ವಿಧಾನ ಪರಿಷತ್ ಚುನಾವಣೆ ಸೋಲಿಗೆ ಸ್ಟಿಂಗ್ ಕಾರಣ ; 5 ಜಿಲ್ಲೆಗಳ 26 ಕಾಂಗ್ರೆಸ್ ಶಾಸಕರು ರಾಜಿನಾಮೆ ನೀಡಬೇಕು, ಕೆಎನ್ ರಾಜಣ್ಣ ಟಾಂಗ್ 

03-11-26 09:48 pm       HK News Desk   ಕರ್ನಾಟಕ

ವಿಧಾನ ಪರಿಷತ್ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದಕ್ಕೆ ಹೊಣೆ ಹೊತ್ತು ಕಾಂಗ್ರೆಸ್ ಪಕ್ಷದ 26 ಶಾಸಕರು ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಕೆ.ಎನ್ ರಾಜಣ್ಣ ಹೇಳಿದ್ದಾರೆ. ಸೋಲಿಗೆ ಸ್ಟಿಂಗ್ ಆಪರೇಷನ್ ಕಾರಣ ಎಂದವರು ಆರೋಪಿಸಿದ್ದಾರೆ. 

ಬೆಂಗಳೂರು, ನ.3 ವಿಧಾನ ಪರಿಷತ್ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದಕ್ಕೆ ಹೊಣೆ ಹೊತ್ತು ಕಾಂಗ್ರೆಸ್ ಪಕ್ಷದ 26 ಶಾಸಕರು ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಕೆ.ಎನ್ ರಾಜಣ್ಣ ಹೇಳಿದ್ದಾರೆ. ಸೋಲಿಗೆ ಸ್ಟಿಂಗ್ ಆಪರೇಷನ್ ಕಾರಣ ಎಂದವರು ಆರೋಪಿಸಿದ್ದಾರೆ. 

ವಿಧಾನ ಪರಿಷತ್ ಚುನಾವಣೆ ಸೋಲಿಗೆ ಕಾಂಗ್ರೆಸ್ ಪಕ್ಷದ ನಾವೆಲ್ಲರೂ ರಾಜೀನಾಮೆಯನ್ನು ಕೊಡಬೇಕು. ನನ್ನನ್ನು ಸೇರಿದಂತೆ ಸೋಲಿನ ಜವಾಬ್ದಾರಿ ಹೊತ್ತು ಶಾಸಕರು ರಾಜೀನಾಮೆ ನೀಡಬೇಕು. ನಾವು ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಸಾಧ್ಯವಾಗಿಲ್ಲ ಎಂದರೆ ಈ ಭಾಗದ 26 ಜನ ಶಾಸಕರೂ ಜವಾಬ್ದಾರಿ ಹೊತ್ತು ರಾಜೀನಾಮೆ ಕೊಡಬೇಕು ಎಂದಿದ್ದಾರೆ.

ಆಗ್ನೇಯ ಪದವೀಧರ ಕ್ಷೇತ್ರದಲ್ಲಿ 35 ವಿಧಾನಸಭಾ ಕ್ಷೇತ್ರದಲ್ಲಿ 26 ಜನ ನಾವೇ ಶಾಸಕರಿದ್ದೇವೆ. ಹಾಗಾಗಿ ನಾವೆಲ್ಲ ರಾಜೀನಾಮೆ ಕೊಡಬೇಕಾಗಿದೆ. ಐದು ಜಿಲ್ಲೆಗಳ 35 ಕ್ಷೇತ್ರಗಳಲ್ಲಿ 26 ಜನ ಕಾಂಗ್ರೆಸ್ ಶಾಸಕರಿದ್ದರೂ ನಾವು ಗೆಲ್ಲೋದಕ್ಕೆ ಆಗಿಲ್ಲ. ಪಕ್ಷ ನಿರ್ಣಯ ತೆಗೆದುಕೊಂಡ ಮೇಲೆ ಶಾಸಕರು ಜವಾಬ್ದಾರಿ ತೆಗೆದುಕೊಳ್ಳಬೇಕು. ನಾವು ಕೂಡ ಇದರಲ್ಲಿ ತಪ್ಪು ಮಾಡಿದ್ದೇವೆ ಎಂದರು.

ಸ್ಟಿಂಗ್ ಆಪರೇಷನ್ ವಿಚಾರ ಎಂಎಲ್‌ಸಿ ಚುನಾವಣೆ ಮೇಲೆ ಪರಿಣಾಮ ಬೀರಿದೆ. ಎಂಎಲ್‌ಸಿ ಚುನಾವಣೆಯಲ್ಲಿ ವಿದ್ಯಾವಂತರು ಮತ ಹಾಕೋದು. ವಿದ್ಯಾವಂತರು ವೋಟ್ ಹಾಕುವಾಗ ಪ್ರತಿಯೊಂದು ವಿಚಾರವನ್ನು ತುಲನೆ ಮಾಡುತ್ತಾರೆ. ತಮ್ಮ ಅಸಮಾಧಾನವನ್ನು ಈ ರೀತಿ ವ್ಯಕ್ತಪಡಿಸಿರುವ ಸಾಧ್ಯತೆ ಇದೆ ಎಂದು ವ್ಯಾಖ್ಯಾನಿಸಿದರು. 

2028ರ ಚುನಾವಣೆಗೆ ಸಿದ್ದರಾಮಯ್ಯ ಅವರು ನಾಯಕತ್ವದ ಕ್ಲಾರಿಟಿ ಕೊಡಬೇಕು ಅನ್ನೋ ವಿಚಾರವಾಗಿ ಮಾತನಾಡಿದ ಅವರು, ‘ಈ ಬಗ್ಗೆ ಜನರಲ್ಲಿ ಗೊಂದಲ ಇದೆ. ಮುಂದಿನ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಅವರು ಹೇಳಿದ್ದರು. ಅದಾದ ಮೇಲೆ ಚುನಾವಣಾ ಪ್ರಚಾರಕ್ಕೆ ಹೋಗೋದಿಲ್ಲ ಅಂತ ಹೇಳಿದ್ದಾರೆ. ಇವೆಲ್ಲವೂ ಕೂಡ ಪಕ್ಷದ ಮೇಲೆ ಹೆಚ್ಚು ದುಷ್ಪರಿಣಾಮ ಆಗುತ್ತೆ ಅನ್ನೋದರಲ್ಲಿ ಯಾವುದೇ ಸಂಶಯ ಇಲ್ಲ ಎಂದರು.

ಸ್ಟಿಂಗ್ ಆಪರೇಷನ್ ನಿಂದ ಪಕ್ಷದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅವರ ವೈಯಕ್ತಿಕ ಚಾರಿತ್ರ್ಯ ಹರಣ ಆಗುತ್ತಿದೆ. ಅವೆಲ್ಲವನ್ನೂ ರಾಹುಲ್ ಗಾಂಧಿ ಅವರ ಜೊತೆಗೆ ವಿವರವಾಗಿ ಒನ್ ಟು ಒನ್ ಚರ್ಚೆ ಮಾಡುವಾಗ ಸಿದ್ದರಾಮಯ್ಯ ತಿಳಿಸಿದ್ದಾರೆ ಎಂದು ಹೇಳಿದರು.