ತುಳು ಚಿತ್ರರಂಗಕ್ಕೆ ರಾಷ್ಟ್ರ ಮಟ್ಟದ ಗೌರವ ; IFFI ಭಾರತೀಯ ಪನೋರಮಾಕ್ಕೆ ‘ಪಿಲಿ ಚನ್ನೆ’ ಆಯ್ಕೆ

18-11-26 03:05 pm       HK News Staffer   ಸಿನಿಮಾ

ತುಳು ಭಾಷೆ, ಸಂಸ್ಕೃತಿ ಹಾಗೂ ಚಿತ್ರರಂಗಕ್ಕೆ ರಾಷ್ಟ್ರ ಮಟ್ಟದಲ್ಲಿ ಮತ್ತೊಂದು ಹೆಮ್ಮೆಯ ಗರಿ ಮೂಡಿದೆ. ಅನುಪಮಾ ಶರಧಿ ನಿರ್ಮಿಸಿ, ನಿರ್ದೇಶಿಸಿರುವ ತುಳು ಚಿತ್ರ ‘ಪಿಲಿ ಚನ್ನೆ’ 57ನೇ ಇಂಟರ್‌ನ್ಯಾಷನಲ್ ಫಿಲಂ ಫೆಸ್ಟಿವಲ್ ಆಫ್ ಇಂಡಿಯಾ 2026ರ ಭಾರತೀಯ ಪನೋರಮಾ ವಿಭಾಗಕ್ಕೆ ಆಯ್ಕೆಯಾಗಿದೆ.

ಬೆಂಗಳೂರು, ನ.18: ತುಳು ಭಾಷೆ, ಸಂಸ್ಕೃತಿ ಹಾಗೂ ಚಿತ್ರರಂಗಕ್ಕೆ ರಾಷ್ಟ್ರ ಮಟ್ಟದಲ್ಲಿ ಮತ್ತೊಂದು ಹೆಮ್ಮೆಯ ಗರಿ ಮೂಡಿದೆ. ಅನುಪಮಾ ಶರಧಿ ನಿರ್ಮಿಸಿ, ನಿರ್ದೇಶಿಸಿರುವ ತುಳು ಚಿತ್ರ ‘ಪಿಲಿ ಚನ್ನೆ’ 57ನೇ ಇಂಟರ್‌ನ್ಯಾಷನಲ್ ಫಿಲಂ ಫೆಸ್ಟಿವಲ್ ಆಫ್ ಇಂಡಿಯಾ 2026ರ ಭಾರತೀಯ ಪನೋರಮಾ ವಿಭಾಗಕ್ಕೆ ಆಯ್ಕೆಯಾಗಿದೆ.

ನಿರ್ಮಾಪಕಿ ಹಾಗೂ ನಿರ್ದೇಶಕಿ ಅನುಪಮ ಶರಧಿ ಅವರ ನಿರ್ದೇಶನದ ಎರಡನೇ ಚಿತ್ರ ಇದಾಗಿದೆ. ಈ ಹಿಂದೆ ‘ನಡುಬೆಟ್ಟು ಅಪ್ಪಣ್ಣ’ ಎಂಬ ಕನ್ನಡ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ್ದ ಅವರು, ಇದೀಗ ತಮ್ಮದೇ ನಿರ್ಮಾಣದಲ್ಲಿ ತುಳು ಭಾಷೆಯ ‘ಪಿಲಿ ಚನ್ನೆ’ ಚಿತ್ರವನ್ನು ರೂಪಿಸಿದ್ದಾರೆ. 

ಒಂದೇ ಚಿತ್ರದಲ್ಲಿ ಹಲವು ಜವಾಬ್ದಾರಿಗಳ ನಿರ್ವಹಣೆ 

‘ಪಿಲಿ ಚನ್ನೆ’ ಚಿತ್ರದ ವಿಶೇಷತೆಯೆಂದರೆ ಅನುಪಮ ಶರಧಿ ಅವರು ನಿರ್ಮಾಪಕಿ, ಕಥೆಗಾರ್ತಿ, ಚಿತ್ರಕಥೆಗಾರ್ತಿ, ಸಂಭಾಷಣೆಗಾರ್ತಿ, ನಿರ್ದೇಶಕಿ, ಗಾಯಕಿ, ವಸ್ತ್ರ ವಿನ್ಯಾಸಕಿ ಹಾಗೂ ನಟಿಯಾಗಿ ಹಲವು ಜವಾಬ್ದಾರಿಗಳನ್ನು ಏಕಕಾಲದಲ್ಲಿ ನಿಭಾಯಿಸಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಅವರೇ ರಚಿಸಿದ್ದಾರೆ. ಹಾಡುಗಳಿಗೆ ಧ್ವನಿಯಾಗುವುದರ ಜೊತೆಗೆ ಅಭಿನಯದಲ್ಲಿಯೂ ಕಾಣಿಸಿಕೊಂಡಿದ್ದಾರೆ.

ಕಾಡಿನ ಹಿನ್ನೆಲೆಯ ಕಥಾಹಂದರ ಹೊಂದಿರುವ ಈ ಚಿತ್ರ ಭವಿಷ್ಯ ಸಿನಿಮಾ ಬ್ಯಾನರ್‌ನಲ್ಲಿ ನಿರ್ಮಾಣವಾಗಿದೆ. ಪಿ.ವಿ.ಆರ್. ಸ್ವಾಮಿ ಛಾಯಾಗ್ರಹಣ, ಅತಿಶಯ್ ಜೈನ್ ಸಂಗೀತ ನಿರ್ದೇಶನ ಹಾಗೂ ಸಂಜೀವ್ ರೆಡ್ಡಿ ಸಂಕಲನದ ಜವಾಬ್ದಾರಿ ನಿರ್ವಹಿಸಿದ್ದಾರೆ. ಪಳನಿ ಡಿ. ಸೇನಾಪತಿ ಅವರು 5.1 ಸೌಂಡ್ ಮಿಕ್ಸಿಂಗ್ ಮಾಡಿದ್ದಾರೆ. ಭವಾನಿ ಶಂಕರ್ ಆಡ್ತಲೆ ಸಾಹಿತ್ಯ ರಚಿಸಿದ್ದಾರೆ. ಚಿತ್ರದಲ್ಲಿ ಶಿಲ್ಪಾ ನಾಗರಾಜ್, ನವೀನ್ ಡಿ. ಪಡೀಲ್, ಅನುಪಮ ಶರಧಿ, ವಿಜಯ ಹರಿ ರೈ, ರಾಧಾಕೃಷ್ಣ ಕುಂಬ್ಳೆ, ಗಂಗಾಧರ ನೆಲ್ಲಿಕೋಡ್, ಶಿಲ್ಪಾ ಸನತ್ ಹಾಗೂ ರವಿ ಪೆರ್ಲಂಪಾಡಿ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ 'ಅತ್ಯುತ್ತಮ ತುಳು ಸಿನಿಮಾ'ವಾಗಿ 'ಇಂಬು' ಹೊರಹೊಮ್ಮಿತ್ತು. ಕನ್ನಡ ಮತ್ತು ತುಳು ಚಿತ್ರಗಳು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಇದೀಗ ಪಿಲಿ ಚನ್ನೆ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲು ಸಜ್ಜಾಗಿದೆ. ಈ ಚಿತ್ರದ ಆಯ್ಕೆಯು ತುಳು ಚಿತ್ರರಂಗದ ಪ್ರತಿಭೆ, ಭಾಷೆ ಮತ್ತು ಸಂಸ್ಕೃತಿಗೆ ರಾಷ್ಟ್ರಮಟ್ಟದಲ್ಲಿ ದೊರೆತ ಮನ್ನಣೆಯಾಗಿದೆ.