ಬಜಪೆಯಲ್ಲಿ ಕಾಂಗ್ರೆಸ್ ಓಟಕ್ಕೆ ಎಸ್ಡಿಪಿಐ ಅಡ್ಡಗಾಲು ; ಮೂರು ವಾರ್ಡುಗಳಲ್ಲಿ ಒಂದಂಕಿಯಿಂದ ಗೆದ್ದ ಬಿಜೆಪಿ, ಶಾಂತಿಗುಡ್ಡೆಯಲ್ಲಿ ಒಂದೇ ಮತದ ಗೆಲುವು ! ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗೂ ಜಯ

24-12-25 06:07 pm       Mangalore Correspondent   ಕರಾವಳಿ

ಗ್ರಾಮ ಪಂಚಾಯತ್ ಆಗಿದ್ದ ಬಜಪೆ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿದ ಬಳಿಕ ಮೊದಲ ಬಾರಿಗೆ ಡಿ.21ರಂದು ಚುನಾವಣೆ ನಡೆದಿತ್ತು. ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದ ಪಂಚಾಯತಿನಲ್ಲಿ ಬಿಜೆಪಿ ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಪಡೆದಿದೆ.

ಮಂಗಳೂರು, ಡಿ.24 : ಗ್ರಾಮ ಪಂಚಾಯತ್ ಆಗಿದ್ದ ಬಜಪೆ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿದ ಬಳಿಕ ಮೊದಲ ಬಾರಿಗೆ ಡಿ.21ರಂದು ಚುನಾವಣೆ ನಡೆದಿತ್ತು. ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದ ಪಂಚಾಯತಿನಲ್ಲಿ ಬಿಜೆಪಿ ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಪಡೆದಿದೆ. ವಿಶೇಷ ಅಂದ್ರೆ, ಎಸ್ಡಿಪಿಐ ಕಣಕ್ಕಿಳಿದ ಕಾರಣ ತ್ರಿಕೋನ ಸ್ಪರ್ಧೆಯುಂಟಾಗಿ ಕೆಲವು ಕ್ಷೇತ್ರಗಳಲ್ಲಿ ಅಲ್ಪ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಗಳು ಗೆಲುವು ಪಡೆದಿದ್ದಾರೆ.

ಶಾಂತಿಗುಡ್ಡೆ 9ನೇ ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿ ರಿತೇಶ್ ಶೆಟ್ಟಿ(160) ಕೇವಲ ಒಂದು ಮತಗಳ ಅಂತರದಿಂದ ಗೆಲುವು ಗಳಿಸಿದ್ದಾರೆ. ಕಾಂಗ್ರೆಸಿಗೆ ಬಂಡಾಯ ಸ್ಪರ್ಧಿಸಿದ್ದ ಎಸ್ಡಿಪಿಐನ ರಫೀಕ್ 159 ಮತ ಪಡೆದರೆ, ಕಾಂಗ್ರೆಸಿನಿಂದ ಸ್ಪರ್ಧಿಸಿದ್ದ ಮಾಜಿ ಬಜಪೆ ಪಂಚಾಯತ್ ಅಧ್ಯಕ್ಷರೂ ಆದ ಶಾಹುಲ್ ಹಮೀದ್ ಕೇವಲ 95 ಮತ ಪಡೆದು ಸೋಲನುಭವಿಸಿದ್ದಾರೆ. ಈ ವಾರ್ಡಿನಲ್ಲಿ ಮೊದಲ ಬಾರಿಗೆ ಬಿಜೆಪಿ ಜಯ ಕಂಡಿದೆ.

ಮುಂಡಾರು ವಾರ್ಡ್ 10ರಲ್ಲಿ ಬಿಜೆಪಿ ಅಭ್ಯರ್ಥಿ ಜಯಂತ್ ಎಸ್. ಪೂಜಾರಿ ಕೇವಲ 5 ಮತಗಳಲ್ಲಿ ಜಯ ಸಾಧಿಸಿದ್ದಾರೆ. ಜಯಂತ್ 301 ಮತ ಪಡೆದರೆ, ಎಸ್ಡಿಪಿಐನಿಂದ ಸ್ಪರ್ಧಿಸಿದ್ದ ಮೊಹಮ್ಮದ್ ನಜೀರ್ 296 ಹಾಗೂ ಕಾಂಗ್ರೆಸಿನ ಮಹಮ್ಮದ್ ಶಾಫಿ 156 ಮತ ಗಳಿಸಿದ್ದಾರೆ.

ಕಲ್ಲಝರಿ ವಾರ್ಡ್ 2ರಲ್ಲಿ ಬಿಜೆಪಿ ಅಭ್ಯರ್ಥಿ ಪದ್ಮನಾಭ ಪೂಜಾರಿ 242 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಉದಯ ಕುಮಾರ್ (233) ಅವರನ್ನು 9 ಮತಗಳಿಂದ ಸೋಲಿಸಿದ್ದಾರೆ. ಕಾಂಗ್ರೆಸಿನಲ್ಲಿ ಮೂರು ಬಾರಿ ಸದಸ್ಯರಾಗಿದ್ದ ಉದಯ ಅವರಿಲ್ಲಿ ಪ್ರಬಲ ಸ್ಪರ್ಧಿಯಾಗಿದ್ದರು. ಇಲ್ಲಿ ಆಮ್ ಆದ್ಮಿ ಅಭ್ಯರ್ಥಿ ರಾಬರ್ಟ್ ರೇಗೊ 36 ಮತ ಪಡೆದಿದ್ದು ಬಿಜೆಪಿಗೆ ಗೆಲುವು ತಂದುಕೊಟ್ಟಿತ್ತು. ಅಂಬೇಡ್ಕರ್ ನಗರ ವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿ ಮಲ್ಲಿಕಾ 276 ಮತಗಳೊಂದಿಗೆ ಎದುರಾಳಿ ಎಸ್ಡಿಪಿಐ ಅಭ್ಯರ್ಥಿಯನ್ನು 31 ಮತಗಳಿಂದ ಸೋಲಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಇಲ್ಲಿ 71 ಮತಗಳನ್ನು ಪಡೆದರೆ, ಎಸ್ಡಿಪಿಐ 245 ಮತ ಗಳಿಸಿತ್ತು.

ನಾಲ್ಕನೇ ವಾರ್ಡ್ ನಲ್ಲಿ ಕಾಂಗ್ರೆಸಿನಿಂದ ಸಿರಾಜ್ ಬಜಪೆ ಟಿಕೆಟ್ ಆಕಾಂಕ್ಷಿಯಾಗಿದ್ದರು. ಟಿಕೆಟ್ ಸಿಕ್ಕಿಲ್ಲವೆಂದು ಪಕ್ಷೇತರ ಸ್ಪರ್ಧಿಸಿದ್ದ ಸಿರಾಜ್ (208) ಗೆಲುವು ಸಾಧಿಸಿದ್ದು ಕಾಂಗ್ರೆಸಿಗೆ ಠಕ್ಕರ್ ಕೊಟ್ಟಂತಾಗಿದೆ. ಈ ವಾರ್ಡಿನಲ್ಲಿ ಕಾಂಗ್ರೆಸಿನ ಮಹ್ಮದ್ ಅಹ್ಮದ್ ನಾಸಿರ್ 94, ಬಿಜೆಪಿಯ ಗಣೇಶ್ ಅರ್ಬಿ 49 ಮತ ಗಳಿಸಿದ್ದಾರೆ.

ನೇರ ಹಣಾಹಣಿ- ದೊಡ್ಡ ಅಂತರದ ಗೆಲುವು :

ನೇರ ಹಣಾಹಣಿ ಇದ್ದ ಎಂಟನೇ ವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿ ಲೋಕೇಶ್ ಪೂಜಾರಿ 314 ಮತಹ ಪಡೆದು ಕಾಂಗ್ರೆಸ್ ಅಭ್ಯರ್ಥಿ ಯು.ಶ್ರೀನಿವಾಸ ಹೆಗ್ಡೆ(91) ಅವರನ್ನು ಭಾರೀ ಅಂತರದಿಂದ ಸೋಲಿಸಿದ್ದಾರೆ. ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಏಳನೇ ವಾರ್ಡಿನಲ್ಲಿ ಎಸ್ಡಿಪಿಐನಿಂದ ಸ್ಪರ್ಧಿಸಿದ್ದ ಆಯಿಶಾ ಬಜಪೆ(469) ಅವರು ಎದುರಾಳಿಗಳಾಗಿದ್ದ ಬಿಜೆಪಿಯ ಯಶೋಧ (39) ಮತ್ತು ಕಾಂಗ್ರೆಸಿನ ಶಹೀನ್ ಅಮೀರುದ್ದೀನ್ (167) ಅವರನ್ನು ದೊಡ್ಡ ಅಂತರದಲ್ಲಿ ಸೋಲಿಸಿದ್ದಾರೆ. 6ನೇ ವಾರ್ಡಿನಲ್ಲಿ ಬಿಜೆಪಿಯ ಅರುಣ್ ಶೆಟ್ಟಿ(65) ಮತ್ತು ಕಾಂಗ್ರೆಸಿನ ಸುರೇಂದ್ರ ಪೆರ್ಗಡೆ(126) ಅವರನ್ನು ದೊಡ್ಡ ಅಂತರದಲ್ಲಿ ಸೋಲಿಸಿ ಎಸ್ಡಿಪಿಐನ ವೀಣಾ ಡಿಸೋಜ(405) ಜಯ ಸಾಧಿಸಿದ್ದಾರೆ.

ಮಾಹಿತಿ ಪ್ರಕಾರ, ಮುಸ್ಲಿಂ ಬಾಹುಳ್ಯದ ಮೂರು ವಾರ್ಡ್ ಗಳನ್ನು ಎಸ್ಡಿಪಿಐ ತನಗೆ ಬಿಟ್ಟುಕೊಡುವಂತೆ ಕಾಂಗ್ರೆಸ್ ಬಳಿ ಬೇಡಿಕೆ ಇಟ್ಟಿತ್ತು. ಆದರೆ ಕಾಂಗ್ರೆಸ್ ನಾಯಕರು ಏಕಾಂಗಿ ಸ್ಪರ್ಧೆಗಿಳಿದು ಆ ಮೂರು ವಾರ್ಡ್ ಗಳನ್ನು ಕಳಕೊಂಡಿದ್ದಾರೆ. ಅಲ್ಪ ಅಂತರದಲ್ಲಿ ಬಿಜೆಪಿ ಗೆದ್ದ ಕಡೆಯೂ ಕಾಂಗ್ರೆಸ್ – ಎಸ್ಡಿಪಿಐ ಮತ ಹಂಚಿಕೆಯೇ ಕಾರಣವಾಗಿತ್ತು.

The BJP secured control of the newly upgraded Bajpe Town Panchayat, winning several wards by extremely narrow margins after a three-cornered contest involving the Congress and SDPI. SDPI’s entry significantly split the Congress vote, enabling BJP victories in key wards — including a dramatic one-vote win in Shantigudde. A Congress rebel candidate also triumphed in one ward, adding to the party’s setbacks. The results highlight shifting political equations in the Muslim-dominated wards and the growing impact of SDPI on local electoral outcomes.