ಬ್ರೇಕಿಂಗ್ ನ್ಯೂಸ್
10-01-25 10:11 am Mangalore Correspondent ಕ್ರೈಂ
ಬಂಟ್ವಾಳ, ಜ.9: ಸಿಂಗಾರಿ ಬೀಡಿ ಮಾಲೀಕ ಸುಲೇಮಾನ್ ಹಾಜಿಯವರ ಮನೆಗೆ ಇಡಿ ಅಧಿಕಾರಿಗಳ ಸೋಗಿನಲ್ಲಿ ನುಗ್ಗಿದ ದರೋಡೆಕೋರರು ಕೋಟ್ಯಂತರ ರೂಪಾಯಿ ದುಡ್ಡು ದೋಚಿದ ಪ್ರಕರಣದಲ್ಲಿ ತನಿಖೆಗೆ ನಾಲ್ಕು ಪೊಲೀಸ್ ತಂಡಗಳನ್ನು ರಚಿಸಿದ್ದರೂ, ಯಾವುದೇ ಖಚಿತ ಮಾಹಿತಿ ಕಲೆಹಾಕಲು ಸಾಧ್ಯವಾಗಿಲ್ಲ. ಸ್ಥಳೀಯರ ಮಾಹಿತಿ, ಸಿಸಿಟಿವಿ ಸೇರಿದಂತೆ ಬೇರೆ ಬೇರೆ ಕೋನಗಳಿಂದ ತನಿಖೆ ನಡೆಸಿದ್ದರೂ, ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿಲ್ಲ.
ದರೋಡೆಗೆ ಬಂದಿದ್ದ ಏಳು ಜನರಿದ್ದ ತಮಿಳುನಾಡು ನೋಂದಣಿಯ ಎರ್ಟಿಕಾ ಕಾರು ಎಲ್ಲಿಂದ ಸಾಗಿದೆ ಎನ್ನುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಬೋಳಂತೂರಿನ ನಾರ್ಶದಲ್ಲಿರುವ ಸುಲೇಮಾನ್ ಹಾಜಿಯವರ ಮನೆಯ ಕಡೆಯಿಂದ ಕಾರು ಗೋಳ್ತಮಜಲಿಗೆ ಬಂದು ಅಲ್ಲಿಂದ ವಿಟ್ಲ ಮೂಲಕ ಸಾಗಿದ್ದು, ಅಲ್ಲಿಂದ ಸಾರಡ್ಕ ಮಾರ್ಗವಾಗಿ ಕೇರಳಕ್ಕೆ ಪರಾರಿಯಾಗಿದೆ ಎನ್ನುವ ಸುಳಿವು ಇದೆ. ಆದರೆ ಏಕಕಾಲದಲ್ಲಿ ಮೂರು ಎರ್ಟಿಕಾ ಕಾರು ಸಾಗಿದ್ದು, ಅದರ ನಂಬರ್ ನೋಟ್ ಆಗಿಲ್ಲ ಎನ್ನಲಾಗುತ್ತಿದೆ. ಶಬರಿಮಲೆಗೆ ತೆರಳುವ ಬೆಂಗಳೂರಿನ ವಾಹನಗಳು ಕೂಡ ಇದೇ ಮಾರ್ಗದಲ್ಲಿ ಸಾಗುವುದರಿಂದ ಇದರ ಬಗ್ಗೆ ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ.
ಮತ್ತೊಂದೆಡೆ, ಇಡಿ ಅಧಿಕಾರಿಗಳ ಸೋಗಿನಲ್ಲಿ ಬಂದಿದ್ದ ತಂಡದಲ್ಲಿ ಕಾರು ಚಾಲಕ ಸಹಿತ ಏಳು ಮಂದಿ ಇದ್ದರು. ಚಾಲಕನನ್ನು ಬಿಟ್ಟರೆ ಉಳಿದೆಲ್ಲರೂ ಎತ್ತರ ಮತ್ತು ಗಟ್ಟಿಮುಟ್ಟಾದ ಶರೀರ ಹೊಂದಿದ್ದರು. ಅಲ್ಲದೆ, ಅವರೆಲ್ಲ ಹಿಂದಿ ಮತ್ತು ಇಂಗ್ಲಿಷ್ ಮಾತ್ರ ಮಾತನಾಡುತ್ತಿದ್ದರು. ತಪ್ಪಿಯೂ ಬೇರೆ ಭಾಷೆ ಮಾತನಾಡಿಲ್ಲ ಎನ್ನುವುದು ಮನೆಯವರು ಪೊಲೀಸರಿಗೆ ನೀಡಿದ ವಿವರಣೆ. ಆದರೆ ಮನೆಯವರು ತಮಗೆ ಹಿಂದಿ, ಇಂಗ್ಲಿಷ್ ಬರಲ್ಲ ಎಂದಿದ್ದಕ್ಕೆ ಕನ್ನಡ ಗೊತ್ತಿದ್ದ ಕಾರು ಚಾಲಕನೇ ಸುಲೇಮಾನ್ ಹಾಜಿಗೆ ಎಲ್ಲವನ್ನೂ ಹೇಳುತ್ತಿದ್ದ. ಆತನ ವರ್ತನೆ ಸುಲೇಮಾನ್ ಹಾಜಿ ಬಗ್ಗೆ ಚೆನ್ನಾಗಿ ತಿಳಿದಿರುವ ರೀತಿಯೇ ಇತ್ತು ಎನ್ನುವುದು ಪೊಲೀಸರ ಮಾಹಿತಿ.
ಕಟ್ಟಡ ಮಾರಿದ ಹಣವನ್ನು ಕೇಳಿದ್ದ ತಂಡ
ಸುಲೇಮಾನ್ ಹಾಜಿಯವರು 15-20 ದಿನಗಳ ಹಿಂದೆ ಬಿಸಿ ರೋಡ್ ಬಳಿಯ ತನ್ನ ವಾಣಿಜ್ಯ ಸಂಕೀರ್ಣವನ್ನು 3.60 ಕೋಟಿಗೆ ಮಾರಾಟ ಮಾಡಿದ್ದರು. ಆ ಹಣವನ್ನು ನಗದು ರೂಪದಲ್ಲಿಯೇ ಪಡೆದಿದ್ದರು ಎನ್ನಲಾಗುತ್ತಿದ್ದು, ದರೋಡೆ ಆಗಿರುವ ದಿನವೇ ತನ್ನ ಮನೆಗೆ ತಂದಿಟ್ಟಿದ್ದರು. ಅಷ್ಟು ದಿನಗಳ ಕಾಲ ಈ ಹಣ ಸುಲೇಮಾನ್ ಅವರ ಸ್ನೇಹಿತನ ಮನೆಯಲ್ಲಿತ್ತು ಎನ್ನುವುದು ಮೂಲಗಳ ಮಾಹಿತಿ. ಇಡಿ ಸೋಗಿನಲ್ಲಿ ಬಂದಿದ್ದವರು ಇಡೀ ಮನೆಯನ್ನು ತಡಕಾಡಿ ಬೆಡ್ ಅಡಿಭಾಗದಲ್ಲಿ, ಕಪಾಟಿನಲ್ಲಿ ಇರಿಸಿದ್ದ ನಗದಿನ ರಾಶಿಯನ್ನು ವಶಕ್ಕೆ ಪಡೆದಿದ್ದಾಗಿ ತಿಳಿಸಿದ್ದರು. ಇದೇ ವೇಳೆ, ಕಾರು ಚಾಲಕ ಸಂಜೆ ಕಟ್ಟಡ ಮಾರಿದ ಹಣವನ್ನು ತಂದಿಟ್ಟಿದ್ದಾರಲ್ವಾ.. ಅದು ಎಲ್ಲಿದೆ ಎಂದು ಸುಲೇಮಾನ್ ಅವರ ಮಗನಲ್ಲಿ ಪ್ರಶ್ನೆ ಮಾಡಿದ್ದ.
ಅಲ್ಲಿವರೆಗೂ ಕೇಳಿದ ಹಣ ಮತ್ತು ದಾಖಲೆಯನ್ನು ಸುಲೇಮಾನ್ ಅವರು, ಬಂದವರು ಇಡಿ ಅಧಿಕಾರಿಗಳೆಂದೇ ನಂಬಿಕೊಂಡು ಎಲ್ಲವನ್ನೂ ತಂದುಕೊಟ್ಟಿದ್ದರು. ಜಾಗ ಮಾರಿದ ಹಣವನ್ನು ಕೇಳಿದಾಗಲೂ, ಒಮ್ಮೆಗೆ ಅಚ್ಚರಿ ಎನಿಸಿದರೂ ಹಣ ಹೋದರೆ ಹೋಗಲಿ, ಇವರನ್ನೊಮ್ಮೆ ಸಾಗಹಾಕೋಣ ಎಂದುಕೊಂಡು ಅದನ್ನೂ ತಂದುಕೊಟ್ಟಿದ್ದರಂತೆ. ಹೀಗಾಗಿ ಬೋಳಂತೂರು ಆಸುಪಾಸಿನಲ್ಲಿ ಸುಲೇಮಾನ್ ಹಾಜಿ ಮನೆಯಿಂದ ಏನಿಲ್ಲ ಅಂದ್ರೂ ಎಂಟು ಕೋಟಿಗೂ ಹೆಚ್ಚು ಹಣ ಹೋಗಿದೆ ಎನ್ನುವ ಗುಸು ಗುಸು ಹರಡಿದೆ. ಸುಲೇಮಾನ್ ಹಾಜಿ ಆಗರ್ಭ ಶ್ರೀಮಂತರಾಗಿದ್ದರೂ, ಸ್ಥಳೀಯ ಮುಸ್ಲಿಮ್ ಯುವಕರು ಇವರೊಂದಿಗೆ ಆಪ್ತವಾಗಿಲ್ಲ. ಸ್ಥಳೀಯರನ್ನು ತನ್ನ ಹತ್ತಿರಕ್ಕೂ ಸೇರಿಸಿಕೊಳ್ಳದೆ ಎಲ್ಲವನ್ನೂ ಸಂಶಯ ದೃಷ್ಟಿಯಿಂದಲೇ ನೋಡುವ ಜಾಯಮಾನದ ಹಾಜಿಯ ಬಗ್ಗೆ ಯುವಕರಿಗೂ ಒಳ್ಳೆಯ ಅಭಿಪ್ರಾಯ ಇಲ್ಲ.
ಬೇರೆ ರಾಜ್ಯದ ವ್ಯಕ್ತಿಗಳ ಬಳಕೆ
ಸುಲೇಮಾನ್ ಹಾಜಿಯವರ ವಿರುದ್ಧ ಸ್ಥಳೀಯ ಕೆಲವೊಬ್ಬರು ಈ ಹಿಂದೆಯೂ ದೂರು ನೀಡಿದ್ದಿದೆ. ಇದೇ ವಿಚಾರದಲ್ಲಿ ಕೆಲವರೊಂದಿಗೆ ವೈಮನಸ್ಸು ಕೂಡ ಇದೆಯಂತೆ. ಇಷ್ಟಕ್ಕೂ ದರೋಡೆಗೆ ಬಂದಿದ್ದವರಿಗೆ ಕಟ್ಟಡ ಮಾರಾಟ ಮಾಡಿದ್ದು ಹೇಗೆ ಗೊತ್ತಿರುವುದು ಮತ್ತು ಅದೇ ದಿನ ಆ ಹಣವನ್ನೂ ಮನೆಗೆ ತಂದಿಟ್ಟಿರುವ ವಿಚಾರ ತಿಳಿದಿದ್ದು ಹೇಗೆ ಎನ್ನುವ ನೆಲೆಯಲ್ಲೂ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಹೀಗಾಗಿ ಸ್ಥಳೀಯರ ಕೈವಾಡ ಇಲ್ಲದೆ ಈ ಕೃತ್ಯ ಆಗಿರುವ ಸಾಧ್ಯತೆ ಇಲ್ಲ ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಪೊಲೀಸರು ಸ್ಥಳೀಯವಾಗಿ ಶಂಕಿತ ವ್ಯಕ್ತಿಗಳ ಬಗ್ಗೆ ನಿಗಾ ಇಟ್ಟಿದ್ದರೂ ಯಾರನ್ನೂ ವಶಕ್ಕೆ ಪಡೆಯಲು ಮುಂದಾಗಿಲ್ಲ. ದರೋಡೆ ನಡೆದಿರುವ ಮನೆಯಲ್ಲಿ ಸಿಸಿಟಿವಿ ಇಲ್ಲದಿರುವುದು, ರಾತ್ರಿ ಆಗಿದ್ದರಿಂದ ಕಾರಿನ ಪತ್ತೆ ಮಾಡುವುದಕ್ಕೂ ಸರಿಯಾದ ಸಿಸಿಟಿವಿ ಇಲ್ಲದಿರುವುದು ತನಿಖೆಗೆ ತೊಡಕಾಗಿದೆ.
ವಿಚಿತ್ರ ಎಂದರೆ, ತಮಿಳುನಾಡು ನೋಂದಣಿಯ ಕಾರನ್ನು ಅಂದು ಸಂಜೆಯ ವೇಳೆಗೆ ಬೋಳಂತೂರು ಆಸುಪಾಸಿನಲ್ಲಿ ಕೆಲವರು ಕಂಡಿದ್ದಾರಂತೆ. ಹೀಗಾಗಿ ಮೊದಲೇ ಈ ಕಾರಿನಲ್ಲಿ ಬಂದಿದ್ದವರು ಸುಲೇಮಾನ್ ಹಾಜಿಯವರು ಮನೆಗೆ ಬರುವುದನ್ನು ಕಾದಿದ್ದರು ಎನ್ನಲಾಗುತ್ತಿದೆ. ಅಂದು ಸ್ವಲ್ಪ ಲೇಟಾಗಿ ಹಾಜಿಯವರು ಮನೆಗೆ ಬಂದಿದ್ದರು. ಸ್ಥಳೀಯ ಶಾಲೆ ಒಂದರಲ್ಲಿ ಕಾರ್ಯಕ್ರಮ ಇದ್ದುದರಿಂದ ಅಲ್ಲಿ ಹೋಗಿ ಬರುವಾಗ ಲೇಟ್ ಆಗಿತ್ತು. ಇನ್ನೋವಾ ಕಾರಿನಲ್ಲಿ ಇವರು ಇಳಿಜಾರಿನ ತಿರುವಿನಲ್ಲಿ ಬರುತ್ತಿದ್ದಾಗಲೂ ತಮಿಳುನಾಡು ನೋಂದಣಿಯ ಕಾರೊಂದು ಎದುರಿಗೆ ಸಿಕ್ಕಿತ್ತು ಎನ್ನುವ ಮಾಹಿತಿ ಇದೆ. ಸುಲೇಮಾನ್ ಅವರನ್ನು ಮನೆಯಲ್ಲಿ ಬಿಟ್ಟು ಅವರ ಕಾರು ಚಾಲಕ ಅಲ್ಲಿಂದ ನಡೆದುಕೊಂಡು ತನ್ನ ಮನೆಗೆ ಹೋಗಿದ್ದ. ಕೆಲಹೊತ್ತಿನಲ್ಲಿ ಅಂದರೆ, 8.15ರ ಸುಮಾರಿಗೆ ದರೋಡೆ ತಂಡದ ಕಾರು ಅಲ್ಲಿಗೆ ಎಂಟ್ರಿ ಕೊಟ್ಟಿತ್ತು.
ಈ ಹಿನ್ನೆಲೆಯಲ್ಲಿ ಸುಲೇಮಾನ್ ಅವರು ಬಿ.ಸಿ.ರೋಡ್‌ನಲ್ಲಿದ್ದ ತಮ್ಮ ಕಟ್ಟಡ ಮಾರಿದ್ದ ಹಣವನ್ನು ಮನೆಯಲ್ಲಿ ತಂದಿಟ್ಟಿದ್ದ ವಿಷಯ ಗೊತ್ತಿದ್ದವರೇ ಈ ಕೃತ್ಯ ನಡೆಸಿರುವ ಶಂಕೆ ಇದೆ. ದರೋಡೆಕೋರರು ನಿರ್ದಿಷ್ಟವಾಗಿ ಆ ಹಣ ಎಲ್ಲಿದೆ ಎಂದು ಕೇಳಿ ಪಡೆದಿರುವುದರಿಂದ ಮಾರಾಟಕ್ಕೆ ಸಂಬಂಧಿಸಿ ಯಾರಿಗೆಲ್ಲ ಮಾಹಿತಿ ಇತ್ತು ಎಂಬ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಇದಲ್ಲದೆ, ಕಾರು ಕೇರಳದ ಕಡೆದೆ ತೆರಳಿರುವ ಸಂಶಯದಲ್ಲಿ ಪೊಲೀಸರು ಅತ್ತ ತನಿಖೆ ಕೇಂದ್ರೀಕರಿಸಿದ್ದಾರೆ. ಈ ನಡುವೆ, ಸ್ಪೀಕರ್ ಯುಟಿ ಖಾದರ್, ಸುಲೇಮಾನ್ ಹಾಜಿ ಮನೆಗೆ ಭೇಟಿ ನೀಡಿದ್ದು ಪ್ರಕರಣದ ಬಗ್ಗೆ ಮಾಹಿತಿ ಕೇಳಿದ್ದಾರೆ. ಈ ವೇಳೆ, ಹಾಜಿಯವರು, ಕಾಸ್ ಪೋಯದ್ ಪೋವಟ್, ಅದು ಬೆಲಿಯ ಬಿಸ್ಯ ಅಲ್ಲಾ, ನಂಕ್ ಆರಿ ಆಕ್ಕೊರು ಎಂದ್ ಅರಿಯೋನು ಕಾದರಾಕ.. (ಹಣ ಹೋಗಿದ್ದು ಹೋಗಲಿ, ಅದು ದೊಡ್ಡ ವಿಷ್ಯ ಅಲ್ಲ. ಆದರೆ ಯಾರು ಇದರ ಹಿಂದಿದ್ದಾರೆ ಎನ್ನುವುದು ತಿಳಿಯಬೇಕು ಅಷ್ಟೇ ಖಾದರಾಕ) ಎಂದು ಹೇಳಿದ್ದಾರೆ ಎನ್ನುವ ಮಾಹಿತಿ ಅಲ್ಲಿದ್ದವರಿಂದ ತಿಳಿದುಬಂದಿದೆ.
ಮನೆ ಮಹಡಿಯಲ್ಲೇ ಮೊಬೈಲ್ ಪತ್ತೆ
ದರೋಡೆಕೋರರು ತಮ್ಮನ್ನು ಇಡಿ ಅಧಿಕಾರಿಗಳೆಂದು ಪರಿಚಯಿಸಿ ಮನೆಯಲ್ಲಿದ್ದವರ ಮೊಬೈಲನ್ನು ಕೇಳಿ ಪಡೆದುಕೊಂಡಿದ್ದಾರೆ. ಆನಂತರ, ಇಡೀ ಮನೆಯನ್ನು ಜಾಲಾಡಿದ್ದಾರೆ. ಆನಂತರ ಮೊಬೈಲನ್ನು ನಾವು ಎತ್ಕೊಂಡು ಹೋಗುತ್ತೇವೆ ಎಂದು ತಿಳಿಸಿ ಹೋಗಿದ್ದರು. ಪೊಲೀಸರು ಎರಡು ದಿನ ಬಿಟ್ಟು ಶೋಧ ನಡೆಸಿದಾಗ, ಮನೆಯ ಮೂರನೇ ಮಹಡಿಯಲ್ಲಿ ಮೊಬೈಲ್ ಮತ್ತು ಒಡೆದು ಹೋಗಿರುವ ಸಿಮ್ ಪತ್ತೆಯಾಗಿದೆ. ಮೊಬೈಲ್‌ನಿಂದ ಸಿಮ್ ತೆಗೆದು ಅದನ್ನು ಜಗಿದು ಹಾಳುಗೆಡವಿ ಅಲ್ಲಿಯೇ ಬಿಸಾಡಿದ್ದರು. ಮನೆ ಮಂದಿಯ ಐದೂ ಮೊಬೈಲ್‌ಗಳು ಒಂದೇ ಮಹಡಿಯಲ್ಲಿ ಪತ್ತೆಯಾಗಿದೆ.
Fake ED raid at the house of singari beedi at Vitla in Mangalore, police suspect car drivers involvement, crores of money looted. In a Bollywood flick Special 26-style heist, six persons impersonating as Enforcement Directorate (ED) officials robbed over Rs 30 lakhs from a beedi businessman from Bolanthur near Vittal in Bantwal taluk in Dakshina Kannada on Friday night.
03-08-25 09:30 pm
HK News Desk
Ravi Poojary Aide Kaviraj Arrested, Kolar Pol...
03-08-25 10:52 am
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
03-08-25 05:44 pm
HK News Desk
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ, ಭಾಗ...
03-08-25 04:25 pm
ಮಾಲೆಗಾಂವ್ ಪ್ರಕರಣದಲ್ಲಿ ಮೋಹನ್ ಭಾಗವತ್ ಬಂಧಿಸುವುದಕ...
01-08-25 10:48 pm
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
02-08-25 10:51 pm
Mangalore Correspondent
Kallapu Highway News; ಕಲ್ಲಾಪು ಹೆದ್ದಾರಿಯಲ್ಲಿ ಬ...
02-08-25 03:51 pm
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
03-08-25 10:11 pm
Mangalore Correspondent
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm