ಉಪ್ಪಿನಂಗಡಿ ಹೆದ್ದಾರಿ ಬದಿ ನಿಲ್ಲಿಸಿದ್ದ ಲಾರಿಗಳಿಂದ ಡೀಸೆಲ್ ಕಳ್ಳತನ; ಮಂಡ್ಯ ಮೂಲದ ಇಬ್ಬರ ಬಂಧನ

05-09-26 11:52 am       HK News Staffer   ಕ್ರೈಂ

ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿಲ್ಲಿಸುತ್ತಿದ್ದ ಲಾರಿ ಇನ್ನಿತರ ವಾಹನಗಳಿಂದ ಡೀಸೆಲ್ ಕಳ್ಳತನ ಮಾಡುತ್ತಿದ್ದ ಮಂಡ್ಯ ಮೂಲದ ಇಬ್ಬರು ಆರೋಪಿಗಳನ್ನು ಉಪ್ಪಿನಂಗಡಿ ಠಾಣೆ ಪೊಲೀಸರು ಚೇಸ್ ಮಾಡಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕು ನಿವಾಸಿಗಳಾದ ಜೈಮುತ್ತಾ (23) ಹಾಗೂ ಮುತ್ತು (28) ಎಂದು ಗುರುತಿಸಲಾಗಿದೆ.

ಪುತ್ತೂರು, ಸೆ.5: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿಲ್ಲಿಸುತ್ತಿದ್ದ ಲಾರಿ ಇನ್ನಿತರ ವಾಹನಗಳಿಂದ ಡೀಸೆಲ್ ಕಳ್ಳತನ ಮಾಡುತ್ತಿದ್ದ ಮಂಡ್ಯ ಮೂಲದ ಇಬ್ಬರು ಆರೋಪಿಗಳನ್ನು ಉಪ್ಪಿನಂಗಡಿ ಠಾಣೆ ಪೊಲೀಸರು ಚೇಸ್ ಮಾಡಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕು ನಿವಾಸಿಗಳಾದ ಜೈಮುತ್ತಾ (23) ಹಾಗೂ ಮುತ್ತು (28) ಎಂದು ಗುರುತಿಸಲಾಗಿದೆ. 

ಸೆಪ್ಟೆಂಬರ್ 3ರಂದು ರಾತ್ರಿ ಉಪ್ಪಿನಂಗಡಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಬೈಕ್‌ನಲ್ಲಿ ನೈಟ್ ರೌಂಡ್ಸ್ ಕರ್ತವ್ಯದಲ್ಲಿದ್ದರು. ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಅಲಂಪಾಡಿ ಕ್ರಾಸ್ ಸಮೀಪ ತಲುಪಿದಾಗ, ಹೆದ್ದಾರಿ ಬದಿ ನಿಲ್ಲಿಸಲಾಗಿದ್ದ ಟ್ಯಾಂಕರ್ ಒಂದರ ಬಳಿ ಬೊಲೆರೋ ಪಿಕ್‌ಅಪ್ ವಾಹನ ನಿಂತಿರುವುದು ಹಾಗೂ ಪಕ್ಕದಲ್ಲಿ ಮೂವರು ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಕಂಡುಬಂದಿದೆ. ಪೊಲೀಸರ ಬೈಕ್ ಸದ್ದು ಕೇಳಿ ಆರೋಪಿಗಳು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ. ತಕ್ಷಣ ಜಾಗರೂಕರಾದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಹೆದ್ದಾರಿ ಬದಿ ನಿಲ್ಲಿಸುವ ವಾಹನಗಳ ಇಂಧನ ಟ್ಯಾಂಕ್‌ನಿಂದ ಡೀಸೆಲ್ ಕದಿಯುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. 

ಸ್ಥಳವನ್ನು ಪರಿಶೀಲಿಸಿದ ಪೊಲೀಸರು ಕಳ್ಳತನಕ್ಕೆ ಬಳಸಿದ್ದ ಬೊಲೆರೋ ಪಿಕ್‌ಅಪ್ ವಾಹನ, ಕ್ಯಾನ್‌ಗಳಲ್ಲಿ ತುಂಬಿಸಿದ್ದ ಸುಮಾರು 20 ಲೀಟರ್ ಡೀಸೆಲ್, ಕಳವಿಗೆ ಬಳಸುತ್ತಿದ್ದ ರಬ್ಬರ್ ಪೈಪ್ ಹಾಗೂ ಹಲವು  ಖಾಲಿ ಕ್ಯಾನ್‌ಗಳನ್ನು ವಶಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ (ಅ.ಕ್ರ: 118/2026, ಕಲಂ: 35(1)(ಡಿ) ಬಿ.ಎನ್.ಎಸ್.ಎಸ್. ಮತ್ತು ಕಲಂ 303(2) ಬಿ.ಎನ್.ಎಸ್.) ದಾಖಲಾಗಿದೆ.