Nantoor Accident, Protest: ನಂತೂರಿನಲ್ಲಿ ಬಸ್ಸಿನಡಿಗೆ ಬಿದ್ದು ಯುವತಿ ಸಾವು ; ಕದ್ರಿ ಪೊಲೀಸ್ ಠಾಣೆ ಮುಂದೆ ಶವ ಇಟ್ಟು ಆಕ್ರೋಶ, ನಿರ್ಲಕ್ಷ್ಯದ ಚಾಲನೆಗೆ ಬಸ್ ಚಾಲಕನಿಗೆ ಕೇಸು, ಸಾರ್ವಜನಿಕ ಸ್ಥಳದಲ್ಲಿ ಶವ ಇಟ್ಟಿದ್ದಕ್ಕೂ ಕೇಸು! ತಾಯಿ, ಸೋದರಿಯರ ಎದುರಲ್ಲೇ ದುರಂತ !

05-02-26 06:20 pm       Mangalore Correspondent   ಕರಾವಳಿ

ನಂತೂರಿನಲ್ಲಿ ಬಸ್ ಸ್ಕೂಟರಿಗೆ ಡಿಕ್ಕಿಯಾಗಿ ಯುವತಿ ಮೃತಪಟ್ಟ ಘಟನೆಗೆ ಸಂಬಂಧಿಸಿ ಸಂಬಂಧಿಕರು ಮತ್ತು ಬಳ್ಳಾಲ್ ಭಾಗ್ ವಿವೇಕನಗರ ಕಾಲನಿಯ ನಿವಾಸಿಗಳು ಇಂದು ಕದ್ರಿ ಪೊಲೀಸ್ ಠಾಣೆಯ ಮುಂದೆ ಯುವತಿಯ ಶವ ಇಟ್ಟು ಪ್ರತಿಭಟನೆ ನಡೆಸಿದ್ದಾರೆ.

ಮಂಗಳೂರು, ಫೆ.5 : ನಂತೂರಿನಲ್ಲಿ ಬಸ್ ಸ್ಕೂಟರಿಗೆ ಡಿಕ್ಕಿಯಾಗಿ ಯುವತಿ ಮೃತಪಟ್ಟ ಘಟನೆಗೆ ಸಂಬಂಧಿಸಿ ಸಂಬಂಧಿಕರು ಮತ್ತು ಬಳ್ಳಾಲ್ ಭಾಗ್ ವಿವೇಕನಗರ ಕಾಲನಿಯ ನಿವಾಸಿಗಳು ಇಂದು ಕದ್ರಿ ಪೊಲೀಸ್ ಠಾಣೆಯ ಮುಂದೆ ಯುವತಿಯ ಶವ ಇಟ್ಟು ಪ್ರತಿಭಟನೆ ನಡೆಸಿದ್ದಾರೆ.

ನಿನ್ನೆ ರಾತ್ರಿ 7.45ರ ಸುಮಾರಿಗೆ ಬಳ್ಳಾಲ್ ಬಾಗ್ ವಿವೇಕನಗರದ ನಿವಾಸಿ ದೀಪ್ತಿ (26) ತನ್ನ ಭಾವೀ ಪತಿ ಕಿಶೋರ್ ಎಂಬ ಯುವಕನ ಜೊತೆಗೆ ಸ್ಕೂಟರಿನಲ್ಲಿ ತೆರಳುತ್ತಿದ್ದಾಗ ಖಾಸಗಿ ಬಸ್ ಡಿಕ್ಕಿಯಾಗಿತ್ತು. ಘಟನೆ ಸಂದರ್ಭದಲ್ಲಿ ಸ್ಕೂಟರಿನ ಹಿಂಬದಿ ಸವಾರೆಯಾಗಿದ್ದ ದೀಪ್ತಿ ರಸ್ತೆಗೆ ಬಿದ್ದಿದ್ದು, ಆಕೆಯ ಮೇಲಿನಿಂದಲೇ ಬಸ್ ಹರಿದಿತ್ತು. ತೀವ್ರ ಗಾಯಗೊಂಡ ಯುವತಿ ಅಲ್ಲಿಂದ ಎಜೆ ಆಸ್ಪತ್ರೆಗೆ ಒಯ್ಯುವಷ್ಟರಲ್ಲಿ ಮೃತಪಟ್ಟಿದ್ದರು.

ಘಟನೆ ಹಿನ್ನೆಲೆಯಲ್ಲಿ ಖಾಸಗಿ ಬಸ್ಸುಗಳ ಧಾವಂತದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ಎದ್ದಿದೆ. ಖಾಸಗಿ ಬಸ್ಸುಗಳು ಮಂಗಳೂರು ನಗರದ ಟ್ರಾಫಿಕ್ ಮಧ್ಯೆ ಸಮಯಕ್ಕೆ ಸರಿಯಾಗಿ ತಲುಪಬೇಕೆಂಬ ಧಾವಂತದಲ್ಲಿ ತೆರಳುತ್ತವೆ. ಇದರಿಂದಾಗಿ ಅಪಘಾತ ಆಗಿದ್ದು ಬಸ್ ಚಾಲಕನ ನಿರ್ಲಕ್ಷ್ಯ ಮತ್ತು ಅತಿ ವೇಗದ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಂದು ನಡೆದ ಪ್ರತಿಭಟನೆಯಲ್ಲಿ ನೂರಕ್ಕೂ ಹೆಚ್ಚು ಜನರು ಕದ್ರಿ ಠಾಣೆ ಮುಂದೆ ಸೇರಿದ್ದು, ಬಸ್ ಚಾಲಕ ಮತ್ತು ಅದರ ಮಾಲೀಕನನ್ನು ಸ್ಥಳಕ್ಕೆ ಕರೆತನ್ನಿ, ಈ ಸಾವಿಗೆ ಯಾರು ಹೊಣೆ, ನ್ಯಾಯ ಕೊಡಿ ಎಂದು ಪೊಲೀಸರಿಗೆ ಆಗ್ರಹ ಮಾಡಿದ್ದಾರೆ.

ಪೊಲೀಸರು ಬಳಿಕ ಉದ್ರಿಕ್ತರನ್ನು ಮನವೊಲಿಸಿ ಸ್ಥಳದಿಂದ ತೆರಳುವಂತೆ ಮಾಡಿದ್ದಾರೆ. ಆದರೆ ಯುವತಿ ಶವವನ್ನು ಪೊಲೀಸ್ ಠಾಣೆ ಮುಂದಿಟ್ಟು ಪ್ರತಿಭಟನೆ ನಡೆಸಿದ್ದಕ್ಕೆ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಗರಂ ಆಗಿದ್ದು, ಪ್ರತಿಭಟನೆ ನಡೆಸಿದವರ ಮೇಲೆ ಎಫ್ಐಆರ್ ದಾಖಲಿಸುವಂತೆ ಸೂಚಿಸಿದ್ದಾರೆ. ಅಪಘಾತಕ್ಕೆ ನಿರ್ಲಕ್ಷ್ಯದ ಚಾಲನೆಯೇ ಕಾರಣ. ಅದರ ಬಗ್ಗೆ ಸೆಕ್ಷನ್ 304 ಅಡಿ ಕೇಸು ದಾಖಲಿಸಲಾಗುವುದು. ಅಪಘಾತ ವಿಚಾರದಲ್ಲಿ ಬೇರೇನೂ ಮಾಡುವುದಕ್ಕೆ ಬರುವುದಿಲ್ಲ. ಶವ ಇಟ್ಟು ಏಕಾಏಕಿ ಪೊಲೀಸ್ ಠಾಣೆ ಮುಂದೆ ಬಂದು ಪ್ರತಿಭಟನೆ ನಡೆಸಿದ್ದಕ್ಕೂ ಕೇಸು ದಾಖಲಿಸಲಾಗುವುದು ಎಂದು ಸುಧೀರ್ ರೆಡ್ಡಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ತಾಯಿ, ಸೋದರಿಯರ ಎದುರಲ್ಲೇ ದುರಂತ 

ದೀಪ್ತಿ ಮತ್ತು ಆಕೆಯ ತಾಯಿ ಹಾಗೂ ಸೋದರಿಯರು ವಾಮಂಜೂರಿನಲ್ಲಿ ಸೋದರ ಸಂಬಂಧಿಯೊಬ್ಬರ ಮಗುವಿನ ಬರ್ತ್ ಡೇ ಪಾರ್ಟಿಗೆಂದು ನಿನ್ನೆ ಸಂಜೆ ಹೊರಟಿದ್ದರು. ಕಿಶೋರ್ ವಿಟ್ಲ ಮೂಲದ ಯುವಕನಾಗಿದ್ದು, ದೀಪ್ತಿ ಜೊತೆಗೆ ನಿಶ್ಚಿತಾರ್ಥ ಆಗಿದ್ದರಿಂದ ಸ್ಕೂಟರಿನಲ್ಲಿ ಜೊತೆಗೆ ತೆರಳುತ್ತಿದ್ದರು. ದುರಂತ ಅಂದ್ರೆ, ಡಿಕ್ಕಿಯಾದ ಬಸ್ಸಿನಲ್ಲೇ ದೀಪ್ತಿ ತಾಯಿ ಮತ್ತು ಮೂವರು ಸೋದರಿಯರು ಇದ್ದರು. ಅವರ ಎದುರಲ್ಲೇ ದೀಪ್ತಿ ಅದೇ ಬಸ್ಸಿನಡಿಗೆ ಬಿದ್ದು ಪ್ರಾಣ ಕಳಕೊಂಡಿದ್ದಾಳೆ.

Tension prevailed outside Kadri Police Station after relatives and local residents staged a protest by placing the body of 26-year-old Deepthi, who died in a bus accident at Nantoor.  The incident occurred around 7:45 pm when Deepthi was travelling on a scooter with her fiancé Kishore. A private bus allegedly hit the scooter, causing her to fall onto the road, after which the bus ran over her.