ಬ್ರೇಕಿಂಗ್ ನ್ಯೂಸ್

Forensic Expert Dr Mahabala Shetty, Dharmasthala case: ಧರ್ಮಸ್ಥಳ ಸ್ನಾನಘಟ್ಟ ಬಳಿ 20ಕ್ಕೂ ಹೆಚ್ಚು ಕೊಳೆತ ಶವಗಳನ್ನು ಪೋಸ್ಟ್ ಮಾರ್ಟಂ ಮಾಡಿದ್ದೆ, ಅವನ್ನು ಅಲ್ಲಿಯೇ ಹೂಳಲಾಗಿತ್ತು ; ಪ್ರಕರಣಕ್ಕೆ ಸ್ಫೋಟಕ ತಿರುವು ಕೊಟ್ಟ ಫಾರೆನ್ಸಿಕ್ ತಜ್ಞ ಡಾ.ಮಹಾಬಲ ಶೆಟ್ಟಿ    |    ಕನಸು ಕಮರಿಸಿದ ಅಪಘಾತ ; ವೈದ್ಯರ ಎಡವಟ್ಟು, ಸಕಾಲದಲ್ಲಿ ಚಿಕಿತ್ಸೆ ಸಿಗದೆ ಕೈಕಾಲಿನ ಶಕ್ತಿಯೇ ಊನ, ಕಂಗೆಟ್ಟ ವಿಶ್ವಕರ್ಮ ಕುಟುಂಬಕ್ಕೆ ಕ್ರಿಶ್ಚಿಯನ್ ಗೆಳೆಯರ ಆಸರೆ ! ಅರ್ಧಕ್ಕೆ ಉಳಿದುಬಿಟ್ಟ ಮನೆಗೆ ದಿಕ್ಕಿಲ್ಲದ ಸ್ಥಿತಿ, ಬೆಳಕು ಹರಿಸೀತೆ ಸಹೃದಯರ ಹಾರೈಕೆ ?!    |    Kannada Producer Ganesh, Film Dharmasthala File, Movie: 'ಧರ್ಮಸ್ಥಳ ಫೈಲ್ಸ್' ಸಿನಿಮಾ ಘೋಷಿಸಿದ ಕನ್ನಡದ ನಿರ್ಮಾಪಕ ಎ. ಗಣೇಶ್ ; ಸಮಸ್ಯೆ ಆದ್ರೆ ಚಿತ್ರತಂಡವೇ ಹೊಣೆ ಎಂಬ ಕಂಡೀಷನ್! ಕತೆ ಇನ್ನಷ್ಟೇ ಬರೆಸಬೇಕೆಂದ ಚಿತ್ರತಂಡ     |   

ಗಡಿ ಬಂದ್ ; ಸಂಕಷ್ಟದಲ್ಲಿ ಕಾಸರಗೋಡಿನ ಜ‌ನ, ಬಿಜೆಪಿಯಿಂದ ಹೈಕೋರ್ಟಿಗೆ ಅರ್ಜಿ

08-08-20 04:18 pm       Headline Karnataka News Network   ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡಿರುವ ಕಾಸರಗೋಡು ಜಿಲ್ಲೆಯ ಗಡಿಭಾಗದಲ್ಲಿ ಕೇರಳ ಸರಕಾರ ತಡೆಬೇಲಿ ಹಾಕಿರುವುದು ನಿತ್ಯ ಸಂಚಾರ ಮಾಡುವ ಅಲ್ಲಿನ ಜನರ ಕುತ್ತಿಗೆ ಹಿಡಿದಿದೆ. ಕೇರಳ ಸರಕಾರ ಮತ್ತು ಕಾಸರಗೋಡು ಜಿಲ್ಲಾಡಳಿತದ ಜಿಗುಟುತನದಿಂದಾಗಿ ಈ ಭಾಗದ ಜನ ಹೈರಾಣಾಗಿ ಹೋಗಿದ್ದಾರೆ. 

ಮಂಗಳೂರು, ಆಗಸ್ಟ್ 8: ಲಾಕ್ ಡೌನ್ ಬಳಿಕ ಕೇಂದ್ರ ಸರಕಾರ ಅನ್ ಲಾಕ್ - 3 ಘೋಷಣೆಯಲ್ಲಿ ಅಂತಾರಾಜ್ಯ ಸಂಚಾರಕ್ಕೆ ಅನುವು ಮಾಡಿಕೊಟ್ಟಿತ್ತು.  ಆದರೆ, ಈ ಆದೇಶ ಕಾಸರಗೋಡು - ಮಂಗಳೂರು ನಡುವಿನ ಸಂಚಾರಕ್ಕೆ ಮಾತ್ರ ಅನ್ವಯವಾಗಿಲ್ಲ. ಕೇರಳ ಸರಕಾರ ಮತ್ತು ಕಾಸರಗೋಡು ಜಿಲ್ಲಾಡಳಿತದ ಜಿಗುಟುತನದಿಂದಾಗಿ ಈ ಭಾಗದ ಜನ ಹೈರಾಣಾಗಿ ಹೋಗಿದ್ದಾರೆ. 

ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡಿರುವ ಕಾಸರಗೋಡು ಜಿಲ್ಲೆಯ ಗಡಿಭಾಗದಲ್ಲಿ ಕೇರಳ ಸರಕಾರ ತಡೆಬೇಲಿ ಹಾಕಿರುವುದು ನಿತ್ಯ ಸಂಚಾರ ಮಾಡುವ ಅಲ್ಲಿನ ಜನರ ಕುತ್ತಿಗೆ ಹಿಡಿದಿದೆ. ಕಾಸರಗೋಡಿನ ಎರಡು ಸಾವಿರಕ್ಕೂ ಹೆಚ್ಚು ಜನ ಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಉದ್ಯೋಗದಲ್ಲಿದ್ದು ಕಳೆದ ಹಲವಾರು ವರ್ಷಗಳಿಂದ ನಿತ್ಯವೂ ಬಂದು ಹೋಗುತ್ತಿದ್ದರು. ಆದರೆ, ಕಳೆದ ಆರು ತಿಂಗಳಲ್ಲಿ ಕೊರೊನಾ ಲಾಕ್ ಡೌನ್ ಈ ಭಾಗದ ಜನರನ್ನು ಸಂಕಷ್ಟಕ್ಕೆ ದೂಡಿದೆ. ಕರ್ನಾಟಕ ಈಗ ಪೂರ್ತಿಯಾಗಿ ವಹಿವಾಟಿಗೆ ತೆರೆದುಕೊಂಡಿದ್ದರೂ ಕೇರಳ ಸರಕಾರ ಮಾತ್ರ ಕೊರೊನಾ ಹಬ್ಬುವ ನೆಪದಲ್ಲಿ ಗಡಿಯನ್ನು ಮುಚ್ಚಿದ್ದು ಇನ್ನೂ ತೆರೆದಿಲ್ಲ. ಈ ಭಾಗದ ಜನ ಜಿಲ್ಲಾಡಳಿತ ಮತ್ತು ಕೇರಳ ಸರಕಾರಕ್ಕೆ ಮನವಿಗಳ ಮೇಲೆ ಮನವಿ ಸಲ್ಲಿಸಿದರೂ ಆಡಳಿತ ಮಾತ್ರ ಓಗೊಟ್ಟಿಲ್ಲ. ಸದ್ಯಕ್ಕೆ ತೆರೆಯುವ ಸೂಚನೆಯೂ ಇಲ್ಲವಾಗಿದೆ. ಅದರ ಬದಲಿಗೆ ಮತ್ತೆ ಪಾಸ್ ವ್ಯವಸ್ಥೆ ಜಾರಿಗೆ ತರುವ ಭರವಸೆ ನೀಡಿದೆ. ಆದರೆ, ಪಾಸ್ ಪಡೆದು ತೆರಳಲು ಮುಂದಾಗುವ ಮಂದಿ ಗಡಿಯಲ್ಲಿ ವಾರಕ್ಕೊಮ್ಮೆ ರಾಪಿಡ್ ಟೆಸ್ಟ್ ಮಾಡಬೇಕೆಂದು ಷರತ್ತು ವಿಧಿಸಿದೆ. ಜೊತೆಗೆ, ಈ ಟೆಸ್ಟ್ ಮಾಡಿಕೊಳ್ಳಲು 800 ರೂಪಾಯಿ ಮೊತ್ತ ಪಾವತಿಸಬೇಕು ಎಂದಿರುವುದು ಇಲ್ಲಿನ ಜನರನ್ನು ಬೆಂಕಿಯಿಂದ ಬಾಣಲೆಗೆ ಹಾಕುವ ಯತ್ನ ಎನ್ನುವ ಮಾತು ಕೇಳಿಬಂದಿದೆ. ಮೊದಲೇ ಕೆಲಸ ಇಲ್ಲದೆ, ಹಣವೂ ಇಲ್ಲದೆ ಬವಣೆ ಪಡುತ್ತಿರುವ ಜನರನ್ನು ಟೆಸ್ಟ್ ನೆಪದಲ್ಲಿ ಮತ್ತೊಂದು ಸಂಕಷ್ಟಕ್ಕೆ ನೂಕಿದ್ದಾಗಿ ಇಲ್ಲಿನ ಮಂದಿ ಹೇಳುತ್ತಿದ್ದಾರೆ. 

ಇಷ್ಟಕ್ಕೂ ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಗಡಿ ಮುಚ್ಚಿದ್ದಾಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಕಾಸರಗೋಡು ಸಂಸದ ಉಣ್ಣಿತ್ತಾನ್ ಈಗ ಮೌನವಾಗಿದ್ದಾರೆ. ಕೊರೊನಾ ಹರಡುತ್ತಲೇ ಇದ್ದು ಅದರ ಜೊತೆಗೆ ಬದುಕಬೇಕು ಎಂದು ಕೇಂದ್ರ ಸರಕಾರ ಸೂಚನೆ ನೀಡಿದ್ದರೂ, ಕಾಸರಗೋಡು ಜಿಲ್ಲಾಡಳಿತ ಮಾತ್ರ ತನ್ನದು ಬೇರೆಯೇ ರೀತಿ ಅನ್ನುವ ನಿಯಮ ಹೇರುತ್ತಿದೆ. ಜನರು ಸಂಕಷ್ಟಕ್ಕೀಡಾಗಿರುವಾಗ ಸಂಸದರು ಈಗ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದಾರೆಯೇ ಎನ್ನುವ ಪ್ರಶ್ನೆಯನ್ನು ಜನರು ಮುಂದಿಡುತ್ತಿದ್ದಾರೆ. ಆದರೆ ಜನಸಾಮಾನ್ಯರ ಪ್ರಶ್ನೆಗೆ ಮಾತ್ರ ಕೇರಳದ ಎಡರಂಗ ಸರಕಾರ ಉತ್ತರ ನೀಡುತ್ತಿಲ್ಲ. ಬದಲಿಗೆ, ಜನ ಮಂಗಳೂರಿಗೆ ತೆರಳದೆ ಇಲ್ಲಿಯೇ ಉದ್ಯೋಗ ಕಂಡುಕೊಳ್ಳಲಿ ಎಂದು ಬಿಟ್ಟಿ ಸಲಹೆ ನೀಡುತ್ತಿದೆಯಂತೆ. ಈ ಬಗ್ಗೆ ಆಡಳಿತಾರೂಢ ಎಡರಂಗದ ನಾಯಕರಲ್ಲಿ ಕೇಳಿದರೂ, ಇದೇ ಬಿಟ್ಟಿ ಸಲಹೆ ನೀಡುತ್ತಿರುವುದು ಜನರನ್ನು ಆಕ್ರೋಶಕ್ಕೀಡುಮಾಡಿದೆ. ಹೀಗಾಗಿ, ಈ ಭಾಗದ ಜನರ ಪಾಡು ಮಾತ್ರ ಅತ್ತ ದರಿ, ಇತ್ತ ಪುಲಿ ಅನ್ನುವಂತಾಗಿದೆ. ಜಿಲ್ಲಾಡಳಿತದ ಸೂಚನೆಯನ್ನು ಪಾಲನೆ ಮಾಡದೆ ಇರಲೂ ಆಗದು‌. ಇತ್ತ ಬದುಕಿಗಾಗಿ ಉದ್ಯೋಗ ಮಾಡದೇ ಇರುವುದೂ ಸಾಧ್ಯವಿಲ್ಲ. ಸಂದಿಗ್ಧ ಸ್ಥಿತಿಯಲ್ಲಿರುವ ಅದೆಷ್ಟೋ ಜನ ಈಗ ಇದ್ದ ಉದ್ಯೋಗವನ್ನೂ ಕಳಕೊಳ್ಳುತ್ತಿದ್ದಾರೆ. ಮುಂದೇನು ಎಂಬ ಭಯದಲ್ಲಿ ಕಾಲ ಕಳೆಯುತ್ತಿದ್ದಾರೆ.  

ಈ ನಡುವೆ, ಕಾಸರಗೋಡು ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್ ಗಡಿ ತೆರವಿಗಾಗಿ ಹೈಕೋರ್ಟ್ ಕದ ತಟ್ಟಿದ್ದಾರೆ. ಸೋಮವಾರ ಈ ಕುರಿತ ಅರ್ಜಿ ವಿಚಾರಣೆಗೆ ಬರಲಿದೆ ಎಂದು ಶ್ರೀಕಾಂತ್ ಟ್ವಿಟರ್ ನಲ್ಲಿ ತಿಳಿಸಿದ್ದಾರೆ. ಹೈಕೋರ್ಟ್ ವಿಚಾರಣೆ ಬಳಿಕ ಈ ಭಾಗದ ಜನರ ಬವಣೆ ತಪ್ಪಲಿದೆ ಅನ್ನುವ ಆಶಾಭಾವ ಇಲ್ಲಿನ ಜನರದ್ದು.