ಕೋಟೆಕಾರಿನಲ್ಲಿ ಕಟ್ಟಡದಿಂದ ಬಿದ್ದು ಗಾಯಗೊಂಡ ವಲಸೆ ಕಾರ್ಮಿಕರಿಗೆ ಚಿಕಿತ್ಸೆ ಮುಂದುವರಿಕೆ; ಸುರಕ್ಷತೆ ವಹಿಸದ ಕಟ್ಟಡ ಮಾಲೀಕ, ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲು

14-08-26 09:09 pm       HK News Staffer   ಕ್ರೈಂ

ಕೋಟೆಕಾರು ಬೀರಿಯ ನಿರ್ಮಾಣ ಹಂತದ ಕಟ್ಟಡದಿಂದ‌ ಬಿದ್ದು ಗಂಭೀರ ಗಾಯಗೊಂಡಿರುವ ಇಬ್ಬರು ವಲಸೆ ಕಾರ್ಮಿಕರಿಗೆ ದೇರಳಕಟ್ಟೆಯ ಖಾಸಗಿ‌ ಆಸ್ಪತ್ರೆಯ ಒಳರೋಗಿ ವಿಭಾಗದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದ್ದು, ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದ ವೇಳೆ ಯಾವುದೇ ರೀತಿಯ ಸುರಕ್ಷತಾ ಕ್ರಮಗಳನ್ನ ಪಾಲಿಸದೆ ಘಟನೆಗೆ ಕಾರಣರಾದ ಗುತ್ತಿಗೆದಾರ ಹಾಗೂ ಕಟ್ಟಡ ಮಾಲಕನ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಳ್ಳಾಲ, ಆ.14: ಕೋಟೆಕಾರು ಬೀರಿಯ ನಿರ್ಮಾಣ ಹಂತದ ಕಟ್ಟಡದಿಂದ‌ ಬಿದ್ದು ಗಂಭೀರ ಗಾಯಗೊಂಡಿರುವ ಇಬ್ಬರು ವಲಸೆ ಕಾರ್ಮಿಕರಿಗೆ ದೇರಳಕಟ್ಟೆಯ ಖಾಸಗಿ‌ ಆಸ್ಪತ್ರೆಯ ಒಳರೋಗಿ ವಿಭಾಗದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದ್ದು, ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದ ವೇಳೆ ಯಾವುದೇ ರೀತಿಯ ಸುರಕ್ಷತಾ ಕ್ರಮಗಳನ್ನ ಪಾಲಿಸದೆ ಘಟನೆಗೆ ಕಾರಣರಾದ ಗುತ್ತಿಗೆದಾರ ಹಾಗೂ ಕಟ್ಟಡ ಮಾಲಕನ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಟೆಕಾರು ಅಜ್ಜಿನಡ್ಕದ ವಿಜಿ ಕಾಂಡಿಮೆಂಟ್ಸ್ ನ ಮಾಲಕ ತಮಿಳುನಾಡು ಮೂಲದ ಉದಯ್ ಕುಮಾರ್ ಅವರ ಒಡೆತನದ ಬೀರಿ ಮ್ಯಾರೇಜ್ ಮಹಲ್ ಪಕ್ಕದ ನಿರ್ಮಾಣ ಹಂತದ ಕಟ್ಟಡದ ಎರಡನೇ ಮಹಡಿಯಿಂದ ಕೆಳಗಡೆ ಬಿದ್ದಿದ್ದ ಮೂಲತಃ ಉತ್ತರ ಪ್ರದೇಶದ ಬುಲಂದ್ ಶಹರ್ ಜಿಲ್ಲೆಯ ನಿವಾಸಿಗಳು, ಪ್ರಸ್ತುತ ಮಂಜೇಶ್ವರದ ಕುಂಜತ್ತೂರಿನ‌ ಬಾಡಿಗೆ ಮನೆಯಲ್ಲಿ ನೆಲೆಸಿರುವ ಹೈದರ್ (28) ಹಾಗೂ ಶಾಕಿಬ್ (22) ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದರು. 

ಕಟ್ಟಡದ ಐದನೇ ಮಹಡಿಗೆ ಮೇಲ್ಛಾವಣಿ ಶೀಟ್ ಅಳವಡಿಸುವ ಕಾಮಗಾರಿಯ ಗುತ್ತಿಗೆಯನ್ನು ಆಶಿತ್ ಶೆಟ್ಟಿ ಎಂಬವರು ವಹಿಸಿದ್ದು, ಕಾರ್ಮಿಕರಾದ ಶಾಕಿಬ್, ಹೈದರ್ ಹಾಗೂ ಹೈದರ್ ಬಾಮೈದ ರಿಹಾನ್ ಅವರು ಗುರುವಾರ ಶೀಟ್ ಅಳವಡಿಸುವ ಕಾಮಗಾರಿ ನಡೆಸುತ್ತಿದ್ದಾಗ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಹೈದರ್ ಮತ್ತು ಶಾಕಿಬ್ ಅವರು ವೆಲ್ಡಿಂಗ್ ಮೆಷಿನ್ ತರಲು ಎರಡನೇ ಮಹಡಿಗೆ ಹೋದ ಸಂದರ್ಭದಲ್ಲಿ ಶಾಕಿಬ್ ಆಯತಪ್ಪಿ ಕೆಳಗಡೆ ಬಿದ್ದಿದ್ದು, ಅವರನ್ನ‌ ಕಾಪಾಡಲು ಮುಂದಾದ ಹೈದರ್ ಕೂಡ ಕಟ್ಟಡದ ಕೆಳ ಭಾಗದ ಎಲೆಕ್ಟ್ರಿಕ್ ಡಕ್ಟ್ ಮೇಲೆ ಬಿದ್ದಿದ್ದಾರೆ. ಘಟನೆಯಿಂದ ಶಾಕಿಬ್ ಅವರ ಎಡಕೈ, ಎಡಕಾಲು ಮತ್ತು ಮುಖಕ್ಕೆ ಗಂಭೀರ ಗಾಯಗಳಾಗಿದ್ದು, ಹೈದರ್ ಅವರ ಹೊಟ್ಟೆ ಹಾಗೂ ಕಾಲಿಗೆ ಗಾಯಗಳಾಗಿವೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಇಬ್ಬರನ್ನೂ ಕೂಡಲೇ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು.

ಗುತ್ತಿಗೆದಾರ ಆಶಿತ್ ಶೆಟ್ಟಿ ಹಾಗೂ ಕಟ್ಟಡ ಮಾಲಕರಾದ ಉದಯ ಕುಮಾರ್ ಅವರು ಕಾರ್ಮಿಕರಿಗೆ ಸೊಂಟಕ್ಕೆ ಸೇಫ್ಟಿ ಬೆಲ್ಟ್, ತಲೆಗೆ ಹೆಲ್ಮೆಟ್ ಹಾಗೂ ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ನೆಟ್ ಗಳನ್ನ ಅಳವಡಿಸುವ ಯಾವುದೇ ಮುಂಜಾಗ್ರತೆಯ ಸುರಕ್ಷತಾ ಕ್ರಮಗಳನ್ನ ಅನುಸರಿಸದೆ ನಿರ್ಲಕ್ಷ್ಯ ವಹಿಸಿರುವುದೇ ಘಟನೆಗೆ ಕಾರಣವೆಂದು ಗಾಯಾಳು ಹೈದರ್ ಅವರ ಬಾಮೈದ (ಪತ್ನಿಯ ತಮ್ಮ)ರಿಹಾನ್(20) ಆರೋಪಿಸಿದ್ದಾನೆ. ಘಟನೆಗೆ ಕಾರಣರಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ರಿಹಾನ್ ನೀಡಿರುವ ದೂರಿನನ್ವಯ ಗುತ್ತಿಗೆದಾರ ಆಶಿತ್ ಶೆಟ್ಟಿ ಹಾಗೂ ಕಟ್ಟಡ ಮಾಲಕ ಉದಯ ಕುಮಾರ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.