ವಿಶ್ವಸಂಸ್ಥೆ ಮಹಾಧಿವೇಶನಕ್ಕೆ ಪಿಪಿ ಚೌಧರಿ ನೇತೃತ್ವದಲ್ಲಿ 15 ಸಂಸದರ ನಿಯೋಗ ; ಕರ್ನಾಟಕದಿಂದ ಬ್ರಿಜೇಶ್ ಚೌಟ, ಮುಂಬೈನಿಂದ ಉಜ್ವಲ್ ನಿಕ್ಕಂ ಅಮೆರಿಕಕ್ಕೆ 

07-10-25 01:53 pm       HK News Desk   ದೇಶ - ವಿದೇಶ

ಅಮೆರಿಕದ ನ್ಯೂಯಾರ್ಕಿನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ 80ನೇ ಮಹಾಧಿವೇಶನಕ್ಕೆ ಈ ಬಾರಿ ಬಿಜೆಪಿ ಸಂಸದ ಪಿಪಿ ಚೌಧರಿ ಮತ್ತು ಪುರಂದರೇಶ್ವರಿ ನೇತೃತ್ವದಲ್ಲಿ ತಲಾ 15 ಸಂಸತ್ ಸದಸ್ಯರು ಇರುವ ನಿಯೋಗ ಭಾರತದಿಂದ ತೆರಳಲಿದೆ.

ನವದೆಹಲಿ, ಅ.7 : ಅಮೆರಿಕದ ನ್ಯೂಯಾರ್ಕಿನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ 80ನೇ ಮಹಾಧಿವೇಶನಕ್ಕೆ ಈ ಬಾರಿ ಬಿಜೆಪಿ ಸಂಸದ ಪಿಪಿ ಚೌಧರಿ ಮತ್ತು ಪುರಂದರೇಶ್ವರಿ ನೇತೃತ್ವದಲ್ಲಿ ತಲಾ 15 ಸಂಸತ್ ಸದಸ್ಯರು ಇರುವ ನಿಯೋಗ ಭಾರತದಿಂದ ತೆರಳಲಿದೆ.

ಪಿಪಿ ಚೌಧರಿ ನೇತೃತ್ವದ ಮೊದಲ ನಿಯೋಗ ಅ.8ರಿಂದ 14ರ ನಡುವೆ ವಿಶ್ವಸಂಸ್ಥೆ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದು, ಇದರಲ್ಲಿ ಕರ್ನಾಟಕದಿಂದ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸ್ಥಾನ ಪಡೆದಿದ್ದಾರೆ. ಉಳಿದಂತೆ, ಅನಿಲ್ ಬಲೂನಿ, ನಿಶಿಕಾಂತ್ ದುಬೆ, ಉಜ್ವಲ್ ನಿಕ್ಕಮ್, ಎಸ್.ಫಂಗ್ನಾನ್ ಕೊನ್ಯಾಕ್, ಮೇಧಾ ವಿಶ್ರಾಮ್ ಕುಲಕರ್ಣಿ, ಪೂನಂ ಬೆನ್ ಮಾದಮ್, ವಂಶಿ ಕೃಷ್ಣ ಗದ್ದಾಮ್, ವಿವೇಕ್ ತನ್ಕಾ, ಟಿ.ಸುಮತಿ, ಸ್ರೀಭರತ್ ಮತ್ಕುಮಿಲಿ, ಕುಮಾರಿ ಸೆಲ್ಜಾ, ಎನ್.ಕೆ.ಪ್ರೇಮಚಂದ್ರನ್ ಮತ್ತು ರಾಜೀವ್ ರಾಯ್ ಈ ನಿಯೋಗದಲ್ಲಿದ್ದಾರೆ.

ಡಿ.ಪುರಂದರೇಶ್ವರಿ ನೇತೃತ್ವದ ಮತ್ತೊಂದು ನಿಯೋಗ ಈ ತಿಂಗಳಾಂತ್ಯದಲ್ಲಿ ನ್ಯೂಯಾರ್ಕ್ ತೆರಳಲಿದೆ. ಎರಡು ದಶಕದ ಬಳಿಕ ವಿಶ್ವಸಂಸ್ಥೆ ಅಧಿವೇಶನಕ್ಕೆ ಅಧಿಕಾರಿಗಳನ್ನು ಹೊರತಾದ ಸಂಸದರ ನಿಯೋಗ ಕಳಿಸಿಕೊಡುವ ಪರಿಪಾಠವನ್ನು ಮತ್ತೆ ಆರಂಭಿಸಲಾಗಿದೆ. ಕೊನೆಯ ಬಾರಿಗೆ, 2004ರಲ್ಲಿ ಭಾರತದಿಂದ ಸಂಸದರ ನಿಯೋಗ ವಿಶ್ವಸಂಸ್ಥೆ ಅಧಿವೇಶನಕ್ಕೆ ತೆರಳಿತ್ತು. ಅದಕ್ಕೂ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಮತ್ತಿತರ ನಾಯಕರ ನೇತೃತ್ವದಲ್ಲಿ ಹಲವು ಬಾರಿ ವಿಶ್ವಸಂಸ್ಥೆಗೆ ಸಂಸದರ ನಿಯೋಗ ತೆರಳಿತ್ತು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜತಾಂತ್ರಿಕ ಸಂಬಂಧಗಳನ್ನು ಉತ್ತಮ ಪಡಿಸುವುದು, ಜಾಗತಿಕ ಮಟ್ಟದ ಸಭೆಯಲ್ಲಿ ಭಾರತವನ್ನು ಅಧಿಕಾರಿಗಳ ಹೊರತಾಗಿ ಪ್ರತಿನಿಧಿಸುವುದು, ವಿಶ್ವಸಂಸ್ಥೆಯಲ್ಲಿ ಸಂಸದೀಯ ಪ್ರಜಾಪ್ರಭುತ್ವ ದೇಶದ ಪ್ರತಿನಿಧಿಗಳಾಗಿ ಪ್ರಜಾತಂತ್ರದ ಮೌಲ್ಯಗಳನ್ನು ಪ್ರಚುರಪಡಿಸುವುದು ಈ ನಿಯೋಗದ ಉದ್ದೇಶವಾಗಿರುತ್ತದೆ. 2004ರ ಬಳಿಕ ಈ ರೀತಿಯ ನಿಯೋಗ ಕಳುಹಿಸುವ ಸಂಪ್ರದಾಯವನ್ನು ಕೈಬಿಡಲಾಗಿತ್ತು. ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜತಾಂತ್ರಿಕ ಸಂಬಂಧ ಬಲಪಡಿಸುವ ನಿಟ್ಟಿನಲ್ಲಿ ಈ ನಿಯೋಗ ಕಳುಹಿಸಲಾಗಿದೆ ಎನ್ನಲಾಗುತ್ತಿದೆ. 

ವಿಶ್ವಸಂಸ್ಥೆಯಲ್ಲಿ ಎಲ್ಲ 193 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದು, ಎಲ್ಲರೂ ಸಮಾನ ಅವಕಾಶ ಹೊಂದಿರುತ್ತಾರೆ. ಜಗತ್ತಿನ ಎಲ್ಲ ದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳುವ ಏಕಮಾತ್ರ ಸಭೆ ಇದಾಗಿದ್ದು, ತಾಪಮಾನ ಹೆಚ್ಚಳದ ಸವಾಲುಗಳು, ಯುದ್ಧಗಳು ಇನ್ನಿತರ ಜಾಗತಿಕ ವಿಚಾರಗಳ ಬಗ್ಗೆ ಚರ್ಚೆ, ನಿರ್ಣಯಗಳನ್ನು ಸ್ವೀಕರಿಸುವುದನ್ನು ಮಾಡುತ್ತಾರೆ. ವಿಶ್ವಸಂಸ್ಥೆ ಪ್ರಧಾನ ಕಚೇರಿಯಿರುವ ನ್ಯೂಯಾರ್ಕಿನಲ್ಲಿ ಒಂದು ತಿಂಗಳ ಕಾಲ ಮಹಾಧಿವೇಶನ ನಡೆಯುತ್ತದೆ.

80th United Nations General Assembly in New York this month, as part of its “non-official delegation" in a renewed push for parliamentary diplomacy.