Thokottu, Mangalore: ತೊಕ್ಕೊಟ್ಟು ನಾಗರಿಕರ ಎಪ್ಪತ್ತೈದು ವರುಷಗಳ ಬೇಡಿಕೆ ಸಾಕಾರ ; ಒಳಪೇಟೆಗೆ ರೈಲ್ವೇ ಅಂಡರ್ ಪಾಸ್, ಉಳ್ಳಾಲ ಹೆಬ್ಬಾಗಿಲ ರೈಲ್ವೇ ಓವರ್ ಬ್ರಿಡ್ಜ್ ಸೇರಿ ಉಳ್ಳಾಲ ಬೈಲ್ ತನಕದ ರಸ್ತೆ ಅಗಲೀಕರಣ, ಸ್ಥಳ ಪರಿಶೀಲಿಸಿದ ಸ್ಪೀಕರ್ ಖಾದರ್ 

18-07-25 10:11 pm       Mangalore Correspondent   ಕರಾವಳಿ

ತೊಕ್ಕೊಟ್ಟು ಒಳಪೇಟೆಯ ರೈಲ್ವೇ ಅಂಡರ್ ಪಾಸ್ ಕಾಮಗಾರಿಗೆ 2 ಕೋಟಿ ರೂಪಾಯಿ, ತೊಕ್ಕೊಟ್ಟು ರೈಲ್ವೇ ಓವರ್ ಬ್ರಿಡ್ಜ್ ನಿಂದ ಉಳ್ಳಾಲ ಬೈಲ್ ತನಕದ ರಸ್ತೆ ಅಗಲೀಕರಣ ಕಾಮಗಾರಿಗೆ 35 ಕೋಟಿ ರೂಪಾಯಿ ಮತ್ತು ರೈಲ್ವೇ ಓವರ್ ಬ್ರಿಡ್ಜ್ ಅಗಲೀಕರಣಕ್ಕೆ 3 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ನಡೆಯಲಿದ್ದು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಶುಕ್ರವಾರ ರೈಲ್ವೇ ಅಧಿಕಾರಿಗಳೊಂದಿಗೆ ತೊಕ್ಕೊಟ್ಟಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಉಳ್ಳಾಲ, ಜು.18 : ತೊಕ್ಕೊಟ್ಟು ಒಳಪೇಟೆಯ ರೈಲ್ವೇ ಅಂಡರ್ ಪಾಸ್ ಕಾಮಗಾರಿಗೆ 2 ಕೋಟಿ ರೂಪಾಯಿ, ತೊಕ್ಕೊಟ್ಟು ರೈಲ್ವೇ ಓವರ್ ಬ್ರಿಡ್ಜ್ ನಿಂದ ಉಳ್ಳಾಲ ಬೈಲ್ ತನಕದ ರಸ್ತೆ ಅಗಲೀಕರಣ ಕಾಮಗಾರಿಗೆ 35 ಕೋಟಿ ರೂಪಾಯಿ ಮತ್ತು ರೈಲ್ವೇ ಓವರ್ ಬ್ರಿಡ್ಜ್ ಅಗಲೀಕರಣಕ್ಕೆ 3 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ನಡೆಯಲಿದ್ದು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಶುಕ್ರವಾರ ರೈಲ್ವೇ ಅಧಿಕಾರಿಗಳೊಂದಿಗೆ ತೊಕ್ಕೊಟ್ಟಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ತೊಕ್ಕೊಟ್ಟು ಒಳಪೇಟೆಯು ಉಳ್ಳಾಲ ತಾಲೂಕಿನ‌ ವಾಣಿಜ್ಯ ಕೇಂದ್ರ ಪ್ರದೇಶವಾಗಿದ್ದು, ಇಲ್ಲಿ ಸಾರ್ವಜನಿಕ ಮೈದಾನ, ಮಾರ್ಕೆಟ್, ಶಾಲಾ-ಕಾಲೇಜುಗಳು ಇದ್ದು, ಇತಿಹಾಸ ಪ್ರಸಿದ್ಧ ಉಳ್ಳಾಲ ದರ್ಗಾ, ಚೀರುಂಭ ಭಗವತೀ ಕ್ಷೇತ್ರ, ತೊಕ್ಕೊಟ್ಟು ಚರ್ಚ್ ನ ಸಂಪರ್ಕ ಪ್ರದೇಶ ಇದಾಗಿದೆ. ಈ ಮೊದಲು ತೊಕ್ಕೊಟ್ಟು ಒಳಪೇಟೆಯು ರಾಷ್ಟ್ರೀಯ ಹೆದ್ದಾರಿ 66 ರಿಂದ‌ ಉಳ್ಳಾಲ ನಗರಕ್ಕೆ ಸಂಪರ್ಕಿಸುವ ಪ್ರಮುಖ‌ ಕೊಂಡಿ ರಸ್ತೆಯಾಗಿತ್ತು. ಇಲ್ಲಿ ರೈಲ್ವೇ ಹಳಿಗಳನ್ನ ಅಳವಡಿಸಿದ ನಂತರ ಜನರು ಅತ್ತಿಂದಿತ್ತ ಹೋಗಲು ಹಳಿಗಳನ್ನೇ ದಾಟುತ್ತಿದ್ದರು. ಜನರು ಹಳಿ ದಾಟುವುದರಿಂದ‌ ಅನೇಕ ಸಂದರ್ಭಗಳಲ್ಲಿ ಅನಾಹುತಗಳು ನಡೆದು ಅಪಾರ ಸಂಖ್ಯೆಯ ಪ್ರಾಣ ಹಾನಿಗಳಾಗಿದ್ದವು. ಪ್ರಾಣಹಾನಿ ತಡೆಯಲು ರೈಲ್ವೇ ಇಲಾಖೆಯವರು ಜನರು ಹಳಿಗಳನ್ನ‌ ದಾಟದಂತೆ ಒಳಪೇಟೆಯ ರೈಲ್ವೇ ಕ್ರಾಸಿಂಗನ್ನ‌ ಶಾಶ್ವತವಾಗಿ ಮುಚ್ಚಲು ಅನೇಕ ವರುಷಗಳ ಹಿಂದೆಯೇ ಮುಂದಾಗಿದ್ದರು. ಕಳೆದ ವರ್ಷ ಹಳಿಗಳಲ್ಲಿ ಅಪಘಾತಗಳು ಹೆಚ್ಚಾದಾಗ ರೈಲ್ವೇಯವರು ಮತ್ತೆ ರೈಲ್ವೇ ಕ್ರಾಸಿಂಗನ್ನ ಬಂದ್ ಮಾಡುವುದು ಅನಿವಾರ್ಯ ಎಂದಾಗ, ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕೆಂದು ಅಧಿಕಾರಿಗಳನ್ನು ಇಲ್ಲಿಗೆ ಕಳುಹಿಸಿ, ಜಿಲ್ಲಾಧಿಕಾರಿಗಳ ವರದಿ ತರಿಸಿ,ರೈಲ್ವೇ ಸಚಿವ ಸೋಮಣ್ಣ ಅವರು ಮಂಗಳೂರಿಗೆ ಬಂದಾಗ ಅವರಿಗೆ ತೊಕ್ಕೊಟ್ಟು ರೈಲ್ವೇ ಕ್ರಾಸಿಂಗ್ ಸಮಸ್ಯೆ ಬಗ್ಗೆ ಮನವರಿಕೆ ಮಾಡಲಾಗಿತ್ತು. ಇದೀಗ ಇಲ್ಲಿಗೆ ಅಂಡರ್ ಪಾಸ್ ನಿರ್ಮಿಸಲು ಕೇಂದ್ರ ರೈಲ್ವೇ ಇಲಾಖೆ ಮತ್ತು ಚೆನ್ನೈ ಹೆಡ್ ಕ್ವಾರ್ಟರ್ ನಿಂದ ಒಪ್ಪಿಗೆ ದೊರೆತ್ತಿದ್ದು, ಸ್ಥಳೀಯರ ಎಪ್ಪತ್ತೈದು ವರ್ಷಗಳ ಒಕ್ಕೊರಳ ಬೇಡಿಕೆಯು ಈಡೇರಲಿದೆ. ನೂತನ ನಿರ್ಮಾಣಗೊಳ್ಳಲಿರುವ ಅಂಡರ್ ಪಾಸ್ ಮೂಲಕ ದ್ವಿಚಕ್ರ ವಾಹನ ಮತ್ತು ಪಾದಚಾರಿಗಳು ಸಾಗಲು ಅವಕಾಶ ಇರುತ್ತದೆ ಎಂದರು.

ರೈಲ್ವೇ ಓವರ್ ಬ್ರಿಡ್ಜ್ ಅಗಲೀಕರಣ 

ತೊಕ್ಕೊಟ್ಟಿನಿಂದ ಉಳ್ಳಾಲಕ್ಕೆ ಪ್ರವೇಶಿಸುವ ರಸ್ತೆಯ ಹೆಬ್ಬಾಗಿಲಿನ ರೈಲ್ವೇ ಓವರ್ ಬ್ರಿಡ್ಜ್ ಕೂಡ ಅಗಲೀಕರಣ ಆಗಲಿದೆ. ಓವರ್ ಬ್ರಿಡ್ಜ್ ನಿಂದ ಉಳ್ಳಾಲ ಬೈಲ್ ತನಕದ ರಸ್ತೆಯನ್ನು ಅಗಲೀಕರಣಗೊಳಿಸಲಿದ್ದೇವೆ. ಬಳಿಕ ಅದನ್ನ ಚತುಷ್ಪಥ ರಸ್ತೆಯನ್ನಾಗಿಸಿ ಪರಿವರ್ತನೆಗೊಳಿಸಲು 35 ಕೋಟಿ ರೂ. ವೆಚ್ಚದ ಯೋಜನೆಯು ತಯಾರಾಗಿದ್ದು ಶೀಘ್ರವೇ ಅನುದಾನ ಬಿಡುಗಡೆಯಾಗಲಿದೆ. ಜಪ್ಪು ಮಹಾಕಾಳಿಪಡ್ಪುವಿನ‌ ರೈಲ್ವೇ ಅಂಡರ್ ಪಾಸ್ ಕಾಮಗಾರಿ ಡಿಸೆಂಬರ್ ತಿಂಗಳ ಒಳಗೆ ಸಂಪೂರ್ಣಗೊಳ್ಳಲಿದೆ ಎಂದು ಯು.ಟಿ.ಖಾದರ್ ಹೇಳಿದರು.

ರೈಲ್ವೇ ಇಲಾಖೆಯ ಮಂಗಳೂರು ಸಹಾಯಕ ವಿಭಾಗದ ಇಂಜಿನಿಯರ್ ಅಶೋಕ್, ಮಂಗಳೂರು ಹಿರಿಯ ಸೀನಿಯರ್ ಸೆಕ್ಷನ್ ಇಂಜಿನಿಯರ್ ಮುಹಸಿನ್, ಕಣ್ಣೂರು ಹಿರಿಯ ಸೆಕ್ಷನ್ ಇಂಜಿನಿಯರ್ ಅಕ್ಷಯ್, ಉಳ್ಳಾಲ ನಗರಸಭೆ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷರಾದ ಸಪ್ನಾ ಹರೀಶ್, ನಗರಸಭೆ ಆಯುಕ್ತರಾದ ನವೀನ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.

In a major infrastructure boost for the Ullal region, Speaker of the Karnataka Legislative Assembly, U.T. Khader, visited Tokkottu on Friday to inspect key developmental works, including a long-pending railway underpass and road widening projects. He was accompanied by senior railway officials during the inspection.