ತುಂಡು ತುಂಡಾಗಿ ಕತ್ತರಿಸುತ್ತಾರೆಂದು ಹೇಳಿಕೆ ; ಛಲವಾದಿ ನಾರಾಯಣಸ್ವಾಮಿ ಮನೆಗೆ ಚಾಕು, ಚೂರಿ ಆರ್ಡರ್ ಮಾಡಿಸಿ ಯುವ ಕಾಂಗ್ರೆಸಿಗರ ಆಕ್ರೋಶ, ಕಾಸು ಕೊಟ್ಟಿದ್ದರೆ ಇಟ್ಕೊಳ್ತಿದ್ದೆ ಎಂದ ಛಲವಾದಿ

07-11-26 09:34 pm       HK News Desk   ಕರ್ನಾಟಕ

ಇತ್ತೀಚಿಗೆ ಕೋಲಾರದಲ್ಲಿ ತುಂಡು ತುಂಡಾಗಿ ಕತ್ತರಿಸುತ್ತಾರೆಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ವಿರುದ್ಧ ಪ್ರತಿಭಟನೆ ನಡೆಸಿರುವ ಕಾಂಗ್ರೆಸ್ ಯುವ ಕಾರ್ಯಕರ್ತರು, ಬ್ಲಿಂಕಿಟ್​ ಮೂಲಕ ಅವರ ಮನೆಗೆ ಚಾಕು, ಚೂರಿ ಆರ್ಡರ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.

ಬೆಂಗಳೂರು, ನ.7: ಇತ್ತೀಚಿಗೆ ಕೋಲಾರದಲ್ಲಿ ತುಂಡು ತುಂಡಾಗಿ ಕತ್ತರಿಸುತ್ತಾರೆಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ವಿರುದ್ಧ ಪ್ರತಿಭಟನೆ ನಡೆಸಿರುವ ಕಾಂಗ್ರೆಸ್ ಯುವ ಕಾರ್ಯಕರ್ತರು, ಬ್ಲಿಂಕಿಟ್​ ಮೂಲಕ ಅವರ ಮನೆಗೆ ಚಾಕು, ಚೂರಿ ಆರ್ಡರ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. 

ಬೆಂಗಳೂರಿನ ಸೆವೆನ್ ಮಿನಿಸ್ಟರ್ಸ್ ಕ್ವಾರ್ಟರ್ಸ್ ಬಳಿಯಿರುವ ಛಲವಾದಿ ನಾರಾಯಣಸ್ವಾಮಿ ಅವರ ಸರ್ಕಾರಿ ನಿವಾಸಕ್ಕೆ ಚಾಕು-ಚೂರಿ ಇರುವ ಪೋಸ್ಟ್ ಕವರ್‌ಗಳನ್ನ ತಲುಪಿಸಿದ್ದು ಈ ವಿಚಾರದಲ್ಲಿ ಕೆಲಕಾಲ ಹೈಡ್ರಾಮಾ ನಡೆದಿದೆ. ಬ್ಲಿಂಕಿಟ್ ಮೂಲಕ ಛಲವಾದಿ ನಾರಾಯಣಸ್ವಾಮಿ ಅವರ ಮನೆಗೆ ಚಾಕು, ಚೂರಿ ಆರ್ಡರ್ ಮಾಡಿದ್ದು, ಅದನ್ನು ತಲುಪಿಸಲು ಡೆಲಿವರಿ ಬಾಯ್ಸ್ ಹಾಗೂ ಎನ್‌ಎಸ್‌ಯುಐ ಕಾರ್ಯಕರ್ತರು ಆಗಮಿಸಿದ್ದು ನಿವಾಸದ ಬಳಿ ಕೆಲಕಾಲ ಗೊಂದಲ ಉಂಟಾಗಿತ್ತು. 

ನಾಲ್ಕು ಬೈಕ್‌ಗಳಲ್ಲಿ ಬಂದ ಡೆಲಿವರಿ ಬಾಯ್ಸ್ ಪೋಸ್ಟ್ ಕವರ್‌ಗಳನ್ನ ತಂದಿದ್ದರು. ಈ ವೇಳೆ ನಿವಾಸದ ಭದ್ರತಾ ಪೊಲೀಸರು ಡೆಲಿವರಿ ಬಾಯ್ಸ್‌ಗಳನ್ನ ತಡೆದು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಡೆಲಿವರಿ ಬಾಯ್ಸ್ ಜೊತೆ ಬಂದಿದ್ದ ಇಬ್ಬರು NSUI ಕಾರ್ಯಕರ್ತರು ಪೋಸ್ಟ್ ಕವರ್‌ಗಳನ್ನ ಛಲವಾದಿ ನಾರಾಯಣಸ್ವಾಮಿ ಅವರಿಗೆ ನೀಡುವಂತೆ ಒತ್ತಾಯಿಸಿದ್ದಾರೆ. ಆದ್ರೆ, ಡೆಲಿವರಿ ಬಾಯ್ಸ್‌ಗಳು ಕವರ್‌ಗಳನ್ನು ನೀಡದೆ ವಾಪಸ್ ತೆರಳಲು ಮುಂದಾಗಿದ್ದಾರೆ. 

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಡೆಲಿವರಿ ಬಾಯ್ಸ್‌ಗಳನ್ನ ವಿಚಾರಣೆ ನಡೆಸಿದ ಪೊಲೀಸರು, ಅವರನ್ನು ತರಾಟೆಗೆ ತೆಗೆದುಕೊಂಡು ಅಲ್ಲಿಂದ ಕಳುಹಿಸಿದ್ದಾರೆ. ಘಟನೆ ಕುರಿತು ಮಾತನಾಡಿರುವ ಛಲವಾದಿ ನಾರಾಯಣಸ್ವಾಮಿ, ಹೋಗ್ಲಿ ದುಡ್ಡು ಕೊಟ್ಟಾದ್ರೂ ಆರ್ಡರ್ ಮಾಡಿದ್ದಾರಾ..? ದುಡ್ಡು ಕೊಡದೇ ನನ್ನ ನಂಬರ್ ಕೊಟ್ಟು ಆರ್ಡರ್ ಮಾಡಿದ್ದಾರೆ. ಆನ್‌ಲೈನ್‌ ಡೆಲಿವರಿ ಬಾಯ್ಸ್‌ ಜೊತೆಗೆ ಎನ್‌ಎಸ್‌ಯುಐ ಹುಡುಗರು ಬಂದಿದ್ದಾರೆ. ದುಡ್ಡು ಕೊಟ್ಟಾದ್ರೂ ಕಳ್ಸಿದ್ರೆ ತರಕಾರಿ ಕಟ್ ಮಾಡಲು ಇಟ್ಕೊಳ್ತಿದ್ದೆ. ನಿಮ್ಮ ಚಾಕು ಚೂರಿಗೆ ನಾನು ಹೆದರಲ್ಲ. ನನ್ನದು ನಕಲಿ ದಲಿತ ರಕ್ತ ಅಲ್ಲ, ಅಂಬೇಡ್ಕರ್ ರಕ್ತ ಎಂದು ಗುಡುಗಿದ್ದಾರೆ.