ನಂತೂರು ಭೀಕರ ಅಪಘಾತ ; ಬೈಕ್ ಸವಾರನ ಧಾವಂತಕ್ಕೆ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ಹಿರಿಯ ಛಾಯಾಗ್ರಾಹಕ ಸಾವು, ಮದುವೆ ಮನೆಯಲ್ಲಿ ಮರಣಮೃದಂಗ !

14-04-26 11:14 am       HK News Staffer   ಕ್ರೈಂ

ಕಳೆದ ಶನಿವಾರ ರಾತ್ರಿ ರಾ.ಹೆ. 66ರ ನಂತೂರು ತಾರಾಯಿತೋಟ ಎಂಬಲ್ಲಿ ಓವರ್ ಟೇಕ್ ಮಾಡುವ ಭರದಲ್ಲಿ ಸ್ಕೂಟರ್ ಗೆ ಡಿಕ್ಕಿ ಹೊಡೆದು ಬೈಕ್ ಸವಾರ ರಸ್ತೆಗೆಸೆಯಲ್ಪಟ್ಟು ಸಾವನ್ನಪ್ಪಿದ್ದ ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ಅಮಾಯಕ ಸ್ಕೂಟರ್ ಸವಾರ, ಹಿರಿಯ ಛಾಯಾಗ್ರಾಹಕ ಕೆ.ಮೋಹನ್ ಚಂದರ್ (64) ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಮಂಗಳೂರು, ಏ.14: ಕಳೆದ ಶನಿವಾರ ರಾತ್ರಿ ರಾ.ಹೆ. 66ರ ನಂತೂರು ತಾರಾಯಿತೋಟ ಎಂಬಲ್ಲಿ ಓವರ್ ಟೇಕ್ ಮಾಡುವ ಭರದಲ್ಲಿ ಸ್ಕೂಟರ್ ಗೆ ಡಿಕ್ಕಿ ಹೊಡೆದು ಬೈಕ್ ಸವಾರ ರಸ್ತೆಗೆಸೆಯಲ್ಪಟ್ಟು ಸಾವನ್ನಪ್ಪಿದ್ದ ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ಅಮಾಯಕ ಸ್ಕೂಟರ್ ಸವಾರ, ಹಿರಿಯ ಛಾಯಾಗ್ರಾಹಕ ಕೆ.ಮೋಹನ್ ಚಂದರ್ (64) ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಧರ್ಮಸ್ಥಳದ ಕಾರ್ಯತಡ್ಕ ನಿವಾಸಿ ಗೋಪಾಲಕೃಷ್ಣ(27) ಎಂಬ ಯುವಕ ಶನಿವಾರ ರಾತ್ರಿ ಸುಮಾರು 8.30 ಗಂಟೆ ವೇಳೆ ಗುರುಪುರದಿಂದ ಜಪ್ಪಿನಮೊಗರಿನ ತನ್ನ ಬಾಡಿಗೆ ರೂಮಿನ ಕಡೆಗೆ ಎಫ್ ಜೀ ಬೈಕನ್ನು ಅಪರಿಮಿತ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ್ದು, ಓವರ್ ಟೇಕ್ ಮಾಡುವ ಭರದಲ್ಲಿ ತನ್ನ ಪಾಡಿಗೆ ಸಾಗುತ್ತಿದ್ದ ಮೋಹನ್ ಅವರ ಸ್ಕೂಟರ್ ಗೆ ಢಿಕ್ಕಿ ಹೊಡೆದು ಬಳಿಕ ನಿಯಂತ್ರಣ ತಪ್ಪಿ ಮೈನ್ಸ್ ಸಾಗಾಟದ ಟಿಪ್ಪರ್ಗೆ ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದ.

ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೋಹನ್ ಅವರನ್ನ ಟೆಂಪೋ ಚಾಲಕ ಗಂಗಾಧರ ಅಂಬ್ಲಮೊಗರು ಎಂಬವರು ಸಾರ್ವಜನಿಕರ ಸಹಕಾರದಿಂದ‌ ಕಂಕನಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಎರಡು ದಿವಸಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಮೋಹನ್ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಕೊನೆಯುಸಿರು ಎಳೆದಿದ್ದಾರೆ.

ಶನಿವಾರ ರಾತ್ರಿ ನಡೆದಿದ್ದ ಈ ಭೀಕರ ಅಪಘಾತದ ದೃಶ್ಯವು ಗಂಗಾಧರ್ ಅಂಬ್ಲಮೊಗರು ಚಲಾಯಿಸುತ್ತಿದ್ದ ಗೂಡ್ಸ್ ಟೆಂಪೋವಿನ ಡ್ಯಾಷ್ ಬೋರ್ಡ್ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿತ್ತು.

ನಾಗುರಿ ನಿವಾಸಿಯಾಗಿರುವ ಮೋಹನ್ ಚಂದರ್ ಅವರು ನಗರದ ಹೊರವಲಯದ ಪದವಿನಂಗಡಿ ಎಂಬಲ್ಲಿ ನವ್ಯ ಸ್ಟುಡಿಯೋ ಹೊಂದಿದ್ದರು. ಮೋಹನ್ ಅವರ ಹಿರಿಯ ಮಗಳಿಗೆ ಇದೇ ಮೇ 10 ರಂದು ವಿವಾಹ ನಿಶ್ಚಯವಾಗಿದ್ದು ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿತ್ತು. ಇದೀಗ ಮೋಹನ್ ಅವರ ಅಕಾಲಿಕ ಅಗಲಿಕೆಯಿಂದ ಸಂಭ್ರಮ ಮನೆ ಮಾಡಿದ್ದ ಮನೆಯಲ್ಲಿ ಸೂತಕ ಆವರಿಸಿದೆ. ಮೋಹನ್ ಚಂದರ್ ಅವರು ದಕ್ಷಿಣ ಕನ್ನಡ- ಉಡುಪಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನ ಅಜೀವ ಸದಸ್ಯರಾಗಿ ಸೇವೆ ಸಲ್ಲಿಸಿದ್ದಲ್ಲದೆ, ಅನೇಕ ಸಂಘ ಸಂಸ್ಥೆಗಳಲ್ಲೂ ಸಕ್ರಿಯರಾಗಿದ್ದರು. ಅವರ ಅಕಾಲಿಕ ಸಾವಿಗೆ ಸೌತ್ ಕೆನರಾ ಫೋಟೊಗ್ರಾಫರ್ಸ್ ಅಸೋಸಿಯೇಷನ್ ಸಂಘವು ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಮೃತ ಮೋಹನ್ ಅವರು ಪತ್ನಿ , ಇಬ್ಬರು ಪುತ್ರಿಯರನ್ನ ಅಗಲಿದ್ದಾರೆ. ತಾನು ಮಾಡದ ತಪ್ಪಿಗೆ ಮೋಹನ್‌ ಚಂದರ್ ವಿನಾಕಾರಣ ಜೀವ ತೆರಬೇಕಾಯಿತು. ದುಡುಕಿನ‌ ಬೈಕ್ ಸವಾರಿಯಿಂದಾಗಿ ಎರಡು ಮನೆಯ ದೀಪ ಆರಿದಂತಾಗಿದೆ.

In a tragic turn of events following a horrific accident at Nantoor on National Highway 66 last Saturday night, the injured scooter rider, senior photographer K. Mohan Chander (64), has succumbed to his injuries in hospital.