಹೊಸದೊಂದು ವಿಮಾನ ಶೀಘ್ರದಲ್ಲೇ ಪ್ರಾದೇಶಿಕವಾಗಿ ಸೇವೆ ಆರಂಭಿಸಲಿದೆ.

ಮೈಸೂರಿನಲ್ಲಿ ಆರಂಭಗೊಂಡು ಪ್ರಸಕ್ತ ಜಗತ್ತಿನ 80ಕ್ಕೂ ಹೆಚ್ಚು ದೇಶಗಳಿಗೆ ವೈದ್ಯಕೀಯ ಉಪಕರಣಗಳು ಹಾಗೂ ಸಲಕರಣೆಗಳನ್ನು ಪೂರೈಸುತ್ತಿರುವ ಸ್ಕ್ಯಾನ್ ರೇ ಎಂಬ ಸಂಸ್ಥೆ ವಿಮಾನ ಯಾನ ಕ್ಷೇತ್ರಕ್ಕೆ ಕೈಹಾಕಿದೆ. ಅಂದಹಾಗೆ, ಈ ಸ್ಕ್ಯಾನ್ ರೇ ಸಂಸ್ಥೆಯನ್ನು ಹುಟ್ಟುಹಾಕಿದ್ದು ಮಂಗಳೂರು ಹೊರವಲಯದ ಗುರುಪುರ ಬಳಿಯ ಕಂದಾವರ ಮೂಲದ ಉದ್ಯಮಿ ವಿಶ್ವಪ್ರಸಾದ್ ಆಳ್ವ. ವೈದ್ಯಕೀಯ ಕ್ಷೇತ್ರದಲ್ಲಿ ಜಾಗತಿಕ ಮನ್ನಣೆ ಹೊಂದಿರುವ ಈ ಕಂಪನಿಯೀಗ ಸುಮಾರು 200 ಕೋಟಿ ಹೂಡಿಕೆ ಮಾಡಿ ವಿಮಾನ ಸೇವೆಗೆ ಮುಂದಾಗಿದೆ.

Vijay Mallya challenges bankruptcy proceedings in London HC, seeks  annulment - The Economic Times

ಮಂಗಳೂರಿನ ವ್ಯಕ್ತಿಯೊಬ್ಬರು ವಿಮಾನ ಸೇವೆಗೆ ಮುಂದಾಗಿರುವುದು ಇಡೀ ರಾಜ್ಯದ ಕನ್ನಡಿಗರು ಹೆಮ್ಮೆ ಪಡುವ ಸಂಗತಿಯಾಗಿದೆ. ಈ ಹಿಂದೆ ದಕ್ಷಿಣ ಕನ್ನಡ ಮೂಲದ ವಿಜಯ್ ಮಲ್ಯ ಕಿಂಗ್ ಫಿಶರ್ ಹೆಸರಲ್ಲಿ ವಿಮಾನ ಸೇವೆ ನಡೆಸುತ್ತಿದ್ದರೂ, ಬದಲಾದ ಕಾಲಘಟ್ಟದಲ್ಲಿ 2012-13ರಲ್ಲಿ ಆರ್ಥಿಕ ಕುಸಿತಕ್ಕೊಳಗಾಗಿ ಸಂಸ್ಥೆಯೇ ಬಂದ್ ಆಗಿತ್ತು. ಆನಂತರ, ಭಾರತ ಸರಕಾರದ ಅಧೀನದಲ್ಲಿದ್ದ ಏರ್ ಇಂಡಿಯಾ ಸಂಸ್ಥೆಯನ್ನು ಟಾಟಾ ಕಂಪನಿಯವರೇ ಖರೀದಿಸಿ, ಈಗ ಸಾವಿರಾರು ವಿಮಾನಗಳನ್ನು ಒಂದೇ ಸೂರಿನಲ್ಲಿ ಮುನ್ನಡೆಸುತ್ತಿದ್ದಾರೆ. ವಿಜಯ್ ಮಲ್ಯ ಬಳಿಕ ಮಂಗಳೂರಿನವರೇ ಆದ ಮತ್ತೊಬ್ಬ ಉದ್ಯಮಿಯೀಗ ಗಗನ ಯಾನ ಕ್ಷೇತ್ರದ ಸಾಹಸಕ್ಕೆ ಮುಂದಾಗಿದ್ದಾರೆ. 

Air India - Wikipedia

ಸ್ಕ್ಯಾನ್ ಜೆಟ್ ಆರಂಭದಲ್ಲಿ ಮೈಸೂರು ಕೇಂದ್ರಿತವಾಗಿ ದೇಶದ ಪ್ರಮುಖ ನಗರಗಳನ್ನು ಸಂಪರ್ಕಿಸಲು ಆದ್ಯತೆ ನೀಡುತ್ತಿದೆ. ಮೊದಲಿಗೆ ಆರು ವಿಮಾನಗಳಿಂದ ತೊಡಗಿ ಮಂಗಳೂರು, ಮೈಸೂರು, ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ, ಗೋವಾ ಹೀಗೆ ದಕ್ಷಿಣ ಭಾರತದ ಪ್ರಮುಖ ನಗರಗಳ ನಡುವೆ ಸೇವೆ ನೀಡಲಿದೆ. 2026ರ ಎಪ್ರಿಲ್ ವೇಳೆಗೆ ಸ್ಕ್ಯಾನ್ ಜೆಟ್ ಕಂಪನಿಯ ಮೂರು ವಿಮಾನಗಳು ಸೇವೆಗೆ ಇಳಿಯುವ ವಿಶ್ವಾಸದಲ್ಲಿ ವಿಶ್ವಪ್ರಸಾದ್ ಆಳ್ವ ಇದ್ದಾರೆ. ಕೇಂದ್ರ ನಾಗರಿಕ ವಿಮಾನಯಾನ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದು ಮಂಜೂರಾತಿ ಸಿಕ್ಕ ಕೂಡಲೇ ರೂಪುರೇಷೆ ತಯಾರಿಸಲಾಗುವುದು ಎಂದು ಆಳ್ವ ತಿಳಿಸಿದ್ದಾರೆ.

Budget Reactions: Industry Expert Reviews

ಮಧ್ಯಮ ವರ್ಗದವರನ್ನು ಗಮನದಲ್ಲಿಟ್ಟು ಸಮಯದ ಉಳಿತಾಯ, ವಾಣಿಜ್ಯ ವ್ಯವಹಾರ, ಪ್ರವಾಸೋದ್ಯಮ ಆದ್ಯತೆಯಾಗಿರಿಸಿ ಯೋಜನೆ ರೂಪಿಸಲಾಗಿದೆ. ಕೇಂದ್ರ ಸರ್ಕಾರದಿಂದ ಪರವಾನಗಿ ಸಿಕ್ಕಿದ ಬೆನ್ನಲ್ಲೇ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಕಳೆದ ಐದು ವರ್ಷಗಳಿಂದ ವಿಮಾನ ತಯಾರಿಕಾ ಸಂಸ್ಥೆಗಳು, ತಂತ್ರಜ್ಞರು, ನಿರ್ವಹಣಾ ಪರಿಣಿತರು, ಬಂಡವಾಳ ಹೂಡಿಕೆದಾರರ ಜೊತೆ ಚರ್ಚಿಸಿ ಸ್ಕ್ಯಾನ್ ಜೆಟ್ ಆರಂಭಿಸುವ ಬಗ್ಗೆ ರೂಪುರೇಷೆ ಸಿದ್ಧಪಡಿಸಿರುವುದಾಗಿ ವಿಶ್ವಪ್ರಸಾದ್ ಆಳ್ವ ತಿಳಿಸಿದ್ದಾರೆ.

ಮಂಗಳೂರಿನ ಗುರುಪುರ- ಕೈಕಂಬ ಬಳಿಯ ಕಂದಾವರ ನಿವಾಸಿಯಾಗಿರುವ ವಿಶ್ವಪ್ರಸಾದ್ ಆಳ್ವ ಎನ್ಐಟಿಕೆಯಲ್ಲಿ ಇಂಜಿನಿಯರಿಂಗ್ ಪೂರೈಸಿ, 2007ರಲ್ಲಿ ತನ್ನ ಓರಗೆಯವರೊಂದಿಗೆ ಸೇರಿ ಸ್ಕ್ಯಾನ್ ರೇ ಎನ್ನುವ ಸಂಸ್ಥೆ ಸ್ಥಾಪಿಸಿದ್ದರು. ಸದ್ಯ ಬಹುರಾಷ್ಟ್ರೀಯ ಕಂಪನಿಯಾಗಿ ಬೆಳೆದು ನಿಂತಿದ್ದು 80ಕ್ಕೂ ಹೆಚ್ಚು ದೇಶಗಳಿಗೆ ವೈದ್ಯಕೀಯ ಉಪಕರಣಗಳನ್ನು ರಫ್ತು ಮಾಡುತ್ತಿದೆ. ಭಾರತ- ಯುರೋಪ್ ದೇಶಗಳಲ್ಲಿ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರಗಳನ್ನು ಹೊಂದಿದೆ. ಏಳು ದೇಶಗಳಲ್ಲಿ ಕೇಂದ್ರಗಳನ್ನು ಹೊಂದಿರುವ ಸಂಸ್ಥೆಯಲ್ಲಿ 800ಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಜಾಗತಿಕ ಮನ್ನಣೆ ಪಡೆದಿರುವ ಸ್ಕ್ಯಾನ್ ರೇ  ವಿಮಾನ ಯಾನ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಮಂಗಳೂರು ಮೂಲದ ಉದ್ಯಮಿಯ ಹೊಸ ಸಾಹಸಕ್ಕೆ ಸಮಸ್ತ ಕನ್ನಡಿಗರ ಪರವಾಗಿ ಭೇಷ್ ಎನ್ನೋಣ.

Scan Ray founder and Mangaluru native Vishwaprasad Alva is set to enter India’s aviation sector with Scan Jet, a new regional airline expected to begin operations soon. Backed by an investment of around ₹200 crore, the service will initially connect Mysuru with major cities including Mangaluru, Bengaluru, Chennai, Hyderabad, Mumbai, and Goa. Three aircraft are planned to be operational by April 2026, pending approval from the Union Civil Aviation Ministry.