ಸರ್ವಕಾಲೇಜು ವಿದ್ಯಾರ್ಥಿ ಸಂಘದ ಪದಗ್ರಹಣ ; ವಿದ್ಯಾರ್ಥಿಗಳ ಸಂಭ್ರಮಾಚರಣೆ ವೇಳೆ ಕಾಂಕ್ರೀಟ್ ಸ್ಲ್ಯಾಬ್ ಕುಸಿತ, ಒಬ್ಬನ ಸ್ಥಿತಿ ಚಿಂತಾಜನಕ, ಐವರಿಗೆ ಗಾಯ

26-09-26 08:05 pm       HK News Staffer   ಕರಾವಳಿ

ಸರ್ವಕಾಲೇಜು ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮ ನಿಮಿತ್ತ ಸಂಭ್ರಮಾಚರಣೆ ನಡೆಸುತ್ತಿದ್ದಾಗ ಐವರು ವಿದ್ಯಾರ್ಥಿಗಳು ಮೊದಲ ಮಹಡಿಯಿಂದ ಕೆಳಕ್ಕೆ ಬಿದ್ದಿರುವ ಘಟನೆ ಪಾಂಡೇಶ್ವರ ಬಳಿಯ ಎಮ್ಮೆಕೆರೆಯಲ್ಲಿ ನಡೆದಿದ್ದು ಈ ಪೈಕಿ ಒಬ್ಬನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರು, ಸೆ.26: ಸರ್ವಕಾಲೇಜು ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮ ನಿಮಿತ್ತ ಸಂಭ್ರಮಾಚರಣೆ ನಡೆಸುತ್ತಿದ್ದಾಗ ಐವರು ವಿದ್ಯಾರ್ಥಿಗಳು ಮೊದಲ ಮಹಡಿಯಿಂದ ಕೆಳಕ್ಕೆ ಬಿದ್ದಿರುವ ಘಟನೆ ಪಾಂಡೇಶ್ವರ ಬಳಿಯ ಎಮ್ಮೆಕೆರೆಯಲ್ಲಿ ನಡೆದಿದ್ದು ಈ ಪೈಕಿ ಒಬ್ಬನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಮ್ಮೆಕೆರೆಯ ಲಕ್ಷ್ಮೀ ರಮಾ ಹಾಲ್ ನಲ್ಲಿ ಸಮಾರಂಭ ನಡೆದಿದ್ದು ಕಾರ್ಯಕ್ರಮದ ಬಳಿಕ ಕೆಳಗಡೆ ಹುಲಿವೇಷದ ತಾಸೆ ಮೆರವಣಿಗೆ ಆಗುತ್ತಿದ್ದಾಗಲೇ ಮೊದಲ ಮಹಡಿಯಲ್ಲಿ ನಿಂತಿದ್ದವರು ಸ್ಲ್ಯಾಬ್ ಸಹಿತ ಕೆಳಕ್ಕೆ ಬಿದ್ದಿದ್ದಾರೆ.‌ ಈ ವೇಳೆ, ಕಾಂಕ್ರೀಟ್ ಸ್ಲ್ಯಾಬ್ ಬಿದ್ದು ಕೆಳಗಿದ್ದವರು ಕೂಡ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಮಂಗಳೂರು ನಗರದ ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಹಳೆಯಂಗಡಿ ನಿವಾಸಿ ಮಹಮ್ಮದ್ ಶಮಾಜ್ (16) ಸ್ಥಿತಿ ಚಿಂತಾಜನಕವಿದ್ದು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಸೂರಿಂಜೆ ನಿವಾಸಿ ಮಹಮ್ಮದ್ ಶನಾನ್ ಅಹಮ್ಮದ್ (18), ಅಡ್ಯಾರ್ ನಿವಾಸಿ ಹನೀಫ್ (23), ಕಾವೂರಿ‌ನ ದವೂದ್ ಫರ್ಸಿನ್ ಅಹಮ್ಮದ್ (18) ಮತ್ತು ಕಸಬಾ ಬೆಂಗ್ರೆಯ ಮಹಮ್ಮದ್ ಶಾಕೀಲ್ ಹುಸೈನ್ (18) ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಹಳೆಯ ಕಟ್ಟಡದ ವೆರಾಂಡಾದಲ್ಲಿರುವ ಕಾಂಕ್ರೀಟ್ ಸ್ಲ್ಯಾಬ್ ಕುಸಿದು ಬಿದ್ದಿದ್ದು ಪೊಲೀಸರು ಕಟ್ಟಡ ಮಾಲಕ, ಆಯೋಜಕರ ವಿರುದ್ಧ ಕ್ರಮ ಜರುಗಿಸುವ ಸಾಧ್ಯತೆಯಿದೆ. ‌ಸ್ಲ್ಯಾಬ್ ಕುಸಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Five students were injured, one of them critically, after a concrete slab on the first floor of a building collapsed during celebrations for a college students' union swearing-in ceremony at Emmekere near Pandeshwar in Mangaluru.