ಉಳ್ಳಾಲದಲ್ಲಿ ಯುವಕ ನೇಣು ಬಿಗಿದು ಆತ್ಮಹತ್ಯೆ ; ಡೆತ್ ನೋಟಿನಲ್ಲಿ ಮೂವರು ಸ್ನೇಹಿತರ ಹೆಸರು ಉಲ್ಲೇಖ, ಎಫ್ಐಆರ್ ದಾಖಲು

05-08-26 09:08 pm       HK News Staffer   ಕ್ರೈಂ

ಅವಿವಾಹಿತ ಯುವಕನೋರ್ವ ಮನೆಯಲ್ಲೇ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ‌ ಸೋಮೇಶ್ವರ ಬಳಿಯ ಪಿಲಾರು ಸರಕಾರಿ ಶಾಲೆಯ ಬಳಿ ನಡೆದಿದ್ದು, ಮೃತ ಯುವಕ ಡೆತ್ ನೋಟಿನಲ್ಲಿ ಸಾವಿಗೆ ಕಾರಣರಾದ ಮೂವರು ಯುವಕರ ಹೆಸರನ್ನು ಉಲ್ಲೇಖಿಸಿರುವ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಳ್ಳಾಲ, ಆ.05: ಅವಿವಾಹಿತ ಯುವಕನೋರ್ವ ಮನೆಯಲ್ಲೇ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ‌ ಸೋಮೇಶ್ವರ ಬಳಿಯ ಪಿಲಾರು ಸರಕಾರಿ ಶಾಲೆಯ ಬಳಿ ನಡೆದಿದ್ದು, ಮೃತ ಯುವಕ ಡೆತ್ ನೋಟಿನಲ್ಲಿ ಸಾವಿಗೆ ಕಾರಣರಾದ ಮೂವರು ಯುವಕರ ಹೆಸರನ್ನು ಉಲ್ಲೇಖಿಸಿರುವ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿತಿನ್ ಕುಮಾರ್ ಯಾನೆ ನೀತು(35) ಆತ್ಮಹತ್ಯೆಗೈದ ಯುವಕ. ಮೂಲತಃ ಕೋಟೆಕಾರು ಕೊಂಡಾಣ ಮಿತ್ರನಗರ ನಿವಾಸಿಯಾಗಿರುವ ನಿತಿನ್, ಪಿಲಾರಿನ ಭಾವ (ಅಕ್ಕನ ಗಂಡ) ಪ್ರಶಾಂತ್ ಪಕ್ಕಳ ಅವರ ಮನೆಯಲ್ಲಿ ಮೂರು ವರ್ಷಗಳಿಂದ ವಾಸವಿದ್ದ. ತೊಕ್ಕೊಟ್ಟು ಕಾಪಿಕಾಡಿನ ಕ್ಯಾಟರಿಂಗ್ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದ ನಿತಿನ್ ಕಳೆದ ಐದು ವರುಷಗಳಿಂದ ಕಾಲಿನ ವೆರಿಕೋಸ್ ಸಮಸ್ಯೆಯಿಂದ ಬಳಲುತ್ತಿದ್ದನಂತೆ. 

ಮೂರು ದಿನಗಳಿಂದ ನಿತಿನ್ ಜ್ವರ ಭಾದೆಯಿಂದಾಗಿ ಮನೆಯಲ್ಲೇ ಉಳಿದಿದ್ದು, ಮಂಗಳವಾರ ರಾತ್ರಿ ಊಟ ಮುಗಿಸಿ ಕೋಣೆಗೆ ಸೇರಿದ ಬಳಿಕ ಬುಧವಾರ ಬೆಳಗ್ಗೆ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ನಿತಿನ್ ಧರಿಸಿದ್ದ ಪ್ಯಾಂಟ್ ಜೇಬಿನಲ್ಲಿ ಚೀಟಿಯೊಂದು ಸಿಕ್ಕಿದ್ದು ಅದರಲ್ಲಿ ನನ್ನ ಸಾವಿಗೆ ಚರಣ್, ಪುಟ್ಟ, ಕಾರ್ತಿಕ್ ಕಾರಣ ಎಂಬುದಾಗಿ ಮೂವರ ಹೆಸರನ್ನ ಉಲ್ಲೇಖಿಸಲಾಗಿದೆ. ಈ ಮೂವರ ದುಷ್ಪ್ರೇರಣೆಯಿಂದಲೇ ನಿತಿನ್ ಆತ್ಮಹತ್ಯೆಗೈಯಲು ಕಾರಣವಾಗಿದ್ದು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನಿತಿನ್ ಅವರ ಬಾವ ಪ್ರಶಾಂತ್ ಪಕ್ಕಳ ಅವರು ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ. ಉಳ್ಳಾಲ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.