ವರ್ಷದ ಹಿಂದೆ ಶರಣಾಗಿದ್ದ ನಕ್ಸಲ್ ನಾಯಕಿ ಮುಂಡಗಾರು ಲತಾ ಕಡಬ ನ್ಯಾಯಾಲಯಕ್ಕೆ ಹಾಜರು ; ಬಿಗಿ ಬಂದೋಬಸ್ತಿನಲ್ಲಿ ಉಪ್ಪಿನಂಗಡಿ ಠಾಣೆಗೆ, ಇನ್ನೆರಡು ದಿನ ಸ್ಥಳ ಮಹಜರು, 85ಕ್ಕೂ ಹೆಚ್ಚು ಕೇಸು! 

03-11-26 09:12 pm       HK News Desk   ಕರಾವಳಿ

ವರ್ಷದ ಹಿಂದೆ ಸರ್ಕಾರದ ಮುಂದೆ ಶರಣಾಗತಿಯಾಗಿದ್ದ  ಚಿಕ್ಕಮಗಳೂರು ಮೂಲದ ನಕ್ಸಲ್, ಎಡಪಂಥೀಯ ಮಾವೋವಾದಿ ನಾಯಕಿ ಮುಂಡಗಾರು ಲತಾಳನ್ನು ಪ್ರಕರಣ ಒಂದರ ವಿಚಾರಣೆಗಾಗಿ ಮಂಗಳವಾರ ಕಡಬ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. 

ಪುತ್ತೂರು, ನ.3 ವರ್ಷದ ಹಿಂದೆ ಸರ್ಕಾರದ ಮುಂದೆ ಶರಣಾಗತಿಯಾಗಿದ್ದ  ಚಿಕ್ಕಮಗಳೂರು ಮೂಲದ ನಕ್ಸಲ್, ಎಡಪಂಥೀಯ ಮಾವೋವಾದಿ ನಾಯಕಿ ಮುಂಡಗಾರು ಲತಾಳನ್ನು ಪ್ರಕರಣ ಒಂದರ ವಿಚಾರಣೆಗಾಗಿ ಮಂಗಳವಾರ ಕಡಬ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. 

ಲತಾ 2025ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಮುಂದೆ ಶರಣಾಗತಿಯಾಗಿದ್ದರೂ ಅವರ ಮೇಲೆ ಅನೇಕ ಪ್ರಕರಣಗಳು ವಿಚಾರಣೆಗೆ ಬಾಕಿಯಿವೆ. ರಾಜ್ಯದ ವಿವಿಧ ಠಾಣೆಗಳಲ್ಲಿ ಪ್ರಕರಣ ಇರುವುದರಿಂದ ಸ್ಥಳ ಮಹಜರು ಪ್ರಕ್ರಿಯೆ ನಡೆಯುತ್ತಿದೆ. 2018 ರಲ್ಲಿ ಕಡಬ ತಾಲೂಕಿನ ಶಿರಾಡಿ ಗ್ರಾಮದ ಮಿತ್ತಮಜಲು ಸುರೇಶ ಹಾಗೂ ಲೀಲಾ ಎಂಬವರ ಮನೆಗೆ ಲತಾ ನೇತೃತ್ವದ ನಕ್ಸಲರು ರಾತ್ರಿ ಬಂದು ಮನೆಯವರನ್ನು ಬೆದರಿಸಿ ಊಟ ಮಾಡಿರುವುದಲ್ಲದೆ ಮನೆಯಿಂದ ಅಕ್ಕಿ ಸಾಮಾನು ಪಡೆದು ಹೋಗಿದ್ದರು. ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಡಬ ತಾಲೂಕಿನಲ್ಲಿ ಪ್ರಕರಣ ನಡೆದಿರುವುರಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ನಕ್ಸಲ್ ಲತಾ ಅವರನ್ನು ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಉಪ್ಪಿನಂಗಡಿ ಠಾಣೆಗೆ ಕರೆತಂದು ಕಡಬ ಸಂಚಾರಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. 

ಸಂಜೆಯ ವೇಳೆಗೆ ಕಡಬ ಸರಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿ ಉಪ್ಪಿನಂಗಡಿ ಠಾಣೆಗೆ ಕರದೊಯ್ಯಲಾಗಿದೆ. ಬುಧವಾರ ಶಿರಾಡಿಯ ಮಿತ್ತಮಜಲಿನಲ್ಲಿ ಮಹಜರು ನಡೆಯಲಿರುವುದರಿಂದ ಲತಾ ಅವರನ್ನು ಅಲ್ಲಿಗೆ ಕರೆದೊಯ್ಯಲಾಗುತ್ತದೆ ಎಂಬ ಮಾಹಿತಿ ಇದೆ. ಗುರುವಾರ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿ ಅಲ್ಲಿಂದ ಮತ್ತೆ ಬೆಂಗಳೂರು ಕಾರಾಗೃಹಕ್ಕೆ ಕರೆದೊಯ್ಯಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮುಂಡಗಾರು ಗ್ರಾಮದ ಆದಿವಾಸಿ ಕುಟುಂಬಕ್ಕೆ ಸೇರಿದ ಲತಾ ಅಲ್ಲಿಯೇ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ್ದಳು. ಮೊದಲಿಗೆ ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ ಯೋಜನೆ ಹಾಗೂ ಅಲ್ಲಿನ ಜನರ ಒಕ್ಕಲೆಬ್ಬಿಸುವಿಕೆ ವಿರುದ್ಧ ಹೋರಾಟದಲ್ಲಿ ಸಕ್ರಿಯರಾಗಿದ್ದರು. 2000ನೇ ಇಸವಿಯಲ್ಲಿ ತಮ್ಮ 18ನೇ ವಯಸ್ಸಿನಲ್ಲಿ ಸಶಸ್ತ್ರ ಮಾವೋವಾದಿ (ನಕ್ಸಲ್) ಚಳವಳಿಯ ಹಾದಿ ಹಿಡಿದಿದ್ದರು. ಪಶ್ಚಿಮ ಘಟ್ಟಗಳ ದಟ್ಟ ಕಾಡುಗಳಲ್ಲಿ ಸಕ್ರಿಯವಾಗಿದ್ದ ನಕ್ಸಲ್ ದಳದ ಭಾಗವಾಗಿ ಸುಮಾರು 25 ವರ್ಷಗಳ ಕಾಲ ತಲೆಮರೆಸಿಕೊಂಡು ಕಾರ್ಯ ನಿರ್ವಹಿಸಿದ್ದರು.

ಇವರ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ ಯತ್ನ, ದೇಶದ್ರೋಹ ಸೇರಿದಂತೆ ಸುಮಾರು 85ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ತಮಿಳುನಾಡು, ಕರ್ನಾಟಕ ಹಾಗೂ ಕೇರಳದ ಗಡಿ ಭಾಗಗಳ ಕಾಡುಗಳಲ್ಲಿ ಇವರು ಸಂಚರಿಸುತ್ತಿದ್ದರು. ನಕ್ಸಲ್ ನಾಯಕ ವಿಕ್ರಂ ಗೌಡನ ಎನ್‌ಕೌಂಟರ್ ಹಾಗೂ ತಮಗಿದ್ದ ತೀವ್ರ ಆರೋಗ್ಯದ ಸಮಸ್ಯೆಯ ಹಿನ್ನೆಲೆಯಲ್ಲಿ 2025ರ ಜನವರಿ 8 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಪೊಲೀಸರ ಮುಂದೆ ಇತರ ಐದು ಮಂದಿ ನಕ್ಸಲರೊಂದಿಗೆ ಶರಣಾಗಿದ್ದರು. ಇತ್ತೀಚೆಗೆ ಇವರ ವಿರುದ್ಧವಿದ್ದ ಮೂರು ಪ್ರಮುಖ ಯುಎಪಿಎ ಪ್ರಕರಣಗಳಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಎನ್‌ಐಎ  ವಿಶೇಷ ನ್ಯಾಯಾಲಯವು ಖುಲಾಸೆಗೊಳಿಸಿತ್ತು.