Manglore Cyber crime, Stock Market: ಷೇರು ಮಾರ್ಕೆಟ್ ಹೆಸ್ರಲ್ಲಿ ಮಹಿಳೆಗೆ 13 ಲಕ್ಷ ರೂ. ಟೋಪಿ ; ಲಾಭವೂ ಇಲ್ಲ, ಅಸಲೂ ಇಲ್ಲ ! ಜನರು ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಇಂಥ ವಂಚನೆಗೆ ಕೊನೆಯೇ ಇಲ್ಲ

17-09-26 11:45 am       HK News Staffer   ಕ್ರೈಂ

ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಗಳಿಸಬಹುದೆಂದು ನಂಬಿಸಿ, ನಗರದ 60 ವರ್ಷದ ಹಿರಿಯ ಮಹಿಳೆಯೊಬ್ಬರಿಗೆ ಬರೋಬ್ಬರಿ 13,74,319 ರೂ. ವಂಚಿಸಿರುವ ಸೈಬರ್ ಕ್ರೈಂ ಪ್ರಕರಣವೊಂದು ನಡೆದಿದೆ..

ಮಂಗಳೂರು, ಸೆಪ್ಟೆಂಬರ್ 17: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಗಳಿಸಬಹುದೆಂದು ನಂಬಿಸಿ, ನಗರದ 60 ವರ್ಷದ ಹಿರಿಯ ಮಹಿಳೆಯೊಬ್ಬರಿಗೆ ಬರೋಬ್ಬರಿ 13,74,319 ರೂ. ವಂಚಿಸಿರುವ ಸೈಬರ್ ಕ್ರೈಂ ಪ್ರಕರಣವೊಂದು ನಡೆದಿದೆ..

ನಗರದ ನಿವಾಸಿಯಾದ 60 ವರ್ಷದ ಮಹಿಳೆ ಹಣ ಕಳೆದುಕೊಂಡ ಸಂತ್ರಸ್ತೆ. ಈ ಸಂಬಂಧ ಮಂಗಳೂರು ನಗರ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಸೈಬರ್ ವಂಚಕರ ವಿರುದ್ಧ ಪ್ರಕರಣ ದಾಖಲಾಗಿದೆ.

ವಂಚನೆ ನಡೆದಿದ್ದು ಹೇಗೆ? 

ದೂರಿನ ಪ್ರಕಾರ, ಮೇ 28ರಂದು ಸಂತ್ರಸ್ತೆ ತಮ್ಮ ಮೊಬೈಲ್ ವಾಟ್ಸಾಪ್ ನೋಡುತ್ತಿದ್ದ ವೇಳೆ ‘wsfx Global Pay / Quantam AI’ ಎಂಬ ಹೆಸರಿನ ವಾಟ್ಸ್​​ಆ್ಯಪ್​ ಗ್ರೂಪ್‌ನಲ್ಲಿ ಷೇರು ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭ ಗಳಿಸಬಹುದು ಎಂಬ ಸಂದೇಶಗಳು ಬಂದಿದ್ದವು.

ಇದಾದ ಬಳಿಕ, 'ಜೋಶುವಾ ಬಿ. ಸಾಜಿ' ಎಂಬ ಹೆಸರಿನಲ್ಲಿ +447824915764 ನಂಬರ್‌ನಿಂದ ಅಪರಿಚಿತ ವ್ಯಕ್ತಿಯೊಬ್ಬ ಸಂತ್ರಸ್ತ ಮಹಿಳೆಗೆ ವಾಟ್ಸ್​​​ಆ್ಯಪ್​ ಕರೆ ಮಾಡಿದ್ದಾನೆ. ತಾನು ತಿಳಿಸುವ ಕಂಪನಿಯಲ್ಲಿ ಹೆಸರು ನೋಂದಾಯಿಸಿಕೊಂಡು ಟ್ರೇಡಿಂಗ್‌ನಲ್ಲಿ ಹಣ ತೊಡಗಿಸಿದರೆ ದುಪ್ಪಟ್ಟು ಲಾಭ ಪಡೆಯಬಹುದು ಎಂದು ಬಲವಾಗಿ ನಂಬಿಸಿದ್ದಾನೆ.

ಅಪರಿಚಿತ ವ್ಯಕ್ತಿಯ ಮಾತು ನಂಬಿದ ಮಹಿಳೆ, ಮೇ 28ರಂದು ಆತ ಸೂಚಿಸಿದಂತೆ ಆರಂಭಿಕವಾಗಿ 15,819 ಹಣವನ್ನು ಯುಪಿಐ ಮೂಲಕ ಪಾವತಿಸಿದ್ದಾರೆ. ಬಳಿಕ ಹೆಚ್ಚಿನ ಲಾಭದ ಆಸೆಗೆ ಬಿದ್ದ ಸಂತ್ರಸ್ತೆ, ಮೇ 28ರಿಂದ ಆಗಸ್ಟ್ 27ರ ಅವಧಿಯಲ್ಲಿ ಆರೋಪಿಗಳು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ NEFT ಹಾಗೂ RTGS ಮೂಲಕ ಹಂತ - ಹಂತವಾಗಿ ಒಟ್ಟು 13,58,500 ಹಣವನ್ನು ವರ್ಗಾಯಿಸಿದ್ದಾರೆ.

ಹೂಡಿಕೆ ಮಾಡಿದ ಬಳಿಕ ಮಹಿಳೆಯು ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ ಸಾಧ್ಯವಾಗಿಲ್ಲ. ಇದರಿಂದ ಆತಂಕಗೊಂಡ ಸಂತ್ರಸ್ತೆ ಆರೋಪಿಯ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಆತ ಕರೆಯನ್ನು ಸ್ವೀಕರಿಸದೇ ಸಂಪರ್ಕ ಕಡಿತಗೊಳಿಸಿದ್ದಾನೆ. ಅನುಮಾನಗೊಂಡ ಮಹಿಳೆ ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ಬಂದು ವಿಚಾರಿಸಿದಾಗ ತಾನು ಸೈಬರ್ ವಂಚಕರ ಜಾಲಕ್ಕೆ ಬಲಿಯಾಗಿರುವುದು ಖಚಿತವಾಗಿದೆ.

ಒಟ್ಟಾರೆಯಾಗಿ ಮೇ 28ರಿಂದ ಆಗಸ್ಟ್ 27ರ ವರೆಗೆ 13,74,319 ರೂ. ಹಣವನ್ನು ಹಂತ-ಹಂತವಾಗಿ ವರ್ಗಾಯಿಸಿಕೊಂಡು ವಂಚಿಸಿದ ಅಪರಿಚಿತ ಜಾಲದ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮಹಿಳೆ ನೀಡಿದ ದೂರಿನ ಮೇರೆಗೆ ಸಿಇಎನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

A 60-year-old woman from Mangaluru has allegedly been cheated of ₹13.74 lakh after cyber fraudsters lured her with promises of high returns from stock market investments.