ಪರವಾನಗಿ ಇಲ್ಲದೆ ಔಷಧಿ ದಾಸ್ತಾನು ; ಬೆಂಗಳೂರಿನ ಅಮೆಜಾನ್ ಸಂಸ್ಥೆಯ ಗೋದಾಮುಗಳಿಗೆ ದಾಳಿ, 4 ಲಕ್ಷಕ್ಕೂ ಹೆಚ್ಚು ಮೌಲ್ಯದ ಔಷಧ ಜಪ್ತಿ

06-09-26 10:28 pm       HK News Staffer   ಕ್ರೈಂ

ಕರ್ನಾಟಕ ಆಹಾರ ಸುರಕ್ಷತೆ ಮತ್ತು ಜಾಗೃತ ದಳದ ಅಧಿಕಾರಿಗಳು ಬೆಂಗಳೂರಿನಲ್ಲಿರುವ ಇ-ಕಾಮರ್ಸ್ ದೈತ್ಯ ಅಮೆಜಾನ್ ಸಂಸ್ಥೆಗೆ ಸೇರಿದ ದಾಸ್ತಾನು ಕೇಂದ್ರಗಳ ಮೇಲೆ ಭಾನುವಾರ ದಿಢೀರ್ ದಾಳಿ ನಡೆಸಿದ್ದಾರೆ. ಮಾನ್ಯತೆ ಪಡೆದ ಔಷಧ ಪರವಾನಗಿ ಇಲ್ಲದೆ ಕಾನೂನುಬಾಹಿರವಾಗಿ ಔಷಧಿಗಳನ್ನು ದಾಸ್ತಾನು ಮಾಡಿ, ವಿತರಣೆ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಬೆಂಗಳೂರು, ಸೆ.6: ಕರ್ನಾಟಕ ಆಹಾರ ಸುರಕ್ಷತೆ ಮತ್ತು ಜಾಗೃತ ದಳದ ಅಧಿಕಾರಿಗಳು ಬೆಂಗಳೂರಿನಲ್ಲಿರುವ ಇ-ಕಾಮರ್ಸ್ ದೈತ್ಯ ಅಮೆಜಾನ್ ಸಂಸ್ಥೆಗೆ ಸೇರಿದ ದಾಸ್ತಾನು ಕೇಂದ್ರಗಳ ಮೇಲೆ ಭಾನುವಾರ ದಿಢೀರ್ ದಾಳಿ ನಡೆಸಿದ್ದಾರೆ. ಮಾನ್ಯತೆ ಪಡೆದ ಔಷಧ ಪರವಾನಗಿ ಇಲ್ಲದೆ ಕಾನೂನುಬಾಹಿರವಾಗಿ ಔಷಧಿಗಳನ್ನು ದಾಸ್ತಾನು ಮಾಡಿ, ವಿತರಣೆ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ. 

ಬೆಂಗಳೂರಿನ ಆನೇಕಲ್ ತಾಲೂಕಿನ ತಟ್ಟನಹಳ್ಳಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಏರೋಸ್ಪೇಸ್ ಪಾರ್ಕ್‌ನಲ್ಲಿರುವ ಅಮೆಜಾನ್ ದಾಸ್ತಾನು ಕೇಂದ್ರಗಳ ಮೇಲೆ ಅಧಿಕಾರಿಗಳ ತಂಡ ಜಂಟಿ ಕಾರ್ಯಾಚರಣೆ ನಡೆಸಿದೆ. ಈ ಎರಡು ಕೇಂದ್ರಗಳಿಂದ ಒಟ್ಟು ₹4.02 ಲಕ್ಷಕ್ಕೂ ಅಧಿಕ ಮೌಲ್ಯದ ಕಾನೂನುಬಾಹಿರ ಔಷಧಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಆನೇಕಲ್ ಕೇಂದ್ರದಿಂದ ₹2.45 ಲಕ್ಷ ಹಾಗೂ ದೇವನಹಳ್ಳಿ ಕೇಂದ್ರದಿಂದ ₹1.57 ಲಕ್ಷ ಮೌಲ್ಯದ ಔಷಧಿಗಳನ್ನು ವಶಪಡಿಸಿಕೊಳ್ಳಲಾಗಿದೆ. 

ನಿಯಮಗಳ ಪ್ರಕಾರ ಫಾರ್ಮಾಸ್ಯುಟಿಕಲ್ ಉತ್ಪನ್ನಗಳನ್ನು ಸಂಗ್ರಹಿಸಲು ಮತ್ತು ವಿತರಿಸಲು ಇರಬೇಕಾದ ಅಧಿಕೃತ ಲೈಸೆನ್ಸ್ ಅನ್ನು ಈ ಕೇಂದ್ರಗಳು ಹೊಂದಿರಲಿಲ್ಲ. ಇಂಟೆಲಿಜೆನ್ಸ್ ವಿಭಾಗಕ್ಕೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. 

ರಾಜ್ಯ ಗುಪ್ತದಳ ವಿಭಾಗದ ಸಹಾಯಕ ಔಷಧ ನಿಯಂತ್ರಕರಾದ ಮನೋಹರ್ ಮತ್ತು ಔಷಧ ಪರಿವೀಕ್ಷಕರ ತಂಡವು, ಬೆಂಗಳೂರಿನ ಆನೇಕಲ್ ತಾಲೂಕಿನ ತಟ್ಟನಹಳ್ಳಿಯಲ್ಲಿರುವ 'ಮೆಸರ್ಸ್ ಅಮೆಜಾನ್ ಸೆಲ್ಲರ್ ಸರ್ವಿಸಸ್ ಪ್ರೈವೇಟ್  ಲಿಮಿಟೆಡ್' ನ ಪರವಾನಗಿ ರಹಿತ ಆವರಣದ ಮೇಲೆ ದಾಳಿ ನಡೆಸಿ, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ರೂ. 2,45,352/- ಮೌಲ್ಯದ ಔಷಧಗಳನ್ನು ವಶಪಡಿಸಿಕೊಂಡಿದೆ.

ಇದೇ ವೇಳೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಔಷಧ ಪರಿವೀಕ್ಷಕರಾದ ಶ್ರೀಮತಿ ವಿಭಾ ಮತ್ತು ಅವರ ತಂಡವು, ದೇವನಹಳ್ಳಿಯ ಏರೋಸ್ಪೇಸ್‌ನಲ್ಲಿರುವ 'ಮೆಸರ್ಸ್ ಅಮೆಜಾನ್' ಸಂಸ್ಥೆಯ ಪರವಾನಗಿ ರಹಿತ ಆವರಣದ ಮೇಲೆ ದಾಳಿ ನಡೆಸಿ, ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ರೂ. 1,57,000/- ಮೌಲ್ಯದ ಔಷಧಗಳನ್ನು ಜಪ್ತಿ ಮಾಡಿದೆ.